ಮಾರುತಿ ಸುಜುಕಿ “2ಕೋಟಿ’!
Team Udayavani, Jun 5, 2018, 6:00 AM IST
ನವದೆಹಲಿ: ದೇಶದ ಆಟೋಮೊಬೈಲ್ ಕ್ಷೇತ್ರದಲ್ಲಿ ಒಂದಲ್ಲಾ ಒಂದು ರೀತಿ ಅಗ್ರ ಸ್ಥಾನ ಕಾಯ್ದುಕೊಳ್ಳುತ್ತಾ ಬಂದಿರುವ ಮಾರುತಿ ಸುಜುಕಿ ಹೊಸದೊಂದು ದಾಖಲೆ ಸೃಷ್ಟಿಸಿದೆ. ಕಳೆದ ಮೂರು ದಶಕಗಳ (35 ವರ್ಷ) ಅವಧಿಯಲ್ಲಿ ಭಾರದಲ್ಲಿ ಬರೋಬ್ಬರಿ 2 ಕೋಟಿಗೂ ಜಾಸ್ತಿ ಕಾರುಗಳನ್ನು ತಯಾರಿಸುವ ಮೂಲಕ, ಜಪಾನ್ ದಾಖಲೆಯನ್ನು ಬ್ರೇಕ್ ಮಾಡಿದೆ.
1983ರ, ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಆಡಳಿತಾವಧಿಯಲ್ಲಿ ಕಾರುಗಳ ತಯಾರಿಕೆ ಆರಂಭಿಸಿದ ಮಾರುತಿ ಸುಜುಕಿ ಅಂದಿನಿಂದಲೂ ಭಾರತೀಯ ಆಟೋಮೊಬೈಲ್ ಕ್ಷೇತ್ರದಲ್ಲಿಯೇ ಗಮನಾರ್ಹ ಪಾತ್ರ ವಹಿಸಿದೆ. ಜಪಾನ್ ಮೂಲದ ಮಾರುತಿ ಸುಜುಕಿ ಇಂಡಿಯಾ, ದೇಶದಲ್ಲಿಯೇ ಕಾರು ತಯಾರಿಕಾ ಘಟಕ ಕೂಡ ಹೊಂದಿದ್ದು, ಮಾರಾಟದಲ್ಲಿ ಈಗಲೂ ಅಗ್ರ ಸ್ಥಾನದಲ್ಲಿದೆ. ಈ ಸಾಧನೆ ಮಾಡಿದ ದೇಶಗಳ ಪೈಕಿ ಭಾರತ ಎರಡನೇ ರಾಷ್ಟ್ರವಾಗಿದೆ. ಜಪಾನ್ ಮೊದಲ ರಾಷ್ಟ್ರವಾಗಿದ್ದು, ಈ ಮೈಲುಗಲ್ಲು ತಲುಪಲು 45 ವರ್ಷ 9 ತಿಂಗಳ ಕಾಲ ಪಡೆದಿತ್ತು. ಭಾರತ ಕೇವಲ 34 ವರ್ಷ ಐದು ತಿಂಗಳಲ್ಲೇ ಈ ಸಾಧನೆ ಮಾಡಿದೆ.