CONNECT WITH US  

ನಾಲ್ಕು ಕಿರುಗತೆಗಳು

ದೊಡ್ಡ ಕಳ್ಳ 
ಒಬ್ಬ ಕಳ್ಳನಿದ್ದ , ಮತ್ತೂಬ್ಬ ದೊಡ್ಡ ಕಳ್ಳನಿದ್ದ. ಕಳ್ಳ , ಅನೇಕ ದಿನಗಳವರೆಗೆ ಹೊಂಚು ಹಾಕಿ, ಸಮಯ ನೋಡಿ ಕದಿಯಲು ಮನೆಗಳಿಗೆ ನುಗ್ಗುತ್ತಿದ್ದ. ಎಲ್ಲಾದರೂ ಸಿಕ್ಕಿಬಿದ್ದರೆ ಎಂಬ ಭಯ ಅವನನ್ನು ಸದಾ ಕಾಡುತ್ತಿತ್ತು. ಐದು ಕಳ್ಳತನದಲ್ಲಿ ಕಡೇಪಕ್ಷ ಎರಡು ಬಾರಿ ಸಿಕ್ಕಿಬೀಳುತ್ತಿದ್ದ.
ಕಳ್ಳ ಪೊಲೀಸ್‌ ಠಾಣೆಯಲ್ಲಿ ಸಾಕಷ್ಟು ಹೊಡೆತಗಳನ್ನು ತಿನ್ನುತ್ತಿದ್ದ. ಅಮ್ಮ-ಅಕ್ಕನನ್ನು ನಿಂದಿಸುವಂಥ ಬೈಗುಳಗಳನ್ನು ಹೊಟ್ಟೆತುಂಬಾ ತಿನ್ನುತ್ತಿದ್ದ. ಆದರೂ ಅವನು, ನಾನು ಕಳ್ಳತನ ಮಾಡಿದೆನೆಂದು ಒಪ್ಪಿಕೊಳ್ಳುತ್ತಿರಲಿಲ್ಲ. ವರ್ಷಗಟ್ಟಲೆ ಅವನ ಬಗ್ಗೆ ಮೊಕದ್ದಮೆಗಳು ನಡೆಯುತ್ತಿದ್ದವು. ತನ್ನ ಅಪರಾಧಕ್ಕಿಂತಲೂ ಹೆಚ್ಚು ಶಿಕ್ಷೆಯನ್ನು ಅನುಭವಿಸಿ ಜೈಲಿನಿಂದ ಹೊರ ಬರುತ್ತಿದ್ದ. ಮತ್ತೆ ಕಳ್ಳತನ ಮಾಡುತ್ತಿದ್ದ. ಮತ್ತೆ ಜೈಲಿಗೆ ಹೋಗುತ್ತಿದ್ದ.

ಕಳ್ಳನ ಹೆಂಡತಿ-ಮಕ್ಕಳು ಹೊರಗೆ ಹಸಿವೆಯಿಂದ ಸಾಯುತ್ತಿದ್ದರೆ, ಕಳ್ಳ ಜೈಲಿನಲ್ಲಿ ಹಸಿವೆಯಿಂದ ಸಾಯುತ್ತಿದ್ದ. ಎಷ್ಟಾದರೂ ಅವನು ಕಳ್ಳನಾಗಿದ್ದನಲ್ಲ !
ದೊಡ್ಡ ಕಳ್ಳನಿಗೆ ಇಂಥ ಸಮಸ್ಯೆಯಿರಲಿಲ್ಲ. ಅವನು ಕದಿಯುವ ಉದ್ದೇಶದಿಂದ ಮನೆಗಳಿಗೆ ನುಗ್ಗುತ್ತಿರಲಿಲ್ಲ. ಬೀಗಗಳನ್ನು ಒಡೆಯುತ್ತಿರಲಿಲ್ಲ. ಸಾಮಾನುಗಳನ್ನು ಒಟ್ಟುಮಾಡಿ ಕದಿಯುತ್ತಿರಲಿಲ್ಲ. ಅವನು ವಿಹಿತರೀತಿಯಲ್ಲಿಯೇ ಮನೆಯ ಬಾಗಿಲನ್ನು ತಟ್ಟುತ್ತಿದ್ದ ಅಥವಾ ಕಾಲಿಂಗ್‌ ಬೆಲ್‌ ಒತ್ತುತ್ತಿದ್ದ. ಸೂಟು-ಬೂಟು ಧರಿಸುತ್ತಿದ್ದ ಅವನನ್ನು ಒಳ ಕರೆದು ಕುರ್ಚಿ ಅಥವಾ ಸೋಫಾದಲ್ಲಿ ಕೂರಿಸುತ್ತಿದ್ದರು. ಅವನು ಓರ್ವ ಸಜ್ಜನ ಮತ್ತು ಗೌರವಾನ್ವಿತ ವ್ಯಕ್ತಿಯಂತೆ ವರ್ತಿಸುತ್ತಿದ್ದ. ತನ್ನನ್ನು ಸತ್ಕರಿಸಿದವರನ್ನು ಗೌರವದಿಂದ ಕಾಣುತ್ತಿದ್ದ. ಅವರನ್ನು ಗದ್ಗದಗೊಳಿಸುತ್ತಿದ್ದ. ಅವರಿಂದ ಸಾಮಾನುಗಳನ್ನು ಒಟ್ಟುಮಾಡಿಕೊಂಡು, ಬೀಳೊಳ್ಳುತ್ತಿದ್ದ. ಮತ್ತೆ ಬರುವುದಾಗಿ ಮಾತು ಕೊಡುತ್ತಿದ್ದ , ಆದರೆ ಮತ್ತೆಂದೂ ಬರುತ್ತಿರಲಿಲ್ಲ.

