CONNECT WITH US  

ಕರ್ನಾಟಕ ಸಂಘ ಅಂಧೇರಿ 12ನೇ ವಾರ್ಷಿಕೋತ್ಸವ ಸಂಭ್ರಮದ ಸಮಾರೋಪ

ಮುಂಬಯಿ: ಅಂಧೇರಿ ಕರ್ನಾಟಕ ಸಂಘವು ಇಲ್ಲಿ ಒಂದು ಆದರ್ಶ ಸಂಘಟನೆಯಾಗಿ ಕಳೆದ 12 ವರ್ಷಗಳಿಂದ ಸೇವೆ ಸಲ್ಲಿಸುತ್ತಿದೆ. ಈ ಸಂಸ್ಥೆಯು ಆರ್ಥಿಕ ಕ್ಷೇತ್ರದಲ್ಲಿ ಬಲಾಡ್ಯವಾಗಿರದಿದ್ದರೂ ಕೂಡಾ ಇದರ ಪದಾಧಿಕಾರಿಗಳು ಒಂದು ಗೂಡಿ ಪ್ರತೀ ವರ್ಷ ವಿದ್ಯಾರ್ಥಿ ಗಳಿಗೆ ಶೈಕ್ಷಣಿಕ ನೆರವು, ಪ್ರತೀ ತಿಂಗಳು ವಿಧವಾ ವೇತನವನ್ನು ನೀಡುವಂತಹ ಕಾರ್ಯಕ್ರಮಗಳನ್ನು ಮಾಡಿ ಆರ್ಥಿಕವಾಗಿ ಹಿಂದುಳಿದ ತುಳು-ಕನ್ನಡಿಗರಿಗೆ ಸಹಕರಿಸುತ್ತಿ ರುವುದು ಇತರ ಸಂಘಟನೆಗಳಿಗೆ ಮಾದರಿಯಾಗಿದೆ ಎಂದು ಜಯ ಶ್ರೀಕಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕಾಧ್ಯಕ್ಷ ತೋನ್ಸೆ ಜಯಕೃಷ್ಣ  ಎ. ಶೆಟ್ಟಿ ಅವರು ಅಭಿಪ್ರಾಯಿಸಿದರು.

ಜು. 8ರಂದು ಕುರ್ಲಾ ಪೂರ್ವದ ಬಂಟರ ಭವನದ ಶ್ರೀಮತಿ ರಾಧಾ ಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ನಡೆದ ಕರ್ನಾಟಕ ಸಂಘ ಅಂಧೇರಿ ಇದರ 12ನೇ ವಾರ್ಷಿಕೋತ್ಸವ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಇವರು, ಇಂದಿನ ಈ ಕಾರ್ಯಕ್ರಮವು ಉತ್ತಮ ವಾಗಿದ್ದು, ಸಮಾಜ ಸೇವೆಗೈದು ತೆರೆಮರೆಯಲ್ಲಿರುವ ಸಾಧಕರನ್ನು ಗುರುತಿಸಿದ ವಿಶೇಷ ಕಾರ್ಯವನ್ನು ಸಂಸ್ಥೆಯು ಮಾಡಿದೆ. ಇಂತಹ ಸಂಸ್ಥೆಗೆ ಉತ್ತಮ ಭವಿಷ್ಯವಿದ್ದು, ಸಂಸ್ಥೆಯ ನಾಡು-ನುಡಿ, ಸಮಾಜಪರ ಕಾರ್ಯಕ್ರಮಗಳಿಗೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.

ಶ್ರೀ ಕೃಷ್ಣ ವಿಟuಲ ಪ್ರತಿಷ್ಠಾನದ ಸಂಸ್ಥಾಪಕ ಕೈರಬೆಟ್ಟು ವಿಶ್ವನಾಥ್‌ ಭಟ್‌ ಅವರು ಆಶೀರ್ವಚನ ನೀಡಿ, ಭಜನೆಯ ಮೂಲಕ ಜನರಲ್ಲಿ ಧಾರ್ಮಿಕ ಪ್ರಜ್ಞೆಯನ್ನು ಮೂಡಿ ಸುವುದರೊಂದಿಗೆ ಮನೋ ರಂಜನೆಯನ್ನು ನೀಡಬಹುದು ಎಂಬುವುದನ್ನು ಅಂಧೇರಿ ಕರ್ನಾಟಕ ಸಂಘವು ತೋರಿಸಿಕೊಟ್ಟಿದೆ. ಇದು ಸಾಮಾನ್ಯ ಕಾರ್ಯಕರ್ತರಿಂದ ಬೆಳೆದ ಸಂಸ್ಥೆಯಾಗಿದೆ. ಇವರ ಸಮಾಜ ಸೇವೆಯನ್ನು ನೋಡುವಾಗ ಸಂತೋಷವಾಗುತ್ತದೆ. ಇಂತಹ ಸಂಸ್ಥೆಗೆ ದಾನಿಗಳ ಸಹಾಯದ ಅಗತ್ಯವಿದೆ ಎಂದರು.

