CONNECT WITH US  

ಬೂಟು ಮತ್ತು ಪುಸ್ತಕ

ಸಾಂದರ್ಭಿಕ ಚಿತ್ರ

ಅವನಿಗೆ ಕೆಲ ಪುಸ್ತಕಗಳನ್ನು ಕೊಳ್ಳಬೇಕಿತ್ತು. ಒಂದು ಜೊತೆ ಬೂಟು ಕೂಡ. ಮನೆಯಿಂದ ಹೊರಬಿದ್ದ ಆತ ಹಲವು ಚಪ್ಪಲಿ ಅಂಗಡಿಗಳನ್ನು ಹೊಕ್ಕಿ ಬಂದ. ಆದರೆ ಯಾವ ಬೂಟೂ ಅವನಿಗೆ ಒಪ್ಪಿತವಾಗಲಿಲ್ಲ. ಶೋರೂಮಿಗೆ ಹೋದರೆ ಮನಸ್ಸಿಗೊಪ್ಪುವ ಬೂಟು ದೊರಕೀತು ಎಂದುಕೊಂಡ ಆತ.
ಅಷ್ಟರಲ್ಲೇ ಪುಸ್ತಕದ ಅಂಗಡಿಯೊಂದು ಹತ್ತಿರದಲ್ಲೇ ಕಣ್ಣಿಗೆ ಬಿತ್ತು. ಒಳಹೊಕ್ಕ ಆತ ತನಗೆ ಬೇಕಾದ ಪುಸ್ತಕಗಳ ಹೆಸರು ಹೇಳಿದ.

""ಸ್ವಾಮಿ, ಇಂತಹ ಪುಸ್ತಕಗಳನ್ನು ನಮ್ಮ ಅಂಗಡಿಯಲ್ಲಿ ಇಡೋಲ್ಲ. ಬೇರೆ ಅಂಗಡಿಯಲ್ಲಿ ವಿಚಾರಿಸಿ'' ಪುಸ್ತಕದಂಗಡಿಯವನು ಹೇಳಿದ.
""ಯಾಕೆ ಇಡೋಲ್ಲ ?''
""ಮಾರಾಟ ಆಗೋಲ್ಲ. ಅದಕ್ಕೆ...''
""ಎಂತಹ ಪುಸ್ತಕಗಳು ಮಾರಾಟವಾಗುತ್ತೆ?''
""ಮನೋರಂಜನೆ ನೀಡುವಂತಹ ಪುಸ್ತಕಗಳು, ಅಂದರೆ ಕಥೆ, ಕಾದಂಬರಿ ಮುಂತಾದವು. ಸೆಕ್ಸ್‌ ಕಥೆಗಳು, ಅಪರಾಧಕ್ಕೆ ಸಂಬಂಧಿಸಿದ ಕಥೆಗಳು ಮುಂತಾದವನ್ನೇ ಜನ ಹೆಚ್ಚಾಗಿ ಕೊಳ್ಳೋದು''
ಅಂಗಡಿಯಲ್ಲಿ ಆಗ ಆತನೊಬ್ಬನೇ ಗಿರಾಕಿ. ಭಾನುವಾರವಾದ್ದರಿಂದ ಇರಬಹುದು, ಬೇರಾರೂ ಗಿರಾಕಿಗಳಿರಲಿಲ್ಲ.
""ಇತ್ತೀಚೆಗೆ ಜನರ ಓದುವ ಹವ್ಯಾಸ ಕಡಿಮೆಯಾಗುತ್ತಿದೆಯೇ? ಬೇರೆ ಅಂಗಡಿಗಳಲ್ಲಿ ಗಿರಾಕಿಗಳು ತುಂಬಿರುತ್ತಾರೆ. ನಿಮ್ಮ ಅಂಗಡಿಯಲ್ಲೋ ಯಾರೂ ಕಾಣರು'' ಆತ ಕೇಳಿದ.

