CONNECT WITH US  

ಪೊಲೀಸರ ಹೋರಾಟಕ್ಕೆ ನಕ್ಸಲರ ಸಾಥ್‌!

ಶಿವಮೊಗ್ಗ/ತೀರ್ಥಹಳ್ಳಿ: ಪೊಲೀಸರ ಹೋರಾಟಕ್ಕೆ ಬೆಂಬಲ ಸೂಚಿಸಿ ನಕ್ಸಲರು ಜಿಲ್ಲೆಯ ಕೆಲವೆಡೆ ಬ್ಯಾನರ್‌ ಹಾಕಿದ್ದಾರೆ. ಆಗುಂಬೆ ಬಳಿಯ ಹೆಬ್ಟಾಗಿಲು, ಕದಲುಗುಡ್ಡೆ ಗ್ರಾಮಗಳ ಬಸ್‌ ನಿಲ್ದಾಣ ಮತ್ತು ಕುರೆಕುಂಬ್ರಾ ಬಳಿ ನಕ್ಸಲರು ಎರಡು ಬ್ಯಾನರ್‌ ಹಾಕಿದ್ದು, ಇದರಲ್ಲಿ ಪೊಲೀಸರನ್ನು ಬೆಂಬಲಿಸಿ ಒಕ್ಕಣೆ ಬರೆದಿದ್ದಾರೆ. ಒಂದು ಬ್ಯಾನರ್‌ನಲ್ಲಿ 'ಪೊಲೀಸರಿಗೊಂದು ಕರೆ, ಸ್ವಾಭಿಮಾನ, ಗೌರವಯುತ ಬದುಕನ್ನು ಬಾಳಿರಿ. ದಬ್ಟಾಳಿಕೆಯ, ಅಧಿಕಾರಿಶಾಹಿ ಸರ್ಕಾರದ ಆಶ್ವಾಸನೆಗಳನ್ನು ನಂಬದೆ, ನಮ್ಮನ್ನು ಬೆಂಬಲಿಸಿ. ನಮ್ಮ ಜೊತೆ ಸೇರಿ ಹೋರಾಟದ ಮೂಲಕ ಸಾಧಿಸೋಣ' ಎಂದು ಬರೆಯಲಾಗಿದೆ.

ಇನ್ನೊಂದು ಬ್ಯಾನರ್‌ನಲ್ಲಿ 'ಸೂರ್ಯನನ್ನು ಅಂಗೈಯಿಂದ ಮುಚ್ಚಿಡಲು ಸಾಧ್ಯವಿಲ್ಲ. ಅಧಿಕಾರಿಶಾಹಿ ದಬ್ಟಾಳಿಕೆಯ ಸರ್ಕಾರದ ನೀತಿಯಿಂದ ದುರ್ಬಲರ, ಬಡವರ ಶೋಷಣೆ ನಿರಂತರ. ಹಾಗಾಗಿ ಪೊಲೀಸರು ಈ ದಯನೀಯ ಸ್ಥಿತಿಯಿಂದ ಹೊರ ಬಂದು, ನಮ್ಮನ್ನು ಬೆಂಬಲಿಸಿ. ಸ್ವಾಭಿಮಾನಿಗಳಾಗಿ ಬದುಕಿ. ಜೀತದಾಳುಗಳಾಗಿ ಬದುಕುವ ಬದಲು ನಮ್ಮನ್ನು ಬೆಂಬಲಿಸಿ.. ಸಿಪಿಐ (ಮಾವೋವಾದಿ)' ಎಂದು ಬರೆಯಲಾಗಿದೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಈ ಬ್ಯಾನರ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಬ್ಯಾನರ್‌ಗಳ ಕುರಿತು ಪೊಲೀಸ್‌ ಹಿರಿಯ ಅಧಿಕಾರಿಗಳ ಮಟ್ಟದಲ್ಲಿ ಸಂಶಯ ವ್ಯಕ್ತವಾಗಿದ್ದು, ಜಿಲ್ಲಾ ರಕ್ಷಣಾಧಿಕಾರಿ ರವಿ ಚೆನ್ನಣ್ಣನವರ್‌ ಈ ಕುರಿತು ತನಿಖೆಗೆ ಆದೇಶ ಹೊರಡಿಸಿದ್ದಾರೆ.

ಮನವೊಲಿಕೆ ನಂತರ ಪೊಲೀಸರು ಕರ್ತವ್ಯಕ್ಕೆ
ಚಿಕ್ಕಮಗಳೂರು:
ನಗರದ ಸಂಚಾರಿ ಠಾಣೆಯ ಪೊಲೀಸರು ಶನಿವಾರ ಬೆಳಗ್ಗೆ ಎಂದಿನಂತೆ ಠಾಣೆಗೆ ಆಗಮಿಸಿದರಾದರೂ ಕೆಲಕಾಲ ಕೆಲಸಕ್ಕೆ ಹಾಜರಾಗದೆ ಕಚೇರಿಯಲ್ಲಿಯೇ ಕಾಲ ಕಳೆಯುತ್ತಿದ್ದರು. ಸಂಚಾರಿ ಠಾಣೆ ಸಬ್‌ ಇನ್ಸ್‌ಪೆಕ್ಟರ್‌ ಠಾಣೆಗೆ ಬಂದು ಪೊಲೀಸರೊಂದಿಗೆ ಚರ್ಚಿಸಿ, ಅವರ ಮನವೊಲಿಸಿದ ನಂತರ 11.30ರ ವೇಳೆಗೆ ಕರ್ತವ್ಯಕ್ಕೆ ಹಾಜರಾದರು.

ಕುಟುಂಬಸ್ಥರ ಪ್ರತಿಭಟನೆ: ಜಿಲ್ಲಾಧಿಕಾರಿಗಳಿಗೆ ಮನವಿ
ಶಿವಮೊಗ್ಗ, ರಾಯಚೂರು, ಉಡುಪಿಗಳಲ್ಲಿ ಪೊಲೀಸರ ಕುಟುಂಬದ ಕೆಲ ಸದಸ್ಯರು ಕೆಲ ಹೊತ್ತು ಸಾಂಕೇತಿಕ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಇದೇ ವೇಳೆ, ದಾವಣಗೆರೆ, ಮಂಡ್ಯ, ಮೈಸೂರು, ಚಿತ್ರದುರ್ಗ, ಉಡುಪಿ ಸೇರಿದಂತೆ ರಾಜ್ಯದ ಕೆಲವೆಡೆ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ, ಪೊಲೀಸರಿಗೆ ಬೆಂಬಲ ವ್ಯಕ್ತಪಡಿಸಿದರು.

Trending videos

Back to Top