CONNECT WITH US  

ಮೇಕೆದಾಟು ನಮ್ಮ ಹಕ್ಕು, ನಿಲ್ಲಿಸುವ ಪ್ರಶ್ನೆಯೇ ಇಲ್ಲ

ಬೆಂಗಳೂರು: "ಮೇಕೆದಾಟು ಯೋಜನೆ ಕಾರ್ಯಗತ ಮಾಡುವುದು ನಮ್ಮ ಹಕ್ಕು. ಯಾವುದೇ ಕಾರಣಕ್ಕೂ ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಹಾಗೆಂದು ತಮಿಳುನಾಡು ಜತೆ ಸಂಘರ್ಷಕ್ಕೂ ಇಳಿಯುವುದಿಲ್ಲ'' ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ರಾಜ್ಯದ ನೀರಾವರಿ ಯೋಜನೆಗಳ ಕುರಿತು ಮಾಜಿ ಮುಖ್ಯಮಂತ್ರಿಗಳು ಹಾಗೂ ನೀರಾವರಿ ಸಚಿವರ ಜತೆ ಸಭೆ ನಡೆದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 

""ಮೇಕೆದಾಟು ಯೋಜನೆ ನೀರಾವರಿಗಾಗಿ ಮಾಡುತ್ತಿಲ್ಲ. ಕೇವಲ ವಿದ್ಯುತ್‌ ಉತ್ಪಾದನೆಗಾಗಿ ಮಾತ್ರ ಯೋಜನೆ ರೂಪಿಸಲಾಗಿದೆ'' ಎಂದು ತಿಳಿಸಿದರು.

""ತಮಿಳುನಾಡು ಸರ್ಕಾರ ಯಾವ ಕಾರಣಕ್ಕೆ ಆಕ್ಷೇಪ ಎತ್ತಿದೆ ಎಂಬುದೇ ನನಗೆ ಅರ್ಥವಾಗುತ್ತಿಲ್ಲ. ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿಯವರಿಗೆ ನಾನೇ ಪತ್ರ ಬರೆದು ಮನವಿ ಮಾಡಿದ್ದೇನೆ. ಯೋಜನೆಯ ವಿವರ ಅವರು ಇರುವ ಕಡೆ ಹೋಗಿ ನೀಡಲು ಸಿದ್ಧ. ಕೂಲಂಕಶವಾಗಿ ಅವರೇ ಪರಿಶೀಲನೆ ನಡೆಸಲಿ'' ಎಂದರು.

"ಕೇಂದ್ರ ಜಲ ಆಯೋಗದ ಅನುಮತಿ ಮೇರೆಗೆ ಮೇಕೆದಾಟು ಯೋಜನೆಗೆ ಎರಡನೇ ಹಂತದ ಕಾರ್ಯಯೋಜನೆ ವರದಿ ಸಿದ್ಧಪಡಿಸುತ್ತಿದ್ದೇವೆ. ಯೋಜನೆ ಮುಂದುವರಿಯಲಿದೆ. ನಾವು ತುಂಬಾ ಮುಂದೆ ಹೋಗಿದ್ದೇವೆ. ಕೇಂದ್ರ ಸರ್ಕಾರಕ್ಕೂ ಮನವಿ ಮಾಡಿದ್ದು, ಎರಡೂ ರಾಜ್ಯಗಳ ಮುಖ್ಯಮಂತ್ರಿಗಳನ್ನು ಕರೆದು ಚರ್ಚಿಸಿ ಎಂದು ಹೇಳಿದ್ದೇನೆ'' ಎಂದರು.

ಕಾನೂನು ಹೋರಾಟಕ್ಕೆ ಸಿದ್ಧ:
"ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿರುವ ಆಕ್ಷೇಪ ಕುರಿತು ರಾಜ್ಯದ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಕಾನೂನು ಹೋರಾಟ ನಡೆಸಲು ನಮ್ಮ ರಾಜ್ಯದ ಕಾನೂನು ತಜ್ಞರ ತಂಡಕ್ಕೆ ತಿಳಿಸಲಾಗಿದೆ. ಮೇಕೆದಾಟು ಯೋಜನೆಗೆ 4,996 ಹೆಕ್ಟೇರ್‌ ಜಮೀನು ಅವಶ್ಯಕತೆ ಇದ್ದು ಆ ಪೈಕಿ 280 ಹೆಕ್ಟೇರ್‌ ಕಂದಾಯ ಜಮೀನಾಗಿದೆ. 500 ರಿಂದ 500 ಎಕರೆ ರೈತರ ಜಮೀನಿದೆ. ಉಳಿದಂತೆ ಅರಣ್ಯ, ಗುಡ್ಡ ಸೇರಿದೆ'' ಎಂದು ಸಚಿವ ಡಿಕೆಶಿ ತಿಳಿಸಿದರು.