""ಇದು ಸಹಜವಲ್ವೇ ಸ್ವಾಮಿ, ಇಂದು ಮನೋರಂಜನೆಗೆ ಏನು ಕೊರತೆ? ಮನೆಮನೆಯಲ್ಲಿ ಟಿ.ವಿ. ಇದೆ. ಕಂಪ್ಯೂಟರ್‌, ಇಂಟರ್‌ನೆಟ್‌ ಮುಂತಾದ ವ್ಯವಸ್ಥೆಗಳಿವೆ. ಪ್ರತಿಯೊಬ್ಬರ ಕೈಯಲ್ಲಿಯೂ ಮೊಬೈಲ್‌ ಇರುತ್ತೆ. ಗೂಗಲ್‌ಗೆ ಹೋಗಿ ರೆಪ್ಪೆ$ತೆರೆಯುವಷ್ಟರಲ್ಲಿ ಯಾರೂ ಬೇಕಾದುದನ್ನು ಹುಡುಕಿ ಪಡೆಯಬಹುದು. ಇಷ್ಟೆಲ್ಲ ಇದ್ದಾಗ್ಯೂ ಜನರು ಪುಸ್ತಕಕ್ಕೆ ಏಕೆ ಪುಕ್ಕಟೆ ದುಡ್ಡು ಸುರಿದಾರು?'' ಅಂಗಡಿಯವನಿಗೆ ಧನ್ಯವಾದ ಹೇಳಿ ಅಲ್ಲಿಂದ ತೆರಳಿದ ಆತ ಬೇರೊಂದು ಅಂಗಡಿಗೆ ಹೋದ. ಅಲ್ಲಿ ಒಂದಿಬ್ಬರು ಗಿರಾಕಿಗಳು ಇದ್ದರು. ಅವರಲ್ಲೊಬ್ಬ ಕೆಲ ಪುಸ್ತಕ ಕೊಂಡು ರಿಯಾಯಿತಿ ಕೊಡುವಂತೆ ಕೇಳುತ್ತಿದ್ದ.
""ಇದರಲ್ಲಿ ರಿಯಾಯಿತಿ ಕೊಡೋದೇನು ಬಂತು ಸ್ವಾಮಿ? ನಮಗೇ ಏನೂ ಗಿಟ್ಟೋಲ್ಲ. ನಿಮಗೆ ಹ್ಯಾಗೆ ರಿಯಾಯಿತಿ ಕೊಡಲಿ?''

""ನಿಮಗೇ ಏನೂ ಗಿಟ್ಟೊಲ್ಲ ಅಂತಾದ್ರೆ ಮತಾöಕೆ ಈ ಪುಸ್ತಕ ಮಾರಾಟದ ದಂಧೆ ಮಾಡ್ತೀರಿ?''
""ಏನ್‌ ಮಾಡೋದು ಸ್ವಾಮಿ. ಹೇಗಾದರೂ ಜ್ಞಾನ ಸಂಪತ್ತನ್ನು ಉಳಿಸಿಕೋಬೇಕಲ್ಲ ? ಬೌದ್ಧಿಕ ಸರಕು ಜನರಿಗೆ ದೊರಕೋದು ಬೇಡವೆ? ಇಂದಿನ ದಿನಗಳಲ್ಲಿ ಅದರ ಜರೂರತ್ತು ತುಂಬಾ ಇದೆ ಸ್ವಾಮಿ''
""ಲಾಭವಿಲ್ಲ ಎಂದರೆ ವ್ಯಾಪಾರ ಏಕೆ ಮಾಡಬೇಕು? ಮಾರಾಟವಾಗದ ಸರಕನ್ನು ಯಾಕೆ ಇಟ್ಟುಕೊಳ್ಳಬೇಕು? ಇಟ್ಟುಕೊಳ್ಳಲೇ ಬೇಕು ಅಂತಾದರೆ ಮಾರಾಟ ಹೆಚ್ಚಿಸಲು ಯಾವುದಾದರೊಂದು ಸ್ಕೀಮ್‌ ಹಾಕ್ಕೋಬೇಕಪ್ಪ...'' ಎಂದೆನ್ನುತ್ತ ಆ ಗಿರಾಕಿ ಅಲ್ಲಿಂದ ತೆರಳಿದ.
ಅವನಿಗೆ ಆ ಅಂಗಡಿಯಲ್ಲಿ ಕೆಲ ಪುಸ್ತಕಗಳು ದೊರೆತವು. ಆದರೆ ಆತನ ಪಟ್ಟಿಯಲ್ಲಿದ್ದ ಎಲ್ಲವೂ ದೊರೆಯಲಿಲ್ಲ. ಸಿಕ್ಕ ಒಂದೆರಡು ಪಸ್ತಕಗಳನ್ನು ಇಲ್ಲಿ ಕೊಳ್ಳುವುದೋ ಅಥವಾ ಎಲ್ಲವನ್ನೂ ಬೇರೆಡೆ ಒಟ್ಟಾಗಿ ಕೊಳ್ಳುವುದೋ ಎಂದು ಆತ ಆಲೋಚಿಸತೊಡಗಿದ. 

