CONNECT WITH US  

ಸ್ವರ್ಣಪೀಠಿಕಾಪುರಕ್ಕೆ ಬಿಎಸ್‌ವೈ ಭೇಟಿ

ಕೊಪ್ಪ: ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಗುರುವಾರ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಗೌರಿಗದ್ದೆಗೆ ಭೇಟಿ ನೀಡಿ, ಸ್ವರ್ಣಪೀಠಿಕಾಪುರದ ಪೀಠಾಧೀಶರಾದ ಅವಧೂತ ವಿನಯ್‌ ಗುರೂಜಿ ಅವರಿಂದ ಆಶೀರ್ವಾದ ಪಡೆದರು.

ಬೆಳಗ್ಗೆ 10 ಗಂಟೆಗೆ ಕ್ಷೇತ್ರಕ್ಕೆ ಆಗಮಿಸಿದ ಯಡಿಯೂರಪ್ಪ, 11.15ರ ತನಕ ಕ್ಷೇತ್ರದಲ್ಲಿದ್ದು ದತ್ತಾತ್ರೇಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.

ನಂತರ, ಸ್ವಾಮೀಜಿಯವರ ಆಶೀರ್ವಾದ ಪಡೆದು ಮಾತುಕತೆ ನಡೆಸಿದರು.ನಂತರ ಬೆಂಗಳೂರು ಕಡೆಗೆ ಪ್ರಯಾಣ ಬೆಳೆಸಿದರು. ವಿಧಾನಸಭಾ ಚುನಾವಣೆಗೂ ಮುನ್ನ ಗೌರಿಗದ್ದೆಗೆ ಭೇಟಿ ನೀಡುವುದಾಗಿ ಯಡಿಯೂರಪ್ಪ ಹರಕೆ ಹೊತ್ತಿದ್ದರು. ಆ ಸಂದರ್ಭದಲ್ಲಿ ಸಮಯಾವಕಾಶ ಸಿಗದ ಕಾರಣ ಈಗ ಭೇಟಿ ನೀಡಿದ್ದರು ಎನ್ನಲಾಗಿದೆ.

ಬಿ.ವೈ.ರಾಘವೇಂದ್ರ, ಸಂಸದೆ ಶೋಭಾ ಕರಂದ್ಲಾಜೆ, ಬೈಂದೂರು ಶಾಸಕ ಸುಕುಮಾರ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಡಿ.ಎನ್‌.ಜೀವರಾಜ್‌,ಜಿಪಂ ಸದಸ್ಯ ಎಸ್‌.ಎನ್‌.ರಾಮಸ್ವಾಮಿ, ತಾಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಎಂ.ಕೆ.ಕಿರಣ್‌ ಇತರರು ಇದ್ದರು. ಬಂದ ಎಲ್ಲ ಅತಿಥಿಗಳಿಗೆ ಮಠದಲ್ಲಿ ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು.
ಚುನಾವಣೆಗೂ ಮುಂಚೆ ಕ್ಷೇತ್ರಕ್ಕೆ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ, ವಿಧಾನಸಭಾ ಸ್ಪೀಕರ್‌ ರಮೇಶ್‌ ಕುಮಾರ್‌ ಮುಂತಾದವರು ಇಲ್ಲಿಗೆ ಭೇಟಿ ನೀಡಿದ್ದರು.


Trending videos

Back to Top