CONNECT WITH US  

ಸಾಂಸ್ಕೃತಿಕ ಹೊಣೆಗಾರಿಕೆಯ ಸಂಸ್ಥೆ ಚಿಣ್ಣರ ಬಿಂಬ: ಪ್ರೊ| ಸಿದ್ಧರಾಮಯ್ಯ

ಮುಂಬಯಿ: ನಮ್ಮ ಭಾಷಿಕ ಸಾಂಸ್ಕೃತಿಕ ಪರಂಪರೆ ಕಳೆದುಹೋಗ್ತಾ ಇದೆ ಎನ್ನುವ ಹೊತ್ತಿನಲ್ಲಿ ಚಿಣ್ಣರ ಬಿಂಬದಂತಹ ಸಂಸ್ಥೆ ಹುಟ್ಟಿ ಸಮೃದ್ಧವಾಗಿ ಬೆಳೆಯುತ್ತಿರುವುದು ಖುಷಿಕೊಟ್ಟಿದೆ. ಕ್ರಿಯಾಶೀಲವಾಗಿರುವ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ ಈ ಸಂಸ್ಥೆಗಾಗಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಪ್ರೋತ್ಸಾಹಿಸುತ್ತಿರುವ  ಇಲ್ಲಿನ ಮುಖ್ಯಸ್ಥರಾದ ಡಾ| ಜಿ. ಎನ್‌. ಉಪಾಧ್ಯ ಅವರ ಹೃದಯ ವೈಶಾಲ್ಯಕ್ಕೆ  ಸಾಕ್ಷಿ. ಪೊಲೀಸ್‌ ವೃತ್ತಿಯಲ್ಲಿದ್ದೂ ಈ ಸಂಸ್ಥೆಗಾಗಿ ತನ್ನನ್ನು ತೊಡಗಿಸಿಕೊಂಡಿರುವ ಪ್ರಕಾಶ್‌ ಭಂಡಾರಿಯವರ ಕಾರ್ಯ ಶ್ಲಾಘನೀಯ. ಸಾಮಾಜಿಕ ಜವಾಬ್ದಾರಿಯ ಸಾಂಸ್ಕೃತಿಕ ಹೊಣೆಗಾರಿಕೆ  ಹೊತ್ತ ಸಂಸ್ಥೆಯಾದ ಚಿಣ್ಣರ ಬಿಂಬದ ಕಾರ್ಯವೈಖರಿಯನ್ನು ಕಂಡು ಆನಂದ ತುಂದಿಲನಾಗಿದ್ದೇನೆ. ಅನ್ನ ಬೆಂದಿದೆಯೋ ಎಂದು ನೋಡಬೇಕಾದರೆ ಎಲ್ಲ ಅಗುಳುಗಳನ್ನು ನೋಡಬೇಕಾಗಿಲ್ಲ. ಅದೇ ರೀತಿ ಇಂದು ಮಕ್ಕಳು ನಡೆಸಿಕೊಟ್ಟ ಕಾವ್ಯವಾಚನ, ಭಾಷಣ, ಸಮೂಹ ಗಾಯನ, ನೃತ್ಯಗಳು ಮನಸೂರೆಗೊಂಡಿವೆ ಎಂದು ಕರ್ನಾಟಕ ಸರಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ| ಎಸ್‌. ಜಿ. ಸಿದ್ದರಾಮಯ್ಯ ಅವರು ಅಭಿಪ್ರಾಯವ್ಯಕ್ತಪಡಿಸಿದರು.

