CONNECT WITH US  

ಹಸಿರು ಹೊನ್ನಿನ ಹೈಗುಂದದಲ್ಲಿ ದುರ್ಗಾಂಬಾ ಸನ್ನಿಧಿ

ದೇವಿಗೆ ದಿನಕ್ಕೊಂದು ಅಲಂಕಾರ ಸೇವೆ

ಹೈಗುಂದ ಸುತ್ತಮುತ್ತಲಿನ ದೃಶ್ಯಗಳು.

ಹೊನ್ನಾವರ: ಶರಾವತಿ ನದಿ ಮಧ್ಯೆ ಇರುವ 100ಎಕರೆ ವಿಸ್ತೀರ್ಣದ ಹೈಗುಂದ ನಡುಗಡ್ಡೆ ಹಸಿರು ಹೊನ್ನಿನಿಂದ ಶೋಭಿಸುತ್ತಿದೆ. 

ಗ್ರಾಮದೇವತೆ ದುರ್ಗಾಂಬಾ ದಿನಕ್ಕೊಂದು ಅಲಂಕಾರದಲ್ಲಿ ಕಂಗೊಳಿಸುತ್ತಿದ್ದಾಳೆ.  ಮಯೂರವರ್ಮ ಬ್ರಾಹ್ಮಣರಿಗೆ ವಿದೇಶಿ ದಾಳಿಯಿಂದ ರಕ್ಷಣೆ ಪಡೆದು ಯಜ್ಞ, ಜಾಗಾದಿಗಳನ್ನು ನಡೆಸಿಕೊಂಡು ಹೋಗಲು ಈ ನಡುಗಡ್ಡೆಯನ್ನು ಉಂಬಳಿಯಾಗಿ ಕೊಟ್ಟಿದ್ದ, ಬಹುಕಾಲ ಇಲ್ಲಿ ಯಜ್ಞ, ಯಾಗಾದಿಗಳು ನಡೆದಿದ್ದವು ಎಂಬುದಕ್ಕೆ ಗುಹೆ, ಭಿನ್ನವಾದ ಮೂರ್ತಿಗಳು, ಯಜ್ಞಕುಂಡ ಈಗಲೂ ಕಾಣಸಿಗುತ್ತವೆ. ಹೈಗರ ಗುಂದ ಹೈಗುಂದವಾಯಿತು. ನೆರೆಯಿಂದ ಪ್ರತಿಬಾರಿ ಸಂಕಟಪಡುತ್ತಿದ್ದ ಈ ನಡುಗಡ್ಡೆಯ ಬ್ರಾಹ್ಮಣರು ಒಬ್ಬೊಬ್ಬರಾಗಿ ಊರು ಬಿಟ್ಟಿದ್ದರು. ಪ್ರತಿವರ್ಷ ನೆರೆ ತರುವ ಕೆಂಪು ಮಣ್ಣು, ಒಣಗಿದ ಎಲೆಗಳ ರಾಶಿಯಿಂದಾಗಿ ಗೊಬ್ಬರವಿಲ್ಲದೆ ಸಮೃದ್ಧ ಬೆಳೆ ಬರುತ್ತಿತ್ತು. ಇಲ್ಲಿಯ ಬೆಲ್ಲ ಪ್ರಸಿದ್ಧವಾಗಿತ್ತು. ಈಗ ಎರಡು ಬ್ರಾಹ್ಮಣ ಕುಟುಂಬಗಳು, 63 ಶ್ರಮಜೀವಿ ರೈತ ಕುಟುಂಬಗಳು ಈ ನಡುಗಡ್ಡೆಯಲ್ಲಿದೆ. 1980ರ ನೆರೆ ಈ ಊರನ್ನು ಸಂಪೂರ್ಣ ಮುಳುಗಿಸಿ ಮನೆಗಳ ಮೇಲೆ 6ಅಡಿ ನೀರು ಹರಿದು ಹೋಗಿತ್ತು. ಆಗ ಹೆಚ್ಚಿನವರು ಊರು ಬಿಟ್ಟಿದ್ದರು. ಈ ವರ್ಷದ ನೆರೆ ಗದ್ದೆ, ತೋಟಗಳನ್ನು ಹಾಯ್ದು ಹೋಗಿದೆ. ನೆರೆ ಇಳಿದ ಭತ್ತದ ಗದ್ದೆಗಳು ಹಸಿರಿನಿಂದ ಕಂಗೊಳಿಸುತ್ತಿವೆ.

ಮಂಕಾಳ ವೈದ್ಯ ಶಾಸಕರಾಗಿದ್ದಾಗ ಹೈಗುಂದಕ್ಕೆ ಸೇತುವೆ ನಿರ್ಮಾಣವಾಗಿದೆ. ಸುತ್ತಲೂ ನೀರು ಗುಡ್ಡ, ಬೆಟ್ಟಗಳಿಂದ ಆವೃತವಾದ ಈ ಊರು ಸುಂದರ. ಇಲ್ಲಿಯ ಪ್ರಕೃತಿಗೆ ಪೂರಕವಾಗಿ ದುರ್ಗಾಂಬಾ ದೇವಸ್ಥಾನವಿದೆ. ಶ್ರಾವಣ ಮಾಸದಲ್ಲಿ ದೇವಿಗೆ ದಿನಕ್ಕೊಂದು ಅಲಂಕಾರ, ಒಂದು ದಿನ ಮಲ್ಲಿಗೆ ಮೈತುಂಬಿದರೆ, ವರಮಹಾಲಕ್ಷ್ಮೀ ವ್ರತದ ದಿನ ದೇವಿಗೆ ಅರಶಿಣದ ಅಲಂಕಾರ. ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದಂತಹ, ಸ್ಪಟಿಕದಂತಹ ಶರಾವತಿ ಪ್ರವಾಹ ಹರಿಯುತ್ತಿರುವಾಗ ಎತ್ತರದಲ್ಲಿ ಅರಣ್ಯ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಸಮಯ ಕಳೆಯುವುದು ಅಪ್ಯಾಯಮಾನ.


Trending videos

Back to Top