ಕ್ಲಾಸಿಕ್‌ ಗ್ರೂಪ್‌ ಆಫ್‌ ಹೊಟೇಲ್ಸ್‌ ನ ಸುರೇಶ್‌ ಕಾಂಚನ್‌ ಅವರು ಅತಿಥಿ ಯಾಗಿ ಮಾತನಾಡಿ, ಪಾಶ್ಚಾತ್ಯ ಸಂಸ್ಕೃತಿಯು ಬೆಳೆಯುತ್ತಿರುವ ಇಂದಿನ ಕಾಲಘಟ್ಟದಲ್ಲಿ ಮಕ್ಕಳಿಗೆ ಧಾರ್ಮಿಕ ಚಿಂತನೆಯನ್ನು  ಮೂಡಿ ಸುವ ಕಾರ್ಯವನ್ನು ಸಂಘ-ಸಂಸ್ಥೆಗಳು ಮಾಡಬೇಕು. ಈ ನಿಟ್ಟಿನಲ್ಲಿ  ಸಂಘದ ಕಾರ್ಯ ಅಭಿನಂದನೀಯ ಎಂದರು.

ನಗರದ ಹಿರಿಯ ಸಾಹಿತಿ ಡಾ| ಸುನೀತಾ ಎಂ. ಶೆಟ್ಟಿ ಇವರು ಮಾತನಾಡಿ, ಮುಂಬಯಿಯಲ್ಲಿ ಸಂಘ-ಸಂಸ್ಥೆಗಳನ್ನು ಸ್ಥಾಪಿಸಿ ಇಲ್ಲಿ ಯಾವುದೇ ಜಾತಿ, ಮತ ಭೇದವಿಲ್ಲದೆ ಸಮಾಜ ಸೇವೆ ಯಲ್ಲಿ ತೊಡಗಿರುವುದು ಇಲ್ಲಿನ ತುಳು-ಕನ್ನಡಿಗರ ವಿಶೇ ಷತೆ ಯಾಗಿದೆ. ಅಂಧೇರಿ ಕರ್ನಾಟಕ ಸಂಘವು ಸಾಮಾಜಿಕ ಸೇವೆ ಯೊಂದಿಗೆ ಸಮಾಜಪರ ಕಾರ್ಯಗಳಲ್ಲಿ ತೊಡಗಿರುವುದು ಶ್ಲಾಘನೀಯ ವಾಗಿದೆ ಎಂದರು.

ಇನ್ನೋರ್ವ ಅತಿಥಿ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಅವರು ಮಾತನಾಡಿ, ಸಾಮಾಜಿಕ ಕಾರ್ಯಗಳನ್ನು ಹೇಗೆ ಮಾಡಬಹುದು ಎಂಬುವುದನ್ನು ಅಂಧೇರಿ ಕರ್ನಾಟಕ ಸಂಘವು ತೋರಿಸಿಕೊಟ್ಟಿದೆ. ಮುಂಬಯಿ ಕನ್ನಡಿಗರು ಒತ್ತಡ ಭರಿತ ಜೀವನದ ನಡುವೆಯೂ ಸಂಘಟನೆ ಗಳನ್ನು ಸ್ಥಾಪಿಸಿ, ಪ್ರತಿಭೆ ಗಳನ್ನು ಬೆಳೆಸುವ ಕಾರ್ಯವನ್ನು ಮಾಡು ತ್ತಿರುವುದು ವಿಶೇಷತೆ ಯಾಗಿದೆ ಎಂದು ನುಡಿದರು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಜೆರಿಮೆರಿ ಶ್ರೀ ಉಮಾಮಹೇಶ್ವರಿ ಮಂದಿರದ ಅರ್ಚಕ ಎಸ್‌. ಎನ್‌. ಉಡುಪ, ಟೆಕ್‌ನಿಕ್‌ ಎಂಜಿನೀಯರಿಂಗ್‌ ಇದರ ಎಂಡಿ ನಾಗರಾಜ್‌ ಪಡುಕೋಣೆ, ಉದ್ಯಮಿ ಸುಭಾಷ್‌ ಶೆಟ್ಟಿ, ಸುಗಮ ಸಂಗೀತ ಪರಿಷತ್‌ ಗೌರವಾಧ್ಯಕ್ಷ ವಿಶ್ವನಾಥ ಶೆಟ್ಟಿ ಕಾಪು,  ಫಾಸ್ಟ್‌ಟ್ರಾÂಕ್‌ ವಲ್ಶ್ವೈಡ್‌ ಪ್ರೈವೇಟ್‌ ಲಿಮಿಟೆಡ್‌ ಇದರ ಮಂಜುನಾಥ ಶೆಟ್ಟಿ, ಗಜಾನನ ಇಂಡಸ್ಟ್ರೀಸ್‌ ಇದರ ಬಿ. ಗಣಪತಿ, ಸ್ಟ್ರೇಕಾನ್‌ ಬಿಲ್ಡರ್ ಆ್ಯಂಡ್‌ ಡೆವಲಪರ್ ಇದರ ಸುರೇಶ್‌ ಶೆಟ್ಟಿ, ಗಾಣಿಗ ಸಮಾಜ ಮುಂಬಯಿ ಅಧ್ಯಕ್ಷ ರಾಮಚಂದ್ರ ಗಾಣಿಗ, ಉದ್ಯಮಿ ಪ್ರವೀಣ್‌ ಶೆಟ್ಟಿ ಪುಣೆ ಅವರು  ಮಾತನಾಡಿ ಸಂಸ್ಥೆಗೆ ಶುಭಹಾರೈಸಿದರು.
ಸಮಾರಂಭದಲ್ಲಿ ಕುಂಭಾಶಿ ಶ್ರೀ ಚಂಡಿಕಾ ದುರ್ಗಾಪರಮೇಶ್ವರಿ ದೇವಸ್ಥಾನದ ಸ್ಥಾಪಕ ದೇವರಾಯ ಶೇರುಗಾರ್‌ ಅವರನ್ನು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಲಾಯಿತು.   ಪತ್ರಕರ್ತ ದಯಾ ಸಾಗರ್‌ ಚೌಟ ಇವರು ಅತಿಥಿಗಳನ್ನು ಪರಿಚಯಿಸಿ, ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಭಾಸ್ಕರ ಸಸಿಹಿತ್ಲು ನಡೆಸಿಕೊಟ್ಟರು. ಅತಿಥಿ-ಗಣ್ಯರುಗಳನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.