ಸೆ. 1 ರಂದು ಮುಂಬಯಿ ಶ್ವವಿದ್ಯಾಲಯದ ಕವಿವರ್ಯ ಡಾ| ಕುಸುಮಾಗ್ರಜ ಮರಾಠಿ ಭಾಷಾ ಭವನ ಇಲ್ಲಿ ಕನ್ನಡ ವಿಭಾಗ ಆಯೋಜಿಸಿದ ಚಿಣ್ಣರ ಬಿಂಬದ ಚಿಣ್ಣರ, ಶಿಕ್ಷಕರ, ಸ್ವಯಂ ಸೇವಕರ, ಪಾಲಕರ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಮ್ಮ ಮಾತುಗಳನ್ನು ಮುಂದುವರಿಸುತ್ತಾ ಮಕ್ಕಳ ಪ್ರತಿಭೆಯನ್ನು ಕಂಡು ಎಲ್ಲೋ ಭಾಷಿಕ ಪರಂಪರೆ ಕಳೆದು ಹೋಗ್ತಾ ಇದೆ ಎಂದು ಭಾವಿಸಬಹುದಾದ ಸಂದರ್ಭದಲ್ಲಿಯೇ ಇಂತಹ ಸಂಸ್ಥೆ ಮುಂಬಯಿಯಲ್ಲಿ ಆಶಾಜ್ಯೋತಿಯಾಗಿ ಕಂಗೊಳಿಸುತ್ತಿದೆ. ಈ ಮಕ್ಕಳು ಶೈಕ್ಷಣಿಕ ಶ್ರಮದಲ್ಲಿ ಕಳೆದುಹೋಗದೇ ಸಾಂಸ್ಕೃತಿಕ ಮನಸ್ಥಿತಿಯನ್ನು ಬೆಳೆಸಿಕೊಳ್ಳುವ ಕ್ರಮವನ್ನು ಈ ಮಕ್ಕಳಲ್ಲಿ ಗುರುತಿಸಿದೆ. ನಮ್ಮ ಮಕ್ಕಳಿಗೆ ನಮ್ಮ ಭಾಷೆಯ ಮೇಲೂ ಅಭಿಮಾನ ಮೂಡುವಂತೆ ಮಾಡಿ ಹೃದಯ ಸಂಸ್ಕಾರ ಮಾಡುವ ಜ್ಞಾನವನ್ನು ತಾವೆಲ್ಲರೂ ನಿಷ್ಕಲ್ಮಶ ಮನಸಿನಿಂದ ಇಲ್ಲಿ ಕೆಲಸ ಮಾಡುತ್ತಿರುವುದನ್ನು ನೋಡಿ ಆಶ್ಚರ್ಯವೂ ಆಗಿದೆ. ಇಷ್ಟೊಂದು ಪಾಲಕರನ್ನು, ಮಕ್ಕಳು ಒಂದುಗೂಡಿಸಿ ಕಾರ್ಯಕ್ರಮವನ್ನು ಮಾಡುವುದು ಅಷ್ಟು ಸುಲಭವಲ್ಲ. ತುಳು ಬಾಂಧವರು ಕನ್ನಡ ಭಾಷೆಯನ್ನು ಮರಾಠಿ ಮಣ್ಣಿನಲ್ಲಿ ಬೆಳೆಸಲು ಮಾಡಿದ ಕನ್ನಡ  ಕೈಂಕರ್ಯ ಬಹುದೊಡ್ಡದು ಎಂದು ಅವರು ಅಭಿಪ್ರಾಯ ಪಟ್ಟರು.

