CONNECT WITH US  

ತಗ್ಗದ ವರುಣಾರ್ಭಟ; ಕೊಡಗಿನಲ್ಲೂ ಭಾರಿ ಮಳೆ, ಮುಳುಗಿದ ಭಾಗಮಂಡಲ

ಚಿಕ್ಕಮಗಳೂರಿನಲ್ಲಿ ಬೈಕ್‌ ಸಮೇತ ಹಳ್ಳದಲ್ಲಿ ಕೊಚ್ಚಿ ಹೋದ ಯುವಕ

ಧಾರಾಕಾರ ಮಳೆಯಿಂದ ಕೊಡಗು ಜಿಲ್ಲೆ ಭಾಗಮಂಡಲದಲ್ಲಿ ಜಲಾವೃತವಾಗಿರುವುದು.

ಬೆಂಗಳೂರು: ರಾಜ್ಯದ ಹಲವೆಡೆ ವರುಣನ ಅಬ್ಬರ ಮುಂದುವರೆದಿದೆ. ಕರಾವಳಿ ಭಾಗದಲ್ಲಿ ಮಳೆಯ ತೀವ್ರತೆ ಕಡಿಮೆಯಾಗಿದ್ದರೆ, ಮಲೆನಾಡು ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಹಲವೆಡೆ ಗುಡ್ಡ ಕುಸಿದು, ಸಂಚಾರ ಅಸ್ತವ್ಯಸ್ತಗೊಂಡಿದೆ. ಈ ನಡುವೆ, ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನಲ್ಲಿ ಅಪಾಯಮಟ್ಟ ಮೀರಿ ಹರಿಯುತ್ತಿದ್ದ ಬಸ್ತಿ ಹಳ್ಳದಲ್ಲಿ ಯುವಕನೊಬ್ಬ ಬೈಕ್‌ ಸಮೇತ  ಕೊಚ್ಚಿಕೊಂಡು ಹೋಗಿದ್ದಾನೆ.

ಕೊಪ್ಪ ತಾಲೂಕಿನ ಕಾರೆಮನೆ ಗ್ರಾಮದ ಅಶೋಕ್‌ (21) ನೀರಿನಲ್ಲಿ ಕೊಚ್ಚಿ ಹೋದ ಯುವಕ. ಈತ ಮಂಗಳವಾರ ರಾತ್ರಿ ಬೈಕ್‌ನಲ್ಲಿ ಕೊಗ್ರೆ ಗ್ರಾಮಕ್ಕೆ ಹೋಗಿ ವಾಪಸ್ಸಾಗುತ್ತಿದ್ದ. ಬಸ್ತಿಹಳ್ಳಕ್ಕೆ ಕಟ್ಟಿರುವ ಹುಲುವಿನಹಳ್ಳಿ ಸೇತುವೆಯಲ್ಲಿ ಅಪಾರ ಪ್ರಮಾಣದ ನೀರು ಹರಿಯುತ್ತಿದ್ದರೂ ಗಮನಿಸದೇ ಸೇತುವೆ ದಾಟುವ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. 

ಸ್ಥಳೀಯರು, ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಬುಧವಾರ ಬೆಳಗ್ಗೆ ಹುಡುಕಾಟ ಆರಂಭಿಸಿದ್ದರು. ಕೆಲವು ಗಂಟೆಗಳ ಕಾರ್ಯಾಚರಣೆ ನಂತರ ಬೈಕ್‌ ಪತ್ತೆಯಾಗಿದೆ. ಆದರೆ ಸಂಜೆಯವರೆಗೂ ಬೈಕ್‌ ಸವಾರ ಪತ್ತೆಯಾಗಿರಲಿಲ್ಲ.
ಮೂಡಿಗೆರೆ ತಾಲೂಕಿನ ಕಳಸ, ಕುದುರೆಮುಖ ಭಾಗಗಳಲ್ಲೂ  ಧಾರಾಕಾರ ಮಳೆಯಾಗುತ್ತಿದ್ದು, ಕಳಸದಿಂದ ಹೊರನಾಡಿಗೆ ಸಂಪರ್ಕ ಕಲ್ಪಿಸುವ ಹೆಬ್ಟಾಳೆ ಸೇತುವೆ ಮಂಗಳವಾರ ರಾತ್ರಿ ಪುನಃ ನೀರಿನಲ್ಲಿ ಮುಳುಗಿ ಹೋಗಿತ್ತು. 20 ದಿನಗಳಲ್ಲಿ ಈ ಸೇತುವೆಯು 4ನೇ ಬಾರಿಗೆ ನೀರಿನಲ್ಲಿ ಮುಳುಗಿದಂತಾಗಿದೆ.