ಅವನು ನೀಡಿದ ಪುಸ್ತಕಗಳ ಪಟ್ಟಿ ನೋಡಿ ಅಚ್ಚರಿ ಹಾಗೂ ಸಂತೋಷದಿಂದ ಅಂಗಡಿಯಾತ ಹೇಳಿದ- ""ಇಂತಹ ಪುಸ್ತಕಗಳನ್ನು ಓದುವ ಜನ ನೀವು ಈಗಲೂ ಇದ್ದೀರಲ್ಲ! ಸರಿ, ನೀವೊಂದು ಕೆಲಸ ಮಾಡಿ. ಹೀಗೇ ಮುಂದೆ ಸಾಗಿದರೆ ಅಲ್ಲೊಂದು ಸರ್ಕಲ್‌ ಸಿಗುತ್ತೆ. ಅಲ್ಲೊಬ್ಬ ಹಳೇ ಪುಸ್ತಕಗಳನ್ನು ಮಾರಾಟ ಮಾಡ್ತಾನೆ. ಅವನಲ್ಲಿ ಒಳ್ಳೊಳ್ಳೆ ಪುಸ್ತಕಗಳ ಸಂಗ್ರಹವಿದೆ. ನಿಮಗೆ ಬೇಕಾದವೆಲ್ಲ ಅಲ್ಲಿ ಖಂಡಿತ ದೊರಕುತೆÌ. ಹೆಚ್ಚೇನೂ ದೂರದಲ್ಲಿಲ್ಲ ಆ ಅಂಗಡಿ...''
ಆತ ಅಲ್ಲಿಂದ ತೆರಳಿ ಸರ್ಕಲ್‌ ಕಡೆಗೆ ಹೆಜ್ಜೆ ಹಾಕಿದ. ದಾರಿಯಲ್ಲಿ ಚಪ್ಪಲಿಗಳ ಹಲವಾರು ಅಂಗಡಿಗಳು ಕಂಡು ಬಂದವು. ದೊಡ್ಡ ದೊಡ್ಡ ಕಂಪೆನಿಗಳ ಅಂಗಡಿಗಳು! ಅವುಗಳನ್ನು ಅಂಗಡಿಯೆನ್ನುವುದು ಸರಿಯಲ್ಲವೇನೋ. ಯಾಕೆಂದರೆ, ಅವು ಶೋರೂಮ್‌ನಂತೆ ಕಂಗೊಳಿಸುತ್ತಿದ್ದವು. ಹೊಳೆಯುವ ಗಾಜಿನ ಹಿಂದೆ ಅಂದವಾಗಿ ಜೋಡಿಸಿಟ್ಟಿದ್ದ ಚಪ್ಪಲಿ-ಬೂಟುಗಳು ಝಗಮಗಿಸುತ್ತಿದ್ದವು. ಭವ್ಯವಾದ ಅಂಗಡಿಯಲ್ಲಿ (ಅಲ್ಲಲ್ಲ, ಶೋರೂಮ್‌ನಲ್ಲಿ !) ಕಣ್ಣು ಕೋರೈಸುವ ದೀಪಾಲಂಕಾರ ಬೇರೆ. 

