CONNECT WITH US  

ಜಾನುವಾರು ಹತ್ಯೆಗೆ ಕಡಿವಾಣ; ಖರೀದಿ, ಮಾರಾಟಕ್ಕೂ ನಿರ್ಬಂಧ

ಹೊಸದಿಲ್ಲಿ: ರಾಷ್ಟ್ರಾಡಳಿತದ ಚುಕ್ಕಾಣಿ ಹಿಡಿದು ನಾಲ್ಕನೇ ವಸಂತಕ್ಕೆ ಕಾಲಿಡುತ್ತಿರುವ ಹೊಸ್ತಿಲಲ್ಲಿ ಕೇಂದ್ರ ಸರಕಾರ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಗೆ ಮಹತ್ವದ ತಿದ್ದುಪಡಿ ಮಾಡಿ ಆದೇಶ ಪ್ರಕಟಿಸಿದೆ. ವಧಾಗೃಹಕ್ಕೆ ಜಾನುವಾರು ಮಾರಾಟ ಮತ್ತು ಖರೀದಿಗೂ ನಿಷೇಧ ಹೇರಿ ಪರಿಸರ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ರೈತರಿಗೆ ಮಾತ್ರ ಗೋವುಗಳ ಮಾರಾಟ ಮತ್ತು ಖರೀದಿಗೆ ಅವಕಾಶ ಕಲ್ಪಿಸಿದೆ.

ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ-1960 (ಪಿಸಿಎ)ರ  ಸೆಕ್ಷನ್‌ 37ರ ನಿಯಮಾವಳಿಯಲ್ಲಿ ತಿದ್ದುಪಡಿ ಮಾಡಿರುವ ಪರಿಸರ ಸಚಿವಾಲಯ, ಶುಕ್ರವಾರ ಇಂಥದ್ದೊಂದು ಮಹತ್ವದ ಅಧಿಸೂಚನೆ ಹೊರಡಿಸುವ ಮೂಲಕ ಗೋವುಗಳ ಕೊಡು-ಕೊಳ್ಳುವಿಕೆ ಪ್ರಕ್ರಿಯೆಯನ್ನು ಇನ್ನಷ್ಟು ಕ್ಲಿಷ್ಟಗೊಳಿ ಸಿದೆ. ಆದೇಶ ಪ್ರತಿಯಲ್ಲಿನ ಮಾಹಿತಿ ಪ್ರಕಾರ, ಇನ್ನು ಮುಂದೆ 

ಅಶಕ್ತ ಗೋವುಗಳನ್ನು ಹಾಗೂ ಕರುಗಳನ್ನು ಮಾರಾಟ ಮಾಡುವಂತಿಲ್ಲ. ಹಸು, ಎತ್ತು, ಎಮ್ಮೆ, ಒಂಟೆ, ಗೂಳಿ ಇವುಗಳನ್ನೂ ಹತ್ಯೆ ಉದ್ದೇಶದಿಂದ ಮಾರಾಟ ಅಥವಾ ಖರೀದಿಗೆ ನಿಷೇಧ ಹೇರಲಾಗಿದೆ. ನಿಯಮ ಉಲ್ಲಂ ಸಿದರೆ 7 ವರ್ಷ ಜೈಲು ಮತ್ತು ಒಂದು ಲಕ್ಷ ರೂ. ದಂಡ ತೆರಬೇಕಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಆರಂಭದಿಂದ ಹೇಳಿಕೊಂಡು ಬಂದಂತೆ, ಇದೀಗ ಗೋವು ಮಾರಾಟ ಮತ್ತು ಖರೀದಿಯನ್ನೇ ನಿಷೇಧಿಸಿ ಗೋವಧೆ ಸೇರಿದಂತೆ ಜಾನುವಾರುಗಳನ್ನು ಕಸಾಯಿಖಾನೆಗೆ ಸಾಗಿಸುವ ಮತ್ತು ಧಾರ್ಮಿಕ ನಂಬಿಕೆಗಳಿಗೆ ಬಲಿ ಕೊಡುವ ಚಟುವಟಿಕೆಗಳಿಗೂ ಕಡಿವಾಣ ಹಾಕಿದೆ. ಪರಿಸರ ಸಚಿವಾಲಯದ ಅಧಿಸೂಚನೆ ಪ್ರಕಾರ, ಗೂಳಿ, ಗೋವು, ಎಮ್ಮೆ, ಈಯುವ ಆಕಳು, ಒಂಟೆ ಈ ವ್ಯಾಪ್ತಿಗೆ ಬರುತ್ತದೆ.  ನಿಧನಕ್ಕೂ ಮುನ್ನ ಸಹಿ ಮಾಡಿದ್ದ ಸಚಿವ ದವೆ! ಪರಿಸರ ಸಚಿವಾಲಯದ ಮಾಜಿ ಸಚಿವ ಅನಿಲ್‌ ಮಾಧವ್‌ ದವೆ ಅವರು ಕಳೆದ ವಾರವಷ್ಟೇ ಹೃದಯಾಘಾತದಿಂದ ನಿಧನರಾಗಿದ್ದು, ಇದಕ್ಕೂ ಮುನ್ನ ಈ ತಿದ್ದುಪಡಿಗೆ ಒಪ್ಪಿಗೆ ನೀಡಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸುಪ್ರೀಂಕೋರ್ಟ್‌ನ ನಿರ್ದೇಶನದ ಮೇರೆಗೆ ಸಚಿವಾಲಯ ಕಾಯ್ದೆಗೆ ತಿದ್ದುಪಡಿ ತಂದಿದೆ.

