CONNECT WITH US  

ಎಸ್‌ಐಟಿ ಜಟಾಪಟಿ : ಕಲಾಪ ಮುಂದೂಡಿಕೆ

ಆಡಿಯೋ ಬಗ್ಗೆ ವಿಶೇಷ ತನಿಖಾ ತಂಡ ರಚನೆಗೆ ಮುಖ್ಯಮಂತ್ರಿ ಆದೇಶ

ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸಿಡಿಸಿದ 'ಆಪರೇಷನ್‌ ಕಮಲ ಆಡಿಯೋ ಬಾಂಬ್‌' ಪ್ರಕರಣದಲ್ಲಿ ವಿಧಾನ ಸಭಾಧ್ಯಕ್ಷರ ಹೆಸರು ತಳಕು ಹಾಕಿಕೊಂಡಿರುವ ವಿಚಾರ ಸೋಮವಾರ ವಿಧಾನಸಭೆಯಲ್ಲಿ ಚರ್ಚೆಗೆ ಬಂದಿದ್ದು, ಪ್ರಕರಣವನ್ನು ಸದನ ಗಂಭೀರವಾಗಿ ಪರಿಗಣಿಸಿದೆ. ವಿಧಾನ ಸಭಾಧ್ಯಕ್ಷ ರಮೇಶ್‌ಕುಮಾರ್‌ ಅವರ ಸೂಚನೆ ಬಳಿಕ ಪ್ರಕರಣವನ್ನು ಎಸ್‌ಐಟಿ ಮೂಲಕ ತನಿಖೆ ನಡೆಸುವುದಾಗಿ ಸರ್ಕಾರ ಘೋಷಿಸಿದೆ. ಆದರೆ, ನ್ಯಾಯಾಂಗ ಅಥವಾ ಸದನ ಸಮಿತಿ ಮೂಲಕ ಸಮಗ್ರ ತನಿಖೆಯಾಗಬೇಕೆಂದು ಬಿಜೆಪಿ ಪಟ್ಟು ಹಿಡಿದಿರುವುದರಿಂದ ಕಲಾಪ ಮಂಗಳವಾರಕ್ಕೆ ಮುಂದೂಡಲಾಯಿತು.

ಸೋಮವಾರ ಬೆಳಿಗ್ಗೆ 11.30ಕ್ಕೆ ಕಲಾಪ ಆರಂಭವಾದ ಕೂಡಲೇ ಸಭಾಧ್ಯಕ್ಷ ರಮೇಶ್‌ ಕುಮಾರ್‌, ''ಆಪರೇಷನ್‌ ಕಮಲ ನಡೆಸಲು ಮಾಡಿರುವ ಪ್ರಯತ್ನದ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಪತ್ರ ಬರೆದಿದ್ದು, ಅದರೊಂದಿಗೆ ಧ್ವನಿ ಮುದ್ರಿಕೆಯನ್ನೂ ಕಳುಹಿಸಿ ಕೊಟ್ಟಿದ್ದಾರೆ. ಅದರಲ್ಲಿ ನನ್ನ ಹೆಸರು ಪ್ರಸ್ತಾಪ ಮಾಡಿದ್ದಾರೆ. ಈ ಸದನದ ಸದಸ್ಯರಾದವರು ಮತ್ತೂಬ್ಬ ಸದಸ್ಯರ ಪುತ್ರನೊಂದಿಗೆ ಮಾತನಾಡಿದ್ದಾರೆ. ಆದರೆ, ಮಾತನಾಡಿರುವವರ ಧ್ವನಿ ಯಾರದ್ದೆಂದು ಗೊತ್ತಿಲ್ಲ. ನನ್ನ ದೌರ್ಭಾಗ್ಯಕ್ಕೆ ಶಾಸಕರ ರಾಜೀನಾಮೆ ಅಂಗೀಕರಿಸಲು ನಾನು 50 ಕೋಟಿ ಹಣ ಪಡೆದಿದ್ದೇನೆ ಎಂದು ಪ್ರಸ್ತಾಪಿಸಿದ್ದಾರೆ. ಇನ್ನೂ ದುಃಖದ ಸಂಗತಿ ಎಂದರೆ ಪ್ರಧಾನಿ ಹೆಸರು ಪ್ರಸ್ತಾಪ ಮಾಡಿದ್ದಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆತಂಕ ಪಡುವ ವಿಷಯ. ದೇಶದ ಭವಿಷ್ಯಕ್ಕೆ ಒಳ್ಳೆಯದಲ್ಲ,'' ಎಂದು ಬೇಸರ ವ್ಯಕ್ತಪಡಿಸಿದರು.