ಮೂರ್‍ನಾಲ್ಕು ಜನ ಅವನ ವಿರುದ್ಧ ಗಲಾಟೆ ಮಾಡುತ್ತಿದ್ದರು. ಪೊಲೀಸರು ಶಾಂತಿ-ವ್ಯವಸ್ಥೆಯನ್ನು ಕಾಪಾಡಲು ತಮ್ಮ ಮೌಲಿಕ ಮತ್ತು ಏಕಮಾತ್ರ ಕರ್ತವ್ಯವನ್ನು ನಿರ್ವಹಿಸುತ್ತಾ ಅವರನ್ನು ಲಾಠಿಗಳಿಂದ ಹೊಡೆಯುತ್ತಿದ್ದರು. ಹೆಚ್ಚು ಹಟಮಾಡಿದರೆ ಅವರನ್ನು ಜೈಲಿಗೆ ಅಟ್ಟುತ್ತಿದ್ದರು.
ಆಗ ದೊಡ್ಡ ಕಳ್ಳನ ಸಂದರ್ಶನ ಪತ್ರಿಕೆಗಳಲ್ಲಿ ಮುದ್ರಣಗೊಳ್ಳುತ್ತಿತ್ತು. ಅವನು ಸಂದರ್ಶನದಲ್ಲಿ ಹೇಳುತ್ತಿದ್ದ: 

