CONNECT WITH US  

ಮೈತ್ರಿ ಸರ್ಕಾರದ ದ್ರೋಹದ ಬಗ್ಗೆ ಹೋರಾಟ

ಚಾಲ್ತಿ ಸಾಲಮನ್ನಾ ಬಗ್ಗೆ ಸ್ಪಷ್ಟತೆ ನೀಡದ ಸಿಎಂ ಕುಮಾರಸ್ವಾಮಿ: ಬಿ.ಎಸ್‌. ಯಡಿಯೂರಪ್ಪ

ವಿಧಾನಸಭೆ: ರಾಜ್ಯ ಸಮ್ಮಿಶ್ರ ಸರ್ಕಾರ ಸುಳ್ಳು ಭರವಸೆಗಳನ್ನು ನೀಡಿ ಜನರಿಗೆ ಮೋಸ ಮಾಡುತ್ತಿದೆ ಎಂದು ಪ್ರತಿಪಕ್ಷದ ನಾಯಕ ಬಿ.ಎಸ್‌.ಯಡಿಯೂರಪ್ಪ ಆರೋಪಿಸಿದ್ದಾರೆ.

ಬಜೆಟ್‌ ಮೇಲಿನ ಚರ್ಚೆಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನೀಡಿದಉತ್ತರಕ್ಕೆ ಅತೃಪ್ತಿ ವ್ಯಕ್ತಪಡಿಸಿ
ಸಭಾತ್ಯಾಗ ಮಾಡಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಾಲಮನ್ನಾದಿಂದ ಅನುಕೂಲ ವಾಗುತ್ತದೆ ಎಂದು ನಂಬಿಕೊಂಡಿದ್ದ ರೈತರಿಗೆ ಮುಖ್ಯಮಂತ್ರಿ ದ್ರೋಹ ಮಾಡಿದ್ದಾರೆ. ಮುಖ್ಯಮಂತ್ರಿ ಕುಮಾರ
ಸ್ವಾಮಿ ಬೇಜವಾಬ್ದಾರಿ ಉತ್ತರ ಕೊಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಹಕಾರ ಸಂಘಗಳಲ್ಲಿ ರೈತರ ಚಾಲ್ತಿ ಸಾಲಮನ್ನಾ ವಿಚಾರದಲ್ಲಿ ಸ್ಪಷ್ಟತೆಯಿಲ್ಲ. ಯಾವ ದಿನಾಂಕದವರೆಗೆ ಎಂಬುದು ತಿಳಿಸಿಲ್ಲ. ಜತೆಗೆ ಎಷ್ಟು ಜನ ರೈತರಿಗೆ ಎಷ್ಟು ಮೊತ್ತ ಎಂದು ಹೇಳಿಲ್ಲ. ಇದು ರೈತರಿಗೆ ಮಂಕುಬೂದಿ ಎರಚುವ ಕೆಲಸ ಎಂದರು.

ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಪಡೆದ ಸಾಲಮನ್ನಾ ಬಾಬಿಗೆ ನಾಲ್ಕು ಕಂತುಗಳಲ್ಲಿ ಪ್ರತಿವರ್ಷ 6500 ಕೋಟಿ ರೂ. ಪಾವತಿಸುವುದಾಗಿ ಹೇಳುತ್ತಿದ್ದಾರೆ. ಆದರೆ, ರೈತರ ಸಾಲದ ಹಣ ಬ್ಯಾಂಕ್‌ ಖಾತೆಗೆ ಹಣ ಜಮಾವಣೆ ಆಗದೆ ತೀರುವಳಿ ಪತ್ರ ಕೊಡಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಪೆಟ್ರೊಲ್‌ ಡಿಸೇಲ್‌ ಮೇಲಿನ ಅಬಕಾರಿ ಸುಂಕ ಹೆಚ್ಚಳದಿಂದ ಬೆಲೆ ಏರಿಕೆ ಬಗ್ಗೆಯೂ ಬೇರೆ ರಾಜ್ಯಗಳ ಕಥೆ ಹೇಳಿ
ಸಮರ್ಥಿಸಿಕೊಂಡಿದ್ದು ಸರಿಯಲ್ಲ. ತೆರಿಗೆ ಹೊರೆ ಹಾಕದೆ ರೈತರ ಸಾಲ ಮನ್ನಾ ಮಾಡುತ್ತೇನೆಂದು ಹೇಳಿ ಮಾತು ತಪ್ಪಿದ್ದಾರೆ ಎಂದು ದೂರಿದರು.

ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳ ಸಾಲ, ಸ್ತ್ರೀಶಕ್ತಿ ಸಂಘಟನೆ,ನೇಕಾರರು ಹಾಗೂ ಮೀನುಗಾರರ ಸಾಲದ ಬಗ್ಗೆ ಮುಖ್ಯಮಂತ್ರಿಯವರು ಚಕಾರ ಎತ್ತಿಲ್ಲ. ಒಟ್ಟಾರೆ, ಸದನದಲ್ಲಿ ಸ್ಪಷ್ಟ ಉತ್ತರ ನೀಡದೆ ಗೊಂದಲ ಮೂಡಿಸಿ,ಪ್ರಶ್ನೆಗಳಿಗೆ ಉತ್ತರಿಸದೆ ಪಲಾಯನವಾದ ಮಾಡಿದ್ದಾರೆ. ಇವರ ವಿರುದ್ದ  ಜಿಲ್ಲಾ ಕೇಂದ್ರಗಳಲ್ಲಿ ಹೋರಾಟ ನಡೆಸುತ್ತೇವೆ ಎಂದು ಹೇಳಿದರು.

ಸರ್ಕಾರ ನೀಡಿರುವ ಸುಳ್ಳು ಅಂಕಿ ಅಂಶಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಜನರ ಮುಂದೆ ತೆಗೆದುಕೊಂಡು ಹೋಗುತ್ತೇವೆ. ಈ ಸುಳ್ಳು ಭರವಸೆಗಳನ್ನು ನಂಬಿ ಜನರು 37 ಸ್ಥಾನ ನೀಡಿದ್ದಾರೆ ಇಲ್ಲದಿದ್ದರೆ 20 ಸ್ಥಾನವೂ ಸಿಗುತ್ತಿರಲಿಲ್ಲ ಎಂದು ವಾಗ್ಧಾಳಿ ನಡೆಸಿದರು.


Trending videos

Back to Top