ವೇದಿಕೆಯಲ್ಲಿ ಸಂಸ್ಥಾಪಕಾಧ್ಯಕ್ಷ ಕೃಷ್ಣ ಶೆಟ್ಟಿ, ಸಂಸ್ಥೆಯ ಗೌರವಾಧ್ಯಕ್ಷ ಪಿ. ಧನಂಜಯ ಶೆಟ್ಟಿ, ಅಧ್ಯಕ್ಷ ಹ್ಯಾರಿ ಸಿಕ್ವೇರ, ಉಪಾಧ್ಯಕ್ಷರುಗಳಾದ ರವೀಂದ್ರ ಶೆಟ್ಟಿ ಮತ್ತು ಸತೀಶ್‌ ಕರ್ಕೇರ, ಗೌರವ ಪ್ರಧಾನ ಕಾರ್ಯ ದರ್ಶಿ ರಾಜೇಂದ್ರ ರಾವ್‌, ಜತೆ ಕಾರ್ಯದರ್ಶಿ ದಿನೇಶ್‌ ಆರ್‌. ಕೆ., ಗೌರವ ಕೋಶಾಧಿಕಾರಿ ಗಣೇಶ್‌ ಬಲ್ಯಾಯ, ಜತೆ ಕೋಶಾಧಿಕಾರಿ ಸೀತಾರಾಮ ಪೂಜಾರಿ  ಹಾಗೂ ಇತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು. 

ಇದೇ ಸಂದರ್ಭದಲ್ಲಿ ನಡೆದ ಕುಣಿತ ಭಜನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಸಸಿಹಿತ್ಲು ಕದಿಕೆ ಶ್ರೀ ರಾಧಾಕೃಷ್ಣ ಭಜನ ಮಂಡಳಿ, ದ್ವಿತೀಯ ಕುಂದಾಪುರ ಬಟ್ಟೆಕುದ್ರು ಶ್ರೀರಾಮ ಭಜನ ಮಂಡಳಿ, ತೃತೀಯ ಉಮಾಮಹೇಶ್ವರಿ ದೇವಸ್ಥಾನ ಜೆರಿಮೆರಿ ಭಜನ ಮಂಡಳಿ ಪಡೆಯಿತು. ವಿಜೇತ ಸ್ಪರ್ಧಿಗಳಿಗೆ ಅತಿಥಿ-ಗಣ್ಯರು ನಗದು ಬಹುಮಾನದೊಂದಿಗೆ ಪ್ರಶಸ್ತಿ ಪ್ರದಾನಿಸಿದರು. ಸಂಸ್ಥೆಯ ಸದಸ್ಯ ಬಾಂಧವರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ವೇತನವನ್ನು ನೀಡಲಾಯಿತು.

ಚಿತ್ರ-ವರದಿ: ಸುಭಾಷ್‌  ಶಿರಿಯಾ


Trending videos

Back to Top