CONNECT WITH US  

ಅನ್ನ ಕಿತ್ತುಕೊಳ್ಳಬೇಡಿ; ಕೈ ಶಾಸಕಾಂಗ ಸಭೆಯಲ್ಲಿ ಆಗ್ರಹ

ಎಚ್‌.ಡಿ.ಕುಮಾರಸ್ವಾಮಿಗೆ ಪತ್ರ ಬರೆದ ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿ ಪ್ರಮಾಣ ಕಡಿತಗೊಳಿಸಿರುವ ಬಗ್ಗೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಹಿಂದಿನಂತೆಯೇ 7 ಕೆಜಿ ಅಕ್ಕಿ ನೀಡುವ ಕ್ರಮವನ್ನೇ ಮುಂದುವರಿಸುವಂತೆ ಶಾಸಕರು ಆಗ್ರಹಿಸಿದ್ದಾರೆ. ಇದರ ಬೆನ್ನಲ್ಲೇ ಸಮನ್ವಯ ಸಮಿತಿ ಅಧ್ಯಕ್ಷ, ಮಾಜಿ ಸಿಎಂ ಸಿದ್ದರಾಮಯ್ಯ ಅವರೂ ಸಿಎಂ ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿದ್ದು ಅನ್ನಭಾಗ್ಯ ಅಕ್ಕಿ ಕಡಿತ ಮತ್ತು ತೈಲ ಬೆಲೆ ಮರುಪರಿಶೀಲಿಸುವಂತೆ ಮನವಿ ಮಾಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಬುಧವಾರ ನಡೆದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಂಡಿಸಿದ ಬಜೆಟ್‌ಗೂ ತೀವ್ರ ಆಕ್ಷೇಪ ವ್ಯಕ್ತವಾಯಿತು. ಅಲ್ಲದೆ, ಹಿಂದಿನ ಕಾಂಗ್ರೆಸ್‌ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಅನ್ನಭಾಗ್ಯ ಪ್ರಮುಖವಾಗಿತ್ತು. ಸರ್ಕಾರದ ಗೌರವ ಹೆಚ್ಚಿಸಿತ್ತು. ಆದರೆ, ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸಿರುವ ಬಜೆಟ್‌ನಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಪ್ರತಿ ವ್ಯಕ್ತಿಗೆ 7 ಕೆ.ಜಿ.ಯಿಂದ 5 ಕೆ.ಜಿ.ಗೆ ಕಡಿತಗೊಳಿಸಿರುವುದು ಸರಿಯಾದ ಕ್ರಮವಲ್ಲ ಎಂದಿದ್ದಾರೆ. ಹಿಂದಿನ ಕ್ರಮವನ್ನೇ ಮುಂದುವರಿಸಲೂ ಆಗ್ರಹಿಸಿದ್ದಾರೆ.

ಈ ಮಧ್ಯೆ ಆಹಾರ ಮತ್ತ ನಾಗರಿಕ ವ್ಯವಹಾರಗಳ ಸಚಿವ ಜಮೀರ್‌ ಅಹ್ಮದ್‌ ಅವರೂ, ಸಿಎಂ ಕುಮಾರಸ್ವಾಮಿಗೆ ನೇರ ಪತ್ರ ಬರೆದಿದ್ದು, ಯಾವುದೇ ಕಾರಣಕ್ಕೂ ಅನ್ನಭಾಗ್ಯದ ಅಕ್ಕಿಯನ್ನು ಕಡಿತ ಮಾಡಬಾರದು ಎಂದು ಮನವಿ ಮಾಡಿದ್ದಾರೆ. ಕಾಂಗ್ರೆಸ್‌ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ಎಲ್ಲ ಯೋಜನೆಗಳನ್ನು ಮುಂದುವರಿಸುವುದಾಗಿ ಬಜೆಟ್‌ನಲ್ಲಿ ತಿಳಿಸಿರುವುದರಿಂದ ಅನ್ನಭಾಗ್ಯ ಯೋಜನೆಯಡಿ ಏಳು ಕೆಜಿ ಅಕ್ಕಿ ನೀಡುವುದನ್ನೂ ಮುಂದುವರಿಸಬೇಕು ಎಂದು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.

