CONNECT WITH US  

ಓವರ್‌ ಟು ಅಡಿಲೇಡ್‌...

 ಬಹು ನಿರೀಕ್ಷಿತ ಭಾರತ-ಆಸ್ಟ್ರೇಲಿಯ ಟೆಸ್ಟ್‌ ಸರಣಿಗೆ ಇಂದು ಚಾಲನೆ

ಅಡಿಲೇಡ್‌: ಭಾರತೀಯ ಕ್ರಿಕೆಟಿಗರ ಪಾಲಿಗೆ ಯಾವತ್ತೂ ಭಾರೀ ಸವಾಲಿನದೂ ಕಗ್ಗಂಟಿನದೂ ಆಗಿರುವ ಪ್ರವಾಸವೆಂದರೆ ಅದು ಆಸ್ಟ್ರೇಲಿಯ. ಕಳೆದ 70 ವರ್ಷಗಳಿಂದ ಕಾಂಗರೂ ನಾಡಿನಲ್ಲಿ ಟೆಸ್ಟ್‌ ಪಂದ್ಯಗಳನ್ನು ಆಡುತ್ತಲೇ ಬಂದಿರುವ ಭಾರತಕ್ಕೆ ಇಲ್ಲಿ ಸರಣಿ ಗೆಲುವು ಮರೀಚಿಕೆಯೇ ಆಗಿ ಉಳಿದಿದೆ. ಈ ಬಾರಿಯಾದರೂ ನಮ್ಮವರಿಂದ ಇತಿಹಾಸ ಸಾಧ್ಯವೇ ಎಂಬ  ಕುತೂಹಲಕ್ಕೆ ಗುರುವಾರದಿಂದ ನಿಧಾನವಾಗಿ ಉತ್ತರ ಲಭಿಸತೊಡಗುತ್ತದೆ. "ಅಡಿಲೇಡ್‌ ಓವಲ್‌'ನಲ್ಲಿ ಇತ್ತಂಡಗಳು ಟೆಸ್ಟ್‌ ಸರಣಿಗೆ ಚಾಲನೆ ನೀಡಲಿವೆ.

ಆಸ್ಟ್ರೇಲಿಯದಲ್ಲಿ 11 ಟೆಸ್ಟ್‌ ಸರಣಿ ಆಡಿರುವ ಭಾರತ ಎಂಟನ್ನು ಕಳೆದುಕೊಂಡಿದೆ. 3 ಸರಣಿಗಳು ಸಮಬಲದಲ್ಲಿ ಮುಗಿದಿವೆ. ಇಲ್ಲಿ ಆಡಿದ 44 ಟೆಸ್ಟ್‌ಗಳಲ್ಲಿ ಭಾರತಕ್ಕೆ ಗೆಲುವು ಒಲಿದದ್ದು 5ರಲ್ಲಿ ಮಾತ್ರ. 28 ಪಂದ್ಯಗಳ ಸೋಲು ಭಾರತದ ವೈಫ‌ಲ್ಯಕ್ಕೆ ಸಾಕ್ಷಿ. 

ಸರಣಿ ಗೆಲ್ಲಲು ಸದವಕಾಶ
ಈ ಬಾರಿ ಕಾಂಗರೂ ನಾಡಿನಲ್ಲಿ ಭಾರತಕ್ಕೆ ಸರಣಿ ಗೆಲ್ಲಲಾಗದಿದ್ದರೆ ಮತ್ತೆಂದೂ "ಸೀರಿಸ್‌ ವಿನ್‌' ಅಸಾಧ್ಯ ಎಂಬುದು ಬಹುತೇಕ ಮಂದಿಯ ಲೆಕ್ಕಾಚಾರ ಹಾಗೂ ನಂಬಿಕೆ. ಇದಕ್ಕೆ ಕಾರಣ, ಆಸ್ಟ್ರೇಲಿಯ ತಂಡದ 2 ಸ್ತಂಭಗಳಾಗಿರುವ ಸ್ಟೀವನ್‌ ಸ್ಮಿತ್‌ ಮತ್ತು ಡೇವಿಡ್‌ ವಾರ್ನರ್‌ ನಿಷೇಧ ಕ್ಕೊಳಗಾಗಿ ಹೊರಗುಳಿದಿರುವುದು. ಇದರಿಂದ ಆಸ್ಟ್ರೇಲಿಯದ ಸಾಮರ್ಥ್ಯ ಸಹಜವಾಗಿಯೇ ಕುಂದಿದೆ. ಹೀಗಾಗಿ ಭಾರತ ಇದರ ಲಾಭವೆತ್ತಿ ಮೇಲುಗೈ ಸಾಧಿಸಬಹುದು ಎಂಬ ನಿರೀಕ್ಷೆ ಗರಿಗೆದರಿದೆ.