ನಿಯಮದಲ್ಲಿ   ಏನೇನಿದೆ?
ಜಾನುವಾರು ಮಾರುಕಟ್ಟೆ ಸಮಿತಿ ಪರವಾನಗಿ ಇಲ್ಲದೇ ನೇರ ಮಾರಾಟ, ಖರೀದಿ ಮಾಡುವಂತಿಲ್ಲ

"ರೈತ' ಎನ್ನುವ ದಾಖಲೆ ಪತ್ರ ಇದ್ದವರಿಗೆ ಮಾತ್ರ ಕೃಷಿ ಕಾರಣಗಳಿಗಾಗಿ ಮಾರಾಟ ಅಥವಾ ಖರೀದಿ ಮಾಡಲು ಅವಕಾಶ. ಈ ಮಾಲಕ ಕೂಡ "ಕೃಷಿ ಉಪಯೋಗಕ್ಕೆ' ಎನ್ನುವ ದೃಢೀಕರಣ ಪತ್ರ ಒದಗಿಸುವುದೂ ಕಡ್ಡಾಯ

ದೇಶದ ಗಡಿಯಿಂದ 50 ಕಿ.ಮೀ ಮತ್ತು ರಾಜ್ಯದ ಗಡಿಯಿಂದ 25 ಕಿ.ಮೀ ವ್ಯಾಪ್ತಿಯಲ್ಲಿ ಜಾನುವಾರು ಸಂತೆ, ಹರಾಜು ಕೇಂದ್ರ ನಡೆಸುವಂತಿಲ್ಲ

ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಸಾಗಾಟ ಮಾಡುವಾಗಲೂ ರಾಜ್ಯ ಸರಕಾರದ ಅಧಿಕಾರಿಯ ಪರವಾನಿಗೆ ಪಡೆದಿರಬೇಕು

ನಿಯಮ ಉಲ್ಲಂಸಿದರೆ 7 ವರ್ಷ ಜೈಲು ಹಾಗೂ ಒಂದು ಲಕ್ಷ ರೂ. ದಂಡ

ಜಾನುವಾರು ಖರೀದಿಸಿದ ರೈತ 7 ತಿಂಗಳಲ್ಲಿ ಮತ್ತೆ ಮಾರಾಟ ಮಾಡುವಂತಿಲ್ಲ. ಖರೀದಿಸಿರುವ ಬಗ್ಗೆ ರಶೀದಿಯನ್ನೂ ಹೊಂದಿರುವುದು ಕಡ್ಡಾಯ.

ರಫ್ತುದಾರರ ಸಂಘ ಆಕ್ಷೇಪ: 

ಸರಕಾರದ ಈ ಅಧಿಸೂಚನೆಗೆ ಅಖೀಲ ಭಾರತ ಮಾಂಸ ಮತ್ತು ಜಾನುವಾರು ರಪು¤ದಾರರ ಸಂಘ ಆಕ್ಷೇಪ ವ್ಯಕ್ತಪಡಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿ.ಬಿ. ಸಬರ್ವಾಲ್‌, "ಇಲ್ಲಿಯ ತನಕ ನಿಷೇಧಿಸಬೇಕೆನ್ನುವ ಜಾನುವಾರುಗಳ ಪಟ್ಟಿಯಲ್ಲಿ ಎಮ್ಮೆ ಇರಲಿಲ್ಲ. ಆದರೆ ಈಗ ಎಮ್ಮೆಯನ್ನೂ ಸೇರಿಸಿರುವುದು ಇಡೀ ಉದ್ಯಮವನ್ನೇ ಘಾಸಿಗೊಳಿಸಲಿದೆ' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.  ಭಾರಿ ಬೇಡಿಕೆಗೆ ಬಿತ್ತು ಕಡಿವಾಣ ಮೂಲಗಳ ಪ್ರಕಾರ ಮಾರುಕಟ್ಟೆಯಲ್ಲಿ ಶೇ.90ರಷ್ಟು ಬೇಡಿಕೆಗೆ ಈ ನಿಷೇಧದಿಂದ ಹೊಡೆತ ಬೀಳಲಿದೆ. 2016-17ನೇ ಸಾಲಿನಲ್ಲಿನ ಅಂಕಿ ಅಂಶಗಳ ಪ್ರಕಾರ 26,303 ಕೋಟಿ ರೂ.ನ ರಫ್ತು ಸೇರಿ ಅಂದಾಜು ಒಂದು ಲಕ್ಷ ಕೋಟಿ ರೂ.ನಷ್ಟು ಪ್ರತಿವರ್ಷ ವಹಿವಾಟು ಆಗಿದೆ. ನಿಷೇಧದಿಂದ ಜಾನುವಾರು ಮಾರುಕಟ್ಟೆಯ ಬೇಡಿಕೆಯಲ್ಲಿ ಅಗ್ರಗಣ್ಯ ರಾಜ್ಯ ಉತ್ತರಪ್ರದೇಶವಾಗಿದ್ದು, ನಂತರದ ಸ್ಥಾನಗಳಲ್ಲಿ ಆಂಧ್ರಪ್ರದೇಶ, ಪಶ್ಚಿಮಬಂಗಾಳ ಮತ್ತು ತೆಲಂಗಾಣ ರಾಜ್ಯಗಳಿವೆ.

Trending videos

Back to Top