CONNECT WITH US  

ಯೋಧರ ವಾಹನ ಕಳವು ದೇಶಾದ್ಯಂತ ಹೈ ಅಲರ್ಟ್‌

ಉಗ್ರರಿಂದಲೇ ಕಳವಾಗಿರುವ ಶಂಕೆ - ವಿಧ್ವಂಸಕ ಕೃತ್ಯಕ್ಕೆ ಬಳಕೆ ಸಾಧ್ಯತೆ

ಜಮ್ಮುವಿನ ರಜೌರಿಯಲ್ಲಿ ಸಜೀವ ಬಾಂಬ್‌ಗಳ ಶೋಧ ಕಾರ್ಯದಲ್ಲಿ  ತೊಡಗಿರುವ ಸಿಬಂದಿ.

ಹೊಸದಿಲ್ಲಿ/ಕೊಚ್ಚಿ: ಗಣರಾಜ್ಯ ದಿನ ಸಮೀಪಿಸುತ್ತಿರುವಂತೆಯೇ ದೇಶದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಭಯೋತ್ಪಾದಕರು ಸಂಚು ರೂಪಿಸಿದ್ದಾರೆಯೇ? ಶುಕ್ರವಾರ ನಡೆದಿರುವ ಕೆಲವು ಬೆಳವಣಿಗೆಗಳು ಇಂತಹುದೊಂದು ಪ್ರಶ್ನೆಯನ್ನು ಹುಟ್ಟುಹಾಕಿವೆ. ಜಮ್ಮು-ಕಾಶ್ಮೀರದಲ್ಲಿ ಸಿಆರ್‌ಪಿಎಫ್ಗೆ ಸೇರಿದ ವಾಹನವೊಂದು ಕಳುವಾಗಿದ್ದರೆ, ಕೇರಳದಲ್ಲಿ ರೈಲ್ವೇ ಸೇತುವೆಯಡಿ ಭಾರೀ ಸ್ಫೋಟಕಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಎಲ್ಲೆಡೆ ಭದ್ರತೆ ಹೆಚ್ಚಿಸಲಾಗಿದ್ದು, ಭದ್ರತಾ ಸಂಸ್ಥೆಗಳು ಹೈ ಅಲರ್ಟ್‌ ಘೋಷಿಸಿವೆ.

ಜಮ್ಮು-ಕಾಶ್ಮೀರದ ಆರ್‌.ಕೆ. ಪುರಂ ಪ್ರದೇಶದಲ್ಲಿನ ಸಿಆರ್‌ಪಿಎಫ್ ಶಿಬಿರದ ಹೊರಗೆ ನಿಲ್ಲಿಸಲಾಗಿದ್ದ ಎಸ್‌ಯು ಸುಮೋ ವಿಕ್ಟಾವನ್ನು ಯಾರೋ ಕಳವು ಮಾಡಿದ್ದಾರೆ. ಈ ವಾಹನವು ಜಮ್ಮು-ಕಾಶ್ಮೀರದ ನಂಬರ್‌ ಪ್ಲೇಟನ್ನೇ ಹೊಂದಿದೆ. 'ಪೊಲೀಸ್‌' ಎಂದು ಸ್ಟಿಕ್ಕರ್‌ ಅಂಟಿಸಿರುವ ಈ ವಾಹನವನ್ನು ಕನಿಷ್ಠ ಮೂವರು ದುಷ್ಕರ್ಮಿಗಳು ಎಗರಿಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸೇನಾ ವಾಹನವನ್ನು ಬಳಸಿಕೊಂಡು ಉಗ್ರರು, ಗಣರಾಜ್ಯೋತ್ಸವ ಸಮೀಪಿಸುತ್ತಿರುವಾಗಲೇ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿರುವ ಸಾಧ್ಯತೆ ದಟ್ಟವಾಗಿದ್ದು, ಈ ಹಿನ್ನೆಲೆಯಲ್ಲಿ ದಿಲ್ಲಿ ಪೊಲೀಸರು, ಸಿಆರ್‌ಪಿಎಫ್, ಕೇಂದ್ರದ ಹಲವು ಭದ್ರತಾ ಸಂಸ್ಥೆಗಳು ಹೈಅಲರ್ಟ್‌ ಘೋಷಿಸಿವೆ. ಯಾವುದೇ ವಾಹನವನ್ನು ಸೂಕ್ತ ತಪಾಸಣೆಗೆ ಒಳಪಡಿಸದೇ ಬಿಡಬೇಡಿ. ಶಿಬಿರಗಳ ಭದ್ರತೆಯನ್ನು ಹೆಚ್ಚಿಸಿ. ಈ ಎಚ್ಚರಿಕೆಯು ದೇಶದ ಎಲ್ಲ ಭದ್ರತಾ ಕೇಂದ್ರಗಳ ಪ್ರತಿಯೊಬ್ಬ ಸಿಬಂದಿಗೂ ತಲುಪುವಂತೆ ಮಾಡಿ ಎಂದೂ ಸೂಚಿಸಲಾಗಿದೆ.

