CONNECT WITH US  

ಸ್ವಾತಂತ್ರ್ಯ ಹೋರಾಟಕ್ಕೆ ಉಡುಪಿಯಲ್ಲಿ ತಿಲಕ್‌ ಪ್ರಭಾವ

ಡಾ| ರಾಮಚಂದ್ರ ಶ್ಯಾಮ ಶೆಣೈ.

ಉಡುಪಿಗೆ ಪ್ರಥಮ ಜಿಲ್ಲಾ ಕಾಂಗ್ರೆಸ್‌ ಸಮಿತಿ ರಚನೆಯ ಗರಿಯಾದ ಮುಕುಂದ ನಿವಾಸ ಕೇಂದ್ರ
ಆ. 15 ಸ್ವಾತಂತ್ರ್ಯೋತ್ಸವ. ಗಾಂಧೀಜಿಯವರ ಸಕ್ರಿಯ ಚಟುವಟಿಕೆ ಬಳಿಕವೇ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ದಿಕ್ಕು, ವೇಗ ದೊರಕಿತಾದರೂ ಅವರಿಗಿಂತ ಮೊದಲೇ ಬಾಲಗಂಗಾಧರ ತಿಲಕರಿಂದ ಪ್ರೇರಣೆಗೊಂಡು ಸ್ವಾತಂತ್ರ್ಯ ಹೋರಾಟವನ್ನು ಉಡುಪಿಯಲ್ಲಿ ನಡೆಸಿದವರಲ್ಲಿ ಅಗ್ರಮಾನ್ಯರು ಡಾ|ಆರ್‌.ಎಸ್‌.ಶೆಣೈ (ರಾಮಚಂದ್ರ ಶ್ಯಾಮ ಶೆಣೈ). 

ಉಡುಪಿ: ಮುಂಬೈಯಲ್ಲಿ ಸರಕಾರಿ ಸೆಂಟ್ರಲ್‌ ಪ್ರಸ್‌ನಲ್ಲಿ ಉದ್ಯೋಗದಲ್ಲಿದ್ದ ಆರ್‌.ಎಸ್‌. ಶೆಣೈಯವರು ಅನಾರೋಗ್ಯದ ನಿಮಿತ್ತ ಒಂದು ತಿಂಗಳು ರಜೆ ಹಾಕಿ ಮನೆಗೆ ಬಂದಿದ್ದರು. ಮತ್ತೂ ಒಂದು ತಿಂಗಳು ರಜೆ ಹಾಕಬೇಕಾಯಿತು. ವೈದ್ಯರ ಪ್ರಮಾಣಪತ್ರವನ್ನು ಹಾಜರುಪಡಿಸಿದಾಗ ಭಾರತೀಯ ವೈದ್ಯರ ಪ್ರಮಾಣಪತ್ರ ಎಂಬ ಕಾರಣಕ್ಕೆ ಮೇಲಧಿಕಾರಿ ತಿರಸ್ಕರಿಸಿದಾಗ ಕೆಲಸಕ್ಕೆ ರಾಜೀನಾಮೆ ನೀಡಿದವರು ಶೆಣೈ. 

ಭಾಷಣದ ಪ್ರಭಾವ
ಮುಂಬೈಯಲ್ಲಿರುವಾಗ (1906-14) ಬಾಲಗಂಗಾಧರ ತಿಲಕ್‌, ಬಿಪಿನ್‌ಚಂದ್ರಪಾಲ್‌, ಗೋಪಾಲಕೃಷ್ಣ ಗೋಖಲೆ, ವೀರಸಾವರ್ಕರ್‌ ಮೊದಲಾದವರ ಭಾಷಣದಿಂದ ಪ್ರಭಾವಿತರಾದವರು. ಸಾವರ್ಕರ್‌ ಅವರಿಗೆ ಕರಿನೀರಿನ ಶಿಕ್ಷೆ ಕೊಟ್ಟದ್ದು, 1907ರಲ್ಲಿ ತಿಲಕರಿಗೆ ಆರು ವರ್ಷಗಳ ಕಠಿನ ಶಿಕ್ಷೆ ಆದ ಕಾಲದಲ್ಲಿ ಈ ಪ್ರಕರಣಗಳ ಬಗೆಗೆ ರಾತ್ರಿ ಹಗಲು ಯೋಚಿಸಿದವರು ಶೆಣೈ. 

