CONNECT WITH US  

ಮರೀಚಿಕೆಯಾದ ರಾಜ್ಯ ಸಚಿವ ಸಂಪುಟ ವಿಸ್ತರಣೆ

ಬೆಂಗಳೂರು: ಖಾಲಿ ಇರುವ ಮೂರು ಸಚಿವ ಸ್ಥಾನ ತುಂಬುವ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಳಂಬ ಮಾಡುತ್ತಿರುವುದರಿಂದ ಆಕಾಂಕ್ಷಿಗಳೂ ಸಂಪುಟ ಸೇರುವ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ.

ಡಾ. ಜಿ. ಪರಮೇಶ್ವರ್‌ ರಾಜೀನಾಮೆ ನಂತರ ಮೂರು ಸ್ಥಾನಗಳನ್ನು ಭರ್ತಿ ಮಾಡುವುದಾಗಿ ಹೇಳಿದ್ದ ಸಿಎಂ ಸಿದ್ದರಾಮಯ್ಯ,
"ಆಷಾಢ, ಹುಣ್ಣಿಮೆ- ಅಮವಾಸ್ಯೆ ನೋಡುವುದಿಲ್ಲ' ಎಂದು ಹೇಳಿದ್ದರು. ಆ ನಂತರ ದೆಹಲಿಗೆ ಹೋಗಿ ಬಂದರೂ ಸಂಪುಟ ವಿಸ್ತರಣೆ ಕುರಿತು ಯಾವುದೇ ಚರ್ಚೆ ನಡೆಸದೆ ವಾಪಸ್‌ ಬಂದರು.

ಸಚಿವಾಕಾಂಕ್ಷಿಗಳು ಕೂಡ ಆಷಾಢದಲ್ಲಿ ವಿಸ್ತರಣೆ ಆಗುವುದಿಲ್ಲ ಎಂಬ ಲೆಕ್ಕಾಚಾರದಲ್ಲಿಯೇ ಆಷಾಢ ಮುಗಿಯುವವರೆಗೂ ಮೌನವಾಗಿದ್ದರು. ಈಗ ಶ್ರಾವಣ ಮಾಸ ಬಂದಿದ್ದು, ಆಗಸ್ಟ್‌ ಮೊದಲ ವಾರದಲ್ಲಿ ಸಂಪುಟ ವಿಸ್ತರಣೆ ಆಗುವ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಈಗಿನ ಪರಿಸ್ಥಿತಿಯಲ್ಲಿ ಆಗಸ್ಟ್‌ ಮೊದಲ ವಾರವೂ ಸಂಪುಟ ವಿಸ್ತರಣೆ ಆಗುವುದು ಅನುಮಾನ ಎಂದು ಮುಖ್ಯಮಂತ್ರಿಗಳ ಆಪ್ತ ಮೂಲಗಳು ತಿಳಿಸಿವೆ. ಆ.4 ರಂದು ಎಐಸಿಸಿ ಉಪಾಧ್ಯಕ್ಷ ರಾಹುಲ್‌ ಗಾಂಧಿ ರಾಯಚೂರಿಗೆ ಆಗಮಿಸುವ ಕಾರ್ಯಕ್ರಮವಿದ್ದ ಕಾರಣ ಕಾರ್ಯಕ್ರಮ ಮುಗಿದ ಬಳಿಕ ಸಂಪುಟ ವಿಸ್ತರಣೆಯಾಗುತ್ತದೆ ಎಂದೇ ಹೇಳಲಾಗಿತ್ತು. ಆದರೆ, ಮಾಜಿ ಸಿಎಂ ಧರಂಸಿಂಗ್‌ ನಿಧನ ಹಿನ್ನೆಲೆಯಲ್ಲಿ ಆ.4 ರಂದು ಅವರ 11 ನೇ ದಿನದ ಕಾರ್ಯವಿರುವುದರಿಂದ ರಾಯಚೂರು ಕಾರ್ಯಕ್ರಮ ಮುಂದೂಡಲಾಗಿದೆ. ಆ.12 ರಂದು ಸಮಾವೇಶ ನಡೆಸಲು ರಾಜ್ಯ ಕಾಂಗ್ರೆಸ್‌ ತೀರ್ಮಾನಿಸಿದೆ.

ಆ.12 ರಂದು ರಾಹುಲ್‌ ಗಾಂಧಿ ರಾಜ್ಯಕ್ಕೆ ಆಗಮಿಸಿ ವಾಪಸ್ಸಾದ ನಂತರ ಆ.15ರ ಹೊತ್ತಿಗೆ ಸಂಪುಟ ವಿಸ್ತರಣೆಯಾಗುವ ನಿರೀಕ್ಷೆಯಲ್ಲಿ ಆಕಾಂಕ್ಷಿಗಳಿದ್ದಾರೆ. ಆದರೆ, ಸಿದ್ದರಾಮಯ್ಯ ಅವರ ಆಪ್ತ ಮೂಲಗಳ ಪ್ರಕಾರ ಸಂಪುಟ ವಿಸ್ತರಣೆ ಕುರಿತು ಯಾವುದೇ ರೀತಿಯ ಬೆಳವಣಿಗೆ ಸದ್ಯಕ್ಕೆ ಇಲ್ಲ ಎಂದು ಹೇಳಲಾಗುತ್ತಿದೆ. ಈಗ ಚುನಾವಣೆ ಹತ್ತಿರವಾಗುತ್ತಿರುವುದರಿಂದ ಶಾಸಕರು ಕ್ಷೇತ್ರದ ಕಡೆಗೆ ಹೆಚ್ಚಿನ ಗಮನ ಹರಿಸುವ ಅಗತ್ಯವಿದೆ. ಸಚಿವ ಸ್ಥಾನಕ್ಕಿಂತ ಮುಂದಿನ ಬಾರಿ ಚುನಾವಣೆ ಗೆಲ್ಲುವುದು ಮುಖ್ಯವಾಗಿದೆ.

