CONNECT WITH US  

ಅಮರ ಕೆಮರ ಕ್ಷಣ

ಇಂದು ವಿಶ್ವ ಛಾಯಾಗ್ರಹಣ ದಿನ !

ಫೊಟೊ : ಆರ್ನಾಲ್ಡೊ ಪೌಲೋಚೆ

ಬೆಂಗಳೂರಿನ ಯೂತ್‌ ಫೋಟೊಗ್ರಾಫಿಕ್‌ ಸೊಸೈಟಿ (YPS)ಯ ಬಗ್ಗೆ ಎಲ್ಲರಿಗೂ ಗೊತ್ತು. ಇನ್ನು ಮೂರು ವರ್ಷ ಕಳೆದರೆ ಈ ಸಂಸ್ಥೆಗೆ 50 ವರ್ಷಗಳಾಗುತ್ತವೆ. ಕರ್ನಾಟಕ ಸರಕಾರ ಯುವಜನಸೇವಾ ಮತ್ತು ಕ್ರೀಡಾ ಇಲಾಖೆಯ ಸಹಕಾರದೊಂದಿಗೆ ಕೆಲವು ಉತ್ಸಾಹಿ ಛಾಯಾಗ್ರಾಹಕರು ಅಂದು ಈ ಸಂಸ್ಥೆಯನ್ನು ಆರಂಭಿಸಿದ್ದರು. ಈಗ (YPS) ಸಂಸ್ಥೆಯು ಅನೇಕ ಛಾಯಾಚಿತ್ರ ಸ್ಪರ್ಧೆಗಳನ್ನು ಏರ್ಪಡಿಸಿ ಅನೇಕ ಯುವ ಪ್ರತಿಭಾವಂತ ಛಾಯಾಗ್ರಾಹಕರು ವೇದಿಕೆಗೆ ಬರುವ ಅವಕಾಶ ಒದಗಿಸಿದೆ. ಇತ್ತೀಚೆಗೆ ಹತ್ತನೆಯ ವರ್ಷದ  ಇಂಟರ್‌ನ್ಯಾಷನಲ್‌ Yಕಖ ಸಲಾನ್‌-2018 ಸ್ಪರ್ಧೆಯನ್ನು ಏರ್ಪಡಿತ್ತು. ಈ ಸ್ಫರ್ಧೆಯಲ್ಲಿ ವಿವಿಧ ವಿಭಾಗಗಳಲ್ಲಿ ಬಹುಮಾನ ಬಂದ ಛಾಯಾಚಿತ್ರಗಳಲ್ಲಿ ಕೆಲವನ್ನು ಇಲ್ಲಿ ನೀಡಲಾಗಿದೆ.

ಫೊಟೊ : ಶಿವರುದ್ರಯ್ಯ ಕೆ.