ಶೃಂಗೇರಿ ತಾಲೂಕಿನ ಕಿಗ್ಗದಲ್ಲಿ ಕಳೆದ 24 ಗಂಟೆಗಳಲ್ಲಿ ಅತಿ ಹೆಚ್ಚು 206 ಮಿ.ಮೀ. ಮಳೆ ದಾಖಲಾಗಿದೆ. ಭಾರೀ ಮಳೆಯಿಂದ ಶೃಂಗೇರಿ-ಆಗುಂಬೆ ರಸ್ತೆಯಲ್ಲಿ  ಹಲವು ಮರಗಳು ರಸ್ತೆಗೆ ಬಿದ್ದಿದ್ದವು. ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮರಗಳನ್ನು ತೆರವುಗೊಳಿಸಿದ್ದಾರೆ.

ಕೊಪ್ಪ ತಾಲೂಕಿನ ಜಯಪುರ ಠಾಣಾ ವ್ಯಾಪ್ತಿಯ ಅಗಳಗಂಡಿ ಬಳಿ ಇಟ್ಟಿಗೆ ತುಂಬಿಕೊಂಡು ಬರುತ್ತಿದ್ದ ಲಾರಿ ಬುಧವಾರ ಬೆಳಗಿನ ಜಾವ ಭಾರೀ ಮಳೆಯಿಂದಾಗಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.  ತೀರ್ಥಹಳ್ಳಿಯಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ  ಪ್ರಮುಖ ತುಂಗೆ ಹಾಗೂ ಮಾಲತಿ ನದಿಗಳಲ್ಲಿ ನೀರಿನ ಮಟ್ಟ ಏರುತ್ತಲೇ ಇದೆ.

ಈ ಮಧ್ಯೆ ಕೊಡಗಿನಲ್ಲೂ ಭಾರಿ ಮಳೆಯಾಗುತ್ತಿದ್ದ ಭಾಗಮಂಡಲ ತ್ರಿವೇಣಿ ಸಂಗಮ ಉಕ್ಕಿ ಹರಿಯುತ್ತಿದೆ. ಭಾಗಮಂಡಲ-ಅಯ್ಯಂಗೇರಿ ವಾಹನ ಸಂಚಾರ ಕಡಿತಗೊಂಡಿದೆ.  ಬೋಟ್‌ ಬಳಸಿ ಅಲ್ಲಿನ ನಾಗರಿಕರಿಗೆ ಸಂಪರ್ಕ ಕಲ್ಪಿಸಲಾಗುತ್ತಿದೆ. ಮಡಿಕೇರಿ-ಭಾಗಮಂಡಲ ಮಾರ್ಗದ ರಸ್ತೆಯಲ್ಲಿ ನೀರು ಹೆಚÛಳವಾಗಿದೆ. ಭಾಗಮಂಡಲದಲ್ಲಿ ನುರಿತ ಈಜು ತಜ್ಞರು, ಗೃಹ ರಕ್ಷಕದಳದ ಸಿಬ್ಬಂದಿಗಳು ಮೊಕ್ಕಂ ಹೂಡಿದ್ದು, ಪ್ರವಾಹ ಹೆಚ್ಚಾದ ಸಂದರ್ಭದಲ್ಲಿ ಬೋಟ್‌ ಬಳಸಿ ಅಲ್ಲಿನ ಜನರು ಹಾಗೂ ಪ್ರವಾಸಿಗರಿಗೆ ಸಂಚಾರಕ್ಕೆ ಅನುವು ಮಾಡಿಕೊಡಲು ಅಗತ್ಯ ಸಿದ್ಧತೆ ಮಾಡಿಕೊಂಡಿದೆ.