ಮುನ್ಸಿಫ್ ಕೋರ್ಟ್‌ಗೆ ಮುತ್ತಿಗೆ
ಉಡುಪಿಗೆ ಬಂದ ಬಳಿಕ ಟೈಪ್‌ರೈಟಿಂಗ್‌ ಜಾಬ್‌ವರ್ಕ್‌ ಆರಂಭಿಸಿದರು. ಆಗ ಉಡುಪಿ ತಾಲೂಕಿನಲ್ಲಿ ಟೈಪಿಂಗ್‌ ಯಂತ್ರವೇ ಇದ್ದಿರಲಿಲ್ಲ. 1916ರಲ್ಲಿ ಅನ್ನಿಬೆಸಂಟರು ಹೋಮ್‌ ರೂಲ್‌ ಚಳವಳಿ ಆರಂಭಿಸಿದಾಗ ಅದರ ಪ್ರಚಾರವನ್ನು ನಡೆಸಿದವರು ಶೆಣೈ. ಪ್ರೌಢಶಾಲಾ ವಿದ್ಯಾರ್ಥಿಗಳನ್ನು ಸೇರಿಸಿ ಸ್ಟೂಡೆಂಟ್ಸ್‌ ಬ್ರದರ್‌ಹುಡ್‌ ಸಂಸ್ಥೆ ಸ್ಥಾಪಿಸಿ ಅಲ್ಲಿ ಧಾರ್ಮಿಕ, ಸಾಮಾಜಿಕ, ರಾಜಕೀಯ ಕುರಿತಾದ ಉಪನ್ಯಾಸಗಳನ್ನು ಏರ್ಪಡಿಸುತ್ತಿದ್ದರು. ಜಲಿಯನ್‌ವಾಲಾಬಾಗ್‌ ಸ್ಮಾರಕ ಸಪ್ತಾಹ ನಡೆಯುತ್ತಿದ್ದಾಗ ಅಜ್ಜರಕಾಡು ಮೈದಾನದಲ್ಲಿ (1920-21) ಭಾಷಣ ಮಾಡಿ ಜನಜಾಗೃತಿಯನ್ನು ನಡೆಸಿದರು. ವಿದ್ಯಾರ್ಥಿಗಳು ಸತ್ಯಾಗ್ರಹ ನಡೆಸಿ ಮುನ್ಸಿಫ್ ಕೋರ್ಟ್‌ಗೆ ಮುತ್ತಿಗೆ ಹಾಕಿದರು. 

ಮುಕುಂದ ನಿವಾಸದಲ್ಲಿ 
ಇದಾದ ಬಳಿಕ ಮುಕುಂದನಿವಾಸದಲ್ಲಿ ಸಭೆ ಸೇರಿ ದ.ಕ. ಜಿಲ್ಲಾ ಕಾಂಗ್ರೆಸ್‌ ಸಮಿತಿಯನ್ನು ಸ್ಥಾಪಿಸಲಾಯಿತು. ಪ್ರಸಿದ್ಧ ಜವುಳಿ ವ್ಯಾಪಾರಿ ನಾನಾಲಾಲ್‌ ಗೋವಿಂದ್‌ ಪಂಡ್ಯ ಅವರು ಪ್ರಥಮ ಜಿಲ್ಲಾ ಸಮಿತಿಯ ಅಧ್ಯಕ್ಷರಾಗಿ, ನಯಂಪಳ್ಳಿ ಆನಂದ ರಾವ್‌ ಕಾರ್ಯದರ್ಶಿ, ನ್ಯಾಯವಾದಿ ಕುಬೇರ ಪಾಂಡುರಂಗ ರಾವ್‌ ಖಜಾಂಚಿಯಾಗಿ ಆಯ್ಕೆಯಾದರು. ಮಂಗಳೂರಿನಲ್ಲಿ ಸಕ್ರಿಯರಾಗಿದ್ದ ಉಡುಪಿಯ ಎಚ್‌.ರಾಮರಾಯ ಮಲ್ಯ, ಎಚ್‌.ನಾರಾಯಣ ರಾವ್‌‌, ಮಂಗಳೂರಿನ ಯು. ಶಾಂತಾರಾಮ ರಾವ್‌ ಅವರು ಉಡುಪಿಗೆ ಬಂದು ಶೆಣೈಯವರ ತಂಡದೊಂದಿಗೆ ಸೇರಿ ಕೆಲಸ ಮಾಡಿದರು. ಮುಕುಂದ ನಿವಾಸದಲ್ಲಿ ಹರಿಕಥೆ, ಸಭೆ, ರಾಷ್ಟ್ರೀಯ ಶಾಲೆ, ಚರಕ, ನೂಲುವ ಪಂದ್ಯಾಟ ಇತ್ಯಾದಿಗಳನ್ನು ನಡೆಸಲಾಗುತ್ತಿತ್ತು. ಇಲ್ಲಿ 1921 ಆ. 1ರಂದು ತಿಲಕರ ಸ್ಮತಿ ದಿನಾಚರಣೆಯಲ್ಲಿ ಕಿಕ್ಕಿರಿದು ಜನ ಸೇರಿದ್ದರು. ತಿಲಕರನ್ನು ಕಂಡು ಪ್ರಭಾವಿತರಾದ ಶೆಣೈಯವರೇ ಇಲ್ಲಿ ಪ್ರಧಾನ ಭಾಷಣಕಾರರು. ಅವರ 'ಗೀತಾರಹಸ್ಯ', ಜೈಲಿನ ಅನುಭವ ಇತ್ಯಾದಿಗಳನ್ನು ಶೆಣೈ ವಿವರಿಸಿದಾಗ ಜನರು ಕಣ್ಣೀರು ಸುರಿಸಿದರು. 

