CONNECT WITH US  

ಅಸುಂಡಿಯಲ್ಲಿದೆ ಸರ್ಕಾರಿ ಮಾದರಿ "ಪರಿಸರ ಸ್ನೇಹಿ'ಶಾಲೆ

ಗದಗ: ತಾಲೂಕಿನ ಅಸುಂಡಿ ಗ್ರಾಮದ ಕುವೆಂಪು ಶತಮಾನೋತ್ಸವ ಸರ್ಕಾರಿ ಮಾದರಿ ಶಾಲೆ.

ಗದಗ: ಸುತ್ತಲೂ ಗುಡ್ಡ. ಮಧ್ಯ ಹಚ್ಚ ಹಸಿರಿನ ಗಿಡ, ಮರಗಳ ತಾಣ. ಎಲ್ಲೆಡೆ ಪಕ್ಷಿಗಳ ನೀನಾದದ ಜತೆಗೆ ಚಿಣ್ಣರ ಕಲರವ. ಕುತೂಹಲದಿಂದ ಒಳ ನಡೆದರೆ "ಜ್ಞಾನ ದೇಗುವಲವಿದು, ಕೈ ಮುಗಿದು ಒಳಗೆ ಬನ್ನಿ' ಎಂಬಂತೆ ಶಾಲೆಯೊಂದು ಕಾಣ ಸಿಗುತ್ತದೆ. ಇದು ಎಲ್ಲ ಸರ್ಕಾರಿ ಶಾಲೆಯಂಥ ಶಾಲೆಯಲ್ಲ. ಮಾದರಿ ಶಾಲೆ. ಈ ಮಾದರಿ ಶಾಲೆ ಈಗ ಪರಿಸರ ಸ್ನೇಹಿ ಶಾಲೆಯಾಗಿ ಮಾರ್ಪಟ್ಟಿದೆ!

ಗದಗ ತಾಲೂಕಿನ ಅಸುಂಡಿ ಗ್ರಾಮದಲ್ಲಿರುವ ಕುವೆಂಪು ಶತಮಾನೋತ್ಸವ ಸರ್ಕಾರಿ ಮಾದರಿ ಶಾಲೆಯೂ ಮಕ್ಕಳಿಗೆ ಜ್ಞಾನ ನೀಡುವುದರ ಜತೆಗೆ ಪರಿಸರ ಕಾಳಜಿ, ಪ್ರಜ್ಞೆ ಮೂಡಿಸುತ್ತಿದೆ. ಅದು ಪ್ರಾತ್ಯಕ್ಷಿಕೆಯಾಗಿ. ಹೀಗಾಗಿ 5.5 ಎಕರೆ ಪ್ರದೇಶದ ಶಾಲಾ ಆವರಣದಲ್ಲಿ ಸುಮಾರು 310ಕ್ಕೂ ವಿವಿಧ ಬಗೆಯ ಮರಗಳನ್ನು ಬೆಳೆಸಲಾಗಿದೆ. ಮರಗಳ ತ್ಯಾಜ್ಯದಿಂದ ಗೊಬ್ಬರ ತಯಾರಿಸಲಾಗುತ್ತಿದೆ. 

ಆವರಣದಲ್ಲಿರುವ ಬಾವಿಯಲ್ಲಿ ಮಳೆ ನೀರು ಸಂಗ್ರಹಿಸಲಾಗುತ್ತಿದ್ದು, ಇದೇ ನೀರನ್ನು ವರ್ಷವಿಡೀ ಗಿಡ, ಮರಗಳಿಗೆ ಬಳಸಲಾಗುತ್ತದೆ. ಶಾಲಾ ಪಠ್ಯೇತರ ಚಟುವಟಿಕೆ ಕಾರ್ಯಕ್ರಮಕ್ಕೆ ಹೂವಿನ ಗಿಡಗಳಿಂದ ಬುಕ್ಕೆಗಳನ್ನು ತಯಾರಿಸಿ ಅತಿಥಿಗಳಿಗೆ ವಿತರಿಸಲಾಗುತ್ತದೆ.