""ಹೌದು, ನಾನು ಕಳ್ಳ. ಆದರೆ ನನ್ನ ಮೇಲೆ ಕೈಮಾಡುವವರು ಯಾರು? ನನ್ನನ್ನು ಹಿಡಿಯುವವರು ಸಾಚ ವ್ಯಕ್ತಿಗಳಲ್ಲ. ಅವರು ನನಗಿಂತ ದೊಡ್ಡ ಕಳ್ಳರು. ಅವರು ನನನ್ನೂ ಕೊಳ್ಳೆ ಹೊಡೆಯುತ್ತಾರೆ. ಮೊದಲು ಅವರನ್ನು ಹಿಡಿಯಲು ಸಾಧ್ಯವಾದರೆ, ಹಿಡಿಯಿರಿ. ಆಮೇಲೆ ನನ್ನನ್ನು ಹಿಡಿಯಿರಿ. ಓ.ಕೆ.! ಟಾ-ಟಾ, ಬೈ -ಬೈ!'' ಹೀಗೆ ಹೇಳುವಾಗ ಅವನ ಮುಖದಲ್ಲಿ ಮುಗುಳ್ನಗೆ ಸೂಸುತ್ತಿತ್ತು. ಅದನ್ನು ಕ್ಯಾಮರಾಗಳು ತಕ್ಷಣ ಸೆರೆ ಹಿಡಿಯುತ್ತಿದ್ದವು. ಹೀಗೆ ಹೇಳುವಾಗ ಅವನ ಮಾತುಗಳಲ್ಲಿ ಅದ್ಭುತ ಆತ್ಮವಿಶ್ವಾಸವಿರುತ್ತಿತ್ತು. ಅದನ್ನು ಸಂದರ್ಶನಕಾರರು ತಕ್ಷಣ ನೋಟ್‌ ಮಾಡಿಕೊಳ್ಳುತ್ತಿದ್ದರು.
ಅವನು ಪ್ರತಿ ಬಾರಿಯೂ ಆರೋಪಗಳಿಂದ ಮುಕ್ತನಾಗುತ್ತಿದ್ದ. ಮರುದಿನವೇ ಅವನು ಮಂತ್ರಿಯೊಬ್ಬರಿಗೆ ಹೂ-ಹಾರವನ್ನು ಹಾಕುವ ದೃಶ್ಯ ನೋಡಬಹುದಿತ್ತು ಅಥವಾ ಅಧಿಕಾರಿಯೊಬ್ಬರ ಕಚೇರಿಯಲ್ಲಿ ಉನ್ನತಮಟ್ಟದ ಸಭೆಯಲ್ಲಿ ಚರ್ಚಿಸಲು ಹೋಗುವುದನ್ನು ಕಾಣಬಹುದಿತ್ತು.
ಆಗ ಅವನು ಮತ್ತೂ ದೊಡ್ಡ ಕಳ್ಳತನವನ್ನು ಮಾಡುತ್ತಿದ್ದ. ಹಣಕ್ಕೆ ಬಲಾತ್ಕರಿಸುತ್ತಿದ್ದ. ಕಡೆಗೆ ಆ "ಆರೋಪ'ಗಳಿಂದ ಮುಕ್ತಗೊಳ್ಳುತ್ತಿದ್ದ.
ಕಡೆಗೆ ಎಂಥ ಪರಿಸ್ಥಿತಿ ಬಂತೆಂದರೆ, ಪೊಲೀಸರು ಅವನನ್ನು ಹಿಡಿಯುವುದಕ್ಕೆ ಬದಲು ಅವನ ಸುರಕ್ಷತೆಯ ಬಗ್ಗೆ ವ್ಯಗ್ರರಾದರು. ಅವನಿಗೆ ಬ್ಲಾಕ್‌ ಕಮ್ಯಾಂಡೊಗಳ ವ್ಯವಸ್ಥೆ ಮಾಡುವ ಬಗ್ಗೆ ಉನ್ನತಮಟ್ಟದ ವಿಚಾರ-ವಿಮರ್ಶೆ ನಡೆಯಿತು. ಈಗ ಅವನಿಗೆ ಪೊಲೀಸರಿಂದ ಅಪಾಯವಿರಲಿಲ್ಲ. ಆದರೆ ಅವನಿಗೆ ತನಗಿಂತಲೂ ದೊಡ್ಡ ಕಳ್ಳರಿಂದ ಅಪಾಯವಿತ್ತು.