ಪ್ರಚಾರ ಕಾರ್ಯಕ್ಕೆ ಆಯ್ಕೆ
ಸಭೆಯಲ್ಲಿ ಪಾಲ್ಗೊಂಡ ಮಂಗಳೂರಿನ ಪ್ರಸಿದ್ಧ ಸ್ವಾತಂತ್ರ್ಯ ಹೋರಾಟಗಾರ ಕಾರ್ನಾಡು ಸದಾಶಿವ ರಾಯರು ಮಂಗಳೂರು ಜಿಲ್ಲೆಯ ಕೇಂದ್ರವಾಗಿರುವುದರಿಂದ ಜಿಲ್ಲಾ ಕಾಂಗ್ರೆಸ್‌ ಸಮಿತಿಯನ್ನು ಅಲ್ಲಿಯೇ ನಡೆಸಬೇಕು, ಉಡುಪಿಯಲ್ಲಿ ತಾಲೂಕು ಸಮಿತಿ ರಚಿಸಿ ಎಂದು ಕೇಳಿಕೊಂಡಾಗ ಅದರಂತೆ ಜಿಲ್ಲಾ ಸಮಿತಿಯನ್ನು ರದ್ದುಗೊಳಿಸಿ ತಾಲೂಕು ಸಮಿತಿ ರಚಿಸಿದಾಗ ಕಾಸರಗೋಡು ಅನಂತಯ್ಯ ಕಾಮತ್‌ ಅಧ್ಯಕ್ಷರು, ಕೊಚ್ಚಿಕಾರ್‌ ಪಾಂಡುರಂಗ ಪೈ ಕಾರ್ಯದರ್ಶಿ, ನಯಂಪಳ್ಳಿ ಆನಂದ ರಾವ್‌ ಖಜಾಂಚಿಯಾಗಿ, ಶೆಣೈಯವರು ಪ್ರಚಾರ ಕಾರ್ಯಕ್ಕೆ ಆಯ್ಕೆಯಾದರು.  

ಪತ್ರಿಕೆಯ ಪ್ರಚಾರ
ತಿಲಕ್‌ ಸ್ವರಾಜ್ಯ ನಿಧಿಗೆ ಧನ ಸಂಗ್ರಹ, ಗ್ರಾಮ ಕಾಂಗ್ರೆಸ್‌ ಸಮಿತಿಗಳ ರಚನೆ, ಸದಸ್ಯರ ಸೇರ್ಪಡೆ, ಖಾದಿ ನೂಲುವಿಕೆಯ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದ ಶೆಣೈಯವರು, ರಾಮರಾಯ ಮಲ್ಯ, ನಾರಾಯಣ ರಾವ್‌, ಶಾಂತಾರಾಮ ರಾವ್‌ ಜೊತೆಯಾಗಿ ಆರಂಭಿಸಿದ 'ಸತ್ಯಾಗ್ರಹಿ' ಪತ್ರಿಕೆಯ ಪ್ರಚಾರವನ್ನೂ ನಿಭಾಯಿಸಿದರು.

ನಾಟಕಕ್ಕೆ ಅಡ್ಡಿ
ಉಡುಪಿಯಲ್ಲಿ ರಾಜಕೀಯ ಪರಿಷತ್‌ ಸಮಾವೇಶವೊಂದನ್ನು ನಡೆಸಲು ನಿರ್ಧರಿಸಿದಾಗ ಶೆಣೈ 'ಭಾರತೋದಯ' ನಾಟಕ ರಚಿಸಿದರು. ಇದನ್ನು ಆಡಿತೋರಿಸಲು ಪೊಲೀಸರ ಅಡ್ಡಿ ಬಂದಾಗ ಕೈಬಿಡಲಾಯಿತು. ಇದರ ಬದಲು "ನವೀನಕಲ್ಪ' ಸಾಮಾಜಿಕ ನಾಟಕವಾಡಿ ರಾಷ್ಟ್ರೀಯ ನಿಧಿ ಸಂಗ್ರಹಿಸಿದರು. 

