CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಮಹಾಘಟಬಂಧನ್‌ಗೆ ಸಿದ್ಧತೆ? ಸೋನಿಯಾ - ನಿತೀಶ್‌,ಮಮತಾ-ನವೀನ್‌ ಭೇಟಿ

ನವದೆಹಲಿ/ಭುವನೇಶ್ವರ: ಕೇಂದ್ರದಲ್ಲಿ ಅಧಿಕಾರದಲ್ಲಿರುವ ಎನ್‌ಡಿಎ ಮೈತ್ರಿಕೂಟಕ್ಕೆ ಪರ್ಯಾಯವಾಗಿ ಸಮಾನ ಮೈತ್ರಿಕೂಟವೊಂದನ್ನು ರಚಿಸಬೇಕು ಎಂಬ ಬಿಜೆಪಿಯೇತರ ಪಕ್ಷಗಳ ನಾಯಕರ ಸಿದ್ಧತೆ ಶುರುವಾಗಿದೆ.

ಗುರುವಾರ ಎರಡು ಮಹತ್ವದ ವಿದ್ಯಮಾನಗಳಾಗಿದ್ದು, ನವದೆಹಲಿಯಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್‌ಕುಮಾರ್‌ ಅವರು, ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಜತೆ ಮಾತುಕತೆ ನಡೆಸಿದ್ದಾರೆ. ಇದೇ ರೀತಿ ಮತ್ತೂಂದು ಬೆಳವಣಿಗೆಯಲ್ಲಿ ಒಡಿಶಾ ರಾಜಧಾನಿ ಭುವನೇಶ್ವರಕ್ಕೆ ಬಂದಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ಒಡಿಶಾ ಮುಖ್ಯಮಂತ್ರಿ ನವೀನ್‌ ಪಾಟ್ನಾಯಕ್‌ ಜತೆಗೆ ಚರ್ಚೆ ನಡೆಸಿದ್ದಾರೆ.

ಈ ಎರಡೂ ವಿದ್ಯಮಾನಗಳೂ ಒಂದಕ್ಕೊಂದು ಸಂಬಂಧವುಳ್ಳವೇ ಆಗಿವೆ. ಇತ್ತೀಚೆಗಷ್ಟೇ ಬಿಜೆಪಿ ತನ್ನ ರಾಷ್ಟ್ರೀಯ ಕಾರ್ಯಕಾರಿಣಿಯನ್ನು ಭುವನೇಶ್ವರದಲ್ಲೇ ನಡೆಸಿ, ಟಾರ್ಗೆಟ್‌ ಒಡಿಶಾ ಮತ್ತು ಪಶ್ಚಿಮ ಬಂಗಾಳ ಎಂದು ಘೋಷಿಸಿತ್ತು. ಜತೆಗೆ, ಉತ್ತರ ಪ್ರದೇಶ ಚುನಾವಣಾ ಫ‌ಲಿತಾಂಶ ಹೊರಬಿದ್ದ ಬಳಿಕ ನಿತೀಶ್‌ಕುಮಾರ್‌ ಕೂಡ ಬಿಹಾರದಲ್ಲಿ ರಚನೆಯಾಗಿದ್ದ ರೀತಿಯಲ್ಲೇ ದೇಶದಲ್ಲೂ ಮಹಾಘಟಬಂಧನ್‌ ಮೈತ್ರಿಕೂಟ ಶುರುವಾಗಬೇಕು ಎಂದು ಹೇಳಿದ್ದರು.

ಹೀಗಾಗಿ ನಿತೀಶ್‌ಕುಮಾರ್‌ ಅವರು ನವದೆಹಲಿಯಲ್ಲಿ ಸೋನಿಯಾ ಗಾಂಧಿ ಜತೆಗೆ ಮುಂದಿನ ಲೋಕಸಭೆ ಚುನಾವಣೆಗಾಗಿ ಮೈತ್ರಿಕೂಟ ರಚಿಸುವ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆಸಿರಬಹುದು ಎಂದು ಅಂದಾಜಿಸಲಾಗಿದೆ.

ಆದರೆ ಈ ಭೇಟಿ ಬಗ್ಗೆ ಸ್ಪಷ್ಟನೆ ನೀಡಿದ ಜೆಡಿಯು ವಕ್ತಾರ ಕೆ.ಸಿ.ತ್ಯಾಗಿ ಮುಂದಿನ ಚುನಾವಣೆ ಅಥವಾ ರಾಷ್ಟ್ರಪತಿ ಚುನಾವಣೆ ಬಗ್ಗೆ ಚರ್ಚೆಯಾಗಿಲ್ಲ ಎಂದಿದ್ದಾರೆ. ಇದೊಂದು ಕೇವಲ ಸೌಹಾರ್ದ ಭೇಟಿ ಎಂದಿದ್ದಾರೆ. ಆದರೆ ಬಿಜೆಪಿ ನೇತೃತ್ವದ ಎನ್‌ಡಿಎಯ ಅಭ್ಯರ್ಥಿಗೆ ಸಮಾನವಾಗಿ ಪ್ರತಿಪಕ್ಷಗಳ ಒಕ್ಕೂಟದಿಂದಲೂ ಸಮರ್ಥ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಬೇಕು. ಈ ಬಗ್ಗೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವ ವಹಿಸಿಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.

ಇನ್ನು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ಒಡಿಶಾ ಭೇಟಿಯನ್ನೂ ಸೌಹಾರ್ದ ಎಂದು ಕರೆದಿದ್ದರೂ, ಇಲ್ಲೂ ಮೈತ್ರಿಕೂಟ ರಚನೆಯ ಮಾತುಕತೆಗಳಾಗಿವೆ ಎಂದೇ ಹೇಳಲಾಗುತ್ತಿದೆ. ಅಲ್ಲದೆ ಒಡಿಶಾದಲ್ಲಿ ನಡೆದ ಪಂಚಾಯತ್‌ ಮಟ್ಟದ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಸಾಧನೆ ಮಾಡಿದ್ದು, ಇದೂ ನವೀನ್‌ ಪಾಟ್ನಾಯಕ್‌ ಅವರ ಆತಂಕಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಹೀಗಾಗಿಯೇ ಅವರು ಮಮತಾ ಸೇರಿದಂತೆ ಸಮಾನ ಮನಸ್ಕ ಪಕ್ಷಗಳೊಂದಿಗೆ ಚರ್ಚೆ ಶುರು ಮಾಡಿದ್ದಾರೆ ಎಂದು ಮೂಲಗಳು ಹೇಳಿವೆ.

Back to Top