CONNECT WITH US  

ಕರಾವಳಿಯಲ್ಲಿ ಸುವರ್ಣ ಸಂಭ್ರಮ ಗಣೇಶೋತ್ಸವಗಳು ಇಲ್ಲೆಲ್ಲಾ…

ಸುಳ್ಯ ಸಾರ್ವಜನಿಕ ಗಣೇಶೋತ್ಸವ

ಸುಳ್ಯ:
ಸಮಾಜ ಸಂಘಟನೆ ಮತ್ತು ಧರ್ಮ ಜಾಗೃತಿ ನೆಲೆಯಲ್ಲಿ ಸ್ಥಾಪನೆಗೊಂಡ ಶ್ರೀ ಸಿದ್ಧಿವಿನಾಯಕ ಸೇವಾ ಸಮಿತಿ ಮತ್ತು ಸಾರ್ವಜನಿಕ ಶ್ರೀ ದೇವತಾರಾಧನ ಸಮಿತಿ ಆಶ್ರಯದಲ್ಲಿ ಸುಳ್ಯ ಚೆನ್ನಕೇಶವ ದೇವಾಲಯದ ಮುಂಭಾಗದಲ್ಲಿ ನಡೆಯುತ್ತಿರುವ ಸಾರ್ವಜನಿಕ ಗಣೇಶೋತ್ಸವಕ್ಕೆ ಈ ಬಾರಿ ಸುವರ್ಣ ಸಂಭ್ರಮ.

50 ವರ್ಷಗಳ ಹಿಂದೆ ಬೋರ್ಡ್‌ ಹೈಸ್ಕೂಲಿನ ಬಳಿ ಗಣಪತಿ ಚಿತ್ರ ಇಟ್ಟು ಪೂಜೆ ಆರಂಭಗೊಂಡಿತ್ತು. ಆನಂತರ ಚೆನ್ನಕೇಶವ ದೇವಾಲಯ, ಗುರುಭವನ, ಶ್ರೀ ದುರ್ಗಾಪರಮೇಶ್ವರಿ ಕಲಾ ಮಂದಿರದಲ್ಲಿ ಪೂಜೆ ನಡೆಸಲಾಗಿತ್ತು. ಮತ್ತೆ ಚೆನ್ನಕೇಶವ ದೇವಸ್ಥಾನದ ಆವರಣಕ್ಕೇ ಸ್ಥಳಾಂತರಗೊಂಡು ಪೂಜೆಗೊಳುತ್ತಿದೆ. ಮೂರ್ತಿ ಪ್ರತಿಷ್ಠಾಪಿಸಿ ಐದು ದಿನಗಳ ಕಾಲ ಪೂಜಿಸಲಾಗುತ್ತಿದೆ. ಈ ಬಾರಿ ಏಳು ದಿನದ ಕಾರ್ಯಕ್ರಮಗಳು ನಡೆಯಲಿದೆ. ಕೊನೆಯ ದಿನ ನಗರದಲ್ಲಿ ಭವ್ಯ ಮೆರವಣಿಗೆ ಸಾಗಿ ವಿಸರ್ಜಿಸಲಾಗುತ್ತದೆ. 3.5 ಕೆ.ಜಿ. ತೂಕದ ಬೆಳ್ಳಿ ರಜತ ಕಿರೀಟ ಹೊಂದಿರುವ ಶ್ರೀ ಗಣಪತಿ ಇಲ್ಲಿ ಪೂಜಿಸಲ್ಪಡುತ್ತದೆ.

