CONNECT WITH US  

ಗಾಂಧೀಜಿಯವರದು ಹೆಂಗರುಳು: ವೈದೇಹಿ

"ಗಾಂಧೀಜಿ ಚಿಂತನೆ ಪ್ರಸ್ತುತತೆ' ಸಂವಾದ

ಉಡುಪಿ: ಗಾಂಧೀಜಿಯಲ್ಲಿದ್ದುದು ಹೆಂಗರುಳು. ಹಾಗಾಗಿಯೇ ಅವರು ಎಲ್ಲರ ಬಗ್ಗೆಯೂ ಚಿಂತಿಸುತ್ತಾ ಒಳಿತನ್ನು ಬಯಸುತ್ತಿದ್ದರು ಎಂದು ಸಾಹಿತಿ ವೈದೇಹಿ ಅಭಿಪ್ರಾಯಪಟ್ಟರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಧಾರವಾಡದ ರಂಗಾಯಣ ಸಹಯೋಗದಲ್ಲಿ ರಥಬೀದಿ ಗೆಳೆಯರು ಹಾಗೂ ಎಂಜಿಎಂ ಗಾಂಧಿ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಮಂಗಳವಾರ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಜರಗಿದ "ಪಾಪು ಗಾಂಧಿ ಗಾಂಧಿ ಬಾಪು ಆದ ಕತೆ' ಆಧರಿಸಿದ ರಂಗರೂಪಕದ ಪೂರ್ವದಲ್ಲಿ ನಡೆದ "ಗಾಂಧೀಜಿ ಚಿಂತನೆಯ ಪ್ರಸ್ತುತತೆ-ಒಂದು ಸಂವಾದ' ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗಾಂಧೀಜಿಯವರ ಮಾತು, ಭಾವನೆಯಲ್ಲಿ ಹೆಣ್ತನವಿತ್ತು. ಹಾಗಾಗಿ ಅವರಿಗೆ ಎಲ್ಲರೂ ಮನುಷ್ಯರಾಗಿ ಕಾಣುತ್ತಿದ್ದರು. ದಲಿತರು, ಮಹಿಳೆಯರ ಬಗ್ಗೆ ಗಾಂಧೀಜಿಯವರಷ್ಟು ಯಾರೂ ಚಿಂತನೆ ಮಾಡಿಲ್ಲ. ವಿರೋಧಿಗಳು ಇರಬಾರದು ಎನ್ನುವ ಯುಗದಲ್ಲಿ ನಾವಿದ್ದೇವೆ. ಇಂತಹ ಸಂದರ್ಭದಲ್ಲಿ ಗಾಂಧಿ ನೆನಪಾಗುತ್ತಾರೆ ಎಂದು ಅಭಿಪ್ರಾಯಪಟ್ಟರು.

ಪ್ರೀತಿಯ ಜಗಳ 
ಅಂಬೇಡ್ಕರ್‌ ಮತ್ತು ಗಾಂಧಿ ಶತ್ರುಗಳಾಗಿಯಲ್ಲ, ಗೆಳೆಯರಾಗಿ ಜಗಳವಾಡುತ್ತಿದ್ದರು. ಅದು ಗೌರವ, ಪ್ರೀತಿಯಿಂದ ಕೊನೆಗೊಳ್ಳುತ್ತಿತ್ತು. ಆದರೆ ನಾವು ಅವರಿಬ್ಬರ ನಡುವೆ ಭಿನ್ನತೆ ಸೃಷ್ಟಿಸಿದ್ದೇವೆ ಎಂದು ವೈದೇಹಿ ಹೇಳಿದರು.
ಗಾಂಧಿ ಅಧ್ಯಯನ ಕೇಂದ್ರದ ಸಂಯೋಜಕ ವಿನೀತ್‌ ರಾವ್‌ ಮಾತನಾಡಿ, ವ್ಯವಧಾನ ಮತ್ತು ಮುಕ್ತ ಮನಸ್ಸಿನಿಂದ ಮಾತ್ರ ಗಾಂಧೀಜಿಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ. ಗಾಂಧೀಜಿಯನ್ನು ವೈಭವೀಕರಿಸದೆ ಸ್ವೀಕರಿಸಬೇಕು. ಆಗ ಅವರ ಪ್ರಸ್ತುತತೆ ಅನುಭವಕ್ಕೆ ನಿಲುಕುತ್ತದೆ ಎಂದರು.

ಚಿಂತಕ ಫ‌ಣಿರಾಜ್‌ ಮಾತನಾಡಿ, ಮನಪರಿವರ್ತನೆಯಿಂದ ಜಾತಿ ವೈಷಮ್ಯ ದೂರವಾಗುತ್ತದೆ ಎಂದು ಗಾಂಧಿ ಪ್ರತಿ
ಪಾದಿಸಿದ್ದರು. ಅಂಬೇಡ್ಕರ್‌ ಕೂಡ ಹಕ್ಕಿನ ಜತೆ ಸಹೋದರತ್ವವೂ ಬೇಕು ಎಂದಿದ್ದರು ಎಂದು ಹೇಳಿದರು.
ರಥಬೀದಿ ಗೆಳೆಯರು ಸಂಘಟನೆಯ ಅಧ್ಯಕ್ಷ ಮುರಲೀಧರ ಉಪಾಧ್ಯ, ಕಾರ್ಯದರ್ಶಿ ಸುಬ್ರಹ್ಮಣ್ಯ ಜೋಷಿ ಉಪಸ್ಥಿತರಿದ್ದರು. ಉಪಾಧ್ಯಕ್ಷ ನಾಗೇಶ್‌ ಉದ್ಯಾವರ ಸ್ವಾಗತಿಸಿದರು. ಸಂತೋಷ್‌ ಕುಮಾರ್‌ ಹಿರಿಯಡಕ ಕಾರ್ಯಕ್ರಮ ನಿರ್ವಹಿಸಿದರು. 


Trending videos

Back to Top