ಅಧ್ಯಕ್ಷತೆಯನ್ನು ವಹಿಸಿದ ಚಿಣ್ಣರಬಿಂಬದ ರೂವಾರಿ ಪ್ರಕಾಶ್‌ ಭಂಡಾರಿ ಅವರು ಮಾತನಾಡಿ, ಹೊರನಾಡಿನಲ್ಲಿ ಮಕ್ಕಳಿಗಾಗಿ ಇರುವ ಸಂಸ್ಥೆ ಎಂದರೆ ಅದು ಚಿಣ್ಣರಬಿಂಬ ಒಂದೇ. ಈ ಸಂಸ್ಥೆಯ ಮೂಲಕ ನಾವು ಒಂದು ಸುಸಂಸ್ಕೃತ ಸಮಾಜದ ನಿರ್ಮಾಣಕ್ಕೆ ಇಳಿದಿದ್ದೇವೆ. ಈ ಕಾರ್ಯ ಅಷ್ಟು ಸುಲಭವಲ್ಲ. ಸುಮಾರು 25 ಶಿಬಿರಗಳಲ್ಲಿ ಪ್ರತಿ ಆದಿತ್ಯವಾರ ಕನ್ನಡ ಕಲಿಕಾ ತರಗತಿಗಳು, ವಿವಿಧ ತರಬೇತಿ ಶಿಬಿರಗಳು, ಭಜನೆ ಹೀಗೆ ವಿವಿಧ ಕಾರ್ಯಗಳ ಮೂಲಕ ಮಕ್ಕಳನ್ನು ಕ್ರಿಯಾಶೀಲರನ್ನಾಗಿಸಿ ಅವರು ನಮ್ಮ ನಾಡು, ನುಡಿಯ ಕುರಿತು ಚಿಂತಿಸುವಂತೆ ಮಾಡುವುದು ನಮ್ಮ ಉದ್ದೇಶ. ಮುಂಬಯಿಯಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಪ್ರಯಾಣಿಸುವುದು ಅಂದರೆ ಬಹಳ ತ್ರಾಸದಾಯಕವಾದುದು. ಪಾಲಕರು ತಮ್ಮ ಮಕ್ಕಳನ್ನು ರೈಲಿನಲ್ಲಿ, ಬಸ್ಸಿನಲ್ಲಿ ತರಬೇತಿಗಾಗಿ ಕರೆತರುವಾಗ ನಮಗೂ ಖೇದವೆನಿಸುತ್ತದೆ. ಆದರೂ ಮಕ್ಕಳ ಒಳಿತಿಗಾಗಿ ಇವರೆಲ್ಲರ ಶ್ರಮಕ್ಕೆ ನಾನು ಋಣಿಯಾಗಿದ್ದೇನೆ. ಈ ಎಲ್ಲ ಶ್ರಮ ಪರಿಶ್ರಮ ಯಶಸ್ಸಾಗಬೇಕಾದರೆ ಕರ್ನಾಟಕ ಸರಕಾರದ ನೆರವಿನ ಅಗತ್ಯವಿದೆ ಎಂದು ಅವರು ನುಡಿದರು.

ಕಾಂದಿವಲಿ ಶಿಬಿರದ ಚಿಣ್ಣರು ಪ್ರಾರ್ಥನೆ ಹಾಡಿದರು. ಕನ್ನಡ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು ಜ್ಯೋತಿ ಶೆಟ್ಟಿ, ಅನಿತಾ ಶೆಟ್ಟಿ, ಉದಯ ಶೆಟ್ಟಿ, ಸೋಮಶೇಖರ ಮಸಳಿ,  ಸುರೇಖಾ. ಬಿ, ಕುಮುದಾ ಆಳ್ವ, ಸುಚಿತ್ರಾ ಶೆಟ್ಟಿ, ಸುಮಿತ್ರಾ ದೇವಾಡಿಗ, ವಿನಯಾ ಶೆಟ್ಟಿ, ಶೋಭಾ ಶೆಟ್ಟಿ ಮೊದಲಾದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಭಾಸ್ಕರ ಶೆಟ್ಟಿ, ತಾಳಿಪಾಡಿಗುತ್ತು, ಜಗದೀಶ್‌ ರಾವ್‌, ರವಿ ಹೆಗ್ಡೆ, ಸಂಜೀವ ಪೂಜಾರಿ, ಜಯಪ್ರಕಾಶ್‌ ಶೆಟ್ಟಿ, ವಿಜಯ ಕೋಟ್ಯಾನ್‌, ಶ್ರೀಪಾದ ಪತಕಿ ಮೊದಲಾದವರು ಉಪಸ್ಥಿತರಿದ್ದರು.