ಈ ಸ್ಪರ್ಧೆಯಲ್ಲಿ 16 ದೇಶಗಳಿಂದ 3639 ಪ್ರವೇಶಿಕೆಗಳು ಬಂದಿದ್ದವು. ಒಟ್ಟು 86 ಫೋಟೊಗಳನ್ನು ವಿವಿಧ ವಿಭಾಗಗಳ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಫೋಟೊಗ್ರಫಿಯ ಬಗ್ಗೆ ಮಾತನಾಡುವಾಗಲೆಲ್ಲ ಎರಡು ಸ್ಪಷ್ಟವಾದ ಪ್ರವೃತ್ತಿಗಳು ಗಮನ ಸೆಳೆಯುತ್ತವೆ. ನಮ್ಮಂಥ ಹಿರಿಯರಿಗೆ ಡಾರ್ಕ್‌ರೂಮಿನಲ್ಲಿ ಮಾಡಿದ ಕೆಲಸವೇ ನೆನಪಿಗೆ ಬರುತ್ತದೆ. ಆಗ ರಾತ್ರಿ ಇಡೀ ಕೆಲಸ ಮಾಡಿ ಒಂದು ಫೋಟೊವನ್ನು ಪ್ರಿಂಟ್‌ ಹಾಕಿಸುವುದು ಸಾಧ್ಯವಾಗುತ್ತಿತ್ತು. ಆ ಪ್ರಿಂಟ್‌ನಲ್ಲಿಯೂ ಮ್ಯಾನುವಲ್‌ ಆಗಿ ಅನೇಕ ಕರೆಕ್ಷನ್‌ಗಳನ್ನು ಮಾಡುತ್ತಿದ್ದೆವು. ಅದು, ತಾತ್ವಿಕವಾಗಿ ಸ್ವೀಕೃತವಾದ ಎಡಿಟಿಂಗ್‌ ಆಗಿತ್ತು. ಒಂದು ರೀತಿ ಶಿಲ್ಪವನ್ನು ಕೆತ್ತಿ ರೂಪಿಸಿದ ಹಾಗೆ. "ಸ್ಕಿಲ್‌'ಗೆ ಸಂಬಂಧಿಸಿದ ಕೆಲಸ ಇದು. ಒಂದು ಮೂರ್ತಿಯನ್ನು  ಒಬ್ಬ ಒಮ್ಮೆ ಕೆತ್ತಿ ರೂಪಿಸಿದರೆ ಅದನ್ನು ಮತ್ತೂಬ್ಬ ಕಾಪಿ ಮಾಡಲಾರ. ಮಾಡಿದರೂ ಅದು ಅನುಕರಣೆ ಮಾತ್ರವಾದೀತು. ಆಗಿನ ಕಾಲದ ಫೋಟೊ ಕೂಡಾ ಹಾಗೆಯೇ. ಒಬ್ಬ ಛಾಯಾಗ್ರಾಹಕ ತೆಗೆದ ಫೋಟೊ ಎಕ್ಸ್‌ ಕ್ಲೂಸಿವ್‌ ಆಗಿರುತ್ತಿತ್ತು. ಅವನು ಡಾರ್ಕ್‌ರೂಮಿನಲ್ಲಿ ಮಾಡುವ ಕೆಲಸ ಅವನಿಗೇ ಸಾಧ್ಯವಾಗುವಂಥಾದ್ದು. ಅನ್ಯರಿಗೆ ಅಂಥ ಫೋಟೊ ರೂಪಿಸುವುದು ಅಸಾಧ್ಯ.

ಫೊಟೊ : ನಿಖೀಲ್‌ ಭಕ್ತವತ್ಸಲ್‌

ಡಿಜಿಟಲ್‌ ಟೆಕ್ನಾಲಜಿ ಬಂದ ಮೇಲೆ ಇಂಥ "ಕ್ರಿಯೇಟಿವ್‌ ಡೆಫಿನಿಶನ್‌'ಗಳು ಅಲ್ಲಾಡಿಬಿಟ್ಟಿವೆ. ಒಬ್ಬನಂತೆ ಇನ್ನೊಬ್ಬನಿಗೆ ಛಾಯಾಚಿತ್ರ ತೆಗೆಯುವುದು ಸುಲಭವೆನಿಸುವ ಸ್ಥಿತಿ ಬಂದಿದೆ. ಇದರಿಂದ ಛಾಯಾಗ್ರಾಹಕರು ಸಂಖ್ಯೆಯಲ್ಲಿ ಹೆಚ್ಚಾಗಿರುವುದು ಧನಾತ್ಮಕ ಅಂಶವೆಂದು ಕರೆಯ ಬಹುದಾದರೂ ತಮ್ಮ "ಅನನ್ಯತೆ'ಯನ್ನು ಸ್ಥಾಪಿಸಬೇಕಾದರೆ ಯುವ ಪೋಟೊಗ್ರಾಫ‌ರ್‌ಗಳ ಮೇಲೆ ದೊಡ್ಡ ಸವಾಲೇ ಇದೆ; ಅದು ಹಿಂದಿನವರಿಗಿಂತ ದೊಡ್ಡ ಸವಾಲು. ಒಬ್ಬ ಶ್ರಮವಹಿಸಿ ಕ್ಲಿಕ್ಕಿಸಿ ಒಳ್ಳೆಯ ಫೋಟೊ ತೆಗೆದರೂ "ಇದು ಫೋಟೊಶಾಪ್‌ನಲ್ಲಿ ಮಾಡಿರಬೇಕು' ಎಂದು ಹೀಗಳೆದು ಉದ್ಗರಿಸುವ ಮಂದಿಯೇ ಹೆಚ್ಚು. ಹಾಗಾಗಿ "ಇದು ನನ್ನ ಕೌಶಲದಿಂದಲೇ ತೆಗೆದ ಫೋಟೊ' ಎಂದು ಸ್ಥಾಪನೆ ಮಾಡಲು ಫೋಟೊಗ್ರಾಫ‌ರ್‌ ತುಂಬ ಪ್ರಯತ್ನ ಪಡಬೇಕಿದೆ.