ಗಣರಾಜ್ಯ ದಿನದಂದು ಸೇನಾ ಶಿಬಿರಗಳ ಮೇಲೆ ಉಗ್ರರು ಸ್ಫೋಟಕಗಳನ್ನು ತುಂಬಿದ ವಾಹನದ ಮೂಲಕ ದಾಳಿ ಮಾಡುವ ಸಾಧ್ಯತೆಯಿದೆ ಎಂದು ಈಗಾಗಲೇ ಗುಪ್ತಚರ ಸಂಸ್ಥೆಗಳು ಎಚ್ಚರಿಸಿವೆ. ಅದರ ಬೆನ್ನಲ್ಲೇ ವಾಹನ ಕಳುವಾಗಿರುವುದು ಮತ್ತಷ್ಟು ಭೀತಿಗೆ ಕಾರಣವಾಗಿದೆ. 
ಹಿಂದೆಯೂ ನಡೆದಿತ್ತು: ಕಳೆದ ವರ್ಷ ಪಠಾಣ್‌ಕೋಟ್‌ನ ಸೇನಾನೆಲೆ ಮೇಲೆ ಭಯೋತ್ಪಾದಕರು ದಾಳಿ ನಡೆಸುವಾಗಲೂ ಇದೇ ರೀತಿ ಗುರುದಾಸ್ಪುರ ಎಸ್‌ಪಿಯೊಬ್ಬರ ಎಸ್‌ಯುವಿಯನ್ನು ಬಳಸಲಾಗಿತ್ತು. ಎಸ್ಪಿ ಮತ್ತು ಸ್ನೇಹಿತರು ತೆರಳುತ್ತಿದ್ದ ಕೆಂಪು ದೀಪ ಅಳವಡಿಸಲಾಗಿದ್ದ ಎಸ್‌ಯುವಿಯನ್ನು ಅಪಹರಿಸಿ, ಉಗ್ರರು ಎಲ್ಲ ಚೆಕ್‌ಪೋಸ್ಟ್‌ಗಳನ್ನು ಸುಲಭವಾಗಿ ದಾಟಿದ್ದರು. ಇದರ ಮೂಲಕವೇ ಅವರು ಸೇನಾನೆಲೆಯನ್ನು ತಲುಪಿ ದಾಳಿ ಎಸಗಿದ್ದರು.

ಪಾಕ್‌ ಪಾನ್ಪೋರ್ಟ್‌ ಮತ್ತು ಆಧಾರ್‌ ಕಾರ್ಡ್‌!
ರಾಜಸ್ಥಾನದ ಜೈಸಲ್ಮೇರ್‌ ವಾಯುಪಡೆಯ ಸ್ಟೇಷನ್‌ನೊಳಕ್ಕೆ ಪ್ರವೇಶಿಸಲು ಯತ್ನಿಸಿದ 50ರ ಹರೆಯದ ಪುರ್ಖಾ ರಾಮ್‌ ಎಂಬುವನನ್ನು ವಶಕ್ಕೆ ಪಡೆಯಲಾಗಿದೆ. ಅಚ್ಚರಿಯೆಂದರೆ, ಈತನ ಬಳಿಯಿದ್ದ ಪಾಕಿಸ್ಥಾನದ ಪಾಸ್‌ಪೋರ್ಟ್‌ ಹಾಗೂ ಭಾರತದ ಆಧಾರ್‌ ಕಾರ್ಡ್‌ ಅನ್ನು ವಶಪಡಿಸಿಕೊಳ್ಳಲಾಗಿದೆ. ಈತ ಪಾಕ್‌ನ ಹಿಂದೂ ನಿರಾಶ್ರಿತನಾಗಿದ್ದು, ಕೆಲವು ಸಮಯದಿಂದ ಭಾರತದಲ್ಲೇ ವಾಸವಾಗಿದ್ದ. ಆದರೆ, ಆತನಿಗೆ ಆಧಾರ್‌ ಕಾರ್ಡ್‌ ಕೊಟ್ಟವರಾರು ಎಂಬ ವಿಚಾರ ತನಿಖೆಯ ಬಳಿಕವೇ ಗೊತ್ತಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರೈಲ್ವೇ  ಸೇತುವೆಯಡಿ ನೆಲಬಾಂಬ್‌ ಪತ್ತೆ
ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿ ಕೊಳ್ಳುವ ಮೂಲಕ ಕೇರಳ ಪೊಲೀಸರು ಅತಿದೊಡ್ಡ ಭಯೋತ್ಪಾದನಾ ಕೃತ್ಯವನ್ನು ತಪ್ಪಿಸಿದ್ದಾರೆ. ಮಲಪ್ಪುರಂನ ಕುಟ್ಟಿಪ್ಪುರಂ ರೈಲ್ವೇ ಸೇತುವೆಯಡಿ ಇಡಲಾಗಿದ್ದ ನೆಲಬಾಂಬುಗಳನ್ನು ಶುಕ್ರವಾರ ವಶಪಡಿಸಿಕೊಳ್ಳಲಾಗಿದ್ದು, ಅವುಗಳನ್ನು ನಿಷ್ಕ್ರಿಯ ಗೊಳಿಸಲಾಗಿದೆ. ಸೇತುವೆಯನ್ನು ಸ್ಫೋಟಿಸಲು ಉಗ್ರರು ಸಂಚು ರೂಪಿಸಿದ್ದಿರಬಹುದು ಎಂದು ಶಂಕಿಸಲಾಗಿದೆ.

Trending videos

Back to Top