''ಶುಕ್ರವಾರ ಮಧ್ಯಾಹ್ನ 12.10ಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಪತ್ರ ಹಾಗೂ ಆಡಿಯೋ ಸಿಡಿ ಕಳುಹಿಸಿದ್ದರು. ಅಂದು 12.30ಕ್ಕೆ ಬಜೆಟ್ ಮಂಡನೆ ಇದ್ದಿದ್ದರಿಂದ, ನಾನು ಮೊದಲು ಬಜೆಟ್ ಮಂಡನೆಗೆ ಆದ್ಯತೆ ನೀಡಿದ್ದೆ, ಆಡಿಯೋದಲ್ಲಿನ ಸಂಭಾಷಣೆ ಕೇಳಿ ಎರಡು ದಿನ ನೋವಿನಲ್ಲಿಯೇ ಕಳೆದಿದ್ದೇನೆ,'' ಎಂದು ರಮೇಶ್‌ಕುಮಾರ್‌ ಹೇಳಿದರು.

ಹಕ್ಕುಚ್ಯುತಿ ವಾದ -ಪ್ರತಿವಾದ: ಸಭಾಧ್ಯಕ್ಷರು ಮಾತನಾಡುವ ವೇಳೆ ಮಧ್ಯಪ್ರವೇಶಿಸಿದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಸಚಿವ ಕೃಷ್ಣ ಬೈರೇಗೌಡ, 'ಸರ್ಕಾರಕ್ಕೆ ಸೂಚನೆ ಕೊಡುವ ಮೊದಲು ನಮ್ಮ ಮನವಿ ಆಲಿಸಬೇಕು. ಸಭಾಧ್ಯಕ್ಷರ ನಡತೆಯ ಬಗ್ಗೆ ಯಾರಾದರೂ ವ್ಯತಿರಿಕ್ತ ಹೇಳಿಕೆ ನೀಡಿದರೆ, ಅದು ಸದನದ ಹಕ್ಕುಚ್ಯುತಿಯಾಗುತ್ತದೆ. ಇದು ಕೇವಲ ಸ್ಪೀಕರ್‌ಗೆ ಮಾತ್ರ ಸಂಬಂಧಿಸಿದ್ದಲ್ಲ. ಸದಸ್ಯರ ಘನತೆಯನ್ನು ನಾವು ಎತ್ತಿ ಹಿಡಿಯಬೇಕು ಇಲ್ಲದಿದ್ದರೆ, ಸದನದಲ್ಲಿ ಇದ್ದು ಏನು ಪ್ರಯೋಜನ,' ಎಂದು ಪ್ರಶ್ನಿಸಿದರು. 

ಕೃಷ್ಣ ಬೈರೇಗೌಡ ಅವರ ವಾದವನ್ನು ಬಿಜೆಪಿಯ ಜೆ.ಸಿ. ಮಾಧುಸ್ವಾಮಿ ಆಕ್ಷೇಪಿಸಿ, 'ಯಾರೋ ಎಲ್ಲಿಯೋ ಮಾತನಾಡಿರುವ ವಿಷಯ ವನ್ನು ಇಷ್ಟೊಂದು ಗಂಭೀರವಾಗಿ ಚರ್ಚಿಸುವ ಅಗತ್ಯವಿಲ್ಲ. ಸದನದ ಹೊರಗಡೆ ಹಾದಿ ಬೀದಿಯಲ್ಲಿ ಮಾತ ನಾಡಿರುವುದನ್ನು ಸಭಾಧ್ಯಕ್ಷರು ಭಾವುಕರಾಗಿ ವೈಯಕ್ತಿಕವಾಗಿ ತೆಗೆದು ಕೊಳ್ಳಬಾರದು. ನಮಗೆ ನಿಮ್ಮ ಮೇಲೆ ಗೌರವ ಇದೆ. ಯಾರಾದರೂ ನಿಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರೆ, ತಪ್ಪಾಗಿದೆ ಬಿಟ್ಟು ಬಿಡಿ, ಇಂತದಕ್ಕೆಲ್ಲ ಸದನದಲ್ಲಿ ಅವಕಾಶ ಕೊಡಬೇಡಿ. ನಮ್ಮ ಬಳಿಯೂ ಸ್ಪೀಕರ್‌ ಬಗ್ಗೆ ಮಾತನಾಡಿರುವ ದಾಖಲೆ ಗಳಿವೆ,' ಎಂದು ತಿರುಗೇಟು ನೀಡಿದರು.