ಸರ್ಕಾರಿ ಶಾಲೆ ಮಾದರಿಯಾಯ್ತು: ಅಸುಂಡಿ ಗ್ರಾಮದಲ್ಲಿ 1886ರಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆರಂಭವಾಯಿತು. ನಂತರ 2005-06ರಲ್ಲಿ ಅಂದಿನ ಎಸ್‌.ಎಂ. ಕೃಷ್ಣ ನೇತೃತ್ವದ ಸರ್ಕಾರವು ರಾಷ್ಟ್ರಕವಿ ಕುವೆಂಪು ಜನ್ಮಶತಮಾನೋತ್ಸವ ಆಚರಿಸಲು ನಿರ್ಧರಿಸಿತ್ತು. ಇದರ ಸವಿನೆನಪಿಗಾಗಿ ರಾಜ್ಯದ 32 ಶೈಕ್ಷಣಿಕ ಜಿಲ್ಲೆಗಳಲ್ಲಿ ತಲಾ ಒಂದರಂತೆ "ಕುವೆಂಪು ಶತಮಾನೋತ್ಸವ ಮಾದರಿ ಸರ್ಕಾರಿ ಶಾಲೆ' ಆರಂಭಿಸಲು ಆದೇಶಿಸಿತ್ತು. ಇದರ ಫಲವಾಗಿ ಗದಗ ಜಿಲ್ಲೆಯಲ್ಲಿ ಅಸುಂಡಿ ಗ್ರಾಮದ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮರುನಾಮಕರಣ ಮಾಡುವುದರ ಜತೆಗೆ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ 45 ಲಕ್ಷ ರೂ. ಧನಸಹಾಯ ನೀಡಲಾಯಿತು. 

ಶಾಲಾ ಶಿಕ್ಷಕರ ಸತತ ಪ್ರಯತ್ನ, ಗ್ರಾಮಸ್ಥರ ಸಹಕಾರ ಮತ್ತು ಅಸುಂಡಿ ಗ್ರಾಪಂ ಪ್ರೋತ್ಸಾಹದಿಂದ ಸುಮಾರು 12 ವರ್ಷದಲ್ಲಿ ಮಾದರಿ ಶಾಲೆಯೂ ಪರಿಸರ ಸ್ನೇಹಿ ಶಾಲೆಯಾಗಿ ಮಾರ್ಪಟ್ಟಿದೆ.

ಸದ್ಯ 1ರಿಂದ 7ನೇ ತರಗತಿಯಲ್ಲಿ ಒಟ್ಟು 318 ವಿದ್ಯಾರ್ಥಿಗಳು ಶಾಲೆಯಲ್ಲಿ ಓದುತ್ತಿದ್ದಾರೆ. 10 ಜನ ಶಿಕ್ಷಕರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ. ವರ್ಷಕ್ಕೆ ಈ ಶಾಲೆಯಿಂದ ಎರಡೂ¾ರು ವಿದ್ಯಾರ್ಥಿಗಳು ನವೋದಯ ಶಾಲೆಗೆ ಆಯ್ಕೆ ಆಗುತ್ತಿರುವುದು ಇದಕ್ಕೆ ನಿದರ್ಶನ.