ನಾನು ಗಮನಿಸಿದಂತೆ, ಇಂಥ ಹೊಸಕಾಲದ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ರೀತಿಯಲ್ಲಿ ವೈಪಿಎಸ್‌ನ ಸ್ಪರ್ಧಾಳುಗಳು ಭಾಗವಹಿಸಿದ್ದಾರೆ. ಡಿಜಿಟಲ್‌ಕ್ರಾಂತಿ ಎಲ್ಲೆಡೆ ಹಬ್ಬಿರುವ ಈ ದಿನಗಳಲ್ಲಿಯೂ ಕೆಲವು ದೇಶಗಳಲ್ಲಿ ಈಗಲೂ "ಪ್ರಿಂಟ್‌'ಗೆ ಹೆಚ್ಚಿನ ಮಹತ್ವ ಕೊಡುತ್ತಾರೆ ಎಂದರೆ ನೀವು ನಂಬುತ್ತೀರಾ? ಸಾಫ್ಟ್ ಕಾಪಿಗಿಂತ ಮುದ್ರಿತ ಪ್ರತಿಗಳನ್ನೇ ಅವರು ಇಷ್ಟಪಡುತ್ತಾರೆ. ಹಾಗಾಗಿ, ಈ ಸಲದ ಸ್ಪರ್ಧೆಯಲ್ಲಿ ಮುದ್ರಿತ ಮತ್ತು ಡಿಜಿಟಲ್‌- ಎರಡೂ ವಿಭಾಗಗಳಲ್ಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಇದಕ್ಕೆ ಬಂದ ಪ್ರತಿಕ್ರಿಯೆಯೂ ಅತ್ಯುತ್ತಮವಾಗಿತ್ತು.

ಫೊಟೊ : ಪ್ರೇಮಾ ಕಾಕಡೆ

ಅಂತೂ ಎಲ್ಲ ಕ್ಷೇತ್ರಗಳಂತೆ ಫೋಟೊಗ್ರಫಿಯೂ ಒಂದು ಸಂಕ್ರಮಣ ಸ್ಥಿತಿಯಲ್ಲಿದೆ. ಕಾರ್ಖಾನೆಗಳಲ್ಲಿ ಪ್ಲಾಸ್ಟರ್‌ ಆಫ್ ಫ್ಯಾರಿಸ್‌ನ ಮೂರ್ತಿಗಳು ರಾಶಿರಾಶಿಯಾಗಿ ಉತ್ಪಾದನೆಗೊಳ್ಳುತ್ತ ಮನುಷ್ಯನ ಕರಕೌಶಲಕ್ಕೆ ಪ್ರಾಶಸ್ತ್ಯ ಕಡಿಮೆಯಾಗುತ್ತಿರುವ ಈ ದಿನಗಳಲ್ಲಿ ನಿಜವಾದ ಕ್ರಿಯೇಟಿವಿಟಿ ಇರುವ ಛಾಯಾಗ್ರಾಹಕನೂ ಒಂದು ರೀತಿಯ ತಲ್ಲಣವನ್ನು ಅನುಭವಿಸುತ್ತಿದ್ದಾನೆ. ಒಳ್ಳೆಯ ಬೆಳಕು, ವರ್ಣದ ಸಂಯೋಜನೆಯಲ್ಲಿ ಫೋಟೊ ತೆಗೆದರೂ, "ಇದು ಡಿಜಿಟಲ್‌, ಈಗ ಇದನ್ನೆಲ್ಲ ತೆಗೆಯುವುದು ಸುಲಭ' ಎಂಬ ಮಾತನ್ನು ಕೇಳಬೇಕಾಗಿದೆ.

ಹೀಗೆ ಯೋಚಿಸುತ್ತಿರುವಾಗಲೇ ಆಗಸ್ಟ್‌ 19 ಬಂದಿದೆ. ಇಂದು ವರ್ಲ್ಡ್ ಫೋಟೊಗ್ರಫಿ ಡೇ ! ಅಂದ ಹಾಗೆ ಬೆಂಗಳೂರಿನ ಚಿತ್ರಕಲಾ ಪರಿಷತ್‌ನಲ್ಲಿ  YPS  ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸುವ ಕಾರ್ಯಕ್ರಮವೂ ಇಂದು ಇದೆ. ಬಹುಮಾನಿತ ಛಾಯಾಚಿತ್ರಗಳ ಪ್ರದರ್ಶನವೂ ಇದೆ.

ಕೆ. ಎಸ್‌. ರಾಜಾರಾಮ್‌

Trending videos

Back to Top