ಹಲವೆಡೆ ಭೂ ಕುಸಿತ: ಧಾರಾಕಾರ ಮಳೆಯಿಂದ ಸಕಲೇಶಪುರ ತಾಲೂಕಿನ ಹಲವೆಡೆ ಹಾನಿ ಸಂಭವಿಸಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಅಲ್ಲಲ್ಲಿ ಭೂಕುಸಿತ, ವಿದ್ಯುತ್‌ ಕಂಬ, ಮರಗಳು ಧರೆಗುಳಿವೆ. ವಾಹನ ಸಂಚಾರ, ವಿದ್ಯುತ್‌ ವ್ಯತ್ಯಯ ಮುಂದುವರಿದಿದೆ. ಕೃಷಿ ಚಟುವಟಿಕೆಗೆ ಸಂಪೂರ್ಣ ಹಿನ್ನಡೆಯಾಗಿದೆ.

ತಾಲೂಕಿನ ಗೊದ್ದು- ಸೋಮವಾರಪೇಟೆ ರಸ್ತೆಯಲ್ಲಿ ಭೂ ಕುಸಿತವಾಗಿದೆ.  ಗದ್ದೆ ಹಾಗೂ ತೋಟ ಜಲಾವೃತಗೊಂಡಿದ್ದು,  ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ಆಲೂರು, ಅರಕಲಗೂಡು ತಾಲೂಕಿನಲ್ಲೂ ಮಳೆ ಸುರಿಯುತ್ತಿದೆ.

ಕೇರಳದ ವೈನಾಡಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕಬಿನಿ ಜಲಾಶಯ ತುಂಬಿ ತುಳುಕುತ್ತಿದೆ. 56 ಸಾವಿರ ಕ್ಯೂಸೆಕ್‌ಗೂ ಹೆಚ್ಚು ನೀರನ್ನು ಜಲಾಶಯದಿಂದ ಹೊರ ಬಿಡಲಾಗುತ್ತಿದೆ. ಇದರಿಂದ ನಂಜನಗೂಡಿನಲ್ಲಿ ಕಪಿಲಾ ನೀರಿನ ಮಟ್ಟ ಅಪಾಯದ ಅಂಚಿಗೆ ತಲುಪಿದೆ. ದಕ್ಷಿಣ ಕಾಶಿಯ ಅಧಿಪತಿ ಶ್ರೀಕಂಠೇಶ್ವರನ ಕಪಿಲಾ ಸ್ನಾನಘಟ್ಟ, ಹದಿನಾರು ಕಾಲು ಮಂಟಪ, ಹಳ್ಳದ ಕೇರಿ ಸೇರಿದಂತೆ ವಿವಿಧ ಪ್ರದೇಶ‌ಗಳತ್ತ ನೀರು ನುಗ್ಗಲಾರಂಭಿಸಿದೆ.

ತುಂಗಭದ್ರಾ ಡ್ಯಾಂ ಅರ್ಧ ಭರ್ತಿ: ಕರ್ನಾಟಕ, ಆಂಧ್ರ ಹಾಗೂ ತೆಲಂಗಾಣ ರಾಜ್ಯಗಳ ಲಕ್ಷಾಂತರ ರೈತರ ಜೀವನಾಡಿ ತುಂಗಭದ್ರಾ ಜಲಾಶಯ ಅಂತೂ ಅರ್ಧ ಭರ್ತಿಯಾಗಿದೆ. 100 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯಕ್ಕೆ ಬುಧವಾರಕ್ಕೆ 50.07 ಟಿಎಂಸಿಯಷ್ಟು ಸಂಗ್ರಹವಾಗಿದೆ. ಕರಾವಳಿ, ಮಲೆನಾಡು ಭಾಗದಲ್ಲಿ ಹೆಚ್ಚು ಮಳೆಯಾಗುತ್ತಿರುವುದರಿಂದ ಅಚ್ಚುಕಟ್ಟು ಪ್ರದೇಶದ ರೈತರು ಭತ್ತ ನಾಟಿಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.


Trending videos

Back to Top