ಗಂಡುಬೆಕ್ಕು-ಹೆಣ್ಣಿಲಿ 
ಹೆಣ್ಣಿಲಿಯೊಂದು ತನ್ನ ಬಿಲದಿಂದ ಹೊರಹೋಗಬೇಕೆಂದಿತ್ತು. ಆಗಲೇ ಅದರ ದೃಷ್ಟಿ ಹೊರಗೆ ನಿಂತಿದ್ದ ಗಂಡು ಬೆಕ್ಕಿನ ಮೇಲೆ ಬಿತ್ತು. ಹೆಣ್ಣಿಲಿ ದೇವರಿಗೆ ತನ್ನ ಜೀವ ಉಳಿಸಿದ್ದಕ್ಕೆ ಮನಸಾರೆ ನಮಸ್ಕರಿಸಿತು. ಅದು ಬಿಲದೊಳಗೆ ನಿಂತು ಗಂಡು ಬೆಕ್ಕು ಹೋಗುವುದನ್ನು ನಿರೀಕ್ಷಿಸಿತು. ಆದರೆ ಗಂಡು ಬೆಕ್ಕು ಅಲ್ಲಿಂದ ಕದಲುತ್ತಿರಲಿಲ್ಲ. ಹೆಣ್ಣಿಲಿ ಕಣ್ಣುರೆಪ್ಪೆಗಳನ್ನು  ಮಿಟಿಕಿಸದೆ, ಇದು ಯಾವಾಗ ಸಾಯುವುದೋ, ತಾನು ಯಾವಾಗ ಬಿಲದಿಂದ ಹೊರ ಹೋಗುವುದೋ ಎಂದು ಗಂಡು ಬೆಕ್ಕಿಗೆ ಶಾಪ ಹಾಕುತ್ತಿತ್ತು. ಕ್ರಮೇಣ ಅದು, ಇದು ಗಂಡು ಬೆಕ್ಕು, ತಾನು ಹೆಣ್ಣಿಲಿ ಎಂಬುದನ್ನು ಮರೆಯಿತು. ಅದು ಗಂಡು ಬೆಕ್ಕಿನ ಕಪ್ಪು-ಬಿಳುಪು ಮೈಬಣ್ಣ , ಅದರ ಹಳದಿ ಬಣ್ಣದ ಜಾಗರೂಕತೆಯ ಕಣ್ಣುಗಳು, ಅದರ ಮೀಸೆಗಳು, ಸೆಟೆದುಕೊಂಡ ಕಿವಿಗಳು, ಉದ್ದ ಕಾಲುಗಳು, ಎತ್ತರದ ನಿಲುವನ್ನು ನೋಡಿ ಮನಸೋತಿತು. ಇದು ನಿಜವಾದ ಗಂಡು! ನನ್ನ ಗಂಡನೂ ಇದ್ದಾನೆ, ಮೂರು ಕಾಸಿನ ಉಪಯೋಗವಿಲ್ಲ ! ಎಂದು ಯೋಚಿಸಿತು.

ಹೆಣ್ಣಿಲಿ ಗಂಡು ಬೆಕ್ಕಿನ ಪ್ರೇಮಪಾಶಕ್ಕೆ ಸಿಲುಕಿತು. ಅದು ಮೈಮರೆತು ತನ್ನ ಪ್ರಿಯಕರನನ್ನು ಸಂಧಿಸಲು ಹೊರ ಬಂದಿತು. ಆದರೆ ಪಾಪ, ಗಂಡು ಬೆಕ್ಕಿಗೆ ಹೆಣ್ಣಿಲಿಯ ಮನಃಸ್ಥಿತಿ ತಿಳಿದಿರಲಿಲ್ಲ. ಅದಕ್ಕೆ ತಾನು ಗಂಡು ಬೆಕ್ಕು, ಅದು ಹೆಣ್ಣಿಲಿ, ಅದನ್ನು ಬೇಟೆಯಾಡುವುದು ತನ್ನ ಧರ್ಮ ಎಂಬುದಷ್ಟೇ ತಿಳಿದಿತ್ತು. ಗಂಡುಬೆಕ್ಕು ಧರ್ಮವನ್ನು ಪಾಲಿಸಲು ಹಾರಿ ಬಂದಿತು. ಆಗ ಹೆಣ್ಣಿಲಿ, ""ಬೆಕ್ಕೇ, ಮೈ ಲವ್‌!'' ಎನ್ನುತ್ತಲೇ ಇತ್ತು. 