ಆದರೆ ಇದಕ್ಕೂ ಹಿಂದೆ ನಡೆದ ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್‌ ಪ್ರವಾಸದ ವೇಳೆ ಭಾರತ ತೀರಾ ಕಳಪೆ ಪ್ರದರ್ಶನ ನೀಡಿದ್ದನ್ನು ಮರೆಯುವಂತಿಲ್ಲ. ತವರಿನಲ್ಲಿ ದುರ್ಬಲ ವೆಸ್ಟ್‌ ಇಂಡೀಸ್‌ ವಿರುದ್ಧ ಎಷ್ಟೇ ಅಮೋಘ ಪ್ರದರ್ಶನ ನೀಡಿದರೂ ಅದು ಆಸ್ಟ್ರೇಲಿಯದಲ್ಲಿನ ಯಶಸ್ಸಿಗೆ ಖಂಡಿತ ಮಾನದಂಡವಾಗದು.   ಆಸ್ಟ್ರೇಲಿಯ ತಂಡ ಹೇಗೆಯೇ ಇರಲಿ, ಭಾರತ ತನ್ನ ಸಂಪೂರ್ಣ ಸಾಮರ್ಥ್ಯವನ್ನು ಪಣಕ್ಕೊಡ್ಡಿ ಆಡಿದರಷ್ಟೇ ಮೇಲುಗೈ ಸಾಧಿಸೀತು.

ಮೊದಲ 30 ಓವರ್‌ ನಿರ್ಣಾಯಕ
ಭಾರತ ಈಗಾಗಲೇ ತನ್ನ 12ರ ಬಳಗವನ್ನು ಪ್ರಕಟಿಸಿದೆ. ಸಹಜವಾಗಿಯೇ ಪ್ರತಿಭಾನ್ವಿತ ಯುವ ಆರಂಭಕಾರ ಪೃಥ್ವಿ ಶಾ ಗೈರು ಭಾರತಕ್ಕೊಂದು ಹಿನ್ನಡೆ ಆಗಿರುವುದರಲ್ಲಿ ಅನುಮಾನವಿಲ್ಲ. ರಾಹುಲ್‌-ವಿಜಯ್‌ ದೊಡ್ಡ ಅಡಿಪಾಯ ನಿರ್ಮಿಸುವಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾದಾರು ಎಂಬುದೊಂದು ಪ್ರಶ್ನೆ. ಸಚಿನ್‌ ತೆಂಡುಲ್ಕರ್‌ ಹೇಳಿದಂತೆ, ಆಸ್ಟ್ರೇ ಲಿಯದಲ್ಲಿ ಮೊದಲ 30 ಓವರ್‌ಗಳು ಅತ್ಯಂತ ಮಹತ್ವದ್ದಾಗಿರುತ್ತದೆ. 

