CONNECT WITH US  

ಕೊಡಗಲ್ಲೀಗ ದುಡಿಮೆಯದ್ದೇ ಆತಂಕ

ಆಟೋ, ಜೀಪ್‌, ಟಾಕ್ಸಿ ಚಾಲಕರಿಗೆ ಕುಟುಂಬ ನಿರ್ವಹಣೆಯ ಚಿಂತೆ

ನಗರದ ಬಹುತೇಕ ಶಾಲಾ ಕಾಲೇಜುಗಳು ಸೋಮವಾರದಿಂದ ಪುನರ್‌ ಆರಂಭವಾಗಿದೆ.

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಶತಮಾನದ ದುರಂತ ಸಂಭವಿಸಿದ ನಂತರ ಮಳೆ ಪ್ರಮಾಣ ಕಡಿಮೆಯಾಗಿ ಸಹಜ ಸ್ಥಿತಿಯತ್ತ ಮರಳುತ್ತಿದ್ದರೂ ಸ್ಥಳೀಯರಲ್ಲಿ ಆತಂಕ, ಆಘಾತ ಕಡಿಮೆಯಾಗಿಲ್ಲ.

ಶಾಶ್ವತವಾಗಿ ನೆಲೆ ಕಳೆದುಕೊಂಡು ನಿರಾಶ್ರಿತರ ಶಿಬಿರದಲ್ಲಿರುವವರಲ್ಲಿ  ಮುಂದೇನು ಎಂಬ ಚಿಂತೆಯಾದರೆ, ಪ್ರವಾಹ ಹಾಗೂ ಗುಡ್ಡ ಕುಸಿತದಿಂದ ತೊಂದರೆಗೊಳಗಾಗದೆ ಉಳಿದುಕೊಂಡಿರುವವ ಮನೆಯ ಮಾಲೀಕರಿಗೆ ಮತ್ತೂಂದು ರೀತಿಯ ಆತಂಕ ಆವರಿಸಿದೆ.

ರಾತ್ರಿ ಸ್ವಲ್ಪ ಮಳೆ ಜಾಸ್ತಿಯಾದರೆ ಭಯ, ಶಾಲೆಗೆ ಹೋದ ಮಕ್ಕಳು ಮನೆಗೆ ಬರುವವರೆಗೂ ಆತಂಕ. ರಾತ್ರಿ ಪದೇ ಪದೆ ನಿಯಂತ್ರಣ ಕೊಠಡಿಗೆ ದೂರವಾಣಿ ಕರೆ ಮಾಡಿ ವಿಚಾರಿಸುವ ಧಾವಂತ. ಮತ್ತೂಂದೆಡೆ ಆಟೋ, ಜೀಪ್‌, ಟ್ಯಾಕ್ಸಿ ಚಾಲನೆ ಹಾಗೂ ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದವರು  ಕುಟುಂಬ ನಿರ್ವಹಣೆಗೆ ಕಷ್ಟಪಡುವಂತಾಗಿದೆ. ನಿರಾಶ್ರಿತರ ಶಿಬಿರದಲ್ಲಿ ಊಟ-ತಿಂಡಿಗೆ ತೊಂದರೆ ಇಲ್ಲವಾದರೂ ಇತರೆ ದಿನನಿತ್ಯದ ಖರ್ಚು ವೆಚ್ಚಗಳಿಗೆ ಹಣ ಇಲ್ಲ, ಹಾಗೆಯೇ ಕೆಲಸವೂ ಇಲ್ಲ. ಒಂದು ಕಾಲದಲ್ಲಿ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದ ಪ್ರವಾಸಿಗರಿಗೆ ಆತಿಥ್ಯ ನೀಡುತ್ತಿದ್ದ ಕೊಡಗಿನ ಜನರ ಜೀವನ  ಈ ಸ್ಥಿತಿಗೆ ಬಂದು ನಿಂತಿದೆ.