ಬೀಗ ಒಡೆದ ಪೊಲೀಸರು
ಕಾಕಿನಾಡದ ರಾಷ್ಟ್ರೀಯ ಸಭೆಯ ಅಧಿವೇಶನಕ್ಕೆ ಉಡುಪಿಯಿಂದ ಶೆಣೈ ಮತ್ತು ಶ್ರೀನಿವಾಸ ಉಪಾಧ್ಯ ಪಣಿಯಾಡಿಯವರು (ಎಸ್‌.ಯು.ಪಣಿಯಾಡಿ) ಪಾಲ್ಗೊಂಡರು. 1930 ರಿಂದ ಗಾಂಧೀಜಿಯವರ ಚಟುವಟಿಕೆಗಳು ಆರಂಭಗೊಂಡವು. ಪೊಲೀಸರ ಪಹರೆಗಳೂ ಹೆಚ್ಚಿಗೆಯಾದವು. ಒಮ್ಮೆ ಉಡುಪಿ ರಥಬೀದಿಯ ಕಾಣಿಯೂರು ಮಠದ ಅಂಗಡಿಕೋಣೆಯಲ್ಲಿದ್ದ ಕಾಂಗ್ರೆಸ್‌ ಸಮಿತಿ ಕಚೇರಿಯ ಬೀಗ ಮುರಿದ ಪೊಲೀಸರು ಸಮಿತಿಯ ನಿರ್ಣಯ ಪುಸ್ತಕ, ಲೆಕ್ಕಪುಸ್ತಕ, ರಸೀದಿ ಪುಸ್ತಕ, ಖಾದಿ ವಸ್ತ್ರದ ರಾಷ್ಟ್ರೀಯ ಬಾವುಟ ಇತ್ಯಾದಿಗಳನ್ನು ಕೊಂಡೊಯ್ದದ್ದನ್ನು ಶೆಣೈಯವರು ಪುಸ್ತಕವೊಂದರಲ್ಲಿ ದಾಖಲಿಸಿದ್ದಾರೆ. 

ಉಪ್ಪಿನ ಸತ್ಯಾಗ್ರಹದ ವೇಳೆ
ಪಣಿಯಾಡಿಯವರು ಸ್ಥಳೀಯ ಕಾರ್ಯಕರ್ತರನ್ನು ಕೂಡಿಸಿಕೊಂಡು ಉಡುಪಿಯಿಂದ ಮಂಗಳೂರಿಗೆ ಕಾಲ್ನಡಿಗೆಯಲ್ಲಿ ಹೋಗಿ ಸತ್ಯಾಗ್ರಹ ಮಾಡುವ ನಿರ್ಧಾರ ಕೈಗೊಂಡಾಗ ತನ್ನ ಗೈರುಹಾಜರಿಯಲ್ಲಿ ಸತ್ಯಾಗ್ರಹ ಮುಂದುವರಿಸಲು ಶೆಣೈಯವರನ್ನು ನೇಮಿಸಿದರು. ಈ ತಂಡಕ್ಕೆ ಇದ್ದ ಹೆಸರು 'ಶ್ರೀಕೃಷ್ಣ ಸೇವಾ ದಳ'. ಇದು 1930 ಎಪ್ರಿಲ್‌ 13 ರಂದು ನಡೆದ ಉಪ್ಪಿನ ಸತ್ಯಾಗ್ರಹಕ್ಕಾಗಿ. ಅಂಕೋಲಾದಲ್ಲಿ ರಾಜ್ಯ ಮಟ್ಟದ, ಮಂಗಳೂರಿನಲ್ಲಿ ಜಿಲ್ಲಾ ಮಟ್ಟದ ಸತ್ಯಾಗ್ರಹ ನಡೆಯಿತು. ಕಾಲ್ನಡಿಗೆ ಜಾಥಾ ಹಿಂದಿನ ಬೆಳಗ್ಗೆ 8 ಗಂಟೆಗೆ ರಥಬೀದಿಯಿಂದ ಹೊರಟಾಗ ಪರ್ಯಾಯ ಪೀಠದಲ್ಲಿದ್ದ ಶೀರೂರು ಸ್ವಾಮೀಜಿ, ಮತ್ತಿತರ ಸ್ವಾಮೀಜಿಯವರು ಸತ್ಯಾಗ್ರಹಿಗಳಿಗೆ ಹೂಹಾರ ಹಾಕಿ ಪ್ರಸಾದ ನೀಡಿದ್ದರು. ಎ. 13 ಬೆಳಗ್ಗೆ ರಥಬೀದಿಯಿಂದ ಮಲ್ಪೆ ವಡಭಾಂಡೇಶ್ವರಕ್ಕೆ ಹೋಗಿ ಅಲ್ಲಿ ಉಪ್ಪು ನೀರು ಕುದಿಸಿ ಉಪ್ಪು ಹರಾಜು ಹಾಕಿದರು. ಇದನ್ನು ನೋಡಲು ನೂರಾರು ಜನರು ಸೇರಿದ್ದರು. 