ಭಾರತದ ಬ್ಯಾಟಿಂಗ್‌ ವಿರಾಟ್‌ ಕೊಹ್ಲಿ ಅವರನ್ನು ಹೆಚ್ಚು ಅವಲಂಬಿಸಿದೆ. ದಕ್ಷಿಣ ಆಫ್ರಿಕಾದಲ್ಲಿ ಉಳಿದವರೆಲ್ಲ ವೈಫ‌ಲ್ಯ ಅನುಭವಿಸಿದಾಗ ಕೊಹ್ಲಿ 286 ರನ್‌ ಬಾರಿಸಿದ್ದರು. ಇಂಗ್ಲೆಂಡ್‌ನ‌ಲ್ಲಿ 593 ರನ್‌ ಪೇರಿಸಿದ್ದರು. ಕಪ್ತಾನನಿಗೆ ಸೂಕ್ತ ಬೆಂಬಲ ನೀಡುವಲ್ಲಿ ಪೂಜಾರ, ರಹಾನೆ ಮೊದಲಾದವರು ಯಶಸ್ವಿಯಾಗಬೇಕಿದೆ.

ರೋಹಿತ್‌-ವಿಹಾರಿ ಸ್ಪರ್ಧೆ

ಗಾಯಾಳು ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಈ ಪ್ರವಾಸಕ್ಕೆ ಆಯ್ಕೆ ಆಗದಿರುವುದರಿಂದ ತಂಡದ ಸಮತೋಲನದಲ್ಲಿ ವ್ಯತ್ಯಯವಾಗಲಿದೆ. 4 ಸ್ಪೆಷಲಿಸ್ಟ್‌ ಬೌಲರ್‌ಗಳನ್ನು ಹೊರತುಪಡಿಸಿದರೆ ಬ್ಯಾಟಿಂಗ್‌ ಕೂಡ ಮಾಡಬಲ್ಲ 5ನೇ ಬೌಲರ್‌ನ ಕೊರತೆ ತಂಡವನ್ನು ಕಾಡುವ ಸಾಧ್ಯತೆ ಇದೆ. 

ಒಂದು ಸ್ಥಾನದ ಸ್ಪರ್ಧೆಯಲ್ಲಿರುವ ಹನುಮ ವಿಹಾರಿ ಮತ್ತು ರೋಹಿತ್‌ ಶರ್ಮ ಇಬ್ಬರೂ ಉತ್ತಮ ಬ್ಯಾಟ್ಸ್‌ಮನ್‌ಗಳು, ಆದರೆ 5ನೇ ಬೌಲರ್‌ನ ಸ್ಥಾನವನ್ನು ತುಂಬಬಲ್ಲ ಸಮರ್ಥರಲ್ಲ. ಆರ್‌. ಅಶ್ವಿ‌ನ್‌ ಏಕೈಕ ಸ್ಪಿನ್ನರ್‌ ಆಗಿದ್ದಾರೆ. ಅನುಭವಿ ಕೀಪರ್‌ ಪಾರ್ಥಿವ್‌ ಪಟೇಲ್‌ ಬದಲು ರಿಷಬ್‌ ಪಂತ್‌ಗೆ ಅವಕಾಶ ನೀಡಿದ್ದೊಂದು ಅಚ್ಚರಿಯಾದರೂ ದಿಟ್ಟ ನಡೆ.