ಎಚ್‌ಡಿಕೆಗೆ ಸಿಎಂ ಪತ್ರ
ಶಾಸಕರ ಅಭಿಪ್ರಾಯ ಆಲಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಎಚ್‌ಡಿಕೆಗೆ ಪತ್ರ ಬರೆದಿದ್ದಾರೆ. ಅನ್ನಭಾಗ್ಯ ಅಕ್ಕಿ ಪ್ರಮಾಣ ತಲಾ 7 ಕೆಜಿ ಮುಂದುವರಿಸುವುದು ಹಾಗೂ ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ತೆರಿಗೆ ಇಳಿಸುವ ಸಂಬಂಧ ಪರಿಶೀಲಿಸುವಂತೆ ಪತ್ರದಲ್ಲಿ ಕೋರಿದ್ದಾರೆ.

ಪತ್ರದ ಸಾರಾಂಶ ಹೀಗಿದೆ
ಎಚ್‌.ಡಿ.ಕುಮಾರಸ್ವಾಮಿಯವರೇ, ಆನ್ನಭಾಗ್ಯ ಎನ್ನುವುದು ನನ್ನ ಪಾಲಿಗೆ ಕೇವಲ ಒಂದು ಯೋಜನೆಯಲ್ಲ. ಅದು ಬಡವರ ಹಿಸಿವು ನೀಗಿಸುವ ಪುಣ್ಯದ ಕೆಲಸ ಎಂದು ನಾನು ನಂಬಿದವನು. ಬಡವರ ಹಸಿವಿನ ಬವಣೆಯನ್ನು ಕಣ್ಣಾರೆ ಕಂಡ ಅನುಭವವೇ  ಈ ಯೋಜನೆಗೆ ಪ್ರೇರಣೆ. ಇದರ ಜತೆಗೆ ನನಗೆ ಭಾವನಾತ್ಮಕ ಸಂಬಂಧ ಇದೆ.

ನಮ್ಮ ಒಟ್ಟು ಆಯವ್ಯಯದ ಪ್ರಮಾಣವನ್ನು ಗಮನಿಸಿದರೆ ಅನ್ನಭಾಗ್ಯ ಯೋಜನೆ ದುಬಾರಿಯೇನಲ್ಲ. ಐದು ವರ್ಷಗಳ ಅವಧಿಯಲ್ಲಿ  ಈ ಯೋಜನೆಗೆ ನಮ್ಮ ಸರ್ಕಾರ ನೀಡಿದ್ದ ಒಟ್ಟು ಹಣ 11,564 ಕೋಟಿ ರೂ. ಇದರ ಫ‌ಲಾನುಭವಿಗಳ ಸಂಕ್ಯೆ 3.85 ಕೋಟಿ. ಜಾತಿಮ ಧರ್ಮ, ಪ್ರದೇಶದ ಗಡಿಗಳನ್ನೆಲ್ಲಾ ಮೀರಿ ಅತ್ಯಂತ ಹೆಚ್ಚು ಫ‌ಲಾನುಭವಿಗಳನ್ನು ತಲುಪುತ್ತಿರುವ ಏಕೈಕ ಯೋಜನೆ ಇದು.

ಇಂದು ನಮ್ಮ ನಾಡಿನಲ್ಲಿ ಯಾರೊಬ್ಬರೂ ಹಸಿದು ಮಲಗುವಂತಹ ಅಸಹಾಯಕ ಪರಿಸ್ಥಿತಿ  ಇಲ್ಲ. ಆಹಾರದ ಹಕ್ಕನ್ನು ನೀಡಿದ ತೃಪ್ತಿ ನನ್ನದು. ಹಸಿವಿನ ವಿರುದ್ಧದ ಹೋರಾಟದಲ್ಲಿ ಕರ್ನಾಟಕ ಗೆದ್ದಿದೆ. ಹಸಿವು ಮುಕ್ತ  ಕರ್ನಾಟಕ ಸಾಕಾರಗೊಂಡಿದೆ. ಸತತ ಬರಗಾಲದ ಹೊರತಾಗಿಯೂ ರೈತರ ಆತ್ಮಹತ್ಯೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ವಸಲೆ ಕಡಿಮೆಯಾಗಲು ಅನ್ನಭಾಗ್ಯ ಯೋಜನೆ ಮುಖ್ಯ ಕಾರಣವಾಗಿದೆ.