ಕಾವೇರಿ, ನಮ್ಮ ಕೈಲಿ ಏನೂ ಇಲ್ಲ:
ಇದೇ ವೇಳೆ, "ಕಾವೇರಿ ನಿರ್ವಹಣಾ ಮಂಡಳಿ ರಚನೆಯಾಗಿದೆ. ಹೀಗಾಗಿ, ನಮ್ಮ ಕೈಲಿ ಏನೂ ಇರುವುದಿಲ್ಲ. ನಾವು ಯಾವುದೇ ರೀತಿಯಲ್ಲೂ ದುರ್ಬಳಕೆ ಮಾಡಿಕೊಳ್ಳಲು ಬರುವುದಿಲ್ಲ'' ಎಂದು ತಿಳಿಸಿದರು.

"ಕಾವೇರಿ ತೀರ್ಪು ಪ್ರಕಾರ ನಾವು ತಮಿಳುನಾಡಿಗೆ 177.25 ಟಿಎಂಸಿ ನೀರು ವಾರ್ಷಿಕ ಬಿಡುಗಡೆ ಮಾಡಬೇಕು. ಆದರೆ, ಈ ವರ್ಷ 395 ಟಿಎಂಸಿ ನೀರು ಬಿಡುಗಡೆ ಮಾಡಿದ್ದೇವೆ. ಆ ಪೈಕಿ ತಮಿಳುನಾಡು ಕೇವಲ 150 ಟಿಎಂಸಿ ನೀರು ಬಳಕೆ ಮಾಡಿಕೊಂಡಿದೆ. ಉಳಿದದ್ದು ಸಮುದ್ರಕ್ಕೆ ಹರಿದು ಹೋಗಿದೆ. ಸಮುದ್ರಕ್ಕೆ ಹರಿದು ಹೋಗುವ ನೀರಿನಲ್ಲಿ 641ಟಿಎಂಸಿ ಹಿಡಿದಿಟ್ಟುಕೊಂಡು ಮೊದಲ ಹಂತದಲ್ಲಿ 250 ಮೆಗಾವ್ಯಾಟ್‌, ಎರಡನೇ ಹಂತದಲ್ಲಿ 200 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದಿಸುವುದು ನಮ್ಮ ಯೋಜನೆಯ ಉದ್ದೇಶ. ನಂತರ ಆ ನೀರು ತಮಿಳುನಾಡಿಗೇ ಹೋಗಲಿದೆ. ಯೋಜನೆಯಿಂದ ಕರ್ನಾಟಕಕ್ಕಿಂತ ತಮಿಳುನಾಡಿಗೆ ಹೆಚ್ಚು ಅನುಕೂಲ'' ಎಂದು ಪ್ರತಿಪಾದಿಸಿದರು.

"ರಾಜ್ಯದ ಕಾವೇರಿ, ಕೃಷ್ಣ, ಮಹದಾಯಿ ವಿಚಾರದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಜಿ ಮುಖ್ಯಮಂತ್ರಿಗಳು, ಮಾಜಿ ನೀರಾವರಿ ಸಚಿವರು ಸೂಕ್ತ ಸಲಹೆ ಸೂಚನೆ ನೀಡಿದ್ದಾರೆ. ರಾಜ್ಯ ಸರ್ಕಾರ ಆ ಪ್ರಕಾರ ನಡೆಯಲಿದೆ'' ಎಂದು ತಿಳಿಸಿದ ಡಿ.ಕೆ.ಶಿವಕುಮಾರ್‌, ""ಕೃಷ್ಣಾ  ನ್ಯಾಯಾಧೀಕರಣ ತೀರ್ಪು ವಿಚಾರದಲ್ಲಿ ಅಧಿಸೂಚನೆಗೆ ಸಂಬಂಧಿಸಿದಂತೆ ಕೆಲವು ತಡೆ ಇದೆ. ಅದನ್ನು ತೆರವುಗೊಳಿಸುವಂತೆ ಕಾನೂನು ತಂಡಕ್ಕೆ ತಿಳಿಸಲಾಗಿದೆ. ಮಹದಾಯಿ ವಿಚಾರದಲ್ಲಿ  ಇನ್ನೂ ನಮಗೆ ಹೆಚ್ಚುವರಿ ನೀರು ಬೇಕು ಎಂದು ಅರ್ಜಿ ಸಲ್ಲಿಕೆ ಜತೆಗೆ  ಈಗಾಗಲೇ ಹೊರಬಿದ್ದಿರುವ ತೀರ್ಪಿನ ಅಧಿಸೂಚನೆ ಹೊರಡಿಸಿದ ತಕ್ಷಣ  ಆ ಭಾಗದ ಜನರಿಗೆ ಅನುಕೂಲ ಕಲ್ಪಿಸಲು ಕಾಮಗಾರಿ ಪ್ರಾರಂಭಿಸಲಾಗುವುದು. ಒಟ್ಟಾರೆ ರಾಜ್ಯದ ರೈತರು ಹಾಗೂ ಜನರ ಹಿತ ಕಾಪಾಡಲು ನಾವು ಎಲ್ಲ ರೀತಿಯ ಕ್ರಮ ಕೈಗೊಳ್ಳಲಿದ್ದೇವೆ'' ಎಂದರು.

ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಜಗದೀಶ್‌ ಶೆಟ್ಟರ್‌, ಮಾಜಿ ನೀರಾವರಿ ಸಚಿವರಾದ ಬಸವರಾಜ ಬೊಮ್ಮಾಯಿ, ಎಂ.ಬಿ.ಪಾಟೀಲ್‌, ಅಲ್ಲಂ ವೀರಭದ್ರಪ್ಪ, ಕೆ.ಎಸ್‌. ಈಶ್ವರಪ್ಪ ಪಾಲ್ಗೊಂಡಿದ್ದರು.

ಮಾಜಿ ಸಿಎಂಗಳು ಗೈರು
ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಎಸ್‌.ಎಂ.ಕೃಷ್ಣ, ಡಿ.ವಿ.ಸದಾನಂದಗೌಡ, ವೀರಪ್ಪಮೊಯಿಲಿ, ಬಿ.ಎಸ್‌.ಯಡಿಯೂರಪ್ಪ ಗೈರು ಹಾಜರಾಗಿದ್ದರು. ಪೂರ್ವ ನಿಗದಿ ಕಾರ್ಯಕ್ರಮ ಹಿನ್ನೆಲೆಯಲ್ಲಿ ಅವರು ಬರಲಿಲ್ಲ ಎಂದು ಸಚಿವ ಡಿ.ಕೆ.ಶಿವಕುಮಾರ್‌ ಹೇಳಿದರು.

ತ.ನಾಡು ವಿಧಾನಸಭೆ ನಿರ್ಣಯ
ಮೇಕೆದಾಟು ಅಣೆಕಟ್ಟು ಸಂಬಂಧ ವಿಸ್ತೃತ ಯೋಜನಾ ವರದಿ ಸಲ್ಲಿಸುವಂತೆ ಕರ್ನಾಟಕ ಸರ್ಕಾರಕ್ಕೆ ನೀಡಿದ ಅನುಮತಿಯನ್ನು ವಾಪಸ್‌ ಪಡೆಯುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವ ಒಕ್ಕೊರಲಿನ ನಿರ್ಣಯವನ್ನು ತಮಿಳುನಾಡು ವಿಧಾನಸಭೆ ಕೈಗೊಂಡಿದೆ. ಗುರುವಾರ ಕರೆಯಲಾಗಿದ್ದ ವಿಶೇಷ ಅಧಿವೇಶನದಲ್ಲಿ ಸಿಎಂ ಪಳನಿಸ್ವಾಮಿ ಅವರು ಈ ನಿರ್ಣಯವನ್ನು ಮಂಡಿಸಿದ್ದು, ಅಲ್ಪಕಾಲದ ಚರ್ಚೆಯ ಬಳಿಕ ನಿರ್ಣಯಕ್ಕೆ ಅನುಮೋದನೆ ನೀಡಲಾಯಿತು. ಕೇಂದ್ರ ಜಲ ಸಂಪನ್ಮೂಲ ಸಚಿವಾಲಯವು ತತ್‌ಕ್ಷಣವೇ ಕರ್ನಾಟಕಕ್ಕೆ ನೀಡಿದ ಅನುಮತಿಯನ್ನು ವಾಪಸ್‌ ಪಡೆಯಬೇಕೆಂದು ನಿರ್ಣಯದಲ್ಲಿ ಕೋರಲಾಗಿದೆ. ಅಲ್ಲದೆ, ಕರ್ನಾಟಕ ಸರ್ಕಾರವು ತಮಿಳುನಾಡಿನ ಒಪ್ಪಿಗೆಯಿಲ್ಲದೆ ಯಾವ ಕಾರಣಕ್ಕೂ ಅಣೆಕಟ್ಟು ನಿರ್ಮಾಣ ಕಾರ್ಯ ಕೈಗೆತ್ತಿಕೊಳ್ಳಬಾರದು ಎಂಬುದನ್ನೂ ನಿರ್ಣಯದಲ್ಲಿ ಸೇರಿಸಲಾಗಿದೆ.

ಮೇಕೆದಾಟು ಹಿಂದಿನ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ. ಇದರಿಂದ ತಮಿಳುನಾಡಿಗೆ ಯಾವುದೇ ತೊಂದರೆ ಇಲ್ಲ. ಆದರೆ, ಆ ರಾಜ್ಯ ರಾಜಕೀಯ ಉದ್ದೇಶ ಇಟ್ಟುಕೊಂಡು ತಕರಾರು ತೆಗೆದಿದೆ. ಸುಪ್ರೀಂಕೋರ್ಟ್‌ ಹಾಗೂ ನ್ಯಾಯಮಂಡಳಿ ಆದೇಶಗಳು ನಮಗೆ ಪೂಕರವಾಗಿವೆ.
- ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ


Trending videos

Back to Top