ಸಸ್ಯ ಕಾಶಿಯಾದ ಶಾಲೆ: ಕಟ್ಟಡ ಒಳಗೊಂಡಂತೆ ಸುಮಾರು 5.5 ಎಕರೆ ಪ್ರದೇಶ ಹೊಂದಿರುವ ಈ ಶಾಲೆ ಆವರಣದಲ್ಲಿ ತೆಂಗು 150, ತೇಗ 50, ಹುಣಸೆ ಮರ 25, ಬೇವು 20, ಬನ್ನಿ 3, ಆಲದ ಮರ 4, ಅಶೋಕ ಗಿಡ 4, ಬಾದಾಮಿ ಗಿಡ 4, ಹತ್ತಿ ಹಣ್ಣು (ಕೆಂಪು) ಮರ 4, ಕ್ರಿಸ್‌ಮಸ್‌ ಗಿಡ 2, ನಿಂಬೆ 8, ನೆಲ್ಲಿಕಾಯಿ 4, ಕರಿಬೇವು 2, ಚಿಕ್ಕು 4, ಪೇರಲು 2, ದಾಸಾಳು 3 ಸೇರಿ ಸುಮಾರು 310ಕ್ಕೂ ವಿವಿಧ ಗಿಡ, ಮರಗಳನ್ನು ಬೆಳೆಸಲಾಗಿದೆ. ಇವುಗಳ ನಿರ್ವಹಣೆಗೆ ಗ್ರಾಪಂ ವತಿಯಿಂದ ಓರ್ವ ಸಹಾಯಕನನ್ನು ನೇಮಿಸಲಾಗಿದೆ. ವರ್ಷದ ಶೈಕ್ಷಣಿಕ ಅವಧಿಯಲ್ಲಿ ಈ ಎಲ್ಲ ಗಿಡ-ಮರಗಳನ್ನು ವಿದ್ಯಾರ್ಥಿಗಳು ಸಂರಕ್ಷಿಸುತ್ತಾರೆ. ವಾರಕ್ಕೊಮ್ಮೆ ವಿದ್ಯಾರ್ಥಿಗಳಿಗೆ ಶ್ರಮದಾನ ಕಡ್ಡಾಯ.

10-12 ವರ್ಷ ಕಷ್ಟಪಟ್ಟು ಬೆಳೆಸಿದ ಗಿಡ, ಮರಗಳಿಂದ ಶಾಲಾ ಆವರಣ ಹಸಿರಿನಿಂದ ಕೂಡಿದೆ. ಇದಕ್ಕೆ ಶಾಲಾ ಶಿಕ್ಷಕರು, ಗ್ರಾಮಸ್ಥರ ಸಹಕಾರ ಬಹಳಷ್ಟಿದೆ. ವಿದ್ಯಾರ್ಥಿಗಳಿಗೆ ಪಾಠದ ಜತೆಗೆ ಪರಿಸರದ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ತಿಳಿಸಿದರೆ ಹೆಚ್ಚು ಮನದಟ್ಟು ಆಗುತ್ತದೆ.
- ಎಂ.ಕೆ. ಹಿರೇಮಠ, ಶಾಲಾ ಮುಖ್ಯೋಪಾಧ್ಯಾಯ

ಪ್ರಸಕ್ತ ವರ್ಷ ಶಾಲಾ ಆವರಣದಲ್ಲಿ ಮಕ್ಕಳಿಂದಲೇ ಕೈತೋಟ ನಿರ್ಮಾಣ ಮತ್ತು ಗಾರ್ಡನ್‌ ನಿರ್ಮಿಸಲಾಗುವುದು. ಇದರಿಂದ ವಿದ್ಯಾರ್ಥಿಗಳಲ್ಲಿ ಪರಿಸರ ಪ್ರಜ್ಞೆ ಬೆಳೆಯಲು ಸಹಕಾರಿಯಾಗುತ್ತದೆ. ನಿತ್ಯದ ಬಿಸಿಯೂಟಕ್ಕೆ ಬೇಕಾಗುವ ತರಕಾರಿಯನ್ನು ವಿದ್ಯಾರ್ಥಿಗಳ ಕೈತೋಟದಲ್ಲಿ ಬೆಳೆಯುವ ಉದ್ದೇಶ ಹೊಂದಲಾಗಿದೆ.
- ವಿ.ಎಲ್‌. ಶಾಂತಗಿರಿ, ವಿಜ್ಞಾನ ಶಿಕ್ಷಕ ಮತ್ತು ಇಕೋ ಕ್ಲಬ್‌ ಕಾರ್ಯದರ್ಶಿ

- ಶರಣು ಹುಬ್ಬಳ್ಳಿ


Trending videos

Back to Top