ಗಿರಿಜಾ ಬಾಯಿ ಬಂಧನ
ಮೇ 16 ರಂದು ಮದ್ಯಪಾನ ನಿಷೇಧ ಚಳವಳಿ ಆರಂಭವಾಯಿತು. ಮೇ ಆರಂಭದಲ್ಲಿ ಉಡುಪಿಯಲ್ಲಿ ಸತ್ಯಾಗ್ರಹಿಗಳ ಶಿಬಿರ ತೆರೆಯಲಾಯಿತು. ಸುಮಾರು 30 ಸತ್ಯಾಗ್ರಹಿಗಳು ಶಿಬಿರದಲ್ಲಿದ್ದರು. ನಿತ್ಯ ಬೆಳಗ್ಗೆ 6ಕ್ಕೆ ಪ್ರಭಾತಫೇರಿ, ಧ್ವಜವಂದನೆ ನಡೆಯುತ್ತಿತ್ತು. ಶೆಣೈಯವರು ಕಾಂಗ್ರೆಸ್‌ ಪ್ರಚಾರಕರಾಗಿದ್ದ ಕಾರಣ ಸತ್ಯಾಗ್ರಹದ ನಿಯಮಗಳನ್ನು ಹೇಳುತ್ತಿದ್ದರು. ಒಂದು ದಿನ ರಥಬೀದಿಯಲ್ಲಿ ಸೇರಿದ ಸತ್ಯಾಗ್ರಹಿಗಳು ವಿದೇಶೀ ಬಟ್ಟೆಗಳನ್ನು ದಹಿಸಿದ ಮರುದಿನ ಅಗ್ನಿಸ್ಪರ್ಶ ಮಾಡಿದ ಗಿರಿಜಾ ಬಾಯಿ ಅವರನ್ನು ಬಂಧಿಸಲಾಯಿತು. 