ಹೇಗೂ ಬೂಟನ್ನು ಕೊಂಡುಕೊಳ್ಳುವುದಿತ್ತಾದ್ದರಿಂದ ಈಗಲೇ ನೋಡಿಬಂದರಾಯಿತೆಂದು ಕೊಂಡ ಆತ ಒಂದು ಅಂಗಡಿಯ ಒಳಹೊಕ್ಕ. ಒಳಗೆ ಹೆಜ್ಜೆಯಿಡುತ್ತಿದ್ದಂತೆ ಅಂಗಡಿಯ ಮಾಲಿಕ ಮುಗುಳು ನಗುತ್ತ ಕೇಳಿದ, ""ಬನ್ನಿ ಸಾರ್‌, ಏನು ಬೇಕು? ಬೂಟೋ? ಚಪ್ಪಲಿಯೋ?''
ಆತನೆಂದ- ""ಬೂಟು''
""ನಮ್ಮಲ್ಲಿ ಎಲ್ಲ ತರಹದ ಬ್ರಾಂಡೆಡ್‌ ಕಂಪೆನಿಗಳ ಬೂಟುಗಳೂ ದೊರೆಯುತ್ತವೆ. ಆಯ್ಕೆ ನಿಮ್ಮದು'' ಅಂಗಡಿಯ ಮಾಲಿಕ ನಾಜೂಕಾಗಿ ಹೇಳಿದ.
ಅಷ್ಟರಲ್ಲೇ ಒಬ್ಬ ಸೇಲ್ಸ್‌ಮನ್‌ ಆತನನ್ನು ಕರೆದ. ""ಬನ್ನಿ ಸರ್‌ ! ಈ ಕಡೆ ಬನ್ನಿ...''

ಬಗೆ ಬಗೆಯ ಬೂಟುಗಳನ್ನು ಎತ್ತಿ ಎದುರಿಗಿಡುತ್ತ ಒಂದೊಂದರ ಬೆಲೆಯನ್ನೂ ಹೇಳತೊಡಗಿದ ಆತ.
ಅಷ್ಟರಲ್ಲೇ ಸೇವಕನೊಬ್ಬ ಸೊಗಸಾದ ಗಾಜಿನ ಗ್ಲಾಸಿನಲ್ಲಿ ನೀರನ್ನು ತಂದಿತ್ತ. ಆತನ ಹಿಂದೆಯೇ ಇನ್ನೊಬ್ಬ ಚಹಾ ತಂದು ಆತನಿಗೆ ನೀಡಿದ.
ಇಡೀ ಶೋರೂಮ್‌ ವಾತಾನುಕೂಲಿತವಾಗಿತ್ತು. ಶೆಲ್ಫಿನಲ್ಲಿದ್ದ ಒಂದು ಜೊತೆ ಬೂಟು ಆತನ ಗಮನ ಸೆಳೆಯಿತು. ""ಆಹಾ, ಎಂತಹ ಘನಂದಾರಿ ಸೊಬಗು ! ಕಣ್ಣು ಕೀಳಲಾಗದಷ್ಟು ಆಕರ್ಷಕ ವಿನ್ಯಾಸ!'' ಅದನ್ನು ತೋರಿಸಿ ಆತ ಹೇಳಿದ.
ಕರ್ಮಚಾರಿ ವಿನಯದಿಂದ ಕೇಳಿದ- ""ಸಾರ್‌ ! ನಿಮ್ಮ ನಂಬರ್‌ ಎಷ್ಟು?''
""ಎಂಟು ಇದ್ದೀತು''
""ಸರ್‌, ನೀವಿಲ್ಲಿ ಕಾಲಿರಿಸಿ'' ಎನ್ನುತ್ತ ಆತ ಕಾಲಿನ ಅಳತೆ ತೆಗೆಯುವ ಸಾಧನದ ಕಡೆ ದೃಷ್ಟಿ ಹರಿಸಿದ.
ಆತ ಅದರ ಮೇಲೆ ಕಾಲಿರಿಸಲು ಉದ್ಯುಕ್ತನಾದ. ಅಷ್ಟರಲ್ಲಿ ಸೇಲ್ಸ್‌ ಮನ್‌ ಹೇಳಿದ, "" ಸರ್‌ ! ನೀವು ಈ ಕುರ್ಚಿಯಲ್ಲಿ ಆರಾಮಾಗಿ ಕುಳಿತುಕೊಳ್ಳಿ. ಸ್ವಲ್ಪವೂ ತೊಂದರೆಪಟ್ಟುಕೊಳ್ಳಬೇಡಿ''.
ಆತ ಕುರ್ಚಿಯಲ್ಲಿ ಕುಳಿತು ಆ ಅಳತೆ ಸಾಧನದ ಮೇಲೆ ಕಾಲಿರಿಸಿದ. 
""ಸಾರ್‌ ! ನೀವು ಹೇಳಿದ್ದು ಸರಿ. ನಿಮ್ಮದು ಎಂಟು ನಂಬರೇ'' ಎನ್ನುತ್ತ ಆ ಸೇಲ್ಸ್‌ ಮನ್‌ ಎಂಟನೆಯ ನಂಬರಿನ ಬೂಟನ್ನು ಶೆಲ್ಫಿನಿಂದ ಕೈಗೆತ್ತಿಕೊಂಡು ಬಾಕ್ಸಿನಿಂದ ತೆಗೆದು ಆತನ ಎದುರಿಗಿರಿಸಿ ತಾನೇ ಕಾಲಿಗೇರಿಸಿದ. ಲೇಸನ್ನೂ ಒಪ್ಪವಾಗಿ ಕಟ್ಟಿ - ""ಸಾರ್‌ ! ತಾವು ನಾಲ್ಕು ಹೆಜ್ಜೆ ನಡೆದಾಡಿ ನೋಡಿ'' ಎಂದ.

