CONNECT WITH US  

ಪುನರೂರು ಸೇವೆ ಅನುಕರಣೀಯ

ಮಂಗಳೂರು: ಸಮಾಜದ ಎಲ್ಲಾ ರಂಗಗಳಲ್ಲೂ ಸಂಘಟಕರಾಗಿ, ಪ್ರವರ್ತಕರಾಗಿ, ಪ್ರೋತ್ಸಾಹಕರಾಗಿ ಹರಿಕೃಷ್ಣ ಪುನರೂರು ಸಲ್ಲಿಸುತ್ತಿರುವ ಸೇವೆ, ನೀಡುತ್ತಿರುವ ಕೊಡುಗೆ ಅನುಕರಣೀಯವಾದುದು ಎಂದು ನಿಟ್ಟೆ ವಿವಿ ಕುಲಪತಿ ಡಾ.ಎಂ.ಶಾಂತಾರಾಮ ಶೆಟ್ಟಿ ಅವರು ಶ್ಲಾಘಿಸಿದರು.

ಕದ್ರಿಯ ನೃತ್ಯ ಭಾರತಿ ವತಿಯಿಂದ, ಹರಿಕೃಷ್ಣ ಪುನರೂರು ಜನ್ಮ ಅಮೃತ ಮಹೋತ್ಸವ-75 ಹರಿನಮನ ಎಂಬ ಹರಿಕೃಷ್ಣ ಪುನರೂರು ಅಭಿನಂದನಾ ಕಾರ್ಯಕ್ರಮ ಶುಕ್ರವಾರ ನಗರದ ಪುರಭವನದಲ್ಲಿ ಜರಗಿತು. ಅಭಿನಂದನಾ ಭಾಷಣಗೈದ ಡಾ.ಶೆಟ್ಟಿ ಅವರು ಆರೋಗ್ಯವಂತ ಸಮಾಜದ ಸ್ಥಾಪನೆಗೆ ಪುನರೂರು ಅವರಂತಹ ಸಾಧಕರು ಕಾರಣರಾಗುತ್ತಾರೆ ಎಂದರು.

ಸಾಹಿತ್ಯ, ಲಲಿತಕಲೆಗಳು, ಉದ್ಯಮ, ಸಮಾಜಸೇವೆ, ದಾನ, ಧಾರ್ಮಿಕ, ಶಿಕ್ಷಣ ಸಹಿತ ಎಲ್ಲಾ ಕ್ಷೇತ್ರಗಳಿಗೂ ಪುನರೂರು ಅವರು ಕ್ರಿಯಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ ಎಂದು ಮುಖ್ಯ ಅತಿಥಿಯಾಗಿದ್ದ ಆಳ್ವಾಸ್‌ ಶಿಕ್ಷಣ ಟ್ರಸ್ಟ್‌ನ ಅಧ್ಯಕ್ಷ ಡಾ.ಎಂ.ಮೋಹನ್‌ ಆಳ್ವ ಹೇಳಿದರು. ಧರ್ಮಸ್ಥಳದ ಡಿ. ಹಷೇìಂದ್ರಕುಮಾರ್‌ ಅವರು ಹರಿಕೃಷ್ಣ ಪುನರೂರು-ಉಷಾರಾಣಿ ದಂಪತಿಯನ್ನು ಸಮ್ಮಾನಿಸಿದರು. ಪುನರೂರು ಅವರಿಂದ ಸಮಾಜಕ್ಕೆ ಮತ್ತಷ್ಟು ಸೇವೆ ದೊರೆಯುವಂತಾಗಲೆಂದು ಹಾರೈಸಿದರು.

