CONNECT WITH US  

ತೈಲದರ ಏರಿಕೆ ವಿರೋಧಿಸಿ ಪ್ರತಿಭಟನೆ 

ಮೈಸೂರು: ಪೆಟ್ರೋಲ್‌-ಡೀಸೆಲ್‌ ಬೆಲೆ ಏರಿಕೆ ವಿರೋಧಿಸಿ ವಿವಿಧ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು. ಮೈಸೂರು ಕನ್ನಡ ವೇದಿಕೆ ಕಾರ್ಯಕರ್ತರು ತಳ್ಳುವ ಗಾಡಿ ಮೇಲೆ ಬೈಕ್‌ ಇಟ್ಟುಕೊಂಡು ತಳ್ಳಿಕೊಂಡು ಬರುವ ಮೂಲಕ ಬೈಕ್‌ಗೆ ಪೆಟ್ರೋಲ್‌ ಹಾಕಿಸಲು ಸಾಧ್ಯವಾಗುತ್ತಿಲ್ಲ ಎಂದು ಅಗ್ರಹಾರ ವೃತ್ತದಲ್ಲಿ ವಿನೂತನ ಪ್ರತಿಭಟನೆ ನಡೆಸಿದರು.

ಕರ್ನಾಟಕ ಸೇನಾ ಪಡೆ ಕಾರ್ಯಕರ್ತರು ನಗರ ನ್ಯಾಯಾಲಯದ ಮುಂಭಾಗದ ಗಾಂಧಿ ಪುತ್ಥಳಿ ಬಳಿ ಪ್ರತಿಭಟನೆ ನಡೆಸಿದರು. ಪ್ರಕೃತಿ ವಿಕೋಪದಿಂದ ತತ್ತರಿಸುತ್ತಿರುವ ಜನತೆಗೆ ತೈಲ ಬೆಲೆ ಏರಿಕೆಯಿಂದ ಗದಾಪ್ರಹಾರ ಮಾಡಿದಂತಾಗಿದೆ. ಅಸಮರ್ಪಕ ವಿದೇಶಾಂಗ ನೀತಿಯಿಂದಾಗಿ ಅಮೆರಿಕಾ ಒತ್ತಡಕ್ಕೆ ಮಣಿದಿರುವ ಕೇಂದ್ರ ಸರ್ಕಾರ ತೈಲ ಬೆಲೆಯನ್ನು ನಿಯಂತ್ರಿಸದೆ ಇರುವುದರಿಂದ ದೇಶದ ಜನತೆ ಪರಿತಪಿಸುವಂತಾಗಿದೆ.

ಕೇಂದ್ರ ಸರ್ಕಾರ ಇನ್ನಾದರೂ ಏರುತ್ತಿರುವ ತೈಲ ಬೆಲೆಯನ್ನು ನಿಯಂತ್ರಿಸಿ, ಜನ ಸಾಮಾನ್ಯರ ಹಿತರಕ್ಷಣೆಗೆ ಮುಂದಾಗಬೇಕು, ಇಲ್ಲವಾದಲ್ಲಿ ಜನ ಸಾಮಾನ್ಯರ ಬದುಕಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಆತಂಕ ವ್ಯಕ್ತಪಡಿಸಿದ ಕಾರ್ಯಕರ್ತರು ಪೆಟ್ರೋಲ್‌, ಡೀಸೆಲ್‌ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವಂತೆ ಆಗ್ರಹಿಸಿದರು. ಪ್ರತಿಭಟನೆಯಲ್ಲಿ ವೇದಿಕೆ ಅಧ್ಯಕ್ಷ ಬಾಲಕೃಷ್ಣ, ನಾಲಾಬೀದಿ ರವಿ, ಬೋಗಾದಿ ಸಿದ್ದೇಗೌಡ, ಗೋಪಿ, ಪ್ಯಾಲೇಸ್‌ ಬಾಬು, ಕಾವೇರಮ್ಮ ಮೊದಲಾದವರು ಭಾಗವಹಿಸಿದ್ದರು.

ಅಗತ್ಯ ವಸ್ತುಗಳ ಬೆಲೆ ಏರಿಕೆ: ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ದಿನದಿಂದಲೂ ಅಗತ್ಯವಸ್ತುಗಳಾದ ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲ ಬೆಲೆಯನ್ನು ದಿನೇದಿನೆ ಏರಿಕೆ ಮಾಡುತ್ತಿರುವುದರಿಂದ ದೇಶದ ಜನತೆ ತತ್ತರಿಸುವಂತಾಗಿದೆ. ತೈಲ ದರ ಹೆಚ್ಚಳದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೂಡ ಸಾರಿಗೆ ಬಸ್‌ ಪ್ರಯಾಣ ದರ ಹೆಚ್ಚಿಸಲು ಮುಂದಾಗಿದೆ. 

ಕೇಂದ್ರ ಸರ್ಕಾರ ನಿತ್ಯವೂ ತೈಲ ದರ ಪರಿಷ್ಕರಿಸುವ ಮೂಲಕ ದೇಶದ ಜನರ ಹಣವನ್ನು ಲೂಟಿ ಹೊಡೆಯುತ್ತಿದ್ದು, ನೋಟು ಅಮಾನ್ಯ,ಆರ್‌ಟಿಒ ಶುಲ್ಕಗಳ ಹೆಚ್ಚಳ, ರೇರಾ ಕಾಯ್ದೆ ಹಾಗೂ ಜಿಎಸ್‌ಟಿಯಂತಹ ಜನವಿರೋಧಿ ತೀರ್ಮಾನಗಳನ್ನು ಜಾರಿಗೆ ತಂದು ಜನರ ಬದುಕಿಗೆ ಕೊಳ್ಳಿ ಇಡುತ್ತಿದೆ. ಸರ್ಕಾರಕ್ಕೆ ಆದಾಯ ಬರುವ ಎಲ್ಲಾ ಸರಕುಗಳನ್ನೂ ಜಿಎಸ್‌ಟಿ ವ್ಯಾಪ್ತಿಗೆ ತಂದು ಪೆಟ್ರೋಲ್‌, ಡೀಸೆಲ್‌ ದರವನ್ನು ಜಿಎಸ್‌ಟಿ ವ್ಯಾಪ್ತಿಗೆ ತರದಿರುವುದು ಖಂಡನೀಯ ಎಂದರು.

ಕೂಡಲೇ ಪೆಟ್ರೋಲ್‌, ಡೀಸೆಲ್‌ಗ‌ಳನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದು ಪೆಟ್ರೋಲ್‌ ದರವನ್ನು ಪ್ರತಿ ಲೀಟರ್‌ಗೆ 40 ರೂ.ಗೆ ಇಳಿಸಿ ದೇಶದ ಜನತೆಗೆ ಅಚ್ಛೇ ದಿನ್‌ ನೀಡಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ತೇಜಸ್‌ ಲೋಕೇಶ್‌ಗೌಡ, ನಗರಾಧ್ಯಕ್ಷ ಪ್ರಜೀಶ್‌, ಶಾಂತಮೂರ್ತಿ, ನಂಜುಂಡಸ್ವಾಮಿ, ಶಾಂತರಾಜೇ ಅರಸ್‌, ಜಗದೀಶ್‌, ಸುನಿಲ್‌ ಮೊದಲಾದವರು ಭಾಗವಹಿಸಿದ್ದರು.


Trending videos

Back to Top