ಚಿಣ್ಣರಬಿಂಬ ಒಂದು ಕೂಡುಕುಟುಂಬವಿದ್ದಂತೆ. ಆದ್ದರಿಂದಲೇ ಎಲ್ಲ ಸಂಸ್ಥೆಗಳಿಗಿಂತ ಇದು ಭಿನ್ನ. ಮಕ್ಕಳ ಸರ್ವತೋಮುಖ ಬೆಳವಣಿಗೆಗಾಗಿ ದಿನರಾತ್ರಿ ಯೋಚಿಸುವ ಪ್ರಕಾಶ್‌ ಭಂಡಾರಿ ಅವರ ನೇತೃತ್ವದಿಂದ ಬಹಳ ಯಶಸ್ವಿ ಪಥದಲ್ಲಿ ಸಾಗುತ್ತಿದೆ. ಬದುಕನ್ನರಸಿ ಮುಂಬಯಿಗೆ ಬಂದ ತುಳು ಕನ್ನಡಿಗರು ನಮ್ಮತನವನ್ನು ಮರೆಯದೇ ಇಲ್ಲಿ ಭಾಷೆಯ ಉಳಿವಿಗೆ ಮಾಡಿದ ಹೋರಾಟದ ಫಲವೇ ಇಲ್ಲಿನ ಸಂಘ ಸಂಸ್ಥೆಗಳು. ಯಾವ ಪ್ರಶಸ್ತಿ, ಪ್ರಚಾರ, ಬಹುಮಾನಗಳ ಆಸೆಯಿಲ್ಲದೆ ಕೇವಲ ಮಕ್ಕಳ ಹಿತದೃಷ್ಟಿಯಿಂದ ಕೆಲಸ ಮಾಡುತ್ತಿರುವ ಪ್ರಕಾಶ್‌ ಭಂಡಾರಿ ಅವರು ಇತರರಿಗೂ ಮಾದರಿಯಾಗುತ್ತಾರೆ. ಈ ಸಂಸ್ಥೆಗೆ ಕರ್ನಾಟಕ ಸರಕಾರದ ಅನುದಾನ ಸಿಗಬೇಕು. ಕನ್ನಡ ಕಲಿಸುವ ಶಿಕ್ಷಕಿಯರಿಗೆ ಮಾಸಿಕ ವೇತನ ನೋಡಿ ಸರಕಾರ ಪ್ರೋತ್ಸಾಹಿಸಬೇಕು. ಇದರ ಬಗ್ಗೆ  ಎಸ್‌. ಜಿ. ಸಿದ್ಧರಾಮಯ್ಯ ಅವರು ಗಮನ ಹರಿಸಬೇಕು.
 - ಡಾ| ಜಿ. ಎನ್‌. ಉಪಾಧ್ಯ, ಮುಖ್ಯಸ್ಥರು, ಕನ್ನಡ ವಿಭಾಗ ಮುಂಬಯಿ ವಿವಿ

ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ ಆಯೋಜಿಸಿರುವ ಈ ಕಾರ್ಯಕ್ರಮ ಬಹಳ ಆಪ್ತವಾಗಿತ್ತು. ಒಂದು ವಿದ್ಯಾ ಸಂಸ್ಥೆ ಈ ರೀತಿಯ ಮುಕ್ತ ಮನಸ್ಸಿನಿಂದ ಪ್ರೋತ್ಸಾಹಿಸು ತ್ತಿರುವುದು ವಿಶೇಷ. ವಿಶ್ವದಲ್ಲೇ ಯಾರೂ ಮಾಡದ ಕಲ್ಪನೆ ಕಲಾಜಗತ್ತು ಚಿಣ್ಣರ ಬಿಂಬದಂತಹ ಸಂಸ್ಥೆ ಮಾಡಿದೆ. ಆ ಮೂಲಕ ನಮ್ಮ ಮಕ್ಕಳ ಅಭಿವೃದ್ಧಿಗಾಗಿ ಕಾರ್ಯ ನಿರ್ವಹಿಸುತ್ತಿದೆ. ಇಂತಹ ಸಂಸ್ಥೆಯನ್ನು ನಿರಂತರವಾಗಿ ಪ್ರಾಂಜಲ ಮನಸ್ಸಿನಿಂದ ಸಹಕರಿಸುತ್ತಿರುವ ಡಾ| ಜಿ. ಎನ್‌. ಉಪಾಧ್ಯ ಹಾಗೂ ಅವರ ತಂಡದ ಕಾರ್ಯ ಮೆಚ್ಚುವಂತದ್ದು.
- ಡಾ| ಸುರೇಂದ್ರ ಕುಮಾರ್‌ ಹೆಗ್ಡೆ, 
ಚಿಣ್ಣರ ಬಿಂಬದ ರೂವಾರಿ

Trending videos

Back to Top