ನಿರಾಶ್ರಿತರ ಕೇಂದ್ರದಲ್ಲಿರುವವರಿಗೆ ಊಟ, ವಸತಿ ಸೇರಿದಂತೆ ಎಲ್ಲ ವ್ಯವಸ್ಥೆಯನ್ನು ಸದ್ಯ ಸರ್ಕಾರದಿಂದ ಒದಗಿಸಲಾಗುತ್ತಿದೆ. ಆದರೆ, ಮಡಿಕೇರಿ, ಕುಶಾಲನಗರ, ಸೋಮವಾರಪೇಟೆ ಸೇರಿದಂತೆ ಜಿಲ್ಲೆಯ ಬಹುತೇಕ ರಸ್ತೆಗಳು ಗುಡ್ಡದ ಮೇಲೆ ಇವೆ. ಇನ್ನೂ ಕೆಲವು ಕಡೆ ಧರೆ ಅರ್ಧ ಕುಸಿದು ನಿಂತಿದೆ. ಹೀಗಾಗಿ ಚಾಲಕರು ಜೀವ ಭಯದಲ್ಲಿ ವಾಹನ ಚಾಲನೆ ಮಾಡುತ್ತಿದ್ದಾರೆ.

ನಿರಾಶ್ರಿತರಲ್ಲಿ ಕೆಲವರು ತಮ್ಮ ಮನೆಯತ್ತ ಹೋಗುತ್ತಿದ್ದಾರೆ. ಇನ್ನೂ ಕೆಲವರು ಮನೆಯತ್ತ ಹೋಗಲು ಭಯ ಪಡುತ್ತಿದ್ದಾರೆ. ಹಲವು ಕುಟುಂಬಗಳನ್ನು ಪುನಃ ಮನೆಗೆ ಕಳುಹಿಸಲು ಶಿಬಿರದಲ್ಲೇ ಮನವೊಲಿಸುವ ಕಾರ್ಯ ಆರಂಭವಾಗಿದೆ. ಕುಶಾಲನಗರ ಮತ್ತು ಸೋಮವಾರಪೇಟೆ ಭಾಗದ ನಿರಾಶ್ರಿತರ ಶಿಬಿರದಲ್ಲಿರುವ ಕುಟುಂಬಗಳು ಸ್ವಯಂ ಪ್ರೇರಿತವಾಗಿ ತಮ್ಮ ಮನೆಗೆ ವಾಪಸ್‌ ಹೋಗುತ್ತಿವೆ.

ಸರ್ಕಾರಿ ಅಧಿಕಾರಿಗಳಲ್ಲೂ ಭೀತಿ
ವಿವಿಧ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳಿಗೆ ಸರ್ಕಾರದಿಂದಲೇ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ವಸತಿ ಸಮುಚ್ಚಯದಲ್ಲಿ ಇರುವ ಅಧಿಕಾರಿಗಳು ಕೂಡ ಜೀವ ಭಯ ಎದುರಿಸುತ್ತಿದ್ದಾರೆ.

ಕೆಲವರು ತಮ್ಮ ಕುಟುಂಬದವರನ್ನು ಸ್ವಂತ ಊರಿಗೆ ಕಳುಹಿಸಿ ಕೊಟ್ಟಿದ್ದಾರೆ. ಕಚೇರಿಯಲ್ಲಿ ಕುಳಿತಾಗಲು ಮನೆಗೆ ಏನಾಗುತ್ತದೆಯೋ ಎಂಬ ಚಿಂತೆಯಲ್ಲಿ ಅನೇಕರಿದ್ದಾರೆ. ಮಳೆ ಜತೆ ಜೋರಾಗಿ ಗಾಳಿ ಬಂದರೆ ಭಯ ಹೆಚ್ಚಾಗುತ್ತದೆ ಎಂಬ ಆತಂಕ ಅವರದು. ಮಡಿಕೇರಿ, ಕುಶಾಲನಗರ, ಸೋಮವಾರಪೇಟೆ ತಾಲೂಕಿನಲ್ಲಿ ಯಾರನ್ನೇ ಮಾತನಾಡಿಸಿದರೂ ಇದೇ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.ಕೊಡಗು ಮೊದಲಿನಂತೆ ಆಗುವ ನಂಬಿಕೆ ನಮಗಿಲ್ಲ. ಮಳೆ ಗಾಳಿ ನಿಂತರೆ ಸಾಕು. ಮನೆ, ಜಮೀನಿಗೆ ಯಾವುದೇ ಹಾನಿಯಾಗಿಲ್ಲ. ಆದರೆ, ಈಗಾಗಲೇ ನಡೆದಿರುವ ಭೀಕರ ದುರಂತದಿಂದ ಉಂಟಾಗಿರುವ ಭಯ ದೂರವಾಗಿಲ್ಲ ಎಂದು ಹೇಳುತ್ತಾರೆ.