ಪಂಡಿತ ಘನಶ್ಯಾಮ 
ಇದು ನಮ್ಮ ದೇಶದಲ್ಲಿ ಬಹಳಷ್ಟು ಇಲ್ಲದಾಗಿನ ಸಂಗತಿ. ಆಗ ಸಂಸ್ಕೃತಿಯ ರಕ್ಷಣೆಗಾಗಿ ಜೀವ ಕೊಡುವಂಥ ಪದ್ಧತಿಯೂ ಇರಲಿಲ್ಲ. ಜನ ಹೀಗೇ ಸುಮ್ಮನೆ ಸಾಯುತ್ತಿದ್ದರು. ಉಳಿದವರಿಗೆ ಜೀವ ತೆತ್ತುವ ಗಮನವೇ ಬರುತ್ತಿರಲಿಲ್ಲ. ಅಂಥ ಪರಿಸ್ಥಿತಿಯಲ್ಲಿ ಭರತಭೂಮಿಯಲ್ಲಿ ಪಂಡಿತ ಘನಶ್ಯಾಮರು ಅವತರಿಸಿದರು. ಅವರು ಸಂಸ್ಕೃತಿಗಾಗಿ ಜೀವ ತೆತ್ತಲು ಪಣ ತೊಟ್ಟರು. ಅವರ ಸದ್‌ಪ್ರಯಾಸದಿಂದಾಗಿ ಸಂಸ್ಕೃತಿ ಉಳಿಯಿತು, ಅವರೂ ಉಳಿದರು. ದೇಶದಲ್ಲೆಲ್ಲಾ ಪಂಡಿತ ಘನಶ್ಯಾಮರ ಗೌರವ ಹೆಚ್ಚಿತು. ಅವರು ಹೋದಲ್ಲೆಲ್ಲ ಜನ ಅವರನ್ನು ಹೂ-ಹಾರಗಳಿಂದ ಅಭಿನಂದಿಸುತ್ತಿದ್ದರು. ಅವರೂ ವಿನಮ್ರತೆಯಿಂದ ಅವುಗಳನ್ನು ಸ್ವೀಕರಿಸುತ್ತಿದ್ದರು. ಅದೊಂದು ದಿನ ಅವರ ಕತ್ತಿನಲ್ಲಿ ಹೂ-ಹಾರಗಳು ಎಷ್ಟು ಬಿದ್ದವೆಂದರೆ, ಅವರ ಕತ್ತಿನ  ಮೂಳೆ ಮುರಿದು ಹೋಯಿತು. ಶ್ರೇಷ್ಠ ಆಯುರ್ವೇದ ಪಂಡಿತರು ಅವರ ಕತ್ತನ್ನು ಸರಿಪಡಿಸಲು ತುಂಬಾ ಪ್ರಯತ್ನಿಸಿದರು. ಆದರೆ ಅವರಿಗೆ ಯಶಸ್ಸು ಸಿಗಲಿಲ್ಲ. ಪಂಡಿತ ಘನಶ್ಯಾಮರ ಎದೆ ಹೆಮ್ಮೆಯಿಂದ ಸೆಟೆದುಕೊಂಡಿರುತ್ತಿತ್ತು. ಆದರೆ ಅವರ ಕತ್ತು ಕೆಳಗೆ ಬಾಗಿರುತ್ತಿತ್ತು. ಅವರಿಗೆ ಹಾರ ಹಾಕಿಕೊಳ್ಳಲು ಸಾಧ್ಯವಿರಲಿಲ್ಲ, ಭಾಷಣ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಇಂಥ ಪರಿಸ್ಥಿತಿಯಲ್ಲಿ ಅವರಿಗೆ ತಮ್ಮ ಜೀವನದ ಕೊನೆಯ ಹಂತ ಸಮೀಪಿಸಿದೆ ಎಂದು ಅನ್ನಿಸುವುದು ಅಸಹಜವೇನಲ್ಲ. ಪಂಡಿತ ಘನಶ್ಯಾಮರ ಮನಸ್ಸಿಗೆ ಒಮ್ಮೆ ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ವಿಚಾರವೂ ಬಂತು. ಆದರೆ ಹೀಗೆ ಮಾಡುವುದು ಸಂಸ್ಕೃತಿಗೆ ವಿರುದ್ಧವಾಗಿತ್ತು. ಇಂಥ ದುರ್ದಿನಗಳಲ್ಲಿ ಅವರಿಗೆ ಮಲೇರಿಯಾ ಸಹಕರಿಸಿತು. ಈ ಘಟನೆಯನ್ನು ಹೇಳಲು ಕಾರಣವೇನೆಂದರೆ, ಜೀವನದ ಯಾವ ತಿರುವಿನಲ್ಲಿ ಯಾರು, ಯಾವಾಗ ಮತ್ತು ಎಲ್ಲಿ ನಿಮ್ಮನ್ನು ಕೈ ಬಿಡುತ್ತಾರೆಂದು ಹೇಳಲು ಬರುವುದಿಲ್ಲ. ಬೇಕಾದರೆ ಅವರು  ಪಂಡಿತ ಘನಶ್ಯಾಮರೇ ಇರಬಹುದು!

