CONNECT WITH US  

ಗ್ರಾಪಂ ಅನಕ್ಷರಸ್ಥ ಸದಸ್ಯರಿಗೆ ಅಕ್ಷರ ಕಲಿಕೆ!

ರಾಜ್ಯದ 6,022 ಗ್ರಾಪಂಗಳಲ್ಲಿ 11,200 ಸದಸ್ಯರು ಅನಕ್ಷರಸ್ಥರು 

ಸಾಂದರ್ಭಿಕ ಚಿತ್ರ

ಬೆಂಗಳೂರು: ಆಡಳಿತ ವಿಕೇಂದ್ರೀಕರಣ ವ್ಯವಸ್ಥೆಯ ಕೊನೆಯ ಕೊಂಡಿಯಾಗಿರುವ ಗ್ರಾಮ ಪಂಚಾಯಿತಿಗಳ ಅನಕ್ಷರಸ್ಥ ಜನ ಪ್ರತಿನಿಧಿಗಳಿಗೆ ಸದ್ಯದಲ್ಲೇ ಅಕ್ಷರಾಭ್ಯಾಸ ಭಾಗ್ಯ ಸಿಗಲಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಗ್ರಾಪಂನಲ್ಲಿರುವ ಅನಕ್ಷರಸ್ಥ ಜನ ಪ್ರತಿನಿಧಿಗಳ ಪಟ್ಟಿ ಮಾಡಿದೆ. ರಾಜ್ಯದ 6,022 ಗ್ರಾಪಂಗಳಲ್ಲಿ 11,200 ಜನ ಪ್ರತಿನಿಧಿಗಳು ಅನಕ್ಷರಸ್ಥರಾಗಿರುವುದು ತಿಳಿದುಬಂದಿದೆ. ಆರ್‌ಡಿಪಿಆರ್‌ ಇಲಾಖೆಯು ಈ ಮಾಹಿತಿಯನ್ನು ಲೋಕಶಿಕ್ಷಣ ನಿರ್ದೇಶನಾಲಯಕ್ಕೆ ಸಲ್ಲಿಸಿದೆ. 

ಈ ಹಿನ್ನೆಲೆಯಲ್ಲಿ ರಾಜ್ಯದ ಗ್ರಾಪಂ ಜನ ಪ್ರತಿನಿಧಿಗಳನ್ನು ಅಕ್ಷರಸ್ಥರನ್ನಾಗಿಸಲು ನಿರ್ದೇಶನಾಲಯವು ಇದೇ ಮೊದಲ ಬಾರಿಗೆ ಕಾರ್ಯಯೋಜನೆ ಸಿದ್ಧಪಡಿಸಿದೆ. 11,200 ಅನಕ್ಷರಸ್ಥ ಜನಪ್ರತಿನಿಧಿಗಳಲ್ಲಿ ಗ್ರಾಮ ಪಂಚಾಯತಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಸೇರಿದ್ದಾರೆ. ಬೀದರ್‌,
ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ಗದಗ, ವಿಜಯಪುರ, ದಾವಣಗೆರೆ, ಚಿಕ್ಕಬಳ್ಳಾಪುರ, ಕೋಲಾರ, ಹಾವೇರಿ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳ ಗ್ರಾಪಂನಲ್ಲಿ ಅನಕ್ಷರಸ್ಥ ಪ್ರತಿನಿಧಿಗಳು ಇರುವುದು ವರದಿಯಲ್ಲಿ ಬಹಿರಂಗಗೊಂಡಿದೆ.

ಲೋಕಶಿಕ್ಷಣ ನಿರ್ದೇಶನಾಲಯದಿಂದ ಅನಕ್ಷರಸ್ಥರಿಗೆ ಎರಡು ರೀತಿಯಲ್ಲಿ ಕಾರ್ಯಕ್ರಮ ನಡೆಸಲಾಗುತ್ತದೆ. ಪ್ರತಿ ದಿನ ಒಂದು ಅಥವಾ ಎರಡು ಗಂಟೆಯಂತೆ ಮೂರ್‍ನಾಲ್ಕು ತಿಂಗಳ ಕಾರ್ಯಕ್ರಮ ಆಯೋಜಿಸುತ್ತಾರೆ. ಈ ಕಾರ್ಯಕ್ರಮದಲ್ಲಿ ಪೂರ್ಣವಾಗಿ ಭಾಗವಹಿಸಿದವರಿಗೆ ಎರಡನೇ ಹಂತದ ತರಬೇತಿ ನೀಡಲಾಗುತ್ತದೆ. ಆದರೆ, ಗ್ರಾಪಂನ ಅನಕ್ಷರಸ್ಥ ಅಧ್ಯಕ್ಷರು, ಉಪಾಧ್ಯಕ್ಷ ಹಾಗೂ ಸದಸ್ಯರು ನಿತ್ಯ ಕಲಿಕಾ ಕೇಂದ್ರ ಹೋಗಿ ಅಕ್ಷರಾಭ್ಯಾಸ ಮಾಡುವುದು ಕಷ್ಟ.. ಹೀಗಾಗಿ ಒಂದು ಅಥವಾ 2 ತಿಂಗಳ ಶಿಬಿರ ಮಾಡಿ ಶಿಕ್ಷಣ ನೀಡಲು ಅಧಿಕಾರಿಗಳು ಯೋಜನೆ ರೂಪಿಸುತ್ತಿದ್ದಾರೆ.