ಪ್ರವಾಸೋದ್ಯಮ ಸ್ಥಗಿತ
ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಪ್ರವಾಸೋದ್ಯಮ ಸಂಪೂರ್ಣ ಸ್ಥಗಿತವಾಗಿದೆ.  ಇನ್ನೂ ಒಂದೆರಡು ತಿಂಗಳು ಇದೇ ಪರಿಸ್ಥಿತಿ ಇರಬಹುದು ಎಂದು ಹೇಳಲಾಗುತ್ತಿದೆ. ಪ್ರವಾಸೋದ್ಯಮವನ್ನೇ ನಂಬಿಕೊಂಡಿರುವ ಅನೇಕ ಹೋಂ ಸ್ಟೇ, ರೆಸಾರ್ಟ್‌, ಲಾಡ್ಜ್ಗಳು ನಷ್ಟ ಎದುರಿಸುತ್ತಿವೆ. ಹೋಟೆಲ್‌ ಉದ್ಯಮ ನೆಲಕಚ್ಚಿದೆ. ನಿರಾಶ್ರಿತರ ಕೇಂದ್ರಕ್ಕೆ ಬರುವವರನ್ನು ಹೊರತುಪಡಿಸಿ ಬೇರೆ ಯಾವ ಗ್ರಾಹಕರು ಹೋಟೆಲ್‌ ಕಡೆಗೆ ಹೋಗುತ್ತಿಲ್ಲ. ಪ್ರವಾಸೋದ್ಯಮ ನಂಬಿಕೊಂಡಿರುವ ಹಲವು ಉದ್ಯಮ, ಉಪ ಕಸುಬುಗಳು ಸ್ಥಗಿತವಾಗಿದೆ.

ಜೀವನ ಕಷ್ಟ
ಹತ್ತು ದಿನದಿಂದ ರಿಕ್ಷಾ ಮನೆಯಿಂದ ಹೊರ ತೆಗೆದಿರಲಿಲ್ಲ. ರಿಕ್ಷಾ ಬಿಟ್ಟು ಬೇರೆ ಉದ್ಯೋಗ ಇಲ್ಲ. ಜಿಲ್ಲೆಯಲ್ಲಿನ ನೂರಾರು ರಿಕ್ಷಾ ಚಾಲಕರ ಕುಟುಂಬದ ಬದುಕು ನಿರಾಶ್ರಿತರಿಗಿಂತಲೂ ದುಸ್ತರವಾಗಿದೆ. ಆಟೋ ಹತ್ತುವವರೇ ಇಲ್ಲ. ದಿನಕ್ಕೆ ಒಂದು ಅಥವಾ ಎರಡು ಬಾಡಿಗೆ ಸಿಕ್ಕರೆ ಹೆಚ್ಚು. ಪ್ರವಾಸಿಗರೂ ಬರುತ್ತಿಲ್ಲ. ಹೀಗಾಗಿ ಜೀವನ ನಡೆಸುವುದೇ ಕಷ್ಟವಾಗಿದೆ ಎಂದು ಆಟೋ ಚಾಲಕ ಹಮೀದ್‌ ನೋವು ತೋಡಿಕೊಳ್ಳುತ್ತಾರೆ.

