CONNECT WITH US  

ಆಲೋಕ್‌ ವರ್ಮಾ ವಜಾ: ಹುದ್ದೆ ಕಳೆದುಕೊಂಡ ಮೊದಲ ನಿರ್ದೇಶಕ

ವಜಾಗೆ ಪ್ರಧಾನಿ ಮೋದಿ, ನ್ಯಾ| ಸಿಕ್ರಿ ಬೆಂಬಲ, ಖರ್ಗೆ ತೀವ್ರ ವಿರೋಧ 

ಹೊಸದಿಲ್ಲಿ: ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿ ಸಿಬಿಐ ನಿರ್ದೇಶಕ ಹುದ್ದೆಯನ್ನು ಮರಳಿ ಪಡೆಯುವಲ್ಲಿ ಯಶಸ್ವಿಯಾಗಿದ್ದ ಆಲೋಕ್‌ ವರ್ಮಾ ಅವರು ಎರಡೇ ದಿನಗಳಲ್ಲಿ ಹುದ್ದೆ ಕಳೆದು ಕೊಂಡಿದ್ದಾರೆ. ಸಿಬಿಐ ಸಂಸ್ಥೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನಿರ್ದೇಶಕರೊಬ್ಬರು ಈ ರೀತಿಯ ಶಿಕ್ಷೆಗೆ ಗುರಿಯಾಗಿದ್ದಾರೆ. ಪ್ರಧಾನಿ ಮೋದಿ ನೇತೃತ್ವದ ಉನ್ನತ ಮಟ್ಟದ ಸಮಿತಿ ಆಲೋಕ್‌ ವರ್ಮಾ ಅವರನ್ನು ಸಿಬಿಐ ನಿರ್ದೇಶಕ ಹುದ್ದೆಯಿಂದ ತೆರವು ಮಾಡಿದೆ. ಈ ಜಾಗಕ್ಕೆ ಮಧ್ಯಾಂತರ ಸಿಬಿಐ ನಿರ್ದೇಶಕರಾಗಿದ್ದ ಎಂ. ನಾಗೇಶ್ವರ ರಾವ್‌ ಅವರನ್ನು ಮುಂದುವರಿಸಲಾಗಿದೆ. ಖಾಯಂ ನಿರ್ದೇಶಕರ ಆಯ್ಕೆಯವರೆಗೂ ಇವರೇ ಹಂಗಾಮಿಯಾಗಿ ಮುಂದುವರಿಯಲಿದ್ದಾರೆ. 

ಬುಧವಾರ ರಾತ್ರಿ ಸಭೆ ಸೇರಿದ್ದ ಪ್ರಧಾನಿ ನರೇಂದ್ರ ಮೋದಿ, ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಸುಪ್ರೀಂ ಕೋರ್ಟ್‌
ನ್ಯಾ| ಎ.ಕೆ. ಸಿಕ್ರಿ ಅವರಿದ್ದ ಉನ್ನತ ಸಮಿತಿ ಯಾವುದೇ ನಿರ್ಧಾರಕ್ಕೆ ಬಂದಿರಲಿಲ್ಲ. ಮತ್ತೆ ಗುರುವಾರ ಸಂಜೆಯೂ ಸಭೆ ಸೇರಿ ಸಿಬಿಐ ವರದಿಯಲ್ಲಿನ ಅಂಶಗಳ ಬಗ್ಗೆ ಚರ್ಚಿಸಿತು. ಕಡೆಗೆ 2:1ರ ಬಹುಮತದ ಆಧಾರದ ಮೇಲೆ ವಜಾ ನಿರ್ಧಾರ ತೆಗೆದುಕೊಂಡಿದೆ. ಮೋದಿ ಮತ್ತು ನ್ಯಾ| ಎ.ಕೆ.ಸಿಕ್ರಿ ಅವರು ಸಿವಿಸಿ ವರದಿಯ ಆಧಾರದ ಮೇಲೆ ಆಲೋಕ್‌ ವರ್ಮಾ ಅವರನ್ನು ವಜಾ ಮಾಡಬೇಕು ಎಂಬ ನಿರ್ಧಾರಕ್ಕೆ ಬಂದರೆ, ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ತೀವ್ರವಾಗಿ ವಿರೋಧಿಸಿದರು. ಸಮಿತಿ ಮುಂದೆ ವಾದ ಮಂಡನೆಗೆ ಆಲೋಕ್‌ ವರ್ಮಾಗೆ ಅವಕಾಶ ಮಾಡಿಕೊಡಬೇಕು ಎಂದು ಪಟ್ಟು ಹಿಡಿದರು. ಕಡೆಗೆ 2:1ರ ಬಹುಮತದ ಆಧಾರದ ಮೇಲೆ ಆಲೋಕ್‌ ವರ್ಮಾ ಅವರನ್ನು ಸಿಬಿಐ ನಿರ್ದೇಶಕ ಹುದ್ದೆಯಿಂದ ತೆರವು ಮಾಡಿ, ಅಗ್ನಿಶಾಮಕ ದಳ, ನಾಗರಿಕ ರಕ್ಷಣೆ ಮತ್ತು ಹೋಮ್‌ ಗಾರ್ಡ್‌ ಸೇವೆಯ ಮಹಾ ನಿರ್ದೇಶಕರನ್ನಾಗಿ ನಿಯೋಜಿಸಲಾಗಿದೆ. 

