CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಕೈನಲ್ಲೂ ಜೈ ಹಿಂದೂ; ಬಿಜೆಪಿ ತಂತ್ರಗಳಿಗೆ ಕಾಂಗ್ರೆಸ್ ಪ್ರತಿತಂತ್ರ!

ಬಿಜೆಪಿ ತಂತ್ರಕ್ಕೆ ಪ್ರತಿಯಾಗಿ ಕಾಂಗ್ರೆಸ್‌ನಿಂದ ಮರುತಂತ್ರ

ಬೆಂಗಳೂರು: ಬಿಜೆಪಿಯ ಹಿಂದೂ ಮಂತ್ರದ ಜಪಕ್ಕೆ ಪ್ರತಿಯಾಗಿ ಕಾಂಗ್ರೆಸ್‌ನಲ್ಲೂ ಹಿಂದೂ ಮತಗಳು ಕೈತಪ್ಪದಂತೆ ಪ್ರತಿತಂತ್ರ ರೂಪಿಸಲು ಚಿಂತನೆ ನಡೆದಿದೆ.

ಬುಧವಾರ ಇಲ್ಲಿ ಕರ್ನಾಟಕ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ಕೆಪಿಸಿಸಿ ವಿಭಾಗವಾರು ಮುಖಂಡರ ಸಭೆಯಲ್ಲಿ ಹಿಂದೂ ಮತಗಳು ಪಕ್ಷದಿಂದ ವಿಮುಖವಾಗದಂತೆ ಎಚ್ಚರಿಕೆ ವಹಿಸಬೇಕಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ವಿಶೇಷವೆಂದರೆ, ವಿಧಾನಸಭೆ ಚುನಾವಣೆ ಪ್ರಕ್ರಿಯೆ ನಡೆಯುತ್ತಿರುವ ಗುಜರಾತ್‌ನಲ್ಲಿ ಕಾಂಗ್ರೆಸ್‌ ಹಿಂದೂ ಮತಗಳ ಮೇಲೆ ಕಣ್ಣಿಟ್ಟಿರುವುದು ರಾಹುಲ್‌ ಗಾಂಧಿಯವರ ನಡೆಯಿಂದಲೇ ಗೋಚರವಾಗಿದೆ. ಅಲ್ಲದೆ ದಿನಕ್ಕೊಂದು ದೇಗುಲ, ಜನಿವಾರಧಾರಿ ಬ್ರಾಹ್ಮಣ ರಾಹುಲ್‌, ಮೋದಿನೇ ಹಿಂದೂ ಅಲ್ಲ; ಆದರೆ ರಾಹುಲ್‌ ನಿಜವಾದ ಶಿವಭಕ್ತ ಎಂಬ ಕಾಂಗ್ರೆಸ್‌ ನಾಯಕರ ಮಾತುಗಳೂ ಇದಕ್ಕೆ ಪುಷ್ಠಿ ನೀಡಿವೆ.

ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೂ ಮುಂದೆ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಹಿಂದೂ ಮತಗಳು ಕೈತಪ್ಪದಂತೆ ಹೋಗುವ ಸಲುವಾಗಿ ಪ್ರತಿತಂತ್ರ ರೂಪಿಸಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಅಲ್ಲದೆ ರಾಜ್ಯ ಸರ್ಕಾರ ಅನೇಕ ಭಾಗ್ಯ ಯೋಜನೆಗಳನ್ನು ನೀಡಿದ್ದಲ್ಲದೇ, ಮನೆ ಮನೆಗೆ ಕಾಂಗ್ರೆಸ್‌ ಕಾರ್ಯಕ್ರಮದ ಮೂಲಕ ಜನರಿಗೆ ಹತ್ತಿರವಾಗಿದೆ ಎಂಬ ಮಾತುಗಳಿವೆ. ಆದರೂ ಬಿಜೆಪಿ ರಾಜ್ಯಸರ್ಕಾರದ ವೈಫ‌ಲ್ಯ ಮತ್ತು ಭ್ರಷ್ಟಾಚಾರದ ವಿರುದ್ಧದ ಹೋರಾಟ ಕೈಬಿಟ್ಟು ಹಿಂದೂ ಮಂತ್ರ ಜಪಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸುವಂತೆ ಕೆಲವು ನಾಯಕರು ಪಕ್ಷದ ಮುಖಂಡರಿಗೆ ಸಲಹೆ ರೂಪದ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಈಗಾಗಲೇ ಬಿಜೆಪಿ ರಾಜ್ಯ ಸರ್ಕಾರವೇ ಆಯೋಜಿಸಿದ್ದ ಟಿಪ್ಪು ಜಯಂತಿ ವಿರೋಧಿಸುವ ಮೂಲಕ "ಹಿಂದೂ ವಿರೋಧಿ ಸರ್ಕಾರ'ವೆಂಬ ಹಣೆಪಟ್ಟಿ ಕಟ್ಟುತ್ತಿರುವುದಲ್ಲದೇ, ಕಾಂಗ್ರೆಸ್‌ ಅಲ್ಪಸಂಖ್ಯಾತರನ್ನು ಒಲೈಕೆ ಮಾಡುತ್ತಿದೆ ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಿದೆ. ಇದರ ಜತೆಗೇ ದತ್ತ ಮಾಲಾ ಜಯಂತಿ ಮತ್ತು ಹನುಮ ಜಯಂತಿ ಆಚರಣೆ ಹೆಸರಲ್ಲಿ ಹಿಂದೂ ಮತದಾರರ ಒಗ್ಗೂಡಿಸುವ ಪ್ರಯತ್ನವನ್ನೂ ಮಾಡುತ್ತಿದೆ. ಉತ್ತರ ಪ್ರದೇಶ ಚುನಾವಣೆಯಲ್ಲಿ ಇದೇ ಅಸ್ತ್ರದ ಮೂಲಕವೇ ಬಿಜೆಪಿ ಯಶಸ್ವಿಯಾಗಿದ್ದು, ನಾವು ಕೇವಲ ಭಾಗ್ಯಗಳ ಮಂತ್ರ ಪಠಿಸಿದರೆ ಧರ್ಮದ ಹೆಸರಿನಲ್ಲಿ ಹಿಂದೂ ಮತದಾರರು ಸಂಪೂರ್ಣ ಬಿಜೆಪಿ ಪರ ವಾಲುವ ಸಾಧ್ಯತೆ ಇದೆ ಎಂದು ಸಭೆಯಲ್ಲಿ ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಮಕ್ಕಳ ಟಿಕೆಟ್‌ಗೆ ವಿರೋಧ: ಇದೇ ವೇಳೆ ಸಭೆಯಲ್ಲಿ ದೊಡ್ಡವರ ಮಕ್ಕಳಿಗೆ ಟಿಕೆಟ್‌ ನೀಡುವ ಕುರಿತಂತೆಯೂ ಅನೇಕ ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಶಾಸಕರಾಗಿದ್ದರೆ, ಅಂತವರ ಬಗ್ಗೆ ಮಾತನಾಡುವ ಬದಲು ಹೊಸದಾಗಿ ಮುಖಂಡರು ತಮ್ಮ ಮಕ್ಕಳಿಗೆ ಟಿಕೆಟ್‌ ಕೊಡಿಸಲು ಮುಂದಾಗಿರುವುದು ಕಾರ್ಯಕರ್ತರ ಬೇಸರಕ್ಕೆ ಕಾರಣವಾಗುತ್ತಿದೆ. ಇದು ಚುನಾವಣೆಯ ಮೇಲು ಪರಿಣಾಮ ಬೀರಲಿದೆ. ಹೀಗಾಗಿ ದೊಡ್ಡವರ ಮಕ್ಕಳಿಗೆ ಟಿಕೆಟ್‌ ಕೊಡಬಾರದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಸಿಎಂ-ಪರಂ ಸಂಘರ್ಷ ಶಮನಕ್ಕೆ ವೇಣು ಸೂತ್ರ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರವಾಸ ಮತ್ತು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌ ಅವರ ಯಾತ್ರೆ ವಿರುದ್ಧದ ಅಸಮಾಧಾನ ಶಮನಗೊಳಿಸುವ ನಿಟ್ಟಿನಲ್ಲಿ ಉಸ್ತುವಾರಿ ವೇಣುಗೋಪಾಲ್‌ ಸಂಧಾನ ಸೂತ್ರವಿಟ್ಟಿದ್ದಾರೆ.