ರಾತ್ರಿ ನಿದ್ದೆಯೇ ಬರುವುದಿಲ್ಲ
ದುರಂತವಾದ ನಂತರ ಸರಿಯಾಗಿ ನಿದ್ದೆ ಮಾಡಿಲ್ಲ. ಗಾಳಿ ಮಳೆ ಸ್ವಲ್ಪ ಬಂದರೂ ಯಾವಾಗ ಏನಾಗುತ್ತದೋ ಎಂಬ ನಮ್ಮೆಲ್ಲರನ್ನು ಕಾಡುತ್ತಿದೆ. ನಗರದ ಒಳಗೆ ಮನೆ ಇದ್ದರೂ ಪದೇ ಪದೆ ಕಂಟ್ರೋಲ್‌ ರೂಂ ಗೆ ಕರೆ ಮಾಡಿ ಪರಿಸ್ಥಿತಿ ಹೇಗಿದೆ ಎಂದು ಕೇಳುತ್ತಿರುತ್ತೇವೆ. ಸಂಜೆ ಹೊತ್ತಿನಲ್ಲಿ ಮಕ್ಕಳನ್ನು ಮನೆಯಿಂದ ಹೊರಗೆ ಕಳುಹಿಸಲು ಭಯ ಎದುರಾಗುತ್ತದೆ. ಶಾಲೆಗೆ ಹೋದ ಮಕ್ಕಳು ಸುರಕ್ಷಿತವಾಗಿ ಬರುತ್ತಾರೋ ಇಲ್ಲವೋ ಎಂಬ ಆತಂಕ ಎದುರಾಗಿದೆ ಎಂದು ಗೃಹಿಣಿ ಮಲ್ಲಿಕಾ ಕಳವಳ ವ್ಯಕ್ತಪಡಿಸುತ್ತಾರೆ.

ಶೇ.50 ರಷ್ಟು ವಿದ್ಯಾರ್ಥಿಗಳು ಆಗಮನ
ನಗರದ ಬಹುತೇಕ ಶಾಲಾ ಕಾಲೇಜುಗಳು ಸೋಮವಾರದಿಂದ ಪುನರ್‌ ಆರಂಭವಾಗಿದ್ದು, ಮೊದಲ ದಿನ ವಿದ್ಯಾರ್ಥಿಗಳ ಹಾಜರಾತಿ ಶೇ. 50ರಷ್ಟು ದಾಖಲಾಗಿದೆ. ಮಡಿಕೇರಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಸೋರುವ ಕೊಠಡಿಯಲ್ಲಿ ನೀರಿನ ಮಧ್ಯದಲ್ಲಿ ಕುಳಿತು ಪಾಠ ಕೇಳುವ ಸ್ಥಿತಿ ಎದುರಾಗಿದೆ. ನಿರಾಶ್ರಿತರ ಮಕ್ಕಳು ಯಾವುದೇ ಶಾಲಾ ಕಾಲೇಜು ಬೇಕಾದರೂ ಸೇರಿಕೊಳ್ಳಬಹುದು ಯಾವುದೇ ದಾಖಲೆ ಕೇಳದೆ ಸೇರಿಸಿಕೊಳ್ಳುವಂತೆ ಜಿಲ್ಲಾಡಳಿತ ಸೂಚಿಸಿದೆ. ಸೋಮವಾರ ಹಲವು ವಿದ್ಯಾರ್ಥಿಗಳು ಸಮವಸ್ತ್ರ ಇಲ್ಲದೆ ಶಾಲಾ, ಕಾಲೇಜಿಗೆ ಹೋಗಿದ್ದರು. ಸರ್ಕಾರದಿಂದಲೇ ಅಂತಹ ಮಕ್ಕಳಿಗೆ ಪುಸ್ತಕ ಮತ್ತು ಸಮವಸ್ತ್ರ ವಿತರಿಸುವ ಕಾರ್ಯ ಕೂಡ ಆರಂಭವಾಗಿದೆ.

- ರಾಜು ಖಾರ್ವಿ ಕೊಡೇರಿ

Trending videos

Back to Top