ಪತ್ರಕರ್ತರಾಗಿ 
1935 ರ ವೇಳೆ ಉಡುಪಿಯಲ್ಲಿ ಪಣಿಯಾಡಿಯವರು "ಅಂತರಂಗ' ವಾರ ಪತ್ರಿಕೆ ನಡೆಸಿದ್ದರೆ, ಶೆಣೈಯವರು ರಾಜಕೀಯ ಪ್ರಚಾರಕ್ಕಾಗಿ "ಧುರೀಣ' ಮಾಸ ಪತ್ರಿಕೆಯನ್ನು ಆರಂಭಿಸಿದರು. ಬಹಳ ಪ್ರಯಾಸಪಟ್ಟು 14 ವರ್ಷ ಈ ಪತ್ರಿಕೆಯನ್ನು ನಡೆಸಿದ ಕೀರ್ತಿ ಶೆಣೈಯವರಿಗೆ ಸಲ್ಲುತ್ತದೆ. 
ಜೈಲು ವಾಸ ಮತ್ತು ಮುಂಬೈಯಲ್ಲಿದ್ದ ಅವಧಿಯಲ್ಲಿ ಹೋಮಿಯೋಪತಿ, ಆಯುರ್ವೇದ ಔಷಧಿ ತಯಾರಿಕೆ, ಜ್ಯೋತಿಷ್ಯ, ಟೈಪಿಂಗ್‌, ಶಾರ್ಟ್‌ ಹ್ಯಾಂಡ್‌ ಇತ್ಯಾದಿಗಳನ್ನು ಕಲಿತ ಕಾರಣ ರಥಬೀದಿಯಲ್ಲಿ ಈ ವೃತ್ತಿಗಳನ್ನು ಶೆಣೈ ನಡೆಸಿದರು. ಹಿಂದೆ ರಥಬೀದಿಯಲ್ಲಿ ಹೋಮಿಯೋಪತಿ ಚಿಕಿತ್ಸಾಲಯವಿತ್ತು. ಶೆಣೈಯವರು ತಮ್ಮನ ಮಗ ಯು. ಮುಕುಂದ ಶೆಣೈಯವರನ್ನು ದತ್ತಕ್ಕೆ ತೆಗೆದುಕೊಂಡಿದ್ದರು. ಮುಕುಂದ ಶೆಣೈಯವರ ಮಕ್ಕಳಾದ ಯು.ದೇವದಾಸ ಶೆಣೈ, ಯು. ಪ್ರೇಮಾನಂದ ಶೆಣೈ ಈಗ ಅದೇ ಸ್ಥಳದಲ್ಲಿ  ಶ್ರೀಕೃಷ್ಣ ಹೋಮಿಯೋ ಡ್ರಗ್‌ ಹೌಸ್‌ ನಡೆಸುತ್ತಿದ್ದಾರೆ. 'ಅಜ್ಜ ಆರ್‌.ಎಸ್‌.ಶೆಣೈಯವರು ಅದಮಾರು ಮಠದ ಶ್ರೀವಿಬುಧಪ್ರಿಯತೀರ್ಥರಿಗೆ ಬಹಳ ಬೇಕಾದವರಾಗಿದ್ದರು. ಅವರೇ ಈ ಜಾಗವನ್ನು ಕೊಟ್ಟದ್ದು. ಅವರನ್ನೆಂದೂ ಮರೆಯಬೇಡ ಎಂದು ಅಜ್ಜ ಹೇಳುತ್ತಿದ್ದರು. ಬನ್ನಂಜೆ ರಾಮಾಚಾರ್ಯರು ನಮ್ಮ ಅಂಗಡಿಯಲ್ಲಿ ಬಂದು ಕುಳಿತು ಮಾತನಾಡುತ್ತಿದ್ದರು' ಎನ್ನುವುದನ್ನು ದೇವದಾಸ ಶೆಣೈ, ಪ್ರೇಮಾನಂದ ಶೆಣೈಯವರು ಸ್ಮರಿಸಿಕೊಳ್ಳುತ್ತಾರೆ. 

ಅನ್ನದ ಜೊತೆ ಹುಳುಗಳೂ, ಅಲ್ಯುಮೀನಿಯಂ ಬಟ್ಟಲೂ
1931 ಜೂ. 23ರಂದು ಮೇಲಧಿಕಾರಿಗಳ ಹುಕುಂ ಅನುಸಾರ ಪೊಲೀಸರು ಆರ್‌.ಎಸ್‌. ಶೆಣೈಯವರನ್ನು ಬಂಧಿಸಿದರು. ಮನೆಯಲ್ಲಿ ಇಬ್ಬರು ಮಹಿಳೆಯರನ್ನು ಮಾತ್ರ ಬಿಟ್ಟು ಹೋಗುವುದು ಕಷ್ಟವಾದರೂ ದೇಶಕ್ಕಾಗಿ ಜೈಲಿಗೆ ಹೋಗುತ್ತಿದ್ದೇನೆಂದು ಸಮಾಧಾನಪಡಿಸಿದರು. ಜೈಲಿಗೆ ಹೋಗುವಾಗ ಜ್ಯೋತಿಷ್ಯವೇ ಮೊದಲಾದ ಗ್ರಂಥಗಳನ್ನು ಕೊಂಡೊಯ್ದ ಶೆಣೈಯವರು ಜೈಲುವಾಸದಲ್ಲಿಯೂ ಈ ವಿಷಯಗಳ ಜ್ಞಾನ ಸಂಪಾದಿಸಿದರು. ಕುಂದಾಪುರದ ನ್ಯಾಯಾಧೀಶರೆದುರು ಹಾಜರುಪಡಿಸಿ ಜೂ. 25 ರಂದು ಕಣ್ಣೂರು ಜೈಲಿಗೆ ಕಳುಹಿಸಲಾಯಿತು. ಬೆಳಗ್ಗೆ 8 ಗಂಟೆಗೆ ಬಟ್ಟಲಲ್ಲಿ ಲೆಕ್ಕಾಚಾರದ ಒಂದು ಕವಳಿಗೆ ಗಂಜಿ, ತೊಗರಿಬೇಳೆ ಬೇಯಿಸಿ ಉಪ್ಪು ಹಾಕಿದ ಚಟ್ನಿ ಕೊಡುತ್ತಿದ್ದರು. ಮಧ್ಯಾಹ್ನ 12.30ಕ್ಕೆ ಒಂದು ಪೌಂಡು ತೂಕದ ಅನ್ನ, ಒಂದು ಸೌಟು ಸಾಂಬಾರು ಕೊಡುತ್ತಿದ್ದರು.