ಒಂದೊಂದು ಗ್ರಾಪಂಗಳಲ್ಲಿ 2 ಅಥವಾ ಮೂರು ಅನಕ್ಷರಸ್ಥ ಪ್ರತಿನಿಧಿಗಳು ಇರುವುದರಿಂದ ಹೋಬಳಿ ಅಥವಾ ತಾಲೂಕು ಮಟ್ಟದಲ್ಲಿ 1 ತಿಂಗಳ ಶಿಬಿರ ನಡೆಸಲಾಗುತ್ತದೆ. ಬೆಳಗ್ಗೆ 10ರಿಂದ ಸಂಜೆ 5ರ ತನಕ ಕನ್ನಡ ಅಕ್ಷರ ಮಾಲೆ, ಪದಗಳ ರಚನೆ, ವಾಕ್ಯ ರಚನೆಯ ಪಾಠ ಹೇಳಿಕೊಡಲಾಗುತ್ತದೆ ಎಂದು
ಲೋಕಶಿಕ್ಷಣ ನಿರ್ದೇಶನಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸೆಪ್ಟೆಂಬರ್‌ ಕೊನೆಯ ವಾರ ಅಥವಾ ಅಕ್ಟೋಬರ್‌ ಮೊದಲ ವಾರದಲ್ಲಿ ಈ
ಕಾರ್ಯಕ್ರಮ ಆರಂಭವಾಗಲಿದೆ.

ಕೊಳೆಗೇರಿ ಅನಕ್ಷರಸ್ಥರಿಗೆ ಶಿಕ್ಷಣ
ರಾಜ್ಯದಲ್ಲಿ 2 ಸಾವಿರಕ್ಕೂ ಅಧಿಕ ಕೊಳೆಗೇರಿಗಳಿವೆ. ಕೊಳೆಗೇರಿ ಅಭಿವೃದ್ಧಿ ನಿಗಮದಿಂದ ನಿರ್ದೇಶನಾಲಯಕ್ಕೆ ನೀಡಿರುವ ವರದಿಯ ಪ್ರಕಾರ ರಾಜ್ಯದ ಕೊಳೆಗೇರಿಗಳಲ್ಲಿ 8 ಲಕ್ಷ ಅನಕ್ಷರಸ್ಥರಿದ್ದಾರೆ. ಅವರಿಗೆ ಮಹಾನಗರ ಪಾಲಿಕೆ, ನಗರ ಪಾಲಿಕೆ, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತಿಗಳ ಸಹಭಾಗಿತ್ವದಲ್ಲಿ ಕಾರ್ಯಕ್ರಮ ರೂಪಿಸಲು ನಿರ್ದೇಶನದ ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ. ಕೊಳೆಗೇರಿಗಳಲ್ಲಿ ಇರುವ ಶಾಲೆ ಅಥವಾ ಕಲಿಕಾ ಕೇಂದ್ರಗಳನ್ನು ಗುರುತಿಸಿ, ಅಲ್ಲಿಯೇ ಶಿಕ್ಷಣ ನೀಡಲು ಬೇಕಾದ ವ್ಯವಸ್ಥೆ ನಿರ್ದೇಶನಾಲಯದಿಂದ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ನಿರ್ದೇಶನಾಲಯದ ಅಧಿಕಾರಿಗಳು, ಕೊಳೆಗೇರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳೊಂದಿಗೂ ಮಾತುಕತೆ ನಡೆಸಿದ್ದಾರೆ.

ಗ್ರಾಪಂ ಜನಪ್ರತಿನಿಧಿಗಳಲ್ಲಿ ಅನಕ್ಷರಸ್ಥರು ಎಷ್ಟಿದ್ದಾರೆ ಎಂಬುದರ ಪೂರ್ಣ ಮಾಹಿತಿ ಸಿಕ್ಕಿದೆ. ಇದರ ಆಧಾರದಲ್ಲಿ ಕಾರ್ಯಕ್ರಮ ರೂಪಿಸಿದ್ದೇವೆ. ಹೋಬಳಿ ಅಥವಾ ತಾಲೂಕಿನಲ್ಲಿ ಒಂದು ತಿಂಗಳ ಶಿಬಿರ ಮಾಡಿ ಶಿಕ್ಷಣ ನೀಡುತ್ತೇವೆ. 
ಆರ್‌.ಎಸ್‌.ಪೆದ್ದಪ್ಪಯ್ಯ, ನಿರ್ದೇಶಕ, ಲೋಕಶಿಕ್ಷಣ ನಿರ್ದೇಶನಾಲಯ. 

ರಾಜು ಖಾರ್ವಿ ಕೊಡೇರಿ


Trending videos

Back to Top