ಕೊನೇ ಘಳಿಗೆಯಲ್ಲಿ ಸಚಿವರಾಗುವುದರಿಂದ ಏನೂ ಪ್ರಯೋಜನವಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಸಚಿವಾಕಾಂಕ್ಷಿ ಶಾಸಕರು ಅಭಿಪ್ರಾಯ ಪಟ್ಟಿದ್ದಾರೆ.

ಕ್ಷೇತ್ರದತ್ತ ಗಮನ
ಸಚಿವ ಮಹದೇವ ಪ್ರಸಾದ್‌ ನಿಧನ,ಲೈಂಗಿಕ ಹಗರಣದಿಂದ ಎಚ್‌.ವೈ ಮೇಟಿ ರಾಜೀನಾಮೆ, ಕೆಪಿಸಿಸಿ ಅಧ್ಯಕ್ಷರಾಗಿ
ಮುಂದುವರಿಯಲು ಪರಮೇಶ್ವರ್‌ ಗೃಹ ಖಾತೆಗೆ ರಾಜೀನಾಮೆ ನೀಡಿದ ಬೆನ್ನಲ್ಲೇ ಜಾತಿ ಹಾಗೂ ಪ್ರಾದೇಶಿಕ ಹಿನ್ನೆಲೆಯಲ್ಲಿ ಮೂರು ಸ್ಥಾನಗಳಿಗೆ 15 ಕ್ಕೂ ಹೆಚ್ಚು ಶಾಸಕರು ಸಂಪುಟ ಸೇರಲು ಲಾಬಿ ಆರಂಭಿಸಿದ್ದರು. ಹೈಕಮಾಂಡ್‌ ಮಟ್ಟದಲ್ಲಿಯೂ ಲಾಬಿ ನಡೆಸಿದ್ದ ಶಾಸಕರು, ಮುಖ್ಯಮಂತ್ರಿ ವಿಳಂಬ ಧೋರಣೆಯಿಂದ ಸಚಿವರಾಗುವ ಆಸೆಗೆ ಆದ್ಯತೆ ನೀಡದೆ, ಚುನಾವಣೆ ದೃಷ್ಠಿಯಿಂದ ಕ್ಷೇತ್ರದ ಕಡೆಗೆ ಗಮನ ಹರಿಸುತ್ತಿದ್ದಾರೆ.

12ರಂದು ರಾಯಚೂರಿಗೆ
ರಾಹುಲ್‌ಗಾಂಧಿ ರಾಹುಲ್‌ ಗಾಂಧಿ ರಾಯಚೂರಿಗೆ ಭೇಟಿ ನೀಡುವ ಕಾರ್ಯಕ್ರಮ ಆಗಸ್ಟ್‌ 12ಕ್ಕೆ ನಿಗದಿಪಡಿಸಲಾಗಿದೆ. ಮಾಜಿ ಮುಖ್ಯಮಂತ್ರಿ ಧರಂಸಿಂಗ್‌ ನಿಧನದ ಹಿನ್ನೆಲೆಯಲ್ಲಿ ಆ.4 ರಂದು ನಡೆಯಬೇಕಿದ್ದ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು. ಈಗ ಆ.12 ಕ್ಕೆ ಕಾರ್ಯಕ್ರಮ ನಿಗದಿಗೊಳಿಸಲಾಗಿದೆ.

ಹೈದರಾಬಾದ್‌ ಕರ್ನಾಟಕ ಪ್ರದೇಶಕ್ಕೆ
ವಿಶೇಷ ಸ್ಥಾನ ಮಾನ ದೊರೆತ ಹಿನ್ನೆಲೆಯಲ್ಲಿ ಜನರ ಬೇಡಿಕೆ ಈಡೇರಿಸಿದ್ದಕ್ಕಾಗಿ ಧನ್ಯವಾದ ಅರ್ಪಿಸುವ ಕಾರ್ಯಕ್ರಮದ ಮೂಲಕ ಹೈದರಾಬಾದ್‌ ಕರ್ನಾಟಕದಲ್ಲಿ ಈಗಿನಿಂದಲೇ ಚುನಾವಣೆ ಪ್ರಚಾರಕ್ಕೆ ರಾಹುಲ್‌ ಗಾಂಧಿ ಮುನ್ನುಡಿ ಬರೆಯಲಿದ್ದಾರೆ.

Trending videos

Back to Top