ಮಾಧುಸ್ವಾಮಿ ಅವರ ಮಾತಿಗೆ ಪ್ರತಿಕ್ರಿಯಿಸಿದ ಸ್ಪೀಕರ್‌ ರಮೇಶ್‌ ಕುಮಾರ್‌, 'ಸ್ಪೀಕರ್‌ಗೆ 50 ಕೋಟಿ ಕೊಟ್ಟಿದ್ದೇವೆ ಎಂದು ಆಡಿಯೋದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಇದು ನನಗೆ ವೈಯಕ್ತಿಕವಾಗಿ ಅನ್ವಯಿಸುವುದಾದರೆ, ನಾನು ಈ ಸ್ಥಾನದಲ್ಲಿ ಮುಂದು ವರೆಯಲು ಅರ್ಹನಾಗುವುದಿಲ್ಲ' ಎಂದರು. ಅದಕ್ಕೆ ಮಾಧುಸ್ವಾಮಿ ಆಕ್ಷೇಪಿಸಿ ಯಾರೋ ಎಲ್ಲಿಯೋ ಆರೋಪ ಮಾಡಿದ ತಕ್ಷಣ ಸ್ಥಾನ ತ್ಯಜಿಸಿ ಹೋಗುವುದಾದರೆ, ಮುಂದೆಯೂ ಅಂತಹ ಬೆಳವಣಿಗೆಳು ನಡೆಯಲು ಪುಷ್ಟಿ ನೀಡಿದಂತಾಗುತ್ತದೆ ಎಂದರು.

'ನನ್ನನ್ನು ಪ್ರವೋಕ್‌ ಮಾಡಿ ಯಾರಾದರೂ ಹೊರಗೆ ಕಳುಹಿಸುತ್ತೇನೆ ಎಂದುಕೊಂಡರೆ ಅದು ಸಾಧ್ಯವಿಲ್ಲ,' ಎಂದು ಸ್ಪೀಕರ್‌ ರಮೇಶ್‌ ಕುಮಾರ್‌ ಸ್ಪಷ್ಟಪಡಿಸಿದರು. ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಸಚಿವ ಕೃಷ್ಣಬೈರೇಗೌಡ, 'ಆಡಿಯೋದಲ್ಲಿ ಸ್ಪೀಕರ್‌ ಬಗ್ಗೆ ಮಾತನಾಡಿರುವವರು ಸಂವಿಧಾನದತ್ತ ಹುದ್ದೆಯಲ್ಲಿ ಇದ್ದಂತೆ ಕಾಣುತ್ತದೆ. ಸದನದ ಹೊರಗೆ ನಡೆದರೂ ಅದು ಸದಸ್ಯರ ಹಕ್ಕುಚ್ಯುತಿ ವ್ಯಾಪ್ತಿಗೆ ಒಳ ಪಡುತ್ತದೆ ಎಂದು ಪತ್ರಿಕೆಗಳಲ್ಲಿ ಪ್ರಕಟವಾದ ಸುದ್ದಿಗಳ ವಿರುದ್ಧ ಹಕ್ಕುಚ್ಯುತಿ ಮಂಡಿಸುವುದಿಲ್ಲವೇ?,' ಎಂದು ತಮ್ಮ ವಾದವನ್ನು ಸಮರ್ಥಿಸಿಕೊಂಡರು. ಅಲ್ಲದೇ ಈ ಪ್ರಕರಣದ ಸಂಪೂರ್ಣ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಮನವಿ ಮಾಡಿದರು.