ನೀವು ಮಂಡಿಸಿರುವ ಹೊಸ ಬಜೆಟ್‌ನಲ್ಲಿ ಅನ್ನಬಾಗ್ಯದ ಅಕ್ಕಿಯ ಪ್ರಮಾಣವನ್ನು ಐದು ಕೊಲೋಗೆ ಇಳಿಸಿದ್ದು ತಿಳಿದು ಅಚ್ಚರಿಯಾಯಿತು.ಅನ್ನಭಾಗ್ಯ ಯೋಜನೆಗೆ ನಾವು ಬಜೆಟ್‌ನಲ್ಲಿ ನಿಗದಿಪಡಿಸಿದ್ದ ಸಹಾಯಧನ 2450 ಕೋಟಿ ರೂ. ರೂ. ಎರಡು ಕಿಲೋ ಅಕ್ಕಿ ಕಡಿಮೆ ಮಾಡುವುದರಿಂದ ಹೆಚ್ಚೆಂದರೆ 600 ರಿಂದ 700 ಕೋಟಿ ರೂ. ಉಳಿತಾಯ ಮಾಡಬಹುದು.

ಆದರೆ,  ಈ ಕಡಿತದಿಂದ ಹೆಚ್ಚಾಗಲಿರುವ ಬಡವರ ಕಷ್ಟದ ಪ್ರಮಾಣವನ್ನು ನೀವು ಊಹಿಸಬಲ್ಲಿರಿ ಎಂದು ನಾನು ನಂಬಿದ್ದೇನೆ. ಈಗಾಗಲೇ ಬೇರೆ ಬೇರೆ ಜಿಲ್ಲೆಗಳ ಜನತೆ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿರುವುದನ್ನು ನಮ್ಮ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ನನ್ನ ಗಮನಕ್ಕೆ ತಂದಿದ್ದಾರೆ.

ಈ ಹಿನ್ನೆಲೆಯಲ್ಲಿ ಬಡತನದ ರೇಖೆಗಿಂತ ಕೆಳಗಿರುವ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೂ ನೀಡಲಾಗುತ್ತಿದ್ದ ಅಕ್ಕಿಯನ್ನು ತಲಾ ಏಳು ಕಿಲೋಗಳಿಂದ ಐದು ಕಿಲೋಗೆ ಇಳಿಸುವ ನಿಮ್ಮ ನಿರ್ಧಾರವನ್ನು  ಪುನರ್‌ ಪರಿಶೀಲಿಸಿ ಹಳೆಯ ಪದ್ಧತಿಯನ್ನೇ ಮುಂದುವರಿಸಿಕೊಂಡು ಹೋಗಬೇಕೆಂದು ಕೋರುತ್ತೇನೆ.

ಹಾಗೆಯೇ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಏರಿಕೆ ವಿರುದ್ಧ ಕಾಂಗ್ರೆಸ್‌ ಪಕ್ಷ ರಾಷ್ಟ್ರ ಮಟ್ಟದಲ್ಲಿ ಹೋರಾಟ ನಡೆಸುತ್ತಿದೆ. ತೈಲ ಬೆಲೆ ಏರಿಕೆಯನ್ನು ಪ್ರಮುಖ ವಿಷಯವನ್ನಾಗಿ ಮಾಡಿಕೊಂಡು ನಮ್ಮ ಪಕ್ಷ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಹೋರಾಟ ನಡೆಸಿತು. ಜತೆಗೆ ನಮ್ಮ ಪಕ್ಷದ ರಾಷ್ಟ್ರೀಯ ನಾಯಕರೂ ಸಹ  ಈ ವಿಷಯದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ.

ಇಂತಹ ಸನ್ನಿವೇಶದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಏರಿಸುವ ನಿರ್ಧಾರವನ್ನು ತಾವು ಘೋಷಣೆ ಮಾಡಿದ್ದೀರಿ. ಇದರಿಂದ ಬೆಲೆ ಏರಿಕೆ ಜೊತೆಗೆ ಜನಸಾಮಾನ್ಯರ ಮೇಲೂ ಪರಿಣಾಮ ಬೀರಲಿದೆ. ಹೀಗಾಗಿ, ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಏರಿಸುವ ತೀರ್ಮಾನದ ಬಗ್ಗೆಯೂ ಮರು ಪರಿಶೀಲನೆ ಮಾಡಬೇಕೆಂದು ಕೋರುತ್ತೇನೆ.