ಕೊಡವೂರು ಗಣೇಶೋತ್ಸವ: ಸುವರ್ಣ ಸಂಭ್ರಮ

ಮಲ್ಪೆ:
ಗ್ರಾಮದೇವರು ಕೊಡವೂರು ಶ್ರೀ ಶಂಕರ ನಾರಾಯಣ ದೇವಸ್ಥಾನದ ಸನಿಹದಲ್ಲಿ ಪೂಜಿಸ್ಪಲ್ಪಡುವ ಸಾರ್ವಜನಿಕ ಗಣೇಶೋತ್ಸವ ಈ ವರ್ಷ ಸುವರ್ಣ ಮಹೋತ್ಸವ ಸಂಭ್ರದಲ್ಲಿದೆ. ಕಾನಂಗಿ ಶ್ರೀ ಬಾಲಕೃಷ್ಣ ರಾವ್‌ ನೇತೃತ್ವದಲ್ಲಿ ಆರಂಭಗೊಂಡ ಇಲ್ಲಿನ ಉತ್ಸವ ಪ್ರಾರಂಭದ 15 ವರ್ಷಗಳಲ್ಲಿ ಸ್ಥಳೀಯ ಶಾಲಾ ಹಳೆವಿದ್ಯಾರ್ಥಿ ಸಂಘ ಹಾಗೂ ಯುವಕ ಸಂಘದ ವತಿಯಿಂದ ನಡೆಯುತ್ತಿತ್ತು. ಬಳಿಕ ದಿ| ವಾಸು ಶೆಟ್ಟಿಯವರ ಮುಂದಾಳತ್ವದಲ್ಲಿ ಸಮಿತಿ ರಚನೆಗೊಂಡು, ಎಲ್ಲರ ಸಹಕಾರದಿಂದ ಯಶಸ್ವಿಯಾಗಿ ನಡೆಯುತ್ತಿದೆ. ಇದರೊಂದಿಗೆ ಸಮಿತಿ ಆರ್ಥಿಕ ಅಶಕ್ತರಿಗೆ ವೈದ್ಯಕೀಯ ನೆರವು, ವಿದ್ಯಾರ್ಥಿ ವೇತನ, ಸಾಧಕರಿಗೆ ಸನ್ಮಾನ, ಜತೆಗೆ ಕ್ರೀಡೆ ಹಾಗೂ ಇನ್ನಿತರ ಚಟುವಟಿಕೆಗಳಿಗೆ ಪ್ರೋತ್ಸಾಹವನ್ನು ನೀಡುತ್ತಾ ಬಂದಿದೆ. ಈ ಬಾರಿ 5 ದಿನಗಳ ಧಾರ್ಮಿಕ- ಸಾಂಸ್ಕೃತಿಕ ಕಾರ್ಯಕ್ರಮಗಳ ಜತೆಗೆ ಭಾರತೀಯ ಸಂಸ್ಕೃತಿ ರಕ್ಷಣೆ ಮತ್ತು ಬೆಳೆಸುವಲ್ಲಿ ಮಾತೆಯರ ಪಾತ್ರದ ಬಗ್ಗೆ ಚಿಂತನೆಗೆ ಮಾತೃಸಂಗಮ ಸಮಾವೇಶ ಆಯೋಜಿಸಲಾಗಿದೆ.

ಬೊಕ್ಕಪಟ್ಣ ಯುವಜನ ಸಂಘದ ಸಾರ್ವಜನಿಕ ಗಣೇಶೋತ್ಸವ

ಬೊಕ್ಕಪಟ್ಣ:
ಇಲ್ಲಿನ ಯುವಜನ ಸಂಘದ ಸಾರ್ವಜನಿಕ ಶ್ರೀ ಗಣೇಶೋತ್ಸವ ಈ ಬಾರಿ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದೆ. 49 ವರ್ಷಗಳಿಂದ ಊರ ಹಾಗೂ ಪರವೂರು ಭಕ್ತರ ಸಹಕಾರದಿಂದ ಗಣೇಶೋತ್ಸವ ಯುವಜನ ಸಂಘದ ಅಕ್ಷಯ ಸಭಾಂಗಣದಲ್ಲಿ ನಡೆಯುತ್ತಿದೆ. ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಮೌಲ್ಯಗಳಿಗೆ ಪ್ರಾಧಾನ್ಯ ನೀಡುತ್ತಿರುವ ಶ್ರೀ ವೀರ ವಿನಾಯಕ ಜನಸೇವಾ ಟ್ರಸ್ಟ್‌ ಸಂಚಾಲಕತ್ವವನ್ನು ನಿರ್ವಹಿಸುತ್ತಾ ಬಂದಿದೆ.

ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ಧಾರ್ಮಿಕ ಸಹಿತ ಸಮಾಜಮುಖೀ ಧ್ಯೇಯೋದ್ದೇಶಗಳನ್ನು ಕಟ್ಟಿಕೊಂಡ 10-15 ಮಂದಿ ಉತ್ಸಾಹಿಗಳ ಪರಿಶ್ರಮವಾಗಿ ಯುವಜನ ಸಂಘ ಅಸ್ತಿತ್ವಕ್ಕೆ ಬಂದಿತು. ಈ ಸಂಘಕ್ಕೆ ಹೊಸ ಆಯಾಮ ನೀಡಲು 1981ರಲ್ಲಿ ಶ್ರೀ ವೀರ ವಿನಾಯಕ ಜನಸೇವಾ ಟ್ರಸ್ಟ್‌ ಸ್ಥಾಪನೆಯಾಯಿತು. ಇದೀಗ ಈ ಸಂಘ ಸಂಸ್ಥೆಗಳ ವತಿಯಿಂದ ನಡೆಸಲ್ಪಡುತ್ತಿರುವ ಗಣೇಶೋತ್ಸವಕ್ಕೆ 50ರ ಸಂಭ್ರಮ. ಈ ಹಿನ್ನಲೆಯಲ್ಲಿ ವೈವಿಧ್ಯಮಯ, ಧಾರ್ಮಿಕ, ಸಾಂಸ್ಕೃತಿಕ, ಜಾನಪದ, ಕ್ರೀಡೆ, ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಸೆ. 13ರಂದು ಗಣೇಶನ ಮೂರ್ತಿ ಪ್ರತಿಷ್ಠಾಪನ ಮಾಡಿ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿದೆ. ಸೆ. 16ರಂದು ಸಂಜೆ ಶೋಭಾಯಾತ್ರೆಯ ಮೂಲಕ ಗಣಪನ ಮೂರ್ತಿ ವಿಸರ್ಜನೆ ಅದ್ದೂರಿ ಮೆರವಣಿಗೆಯ ಮೂಲಕ ನಡೆಯಲಿದೆ.

Trending videos

Back to Top