ಮತ್ತೆ ಮಾಧುಸ್ವಾಮಿ ಆಕ್ಷೇಪಿಸಿ, 'ಸ್ಪೀಕರ್‌ ಮೇಲೆ ನಮಗೆ ಗೌರವ ಇದೆ. ಅವರ ಮೇಲೆ ಬಂದಿರುವ ಆರೋಪದ ತನಿಖೆಗೆ ಮಾತ್ರ ನಮ್ಮ ಒಪ್ಪಿಗೆ ಇದೆ. ಉಳಿದ ವಿಷಯಗಳ ಬಗ್ಗೆ ತನಿಖೆಗೆ ವಹಿಸುವುದಾದರೆ, ನಮ್ಮ ಬಳಿಯೂ ಸಾಕಷ್ಟು ದಾಖಲೆಗಳಿವೆ. ಆ ಬಗ್ಗೆ ಪ್ರತ್ಯೇಕ ಚರ್ಚೆ ನಡೆಯಲಿ,' ಎಂದು ವಾದಿಸಿದರು. ಆ ನಂತರ ಸ್ಪೀಕರ್‌ ರಮೇಶ್‌ ಕುಮಾರ್‌ ಆಡಳಿತ ಮತ್ತು ಪ್ರತಿಕ್ಷಗಳ ಶಾಸಕರಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಕಲ್ಪಿಸಿದರು.

ಸ್ಪೀಕರ್‌ ಮೇಲೆ ಬಂದಿರುವ ಆರೋ ಪದ ಬಗ್ಗೆ ಎಲ್ಲರೂ ಆಕ್ಷೇಪ ವ್ಯಕ್ತಪಡಿಸಿ, ಸ್ಪೀಕರ್‌ಗೆ ತಮ್ಮ ಬೆಂಬಲ ಸೂಚಿಸಿದರು. ಅಲ್ಲದೇ ಇಡೀ ಪ್ರಕರಣದ ಕುರಿತು ವಿಶೇಷ ತನಿಖೆ ನಡೆಯಬೇಕು ಎಂದು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಜೆಡಿಎಸ್‌ ಶಾಸಕ ಎ.ಟಿ. ರಾಮಸ್ವಾಮಿ, ಮಾಜಿ ಸ್ಪೀಕರ್‌ ಕೆ.ಜಿ. ಬೋಪಯ್ಯ, ಬಿಜೆಪಿಯ ಕೆ.ಎಸ್‌.ಈಶ್ವರಪ್ಪ, ಸುರೇಶ್‌ಕುಮಾರ್‌, ಪಿ. ರಾಜೀವ, ಸಚಿವ ಡಿ.ಕೆ.ಶಿವಕುಮಾರ್‌, ಎಚ್.ಕೆ. ಪಾಟೀಲ್‌, ಸಾ.ರಾ. ಮಹೇಶ್‌ ಆಗ್ರಹಿಸಿದರು.

ಶಾಸಕರ ಅಭಿಪ್ರಾಯ ಆಲಿಸಿದ ಸ್ಪೀಕರ್‌ ರಮೇಶ್‌ ಕುಮಾರ್‌ ಪ್ರಕರಣದ ತನಿಖೆ ನಡೆಸಿ 15 ದಿನದಲ್ಲಿ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಸಲಹೆ ನೀಡಿದರು. ಸ್ಪೀಕರ್‌ ಸಲಹೆಯಂತೆ ವಿಶೇಷ ತನಿಖಾ ತಂಡ ರಚಿಸುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಘೋಷಣೆ ಮಾಡಿದರು. ಸರ್ಕಾರ ದಿಂದ ನಡೆಯುವ ತನಿಖೆ ಬೇಡ, ನ್ಯಾಯಾಂಗ ತನಿಖೆ ಅಥವಾ ಸದನ ಸಮಿತಿ ರಚಿಸಿ ತನಿಖೆ ನಡೆಸುವಂತೆ ಪ್ರತಿಪಕ್ಷ ಬಿಜೆಪಿ ಸದಸ್ಯರು ಪಟ್ಟು ಹಿಡಿದರು. ಆದರೆ, ಸ್ಪೀಕರ್‌ ತಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿ, ಸದನವನ್ನು ಮಂಗಳವಾರಕ್ಕೆ ಮುಂದೂಡಿದರು.

ಸ್ಪೀಕರ್‌ ಹೇಳಿದ್ದೇನು?
ಪ್ರಕರಣದಲ್ಲಿ ನನ್ನ ಹೆಸರೂ ಪ್ರಸ್ತಾಪವಾಗಿರುವುದರಿಂದ ತನಿಖೆಗೆ ಆದೇಶಿಸಲು ನನ್ನಿಂದ ಆಗದು. ಈ ಬಗ್ಗೆ ವಿಶೇಷ ತನಿಖಾ ತಂಡ ರಚಿಸಿ ತನಿಖೆ ನಡೆಸಿ 15 ದಿನಗಳೊಳಗೆ ಮಾನಸಿಕವಾಗಿ ನೆಮ್ಮದಿ ಕೊಡಿ ಎಂದು ಸರ್ಕಾರಕ್ಕೆ ಸಲಹೆ ಕೊಡುತ್ತೇನೆ.