ಐದು ರೂಪಾಯಿ ಲಂಚ 
ಅದೊಂದು ದಿನ ಒಬ್ಬ ಕೂಲಿ ಕೆಲಸಗಾರ ಮರದಿಂದ ಕೆಳಗೆ ಬಿದ್ದ. ಪೆಟ್ಟು ತಿಂದ ಅವನು ಅದೇ ಮರದ ಕೆಳಗೆ ಕೂತು ನರಳುತ್ತಿದ್ದ. ಅವನ ಮೊಣಕಾಲು ಮತ್ತು ಮೊಣಕೈಗಳಿಂದ ರಕ್ತ ಹರಿಯುತ್ತಿತ್ತು. ಅತ್ತ ಕಡೆಯಿಂದ ಗುಮಾಸ್ತನೊಬ್ಬ ಹೋಗುತ್ತಿದ್ದ. ಇಂದು ಅವನು ಮೊದಲ ಬಾರಿಗೆ ಐದು ರೂಪಾಯಿ ಲಂಚ ತೆಗೆದುಕೊಂಡಿದ್ದ. ಅಂದು ಅವನ ಆತ್ಮದಿಂದ ರಕ್ತ ಹರಿಯುತ್ತಿತ್ತು. ಮರದಿಂದ ಬಿದ್ದ ಆ ಕೂಲಿ ಕೆಲಸಗಾರನನ್ನು ನೋಡಿ ಆ ಗುಮಾಸ್ತನ ಮನಸ್ಸಿನಲ್ಲಿ ಸಹಾನುಭೂತಿ ಹುಟ್ಟಿತು. ಅವನಿಗೆ, ಇವನು ನನಗಿಂತ ಉತ್ತಮ, ಇವನು ಮರದಿಂದಷ್ಟೇ ಬಿದ್ದಿದ್ದಾನೆ, ನಾನು ನನ್ನ ಆತ್ಮದಿಂದಲೇ ಬಿದ್ದಿದ್ದೇನೆ. ಇವನ ಗಾಯಕ್ಕಿಂತಲೂ ನನ್ನ ಗಾಯ ಆಳವಾಗಿದೆ ಎಂದು ಅವನಿಗೆ ಅನ್ನಿಸಿತು.

ಗುಮಾಸ್ತ ಆ ಕೆಲಸಗಾರನಿಗೆ ಅಣ್ಣ ಎಂದು ಕರೆದು, ಅವನಿಗೆ ಆ ಐದು ರೂಪಾಯಿಯನ್ನು ತುಂಬಾ ಒತ್ತಾಯ ಮಾಡಿ ಕೊಟ್ಟ. ಅದರಿಂದ ಅವನು ಆಸ್ಪತ್ರೆಗೆ ಹೋಗಿ ಬ್ಯಾಂಡೇಜ್‌ ಹಾಕಿಸಿಕೊಳ್ಳಲಿ ಎಂಬುದು ಅವನ ಉದ್ದೇಶವಾಗಿತ್ತು. ಮರದಿಂದ ಬಿದ್ದ ಕೂಲಿ ಕೆಲಸಗಾರನಿಗೆ ಬ್ಯಾಂಡೇಜ್‌ ಹಾಕಿಸಿಕೊಳ್ಳುವ ಅಗತ್ಯ ಕಾಣಿಸಲಿಲ್ಲ. ಅವನಿಗೆ ಅಕ್ಕಿ-ಹಿಟ್ಟು ಬೇಕಾಗಿತ್ತು. ಅವನು ಐದು ರೂಪಾಯಿಯಿಂದ ಅಕ್ಕಿ-ಹಿಟ್ಟು ಖರೀದಿಸಿದ.

ಅವನ ಗಾಯ ವಾಸಿಯಾಯಿತು. ಅವನು ಮತ್ತೆ ಮರವನ್ನು ಹತ್ತಲು ಪ್ರಾರಂಭಿಸಿದ. ಗುಮಾಸ್ತ ಮತ್ತೆ ಆ ಮಾರ್ಗವಾಗಿ ಹೋಗುವುದನ್ನು ನಿಲ್ಲಿಸಿದ.

ಮೂಲ         ವಿಷ್ಣು ನಾಗರ್‌
ಕನ್ನಡಕ್ಕೆ            ಡಿ. ಎನ್‌. ಶ್ರೀನಾಥ್‌


Trending videos

Back to Top