CONNECT WITH US  

"ಸಿಬಂದಿ ತಮ್ಮ ಮನೆಯಂತೆ ಕರ್ತವ್ಯ ನಿರ್ವಹಿಸಬೇಕು'

ಗ್ರಾ.ಪಂ.ನೌಕರರ ಸಮಾವೇಶ

ಕೋಟ ಶ್ರೀನಿವಾಸ ಪೂಜಾರಿ ಸಮಾವೇಶ ಉದ್ಘಾಟಿಸಿದರು. 

ಉಡುಪಿ: ಗ್ರಾ.ಪಂ.ಸಿಬಂದಿ  ಪಂಚಾಯತ್‌ ಕೆಲಸವನ್ನು  ತಮ್ಮ ಮನೆಯ ಕೆಲಸದಂತೆ  ನಿರ್ವಹಿಸಬೇಕು ಎಂದು ವಿಧಾನಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. 

ಮಣಿಪಾಲದ ರಜತಾದ್ರಿಯಲ್ಲಿ ರಾಜ್ಯ ಗ್ರಾ. ಪಂ.  ನೌಕರರ ಶ್ರೇಯೋಭಿವೃದ್ಧಿ ಸಂಘದ ಆಶ್ರಯದಲ್ಲಿ ನಡೆದ ನೌಕರರ ಸಮಾವೇಶ , ಅಭಿನಂದನ  ಕಾರ್ಯಕ್ರಮ ಉದ್ಘಾಟಿಸಿ ಅವರು  ಮಾತನಾಡಿದರು.

ಗ್ರಾ.ಪಂ.ಗಳು ಒಂದು ಸರಕಾರ ಎಂಬ ಕಲ್ಪನೆಗೆ ಒತ್ತುಕೊಡಲಾಗಿದೆ. 3ನೇ ಹಣಕಾಸು ಆಯೋಗ ನಡೆಸಿದ ಸರ್ವೆಯಲ್ಲಿ ಕರ್ನಾಟಕದ ಗ್ರಾ.ಪಂ.ಗಳು ಉತ್ತಮ ಸಾಧನೆ ಮಾಡಿವೆ.  ಈ ಹಿಂದೆ ಗ್ರಾ.ಪಂ.  ನೌಕರರ ಸಮಸ್ಯೆಗಳ ಕುರಿತು ಅಷ್ಟೊಂದು ಚರ್ಚೆ ನಡೆಯುತ್ತಿರಲಿಲ್ಲ. ಆದರೆ ಕಳೆದ ಐದು ವರ್ಷಗಳಲ್ಲಿ ವಿಧಾನಮಂಡಲದಲ್ಲಿ ಸಾಕಷ್ಟು  ಬಾರಿ ಚರ್ಚೆ  ಆಗಿದೆ.  30 ಸಾವಿರ ನೌಕರರನ್ನು ಖಾಯಂಗೊಳಿಸಲಾಗಿದೆ ಎಂದರು. 

ಪಂ.ಗಳಲ್ಲಿ ಈಗ ಕೆಲಸ ಮಾಡುತ್ತಿರುವ ಹಲವು ಸಿಬಂದಿಗಳಿಗೆ ಶೈಕ್ಷಣಿಕ ಅರ್ಹತೆ ಕಡಿಮೆ ಇರುವುದರಿಂದ  ಇವರ ಖಾಯಮಾತಿ ಆಗುತ್ತಿಲ್ಲ. ಆದರೆ ಅವರ ಸೇವೆ ಅಗತ್ಯವಿರುವ ಹಿನ್ನೆಲೆಯಲ್ಲಿ ಒನ್‌ಟೈಮ್‌ ಸೆಟ್ಲಮೆಂಟ್‌  ಮಾಡಿ ಈ ಸಮಸ್ಯೆ ಪರಿಹರಿಸಲು ಸಚಿವರಲ್ಲಿ  ತಿಳಿಸಲಾಗಿದೆ. ಮುಂದೆ ನೇಮಕ ಮಾಡಿಕೊಳ್ಳುವವರನ್ನು  ಶೈಕ್ಷಣಿಕ ಅರ್ಹತೆ ಮೇಲೆ ನೇಮಕ ಮಾಡುವಂತೆ ಅವರಲ್ಲಿ  ತಿಳಿಸಲಾಗಿದೆ.  ಮುಖ್ಯಮಂತ್ರಿ ಕುಮಾರಸ್ವಾಮಿ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭ ಬಾಪೂಜಿ ಕೇಂದ್ರಗಳಲ್ಲಿ 100 ಸೇವೆಗಳಲ್ಲಿ  ಒಂದು ಸೇವೆಯೂ ಲಭ್ಯವಾಗುತ್ತಿಲ್ಲ ಎನ್ನುವುದರ ಕುರಿತು ತಿಳಿಸಿದಾಗ ಇನ್ನೊಂದು ವಾರದಲ್ಲಿ ಸಭೆ ಕರೆಯುತ್ತೇನೆ, ಅದರಲ್ಲಿ ಈ ಸಮಸ್ಯೆ ಕುರಿತು ಚರ್ಚಿಸುವುದಾಗಿ ತಿಳಿಸಿದ್ದಾರೆ ಎಂದರು.  