ಬಿಜೆಪಿ ವಾದವೇನು?
ಪ್ರಕರಣದಲ್ಲಿ ಸ್ಪೀಕರ್‌ಗೆ ಅವಮಾನ ಮಾಡಿರುವುದನ್ನು ಸಹಿಸಲಾಗದು. ಆದರೆ, ಈ ಸರ್ಕಾರದ ಮೇಲೆ ನಮಗೆ ನಂಬಿಕೆ ಇಲ್ಲವೇ ಇಲ್ಲ. ಪ್ರಕರಣದಲ್ಲಿ ಮುಖ್ಯಮಂತ್ರಿ ಸಹ ಭಾಗಿದಾರರಾಗಿರುವುದರಿಂದ ಅವರು ರಚಿಸುವ ಎಸ್‌ಐಟಿಯನ್ನು ಒಪ್ಪುವುದಿಲ್ಲ. ನ್ಯಾಯಾಂಗ ತನಿಖೆ ನಡೆಸಿ ಅಥವಾ ಸದನ ಸಮಿತಿ ರಚಿಸಿ.

ಮೈತ್ರಿ ಸರ್ಕಾರದ ಪ್ರತಿವಾದ
ಆಡಿಯೋದಲ್ಲಿ ಕೇಳಿ ಬಂದಿರುವ ಸ್ಪೀಕರ್‌ ಮೇಲಿನ ಆರೋಪದಿಂದ ಬರೀ ಸ್ಪೀಕರ್‌ಗೆ ಮಾತ್ರ ಅವಮಾನ ವಾಗಿಲ್ಲ. ಸದನದ ಎಲ್ಲ ಶಾಸಕರ ಹಕ್ಕುಚ್ಯುತಿ ಮಾಡಿದಂತಾಗಿದೆ. ಈ ವಿಚಾರದಲ್ಲಿ ಎಲ್ಲ ಸದಸ್ಯರು ಸ್ಪೀಕರ್‌ಗೆ ಬೆಂಬಲ ನೀಡುತ್ತೇವೆ. ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು.

ಯಾರೋ ಎಲ್ಲಿಯೋ, ಸದನದ ಹೊರಗಡೆ ಹಾದಿ ಬೀದಿಯಲ್ಲಿ ಮಾತನಾಡಿರುವುದನ್ನು ಸಭಾಧ್ಯಕ್ಷರು ಭಾವುಕರಾಗಿ ವೈಯಕ್ತಿಕವಾಗಿ ತೆಗೆದುಕೊಳ್ಳಬಾರದು.
- ಮಾಧುಸ್ವಾಮಿ, ಬಿಜೆಪಿ ಸಾಸಕ

ಸ್ಪೀಕರ್‌ಗೆ 50 ಕೋಟಿ ಕೊಟ್ಟಿ ದ್ದೇವೆ ಎಂದು ಸ್ಪಷ್ಟವಾಗಿ ಹೇಳಿ ದ್ದಾರೆ. ಇದು ನನಗೆ ವೈಯಕ್ತಿಕವಾಗಿ ಅನ್ವಯಿಸುವುದಾದರೆ, ಈ ಸ್ಥಾನದಲ್ಲಿ ಮುಂದುವರೆಯಲು ಅರ್ಹನಾಗಲ್ಲ 
- ರಮೇಶ್‌ಕುಮಾರ್‌, ಸ್ಪೀಕರ್‌

ಸಭಾಧ್ಯಕ್ಷರ ನಡತೆಯ ಬಗ್ಗೆ ಯಾರಾದರೂ ವ್ಯತಿರಿಕ್ತ ಹೇಳಿಕೆ ನೀಡಿದರೆ, ಅದು ಸದನದ ಹಕ್ಕುಚ್ಯುತಿಯಾಗುತ್ತದೆ. ಇದು ಕೇವಲ ಸ್ಪೀಕರ್‌ಗೆ ಮಾತ್ರ ಸಂಬಂಧಿಸಿದ್ದಲ್ಲ.
- ಕೃಷ್ಣ ಬೈರೇಗೌಡ, ಸಚಿವ


Trending videos

Back to Top