ಸಿ ದರ್ಜೆಯ ಸತ್ಯಾಗ್ರಹಿಗಳ ಬವಣೆ ಹೇಳತೀರದು. ತೆರೆದಿಟ್ಟ ಕಬ್ಬಿಣದ ಸರಳುಗಳ ಶೌಚಾಲಯ ಅಸಹ್ಯ ಹುಟ್ಟಿಸುತ್ತಿತ್ತು. ಅನ್ನವನ್ನು ರಂಗೂನ್‌ ಅಥವಾ ಕರಾಚಿಯಿಂದ ತರಿಸುತ್ತಿದ್ದ ದುರ್ವಾಸನೆಯ ಅಕ್ಕಿಯಿಂದ ತಯಾರಿಸುತ್ತಿದ್ದರು. ಆಹಾರ ಪೂರೈಕೆದಾರ ಕೆಟ್ಟ ಅಕ್ಕಿ, ತೊಗರಿಬೇಳೆ, ಹುಳು ಹಿಡಿದ ಮೆಣಸು, ಸಂಬಾರು ದಿನಸಿಗಳನ್ನು ಪೂರೈಸುತ್ತಿದ್ದ. ಅಕ್ಕಿಯಲ್ಲಿರುವ ಕಲ್ಲು, ಮಣ್ಣು, ಭತ್ತವನ್ನು ಬೇರ್ಪಡಿಸುವ ವ್ಯವಸ್ಥೆ ಇರಲಿಲ್ಲ. ಅನ್ನ ಬೇಯಿಸುವಾಗ ಅಕ್ಕಿಯಲ್ಲಿದ್ದ ದೊಡ್ಡ ಹುಳಗಳು ಮೇಲೆದ್ದು ಕಾಣುತ್ತಿದ್ದವು. ಊಟ ಮಾಡುವವರು ಕಣ್ಣೀರು ಸುರಿಸಬೇಕಾಗುತ್ತಿತ್ತು. ಆದರೆ ಇದನ್ನು ಬಿಟ್ಟರೆ ಬೇರೆ ಗತಿ ಇರಲಿಲ್ಲ. ಏಳೆಂಟು ವರ್ಷ ಶಿಕ್ಷೆಗೊಳಗಾದ ಕ್ರಿಮಿನಲ್‌ ಕೈದಿಗಳೇ ಅಡುಗೆ ಭಟರಾಗಿರುತ್ತಿದ್ದರು. ಶೆಣೈಯವರಿಗೆ ಆಮಶಂಕೆ ಆರಂಭವಾಯಿತು. ಕ್ಷಮೆ ಕೇಳಿದರೆ ಜೈಲಿನಿಂದ ಬಿಡುಗಡೆಗೊಳಿಸುವುದಾಗಿ ಜೈಲು ಅಧೀಕ್ಷಕರು ತಿಳಿಸಿದರೂ ಕ್ಷಮೆ ಕೇಳಲು ಶೆಣೈ ಒಪ್ಪಲಿಲ್ಲ. ಕೊನೆಗೆ ಜಾಮೀನಿನ ಮೇಲೆ ಶೆಣೈಯವರು ನ. 3 ರಂದು ಬಿಡುಗಡೆಗೊಂಡರು. ಮತ್ತೆ ಆರೋಗ್ಯ ಸುಧಾರಿಸಲು ಮೂರು ತಿಂಗಳು ಹಿಡಿಯಿತು. 

