CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ತೆಳ್ಳಾರಿನಲ್ಲಿ ಆಚಾರ್ಯ ಮಧ್ವರ ಪಂಚಲೋಹದ ಶಿಲ್ಪ ಪತ್ತೆ

ಕಾಪು: ಉಡುಪಿಗೆ ಅಂತಾರಾಷ್ಟ್ರೀಯ ಖ್ಯಾತಿಯನ್ನು ತಂದಿರುವ ಭಾರತದ ಆಚಾರ್ಯತ್ರಯರಲ್ಲೋರ್ವರಾದ, ಮಾಧ್ವ ಸಿದ್ಧಾಂತ ಪ್ರತಿಪಾದಕ ಶ್ರೀ ಮಧ್ವಾಚಾರ್ಯರ ಅಪರೂಪದ ಪಂಚ ಲೋಹದ ಶಿಲ್ಪವೊಂದು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ತೆಳ್ಳಾರು ಜಲದುರ್ಗಾ ದೇವಾಲಯದಲ್ಲಿ ಪತ್ತೆಯಾಗಿದೆ ಎಂದು ಜಿಲ್ಲೆಯ ಪುರಾತತ್ವ ಸಂಶೋಧಕ ಪ್ರೊ| ಟಿ. ಮುರುಗೇಶಿ ಅವರು ತಿಳಿಸಿದ್ದಾರೆ.

ಶಿಲ್ಪದ ಪ್ರತೀಕ - ಲಕ್ಷಣಗಳು
ಎತ್ತರವಾದ ಪೀಠದ ಮೇಲೆ ಸಿದ್ಧಾಸನ ಭಂಗಿಯಲ್ಲಿ ಕುಳಿತಿರುವ ಶ್ರೀ ಮಧ್ವಾಚಾರ್ಯರು ಸದೃಢವಾದ ಮೈಕಟ್ಟನ್ನು ಹೊಂದಿರುವಂತೆ ಶಿಲ್ಪದಲ್ಲಿ ತೋರಿಸಲಾಗಿದೆ. ಬಲಗೈ ಚಿನ್ಮುದ್ರೆಯಲ್ಲಿದ್ದು, ಎಡಗೈಯನ್ನು ಬಲಪಾದದ ಮೇಲೆ ಇಡಲಾಗಿದೆ. ಎದೆಯ ಮೇಲೆ ಕುದುರೆ ಲಾಳಾಕೃತಿಯಲ್ಲಿ ಕಂಠವನ್ನು ಆವರಿಸಿದ ಒಂದು ಕಂಠಿಕೆಯಿದೆ. ದುಂಡ
ನೆಯ ಮುದ್ದು ಮುಖ, ನೀಳ ನಾಸಿಕ, ಅರೆತೆರೆದ ಕಣ್ಣುಗಳು ಮತ್ತು ದೊಡ್ಡ ಕಿವಿಗಳನ್ನು ಈ ಶಿಲ್ಪ ಹೊಂದಿದೆ. ತಲೆಯ ಅರ್ಧದವರೆಗೆ ನುಣ್ಣಗೆ ಬೋಳಿಸಿದಂತಿದೆ. ಹಿಂಬದಿಯಲ್ಲಿ ಕೇಶವನ್ನು ತುರುಬಿ (ಸೂಡಿ)ನಂತೆ ವಿನ್ಯಾಸ ಮಾಡಲಾಗಿದೆ. ಶಿಲ್ಪದ ಶೈಲಿ ಮತ್ತು ಲಕ್ಷಣದ ಆಧಾರದ ಮೇಲೆ ಈ ಶಿಲ್ಪದ ಕಾಲವನ್ನು 14-15ನೇ ಶತಮಾನದ ಶಿಲ್ಪವೆಂದು ನಿರ್ಧರಿಸಬಹುದಾಗಿದೆ.

