CONNECT WITH US  

ಮೌನವಾಗಿ ಕುಳಿತ ಯಡಿಯೂರಪ್ಪ

ಬೆಂಗಳೂರು: ತಾವು ಮಾತನಾಡಿದ ಆಡಿಯೋ ಪ್ರಕರಣದ ಬಗ್ಗೆಯೇ ಸೋಮವಾರ ಇಡೀ ಸದನದಲ್ಲಿ ಚರ್ಚೆ ನಡೆಯುತ್ತಿದ್ದರೂ, ಪ್ರತಿಪಕ್ಷದ ನಾಯಕ ಯಡಿಯೂರಪ್ಪ ಎಲ್ಲವನ್ನೂ ಮೌನವಾಗಿ ಕುಳಿತು ಆಲಿಸಿದರು. ಆಡಿಯೋ ಪ್ರಕರಣದ ಬಗ್ಗೆ ಮಾತನಾಡುವಾಗ ಯಾರೂ ಕೂಡ ಯಾರ ಹೆಸರನ್ನೂ ಪ್ರಸ್ತಾಪಿಸದೇ ಮಾತನಾಡಿದರು. ಒಂದು ಹಂತದಲ್ಲಿ ಕೃಷ್ಣ ಬೈರೇಗೌಡ ಅವರು, ಪ್ರತಿಪಕ್ಷದ ನಾಯಕರು ಆಡಿಯೋದಲ್ಲಿ ಮಾತನಾಡಿರುವುದು ತಾವೇ ಎಂದು ಒಪ್ಪಿಕೊಂಡಿದ್ದಾರೆಂದು ಹೇಳಿದರು.ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಯಡಿಯೂರಪ್ಪ, ನಾನು ಒಪ್ಪಿಕೊಂಡಿದ್ದೇನೆ ಎನ್ನುವುದು ಹಿಂಪಡೆಯಬೇಕೆಂದು ಮನವಿ ಮಾಡಿದರು. ಅವರ ಮಾತಿಗೆ ಸ್ಪಂದಿಸಿದ ಸಚಿವ ಕೃಷ್ಣ ಬೈರೇಗೌಡ, ತಮ್ಮ ಮಾತನ್ನು ವಾಪಸ್‌ ಪಡೆದರು.

ಇನ್ನು ಬಿಜೆಪಿ ಸದಸ್ಯರು ಅಳೆದು ತೂಗಿ ಪ್ರಕರಣದಲ್ಲಿ ಎಲ್ಲಿಯೂ ಯಾರ ಹೆಸರಿಗೂ ಚ್ಯುತಿ ಬಾರದಂತೆ ಮಾತನಾಡಿ ತಮ್ಮ ನಾಯಕ ಹಾಗೂ ಸದಸ್ಯರ ರಕ್ಷಣೆ ಮಾಡುವ ಪ್ರಯತ್ನ ನಡೆಸಿದರು. ಕೆಲವು ಸದಸ್ಯರಿಗೆ ಜೆ.ಸಿ. ಮಾಧುಸ್ವಾಮಿ ಮಾತನಾಡಲು ಎದ್ದು ನಿಂತವರನ್ನು ಕುಳಿತುಕೊಳ್ಳುವಂತೆ ಸನ್ನೆ ಮಾಡಿ ಸೂಚಿಸುತ್ತಿದ್ದರು. ಅದಕ್ಕಿಂತ ಹೆಚ್ಚಾಗಿ ಇಡೀ ದಿನ ಯಡಿಯೂರಪ್ಪ ಮಾತನಾಡದೇ ಬೇರೆಯವರೇ ಪ್ರಕರಣದ ಬಗ್ಗೆ ವಾದ ಮಾಡಿ ಸಮರ್ಥಿಸಿಕೊಳ್ಳಲು ನಿರ್ಧರಿಸಿದ್ದರು.

ಯಡಿಯೂರಪ್ಪ ತರಾಟೆ: ಸರ್ಕಾರ ಎಸ್‌ಐಟಿ ಮೂಲಕ ತನಿಖೆ ನಡೆಸುವುದಾಗಿ ಘೋಷಿಸಿರುವುದನ್ನು ಬಲವಾಗಿ ವಿರೋಧಿಸದಿರುವುದಕ್ಕೆ ಯಡಿಯೂರಪ್ಪ ಪಕ್ಷದ ಸದಸ್ಯರನ್ನು ತರಾಟೆಗೆ ತೆಗೆದುಕೊಂಡರು. ಸ್ಪೀಕರ್‌ ತನಿಖೆಗೆ ಸೂಚಿಸಿ ಭೋಜನ ವಿರಾಮಕ್ಕೆ ಬಿಟ್ಟಾಗ ಎದುರಿಗೆ ಬಂದ ಬಸವರಾಜ ಬೊಮ್ಮಾಯಿ ಅವರಿಗೆ ಎಲ್ಲಿಗೆ ಹೋಗಿದ್ದೆ ಇಷ್ಟೊತ್ತು ಎಂದು ಗದರಿಸಿದರು. ಎಲ್ಲರೂ ಒಂದೇ ರೀತಿ ವಾದ ಮಾಡುವಂತೆ ತೀರ್ಮಾನಿಸಲಾಗಿತ್ತು. ಒಬ್ಬೊಬ್ಬರು ಒಂದೊಂದು ರೀತಿ ಮಾತನಾಡಿದ್ದೀರಿ ಎಂದು ಗದರಿದರು. ಜೆ.ಸಿ. ಮಾಧುಸ್ವಾಮಿ ಸಮಜಾಯಿಸಿ ನೀಡಿ, ಎಸ್‌ಐಟಿ ತನಿಖೆಗೆ ನಾವೆಲ್ಲರೂ ವಿರೋಧ ವ್ಯಕ್ತಪಡಿಸಿದ್ದೇವೆ. ಅದಕ್ಕೆ ಪಟ್ಟು ಹಿಡಿಯುತ್ತೇವೆ ಎಂದು ಸಮಾಧಾನ ಮಾಡುವ ಪ್ರಯತ್ನ ನಡೆಸಿದರು.


Trending videos

Back to Top