ಕೊಹ್ಲಿಗೆ ನಾಯಕತ್ವದ ಬಾಗಿಲು ತೆರೆದಿದ್ದ ಅಡಿಲೇಡ್‌

ವಿರಾಟ್‌ ಕೊಹ್ಲಿ ಪಾಲಿಗೆ ಅಡಿಲೇಡ್‌ ಟೆಸ್ಟ್‌ ಪಂದ್ಯ ಸ್ಮರಣೀಯ. ಕಳೆದ ಸಲ, ಅಂದರೆ 2014-15ರ ಆಸ್ಟ್ರೇಲಿಯ ಪ್ರವಾಸದ ಅಡಿಲೇಡ್‌ ಟೆಸ್ಟ್‌ ಪಂದ್ಯದಲ್ಲೇ ಕೊಹ್ಲಿಗೆ ಮೊದಲ ಸಲ ಟೆಸ್ಟ್‌ ತಂಡದ ನಾಯಕತ್ವ ವಹಿಸುವ ಅವಕಾಶ ಲಭಿಸಿತ್ತು. ಧೋನಿ ಗಾಯಾಳಾಗಿ ಹೊರಗುಳಿದುದರಿಂದ ಕೊಹ್ಲಿ ಟೀಮ್‌ ಇಂಡಿಯಾ ಸಾರಥ್ಯ ವಹಿಸಿದ್ದರು. 
ನಾಯಕನಾದ ಮೊದಲ ಟೆಸ್ಟ್‌ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಸಿಡಿಸಿದ ಅಪರೂಪದ ದಾಖಲೆ ಸ್ಥಾಪಿಸಿದ್ದು  ಕೊಹ್ಲಿ ಪಾಲಿನ ಹೆಗ್ಗಳಿಕೆಯಾಗಿತ್ತು (115 ಮತ್ತು 148 ರನ್‌). ಗೆಲುವಿನ ಅಂಚಿನ ತನಕ ಬಂದಿದ್ದ ಭಾರತ ಈ ಪಂದ್ಯವನ್ನು 48 ರನ್ನುಗಳಿಂದ ಕಳೆದುಕೊಳ್ಳಬೇಕಾಯಿತು.

ಮುಂದಿನೆರಡು ಟೆಸ್ಟ್‌ಗಳಿಗೆ ಧೋನಿ ಮರಳಿದರು. ಆದರೆ ಸಿಡ್ನಿಯ ಅಂತಿಮ ಟೆಸ್ಟ್‌ ಪಂದ್ಯಕ್ಕೂ ಮುನ್ನ ಭಾರತ ತಂಡದಲ್ಲಿ ಅಚ್ಚರಿಯ ವಿದ್ಯಮಾನವೊಂದು ಸಂಭವಿಸಿತು. ಧೋನಿ ದಿಢೀರನೇ ಟೆಸ್ಟ್‌ ಕ್ರಿಕೆಟಿಗೆ ವಿದಾಯ ಘೋಷಿಸಿದರು. ಕೊಹ್ಲಿ ಪೂರ್ಣ ಪ್ರಮಾಣದಲ್ಲಿ ಭಾರತ ತಂಡದ ಟೆಸ್ಟ್‌ ನಾಯಕರಾಗಿ ಆಯ್ಕೆಗೊಂಡರು.

ಭಾರತ (ಹನ್ನೆರಡರ ಬಳಗ)
ಕೆ.ಎಲ್‌. ರಾಹುಲ್‌, ಮುರಳಿ ವಿಜಯ್‌, ಚೇತೇಶ್ವರ್‌ ಪೂಜಾರ, ವಿರಾಟ್‌ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರೋಹಿತ್‌ ಶರ್ಮ, ಹನುಮ ವಿಹಾರಿ, ರಿಷಬ್‌ ಪಂತ್‌ (ವಿ.ಕೀ.), ಆರ್‌. ಅಶ್ವಿ‌ನ್‌, ಇಶಾಂತ್‌ ಶರ್ಮ, ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್‌ ಶಮಿ.

ಆಸ್ಟ್ರೇಲಿಯ (ಆಡುವ ಬಳಗ)
ಮಾರ್ಕಸ್‌ ಹ್ಯಾರಿಸ್‌, ಆರನ್‌ ಫಿಂಚ್‌, ಉಸ್ಮಾನ್‌ ಖ್ವಾಜಾ, ಟ್ರ್ಯಾವಿಸ್‌ ಹೆಡ್‌, ಶಾನ್‌ ಮಾರ್ಷ್‌, ಪೀಟರ್‌ ಹ್ಯಾಂಡ್ಸ್‌ಕಾಂಬ್‌, ಟಿಮ್‌ ಪೇನ್‌ (ನಾಯಕ), ನಥನ್‌ ಲಿಯೋನ್‌, ಮಿಚೆಲ್‌ ಸ್ಟಾರ್ಕ್‌, ಪ್ಯಾಟ್‌ ಕಮಿನ್ಸ್‌, ಜೋಶ್‌ ಹ್ಯಾಝಲ್‌ವುಡ್‌.


Trending videos

Back to Top