ಸಿಎಂಗೆ ಸಚಿವ ಜಮೀರ್‌ ಅಹಮದ್‌ ಪತ್ರ
ಈ ಮಧ್ಯೆ, ಅನ್ನಬಾಗ್ಯ ಯೋಜನೆಯಡಿ ನೀಡುತ್ತಿರುವ ತಲಾ ಏಳು ಕೆಜಿ ಅಕ್ಕಿ ಪ್ರಮಾಣದಲ್ಲಿ ಎರಡು ಕೆಜಿ ಇಳಿಕೆ ಮಾಡಬಾರದು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜಮೀರ್‌ ಅಹಮದ್‌ ನೇರವಾಗಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರಿಗೆ ಪತ್ರ ಬರೆದಿದ್ದಾರೆ.

ಕಾಂಗ್ರೆಸ್‌ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರ ಎಲ್ಲ ಯೋಜನೆಗಳನ್ನು ಮುಂದುವರಿಸುವುದಾಗಿ ಬಜೆಟ್‌ನಲ್ಲಿ ತಿಳಿಸಿರುವುದರಿಂದ ಅನ್ನಭಾಗ್ಯ ಯೋಜನೆಯಡಿ ಏಳು ಕೆಜಿ ಅಕ್ಕಿ ನೀಡುವುದನ್ನೂ ಮುಂದುವರಿಸಬೇಕು ಎಂದು ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ. 

ಅಕ್ಕಿ ಪ್ರಮಾಣ ಐದು ಕೆಜಿಗೆ ಇಳಿಸುವುದಾಗಿ ಬಜೆಟ್‌ನಲ್ಲಿ ಘೋಷಣೆ ಮಾಡಿರುವುದರಿಂದ ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ರಾಜ್ಯದೆಲ್ಲೆಡೆಯಿಂದ ಕ್ರಮ ಸರಿಯಲ್ಲ ಎಂಬ ದೂರುಗಳು ಬರುತ್ತಿವೆ .ಕೂಡಲೇ ತೀರ್ಮಾನ ವಾಪಸ್‌ ಪಡೆಯಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ. 

ಬಜೆಟ್‌ ಪೂರ್ವಭಾವಿ ಸಭೆಯಲ್ಲೂ ಏಳು ಕೆಜಿ ಅಕ್ಕಿ ಜತೆಗೆ ಪೌಷ್ಠಿಕಾಂಶ ಆಹಾರವಾದ ಆಯೋಡಿನ್‌ ಉಪ್ಪು, ಅಡುಗೆ ಎಣ್ಣೆ. ತೊಗರಿಬೇಳೆ ಸೇರಿ ಇತರೆ ಪದಾರ್ಥ ನೀಡಬೇಕು ಎಂದು ನಾನು ಬೇಡಿಕೆ ಸಲ್ಲಿಸಿದ್ದೆ. ಆದರೆ, ಎರಡು ಕೆ.ಜಿ ಅಕ್ಕಿ ಕಡಿತ ಮಾಡಿ ಬೇರೆ ಪದಾರ್ಥಗಳ ಘೋಷಣೆ ಮಾಡಿರುವುದು ಬಹುತೇಕ ಪಡಿತರ ಚೀಟಿ ಹೊಂದಿರುವವರ ಆಕ್ರೋಶಕ್ಕೆ ಕಾರಣವಾಗಿದೆ. ಆದ್ದರಿಂದ ಹಿಂದಿನಂತೆ 7 ಕೆಜಿ ಅಕ್ಕಿಯ ಜತೆಗೆ ಪೌಷ್ಠಿಕಾಂಶ ಪದಾರ್ಥ ನೀಡುವ ಬಗ್ಗೆ ಆಯವ್ಯಯದ ಮೇಲಿನ ಚರ್ಚೆಗೆ ಉತ್ತರ ನೀಡುವ ಸಂದರ್ಭದಲ್ಲಿ  ಘೋಷಣೆ ಮಾಡಬೇಕು ಎಂದು ಕೋರಿದ್ದಾರೆ.


Trending videos

Back to Top