ಎಂಟು ಅಂಶಗಳ ಆರೋಪ
ಆಲೋಕ್‌ ವರ್ಮಾ ವಿರುದ್ಧ ಸಿವಿಸಿ ಎಂಟು ಅಂಶಗಳ ಆರೋಪಗಳನ್ನು ಪಟ್ಟಿ ಮಾಡಿದೆ. ಇದರಲ್ಲಿ ಭ್ರಷ್ಟ ಅಧಿಕಾರಿಗಳನ್ನು ಸೇರಿಸಿಕೊಂಡಿದ್ದು, ಮೋಯಿನ್‌ ಖುರೇಶಿ ಪ್ರಕರಣದ ತನಿಖೆಯಲ್ಲಿ ಹೊಂದಾಣಿಕೆ ಮಾಡಿದ್ದು, ಐಆರ್‌ಸಿಟಿಸಿ ಹಗರಣಗಳು ಸೇರಿವೆ. 

ವರ್ಮಾ ಪರ ಖರ್ಗೆ ವಾದ
ಗುರುವಾರ ಸಂಜೆ 4.30ಕ್ಕೆ ಆರಂಭವಾದ ಸಭೆ ಎರಡು ಗಂಟೆಗಳ ಕಾಲ ನಡೆದಿದೆ. ಇಡೀ ಸಭೆಯಲ್ಲಿ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಆಲೋಕ್‌ ವರ್ಮಾ ಪರ ವಾದಿಸಿದ್ದಾರೆ. ವರ್ಮಾ ವಿರುದ್ಧ ಸಿವಿಸಿ ಮಾಡಿರುವ ಆರೋಪಗಳ ಕುರಿತಂತೆ ಉನ್ನತಾಧಿಕಾರ ಸಮಿತಿ ಮುಂದೆ ವಾದ ಮಂಡನೆಗೆ ಅವಕಾಶ ಮಾಡಿಕೊಡಬೇಕು ಎಂಬುದು ಖರ್ಗೆ ಅವರ ವಾದವಾಗಿತ್ತು.

ಇಂದು ಅಸ್ಥಾನ ತೀರ್ಪು
ಸಿಬಿಐ ವಿಶೇಷ ನಿರ್ದೇಶಕ ರಾಕೇಶ್‌ ಅಸ್ಥಾನ ಮತ್ತಿತರರ ವಿರುದ್ಧ ದಾಖಲಾಗಿರುವ ಎಫ್ಐಆರ್‌ ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಯ ಕುರಿತಂತೆ ಶುಕ್ರವಾರ ದಿಲ್ಲಿ ಹೈಕೋರ್ಟ್‌ ತೀರ್ಪು ನೀಡಲಿದೆ. ಲಂಚ ಆರೋಪದ ಸಂಬಂಧ ಅಸ್ಥಾನ, ಅಧಿಕಾರಿಗಳಾದ ದೇವೇಂದರ್‌ ಕುಮಾರ್‌, ಆಲೋಕ್‌ ಕುಮಾರ್‌ ವರ್ಮಾ, ಎ.ಕೆ. ಶರ್ಮಾ ವಿರುದ್ಧ ಎಫ್ಐಆರ್‌ ರದ್ದು ಮಾಡುವಂತೆ ಅರ್ಜಿ ಸಲ್ಲಿಸಲಾಗಿತ್ತು. ಈಗಾಗಲೇ ವಿಚಾರಣೆ ಮುಗಿಸಿರುವ ದಿಲ್ಲಿ ಹೈಕೋರ್ಟ್‌ ಶುಕ್ರವಾರ ತೀರ್ಪು ಪ್ರಕಟಿಸಲಿದೆ.

ಸಿವಿಸಿ ವರದಿಯಲ್ಲಿ  ಏನಿದೆ?
ಮಾಂಸ ರಫ್ತುದಾರ ಮೋಯಿನ್‌ ಖುರೇಶಿ ಕೇಸಿನಲ್ಲಿ  ತನಿಖೆಗೆ ಅವಕಾಶ ನೀಡದೆ ತಡೆ.
ಗುರ್ಗಾಂವ್‌ನಲ್ಲಿನ ಭೂಮಿ ಖರೀದಿ. ಈ ಪ್ರಕರಣದಲ್ಲಿ  36 ಕೋಟಿ ರೂ. ವರ್ಗಾವಣೆಯಾಗಿರುವ ಶಂಕೆ.
ಲಾಲು ಪ್ರಸಾದ್‌ ಯಾದವ್‌ ಭಾಗಿ ಯಾಗಿರುವ ಐಆರ್‌ಸಿಟಿಸಿ ಹಗರಣದಲ್ಲಿ ಅಧಿಕಾರಿಯೊಬ್ಬರ ರಕ್ಷಣೆಗೆ ವರ್ಮಾ ಯತ್ನ.
ಸಿಬಿಐಯಲ್ಲಿ  ಭ್ರಷ್ಟ  ಅಧಿಕಾರಿಗಳನ್ನು ಇರಿಸಿಕೊಂಡು ಸಿವಿಸಿಗೆ ದಾಖಲೆ ನೀಡುವಲ್ಲಿ  ವಿಳಂಬ.

Trending videos

Back to Top