ಎರಡು ಶಿಲಾ ಶಿಲ್ಪಗಳು ಮಾತ್ರ
ಈವರೆಗೆ ಮಧ್ವಾಚಾರ್ಯರ ಎರಡು ಶಿಲ್ಪಗಳು ಮಾತ್ರ ಗೋಚರದಲ್ಲಿದ್ದವು. ಅದರಲ್ಲಿ ಒಂದು ಉಡುಪಿ ಕೃಷ್ಣ ಮಠದಲ್ಲಿರುವ ಸಮಭಂಗಿಯಲ್ಲಿ ನಿಂತಿರುವ ಶಿಲಾ ವಿಗ್ರಹವಾಗಿದ್ದರೆ, ಮತ್ತೂಂದು ಮಧ್ವರ ಜನ್ಮಸ್ಥಳ ಪಾಜಕದಲ್ಲಿ ಕುಳಿತ ಭಂಗಿಯಲ್ಲಿರುವ ಶಿಲಾ ವಿಗ್ರಹ. ಈ ಎರಡೂ ವಿಗ್ರಹಗಳು ಸುಮಾರು 16ನೇ ಶತಮಾನದ ವಿಗ್ರಹಗಳೆಂದು ನಂಬಲಾಗಿದೆ. ಆದರೆ ಪ್ರಸ್ತುತ ತೆಳ್ಳಾರಿನಲ್ಲಿ ದೊರೆತಿರುವ ಪಂಚ ಲೋಹದ ಶಿಲ್ಪವು ಮೊತ್ತ ಮೊದಲ ಲೋಹದ ಶಿಲ್ಪ
ವೆಂದು ಹೇಳಲಾಗುತ್ತಿದೆ. ಮಾತ್ರವಲ್ಲದೇ ಇದುವರೆಗೆ ದೊರೆತ ಆಚಾರ್ಯರ ಶಿಲ್ಪಗಳಲ್ಲಿಯೇ ಅತ್ಯಂತ ಪ್ರಾಚೀನ ಮತ್ತು ನಯನ ಮನೋಹರವಾದುದ್ದಾಗಿದೆ ಎಂದು ಅವರು ತಿಳಿಸಿದ್ದಾರೆ.

ದ್ವೈತ ಸಿದ್ಧಾಂತದ ಪ್ರತಿಪಾದಕ ಮಧ್ವರು
ಭಾರತದ ಚರಿತ್ರೆಯಲ್ಲಿ ಉಡುಪಿಗೆ ಆವಿಸ್ಮರಣೀಯ ಸ್ಥಾನವನ್ನು ತಂದುಕೊಟ್ಟ ಆಚಾರ್ಯ ಮಧ್ವರು ದ್ವೈತ ಸಿದ್ಧಾಂತದ ಹರಿಕಾರರಾಗಿ ಗುರುತಿಸಲ್ಪಟ್ಟಿದ್ದರು. ಉಡುಪಿ ಸಮೀಪದ ಪಾಜಕದಲ್ಲಿ 1,238ರಲ್ಲಿ ಜನಿಸಿದ್ದ ಅವರು ತಮ್ಮ 16ನೇ ವಯಸ್ಸಿನಲ್ಲಿ ಅಚ್ಯುತ ಪ್ರೇûಾಚಾರ್ಯರಿಂದ ಸನ್ಯಾಸ ದೀಕ್ಷೆಯನ್ನು ಪಡೆದಿದ್ದರು. ಪೂರ್ಣಪ್ರಜ್ಞ ಹಾಗೂ ಆನಂದ
ತೀರ್ಥ ಎಂಬ ಅಭಿಧಾನವನ್ನು ಪಡೆದುಕೊಂಡಿದ್ದ ಅವರು ಉಡುಪಿಯಲ್ಲಿ ಅಷ್ಟ ಮಠಗಳನ್ನು ಸ್ಥಾಪಿಸಿ ಕೃಷ್ಣ ಪೂಜಾ ಕೈಂಕರ್ಯಕ್ಕೆ ನಾಂದಿ ಹಾಡಿದ್ದರು. ಸುಮಾರು 80 ವರ್ಷಗಳ ಕಾಲ ಬದುಕಿದ್ದ ಅವರು 1317ರಲ್ಲಿ ಹರಿಸಾಯುಜ್ಯವನ್ನು ಹೊಂದಿರುತ್ತಾರೆ ಎಂದು ಇತಿಹಾಸದ ಪುಟಗಳು ತಿಳಿಸುತ್ತವೆ.

ಮಧ್ವರ ಮೊದಲ ಲೋಹದ ಶಿಲ್ಪ
ಶ್ರೀ ಶಂಕರಾಚಾರ್ಯ ಮತ್ತು ಶ್ರೀ ರಾಮಾನುಜರ ನೂರಾರು ಶಿಲ್ಪಗಳು ಮತ್ತು ಲೋಹದ ಮೂರ್ತಿಗಳು ದೊರೆಯುತ್ತವೆ. ಆದರೆ ಇದುವರೆಗೆ ಆಚಾರ್ಯ ಮಧ್ವರ ಲೋಹದ ಮೂರ್ತಿ ದೊರೆಯದಿದ್ದುದು ಒಂದು ಕೊರತೆಯಾಗಿತ್ತು. ಆ ಕೊರತೆಯನ್ನು ಈ ಶೋಧನೆ ಇಲ್ಲವಾಗಿಸಿದೆ. ಭಾರತದ ಮಾಧ್ವ ಇತಿಹಾಸದಲ್ಲಿ ಇದೊಂದು ಬಹಳ ಪ್ರಮುಖವಾದ ಸಂಶೋಧನೆಯಾಗಿದೆ ಎಂದು ಶಿರ್ವ ಎಂಎಸ್‌ಆರ್‌ಎಸ್‌ ಕಾಲೇಜಿನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಮುಖ್ಯಸ್ಥ ಪ್ರೊ| ಟಿ. ಮುರುಗೇಶಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Back to Top