ನೌಕರರ ಸಮಸ್ಯೆಗಳ ಕುರಿತು ಜನ ಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಯಿತು. ಜನ ಪ್ರತಿನಿಧಿಗಳು, ಅಧಿಕಾರಿಗಳನ್ನು ಅಭಿನಂದಿಸಲಾಯಿತು. 
 
ಜಿಲ್ಲಾ ಸಮಿತಿ ಅಧ್ಯಕ್ಷ ಉದಯ್‌ ಎಸ್‌. ಶೆಟ್ಟಿ  ಅಧ್ಯಕ್ಷತೆ ವಹಿಸಿದ್ದರು. ಶಾಸಕ ಲಾಲಾಜಿ ಆರ್‌. ಮೆಂಡನ್‌, ಜಿ.ಪಂ. ಅಧ್ಯಕ್ಷ ದಿನಕರಬಾಬು, ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಉಡುಪಿ ತಾ.ಪಂ ಅಧ್ಯಕ್ಷೆ ನಳಿನಿ ಪ್ರದೀಪ್‌ ರಾವ್‌, ಜಿ.ಪಂ ಸದಸ್ಯರಾದ ಗೀತಾಂಜಲಿ ಸುವರ್ಣ, ಶಿಲ್ಪಾ ಸುವರ್ಣ, ಜಿ.ಪಂ ಸಿಇಒ ಶಿವಾನಂದ ಕಾಪಶಿ, ತಾ.ಪಂ ಸಹಾಯಕ ನಿರ್ದೇಶಕ ಹರಿಕೃಷ್ಣ ಶಿವತ್ತಾಯ, ಎಚ್‌.ವಿ.  ಇಬ್ರಾಹಿಂಪುರ, ಉಡುಪಿ ತಾ.ಪಂ ಇ.ಒ. ಮೋಹನ್‌ರಾಜ್‌, ಸಂಘದ ರಾಜ್ಯಾಧ್ಯಕ್ಷ ದೇವಿಪ್ರಸಾದ್‌ ಬೊಳ್ಮ, ತಾ.ಪಂ.  ಸದಸ್ಯರಾದ ಧನಂಜಯ, ವಸಂತಿ, ಸಂಧ್ಯಾಕುಮಾರಿ ಉಪಸ್ಥಿತರಿದ್ದರು.
  
ರಾಜ್ಯ ಪ್ರಧಾನ ಕಾರ್ಯದರ್ಶಿ ಪದ್ಮನಾಭ ಆರ್‌. ಸ್ವಾಗತಿಸಿ, ಪ್ರಶಾಂತ್‌ ಶೆಟ್ಟಿ ಹಾವಂಜೆ ನಿರೂಪಿಸಿ, ಅಭಿಷೇಕ್‌ ಸೇರಿಗಾರ್‌ ವಂದಿಸಿದರು. 

ತೆರಿಗೆ ಪಾವತಿಯಲ್ಲಿ ಕರಾವಳಿಗರೆ ಮುಂದು
ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ವಾರ್ಷಿಕ  ಶೇ. 70 ದಿಂದ  ಶೇ. 80ರ‌ಷ್ಟು ತೆರಿಗೆ ಸಂಗ್ರಹವಾಗುತ್ತಿದೆ. ಆದರೆ ಉತ್ತರ ಕರ್ನಾಟಕದ ಗುಲ್ಬರ್ಗಾ ಮೊದಲಾದ ಭಾಗಗಳಲ್ಲಿ ಶೇ. 1ರಷ್ಟು ಕೂಡ ತೆರಿಗೆ ಪಾವತಿ ಆಗುತ್ತಿಲ್ಲ.ಗ್ರಾ.ಪಂ.ಸದಸ್ಯರೇ ತೆರಿಗೆ ಪಾವತಿ ಮಾಡಿದ್ದರೂ ಗ್ರಾ.ಪಂ.ಅಭಿವೃದ್ಧಿಗೆ ಸಹಾಯಕವಾಗುತ್ತಿತ್ತು.
- ಕೋಟ ಶ್ರೀನಿವಾಸ ಪೂಜಾರಿ,ವಿಧಾನಪರಿಷತ್‌ ವಿಪಕ್ಷ ನಾಯಕ


Trending videos

Back to Top