ಅಂದರೆ, ಕಾಂಗ್ರೆಸ್‌ ಶಾಸಕರೇ ಇರುವ ಕ್ಷೇತ್ರಗಳಲ್ಲಿ ಸಿಎಂ ಅವರಿಂದ ಸಾಧನೆ ಸಂಭ್ರಮ ಮತ್ತು ಕಾಂಗ್ರೆಸ್ಸೇತರ ಅಥವಾ ಕಳೆದ ಚುನಾವಣೆಯಲ್ಲಿ ಸೋತಿರುವ ಕ್ಷೇತ್ರಗಳಲ್ಲಿ ಕೆಪಿಸಿಸಿ ಅಧ್ಯಕ್ಷರ ನೇತೃತ್ವದಲ್ಲಿ ಯಾತ್ರೆ ನಡೆಸುವ ಸೂತ್ರ ಮುಂದಿಟ್ಟಿದ್ದಾರೆ. ಪರಮೇಶ್ವರ್‌ ಜತೆಯಲ್ಲಿ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಇರಲಿದ್ದಾರೆ. ವೇಣುಗೋಪಾಲ್‌ ಅವರ ಈ ಸೂತ್ರದಿಂದ ಪರಮೇಶ್ವರ್‌ ಸಂತಸಗೊಂಡಿದ್ದಾರೆ ಎಂದು ಹೇಳಲಾಗಿದೆ. ಜತೆಗೆ ಬಜೆಟ್‌ ಅಧಿವೇಶನ ಮುಗಿದ ನಂತರ ಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷರು ಒಟ್ಟಾಗಿ ಯಾತ್ರೆ ನಡೆಸಬೇಕು ಎಂದೂ ಸೂಚಿಸಲಾಗಿದೆ ಎನ್ನಲಾಗಿದೆ.

ವೇಣು ಸಭೆಗೆ ಅಂಬರೀಶ್‌ಗೈರು
ಕಾಂಗ್ರೆಸ್‌ ಉಸ್ತುವಾರಿ ವೇಣುಗೋಪಾಲ್‌ ಕರೆದಿದ್ದ ಮೈಸೂರು ವಿಭಾಗ ಹಾಗೂ ಮಂಡ್ಯ ಜಿಲ್ಲಾ ಮುಖಂಡರ ಸಭೆಗೆ ಅಂಬರೀಶ್‌ ಗೈರು ಹಾಜರಾಗಿದ್ದರು. ಪಕ್ಷದ ನಾಯಕರು ಸಭೆಗೆ ಹಾಜರಾಗುವಂತೆ ಸೂಚನೆ ನೀಡಿದ್ದರೂ ಅಂಬರೀಶ್‌ ತಲೆ ಕೆಡೆಸಿಕೊಳ್ಳದೇ ಸಭೆಯಿಂದ ದೂರ ಉಳಿದಿದ್ದರು.  ಮಂಡ್ಯ ಕ್ಷೇತ್ರದಲ್ಲಿ ಮಾಜಿ ಸಂಸದೆ ರಮ್ಯಾ ಸ್ಪರ್ಧೆ ಮಾಡುತ್ತಾರೆ ಎಂಬ ಮಾತುಗಳು ಜಿಲ್ಲೆಯಲ್ಲಿ ಕೇಳಿ ಬರುತ್ತಿರುವುದರಿಂದ ಅಂಬರೀಶ್‌ ಮುನಿಸಿಕೊಂಡಿದ್ದಾರೆ ಎನ್ನಲಾಗಿದೆ.

Back to Top