CONNECT WITH US  

ಎನ್‌ಪಿಎಗೆ ನೀತಿಗ್ರಹಣ ಕಾರಣ

ಸಂಸತ್‌ ಸಮಿತಿಗೆ ಆರ್‌ಬಿಐ ಮಾಜಿ ಗವರ್ನರ್‌ ರಾಜನ್‌

ಹೊಸದಿಲ್ಲಿ: ದೇಶದಲ್ಲಿ ಅನುತ್ಪಾದಕ ಆಸ್ತಿ ಪ್ರಮಾಣ ಹೆಚ್ಚಾಗಲು ಬ್ಯಾಂಕಿಂಗ್‌ ಕ್ಷೇತ್ರದ ಅತಿಯಾದ ಆತ್ಮವಿಶ್ವಾಸ ಹಾಗೂ ನೀತಿ ಗ್ರಹಣವೇ ಕಾರಣ ಎಂದು ಆರ್‌ಬಿಐ ಮಾಜಿ ಗವರ್ನರ್‌ ಡಾ.ರಘುರಾಂ ರಾಜನ್‌ ಹೇಳಿದ್ದಾರೆ. ಬಿಜೆಪಿ ಸಂಸದ ಡಾ.ಮುರಳಿ ಮನೋಹರ ಜೋಶಿ ನೇತೃತ್ವದ ಸಂಸತ್‌ನ ಅಂದಾಜು ಸಮಿತಿಗೆ ಅವರು ಪತ್ರದ ಮೂಲಕ ಈ ವಿವರಣೆ ನೀಡಿದ್ದಾರೆ.

ಬ್ಯಾಂಕುಗಳು ಸರಿಯಾಗಿ ಪರಿಶೀಲನೆ ನಡೆಸದೇ ದೊಡ್ಡ ಮೊತ್ತದ ಸಾಲವನ್ನು ನೀಡಿದವು. ಕೆಲವೊಂದು ಸಾಲಗಳು ಎನ್‌ಪಿಎ ಆಗಿ ಬದಲಾಗುವುದು ಬೇಡ ಎಂಬ ಉದ್ದೇಶದಿಂದ ಮತ್ತಷ್ಟು ಸಾಲ ಮಂಜೂರು ಮಾಡಿದವು. ಜೊತೆಗೆ, 2008ರ ಆರ್ಥಿಕ ಕುಸಿತದ ಬಳಿಕ ಬ್ಯಾಂಕುಗಳ ಪ್ರಗತಿಯ ನಿರೀಕ್ಷೆಯೂ ಸುಳ್ಳಾಯಿತು. ಒಟ್ಟಿನಲ್ಲಿ ಬ್ಯಾಂಕರ್‌ಗಳ ಅತಿಯಾದ ಆತ್ಮವಿಶ್ವಾಸವೇ ಮುಳುವಾಯಿತು ಎಂದು ರಾಜನ್‌ ತಿಳಿಸಿದ್ದಾರೆ.

ನೀತಿಗ್ರಹಣ: ಇದಷ್ಟೇ ಅಲ್ಲದೆ, ಯುಪಿಎ ಅವಧಿಯಲ್ಲಿ ಆಗಿರುವಂಥ ಹಗರಣಗಳು ಹಾಗೂ ನೀತಿ ಗ್ರಹಣವೂ ಎನ್‌ಪಿಎ ಹೆಚ್ಚಳಕ್ಕೆ ಮತ್ತೂಂದು ಕಾರಣ ಎಂದಿದ್ದಾರೆ ರಾಜನ್‌. ಅನುತ್ಪಾದಕ ಆಸ್ತಿ ವಿಚಾರ ಹೊರಬಿದ್ದ ಸಂದರ್ಭದಲ್ಲೇ ಕೆಲವೊಂದು ಹಗರಣಗಳಿಂದಾಗಿ ಸರಕಾರದ ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆ ವಿಳಂಬವಾಯಿತು. ಇದು ಹಲವು ಯೋಜನೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತು. ಪರೋಕ್ಷವಾಗಿ ಇದು ಲಾಭದಾಯಕತ್ವವನ್ನು ಕಡಿಮೆ ಮಾಡಿ, ಮರುಪಾವತಿಯಾಗದ ಸಾಲದ ಪ್ರಮಾಣವನ್ನು ಹೆಚ್ಚಿಸಿತು ಎಂದೂ ರಾಜನ್‌ ಹೇಳಿದ್ದಾರೆ ಎಂದು ಟೈಮ್ಸ್‌ ನೌ ವರದಿ ಮಾಡಿದೆ.

Trending videos

Back to Top