ಜಯಂತಿ ಲಕ್ಷ್ಮೀನಾರಾಯಣ ಆಸ್ರಣ್ಣ, ಕರ್ಣಾಟಕ ಬ್ಯಾಂಕಿನ ಅಧ್ಯಕ್ಷ ಪಿ. ಜಯರಾಮ ಭಟ್‌,  ಮಾಜಿ ಸಚಿವ ಜೆ. ಕೃಷ್ಣ ಪಾಲೆಮಾರ್‌, ಶ್ರೀಪತಿ ಭಟ್‌ ಮೂಡಬಿದಿರೆ, ಲಕ್ಷ್ಮೀರಾವ್‌ ಆರೂರು, ಪ್ರಭಾ ಸುವರ್ಣ ಮುಂಬಯಿ ಅವರು ಅತಿಥಿಗಳಾಗಿದ್ದರು. ಶಾರದಾ ವಿದ್ಯಾಲಯ ಸಮೂಹದ ಅಧ್ಯಕ್ಷ ಪ್ರೊ | ಎಂ. ಬಿ. ಪುರಾಣಿಕ್‌ ಅಭಿನಂದನಾ ಭಾಷಣವಿತ್ತರು. ಸಲಹಾ ಸಮಿತಿ ಮತ್ತು ಸಮ್ಮಾನ ಸಮಿತಿಯ ಸದಸ್ಯರು ವೇದಿಕೆಯಲ್ಲಿದ್ದರು.

ನೃತ್ಯ ಭಾರತಿಯ ಸ್ಥಾಪಕಾಧ್ಯಕ್ಷೆ, ಗುರು ವಿದುಷಿ ಗೀತಾ ಸರಳಾಯ ಅವರು ಪ್ರಸ್ತಾವನೆಗೈದರು. ಸಾಧಕರನ್ನು ನಿರಂತರವಾಗಿ ಸಮ್ಮಾನಿಸುತ್ತಿರುವ ಪುನರೂರು ಅವರನ್ನು ಸಮ್ಮಾನಿಸುವುದು ತಮ್ಮ ಸಂಸ್ಥೆಯ ಪಾಲಿಗೆ ಹೆಮ್ಮೆಯ ಸಂಗತಿಯಾಗಿದೆ ಎಂದರು. ಸುಧಾಕರ ರಾವ್‌ ಪೇಜಾವರ್‌ ಸ್ವಾಗತಿಸಿದರು. ನೃತ್ಯ ಭಾರತಿಯ ವಿದುಷಿ ರಶ್ಮಿ ಚಿದಾನಂದ್‌ ಸಮ್ಮಾನಪತ್ರ ವಾಚಿಸಿದರು. ವಿದುಷಿ ರಮ್ಯಚಂದ್ರ ವಂದಿಸಿದರು.
 
ತುಳುನಾಡ ಕರ್ಣ ಬಿರುದು: ಹರಿಕೃಷ್ಣ ಪುನರೂರು ಅವರಿಗೆ ನೃತ್ಯ ಭಾರತಿ ವತಿಯಿಂದ ತುಳುನಾಡ ಕರ್ಣ ಬಿರುದನ್ನು ಪ್ರಶಸ್ತಿಯೊಂದಿಗೆ ನೀಡಿ ಸಮ್ಮಾನಿಸಲಾಯಿತು. ಈ ವೇಳೆ ಮಾತನಾಡಿದ ಹರಿಕೃಷ್ಣ ಪುನರೂರು ಅವರು, ಸಮಾಜದ ಸರ್ವತೋಮುಖ ಏಳಿಗೆಯ ಸೇವಾಬದ್ಧತೆಯನ್ನು ಗುರುಹಿರಿಯರು ಸ್ನೇಹಿತರ ಮಾರ್ಗದರ್ಶನದಿಂದ ರೂಡಿಸಿಕೊಂಡಿದ್ದಾಗಿ ಹೇಳಿದರು. ಶರವು ರಾಘವೇಂದ್ರ ಶಾಸಿ ಅಧ್ಯಕ್ಷತೆ ವಹಿಸಿದ್ದರು.

Trending videos

Back to Top