CONNECT WITH US  

ಮಠ, ಮಂದಿರಗಳು ಸೇವಾ ಕೇಂದ್ರಗಳಿದ್ದಂತೆ

ಮಂತ್ರಾಲಯದಲ್ಲಿ ಶ್ರೀ ಸುಜಯೀಂದ್ರ ಆರೋಗ್ಯ ಶಾಲೆ ಉದ್ಘಾಟಿಸಿದ ಅಮಿತ್‌ ಶಾ

ರಾಯಚೂರು: ಮಠ-ಮಂದಿರಗಳು ಕೇವಲ ಧಾರ್ಮಿಕ ಕೇಂದ್ರಗಳಾಗಿ ಉಳಿಯದೆ, ಸಾಮಾಜಿಕ ಹೊಣೆಗಾರಿಕೆ ನಿರ್ವಹಿಸುತ್ತ ಸೇವಾ ಕೇಂದ್ರಗಳಂತೆ ಕಾರ್ಯ ನಿರ್ವಹಿಸುತ್ತಿವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅಭಿಪ್ರಾಯಪಟ್ಟರು.

ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠದಿಂದ ಆಧುನೀಕರಣಗೊಂಡ ಶ್ರೀ ಸುಜಯೀಂದ್ರ ಆರೋಗ್ಯ ಶಾಲೆಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು. 

ಮಠಕ್ಕೆ ಬರುವ ಲಕ್ಷಾಂತರ ಭಕ್ತರಿಗೆ ಹಾಗೂ ಸುತ್ತಲಿನ ಗ್ರಾಮಸ್ಥರಿಗೆ ಈ ಆಸ್ಪತ್ರೆ ವರವಾಗಲಿದೆ. ಮಂತ್ರಾಲಯಕ್ಕೆ ಬರುವ ಲಕ್ಷಾಂತರ ಭಕ್ತರಿಗೆ ಇದು ರಾಯರ ಆಶೀರ್ವಾದ ರೂಪವಾಗಲಿದೆ. ಇಂಥ ಕಾರ್ಯಕ್ಕೆ ಮುಂದಾದ ಮಠದ ಪೀಠಾ ಧಿಪತಿಗಳಿಗೆ ನಾನು ಹೃದಯದಿಂದ ಧನ್ಯವಾದ ಅರ್ಪಿಸುತ್ತೇನೆ ಎಂದರು. ಮಠದ ಪಂಡಿತರಾದ ವಿದ್ವಾನ್‌ ರಾಜಾ ಎಸ್‌.ಗಿರಿಯಾಚಾರ್ಯ, ಮಠದ ವ್ಯವಸ್ಥಾಪಕ ಎಸ್‌.ಕೆ. ಶ್ರೀನಿವಾಸರಾವ್‌, ಶಾಸಕ ಅರವಿಂದ ಲಿಂಬಾವಳಿ ಸೇರಿ ಮಠದ ಅ ಧಿಕಾರಿ, ಸಿಬ್ಬಂದಿ, ಭಕ್ತರು ಪಾಲ್ಗೊಂಡಿದ್ದರು.

ರಾಯರ ದರ್ಶನ ಪಡೆದ ಅಮಿತ್‌ ಶಾ:
ಶನಿವಾರ ಮಂತ್ರಾಲಯಕ್ಕೆ ಆಗಮಿಸಿದ ಶಾ, ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಭೇಟಿ ನೀಡಿ, ದರ್ಶನಾಶೀರ್ವಾದ ಪಡೆದರು. ಮಂತ್ರಾಲಯದಲ್ಲಿ ಮೂರು ದಿನಗಳ ಕಾಲ ನಡೆಯುತ್ತಿರುವ ಆರ್‌ಎಸ್‌ಎಸ್‌ನ ಅಖೀಲ ಭಾರತೀಯ ಸಮನ್ವಯ ಬೈಠಕ್‌ನಲ್ಲಿ ಪಾಲ್ಗೊಂಡಿರುವ ಅವರು, ಮಠ ಹಮ್ಮಿಕೊಂಡ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಮೊದಲಿಗೆ ಸುಜಯೀಂದ್ರ ಆರೋಗ್ಯಶಾಲೆ ಉದ್ಘಾಟಿಸಿದರು. 

ನಂತರ, ಗೋಶಾಲೆಗಳಿಗೆ ಭೇಟಿ ನೀಡಿ, ಗೋವುಗಳಿಗೆ ಮೇವು ಹಾಗೂ ಹಣ್ಣು ವಿತರಿಸಿದರು. ಗೋವುಗಳ ಸಂರಕ್ಷಣೆ ಹಾಗೂ ಗೋತಳಿಯ ಮಾಹಿತಿ ಪಡೆದರು. ಅಲ್ಲಿಂದ ನೇರವಾಗಿ ಮಂಚಾಲಮ್ಮದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ನಂತರ ರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನದ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು. ಮಠದ ಪೀಠಾ ಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಅಮಿತ್‌ ಶಾ ಅವರನ್ನು ಗೌರವಿಸಿದರು.

ಆಸ್ಪತ್ರೆಯನ್ನು ಅತ್ಯಾಧುನಿಕವಾಗಿ ನವೀಕರಣ ಮಾಡಲಾಗಿದೆ. ಮಠಕ್ಕೆ ಬರುವ ಭಕ್ತರಿಗೆ ಹಾಗೂ ಸುತ್ತಲಿನ ಗ್ರಾಮಗಳ ಜನರಿಗೆ ಉಚಿತ ಆರೋಗ್ಯ ಸೇವೆ ನೀಡಬೇಕು ಎನ್ನುವ ಮಹದಾಶಯದೊಂದಿಗೆ ಉಚಿತ ಚಿಕಿತ್ಸೆ ವ್ಯವಸ್ಥೆ ಆರಂಭಿಸಲಾಗಿದೆ.
- ಶ್ರೀ ಸುಬುಧೇಂದ್ರ ತೀರ್ಥರು, ಮಠದ ಪೀಠಾಧಿ ಪತಿ.


Trending videos

Back to Top