ಮುಕುಂದ ನಿವಾಸದ ಮಹತ್ವ
1920 ರ ದಶಕದಲ್ಲಿ ಮುಕುಂದನಿವಾಸ ಒಂದರ್ಥದಲ್ಲಿ ಕರ್ನಾಟಕದ ಕರಾವಳಿಗೇ ಪ್ರಮುಖ ಕೇಂದ್ರವಾಗಿತ್ತು. ಇಲ್ಲೇ ಅವಿಭಜಿತ ದ.ಕ. ಜಿಲ್ಲೆಯ ಪ್ರಥಮ ಕಾಂಗ್ರೆಸ್‌ ಜಿಲ್ಲಾ ಸಮಿತಿ ರಚನೆಯಾಯಿತು. ಬಳಿಕ ಕಾರ್ನಾಡು ಸದಾಶಿವರಾಯರ ಮನವಿ ಮೇರೆಗೆ ಜಿಲ್ಲಾ ಸಮಿತಿ ಮಂಗಳೂರಿಗೆ ಸ್ಥಳಾಂತರವಾಯಿತು. ಮಣಿಪಾಲದ ಶಿಲ್ಪಿ ಡಾ|ಟಿ.ಎಂ.ಎ.ಪೈ, ಉಪೇಂದ್ರ ಪೈಯವರು ಆರಂಭಕಾಲದಲ್ಲಿ ಮುಕುಂದ ನಿವಾಸದಲ್ಲಿದ್ದರು. ಇಲ್ಲೇ ಸಿಂಡಿಕೇಟ್‌ ಬ್ಯಾಂಕ್‌ ಸ್ಥಾಪಕರ ಕಚೇರಿ ಇದೆ. ಆಗ ಬ್ಯಾಂಕ್‌ನ ಕೇಂದ್ರ ಕಚೇರಿ ಇದೇ ಆಗಿತ್ತು. ಉಡುಪಿಯ ಟೆಲಿಫೋನ್‌ ಎಕ್ಸ್‌ಚೇಂಜ್‌ ಕಚೇರಿ ಆರಂಭಗೊಂಡದ್ದೂ ಇಲ್ಲೇ.

ಸ್ಲೋಪಾಯ್ಸನ್‌ ಪಾತ್ರೆ ಅಂದು ಇಂದು...
ಜೈಲಿಗೆ ಕರೆದುಕೊಂಡ ಹೋದಾಗ ಮೊದಲು ಕೊಟ್ಟದ್ದು ಅಲ್ಯೂಮೀನಿಯಂ ಊಟದ ಬಟ್ಟಲು, ಒಂದು ಕವಳಿಗೆ, ಎರಡು ಹಳೆಯ ಕಂಬಳಿಗಳು ಎಂಬ ವಿಷಯವನ್ನು ಶೆಣೈಯವರೇ ತಮ್ಮ ಜೀವನಚರಿತ್ರೆಯಲ್ಲಿ ತಿಳಿಸಿದ್ದಾರೆ. ಸ್ಲೋ ಪಾಯ್ಸನ್‌ ಆದ ಕಾರಣ ಅಲ್ಯೂಮೀನಿಯಮ್‌ ಪಾತ್ರೆಗಳನ್ನು ಕೈದಿಗಳಿಗೆ ಬ್ರಿಟಿಷರು ಕೊಡುತ್ತಿದ್ದರು. ಈಗ ಮನೆ ಮನೆಗಳಲ್ಲಿ ಇಂತಹ ತರಹೇವಾರಿ "ವಿಷಕಾರಿ' ಪಾತ್ರೆಗಳು "ಆಧುನಿಕತೆ', "ಸುಧಾರಣೆ' ಹೆಸರಿನಲ್ಲಿ ರಾರಾಜಿಸುತ್ತ ನಿಧಾನವಾಗಿ ರೋಗಿಗಳ ಸಂಖ್ಯೆಗಳನ್ನು ಹೆಚ್ಚಿಸುತ್ತಿವೆ. "ಸಿಲ್ವರ್‌' ಅಂದರೆ ಬೆಳ್ಳಿ ಎಂದು ಗೊತ್ತಿದ್ದರೂ ಈ ಪಾತ್ರೆಗಳಿಗೆ ಸಿಲ್ವರ್‌ ಪಾತ್ರೆ ಎಂದು ಜನರಾಡಿಕೊಳ್ಳುವಂತೆ ಮಾಡಲಾಗಿದೆ. ಆರೋಗ್ಯಕ್ಕೆ ಅತ್ಯುತ್ತಮವಾದ ಮಣ್ಣಿನ ಪಾತ್ರೆಗಳು ಕಣ್ಮರೆಯಾಗಿವೆ. 'ವಿಷಕಾರಿ' ಪಾತ್ರೆಗಳ ಉದ್ಯಮ ಕಾರ್ಪೊರೇಟ್‌ ಮುಖವಾಡ ಹೊತ್ತು ಮೆರೆಯುತ್ತಿದ್ದರೆ ಮಣ್ಣಿನ ಪಾತ್ರೆಗಳನ್ನು ತಯಾರಿಸುವ ಕುಶಲಕರ್ಮಿ ಸೋತು ಸೊರಗಿದ್ದಾನೆ. ಅದು ಸ್ವಾತಂತ್ರ್ಯಪೂರ್ವ ಸ್ಥಿತಿ, ಇದು ಸ್ವಾತಂತ್ರ್ಯೋತ್ತರ ಸ್ಥಿತಿ.

- ಮಟಪಾಡಿ ಕುಮಾರಸ್ವಾಮಿ


Trending videos

Back to Top