ಆತ ನಾಲ್ಕಾರು ಹೆಜ್ಜೆ ನಡೆದಾಡಿದ. ತೊಂದರೆಯೇನೂ ಅನಿಸಲಿಲ್ಲ. 
""ಎಲ್ಲ ಸರಿ ಹೊಂದುತ್ತೆ. ಇದರ ಬೆಲೆಯೆಷ್ಟು ?'' ಆತ ಕೇಳಿದ.
""ಸಾರ್‌ ! ಏಳು ಸಾವಿರ ಆಗುತ್ತೆ...''
ಆತ ಒಂದು ಕ್ಷಣ ತಬ್ಬಿಬ್ಟಾದ. ಬೂಟುಕೊಳ್ಳಲು ಆತನ ಬಜೆಟ್‌ ಇದ್ದುದು ಐದುಸಾವಿರ ಮಾತ್ರ. ಇಂದಿನ ದಿನಗಳಲ್ಲಿ ಬೂಟಿನ ಬೆಲೆ ತುಂಬ ಹೆಚ್ಚು ಎಂದು ಆತ ಬಲ್ಲ. ಬ್ರಾಂಡೆಡ್‌ ಕಂಪೆನಿಗಳ ಬೂಟಿಗೆ ಇನ್ನೂ ಹೆಚ್ಚು ಬೆಲೆ ಎಂದೂ ಆತನಿಗೆ ಗೊತ್ತು.
ಆತ ಬೆಲೆಯ ಬಗ್ಗೆ ಏನೋ ಹೇಳಬೇಕೆಂದುಕೊಳ್ಳುವಷ್ಟರಲ್ಲಿಯೇಕ್ಯಾಷ್‌ಕೌಂಟರ್‌ ಕಡೆಯಿಂದ ಅಂಗಡಿಯ ಯಜಮಾನನ ಏರುದನಿ ಕೇಳಿಬಂತು.
""ಇದು ಬ್ರಾಂಡೆಡ್‌ ಕಂಪೆನಿ ಬೂಟುಗಳ ಶೋರೂಮ್‌ ಕಣ್ರೀ. ಇಲ್ಲೆಂತಹ ಚೌಕಾಶಿ? ಇದೇನು ತರಕಾರಿ ಮಾರ್ಕೆಟ್‌ ಅಂದುಕೊಂಡ್ರಾ? ಕಂಪೆನೀನೇ ಸಾಕಷ್ಟು ಡಿಸ್ಕೌಂಟ್‌ ಕೊಡುತ್ತೆ. ಅದರ ಮೇಲೆ ಮತ್ತೆ ರಿಯಾಯಿತಿ ಕೇಳ್ತೀರಲಿÅà...''
ಆ ಗಿರಾಕಿ ಮಾರುತ್ತರವೇನನ್ನೂ ಹೇಳದೇ ಬೆಲೆ ತೆತ್ತು ತಲೆಬಗ್ಗಿಸಿ ಅಂಗಡಿಯಿಂದ ನಿರ್ಗಮಿಸಲು ಅನುವಾದ. ಗಿರಾಕಿ ಹೋದಮೇಲೂ ಅಂಗಡಿಯ ಯಜಮಾನನ ಗೊಣಗಾಟ ಮುಂದುವರಿದಿತ್ತು- ""ನಾಲ್ಕು ಕಾಸಿನ ಯೋಗ್ಯತೆಯಿರೋಲ್ಲ. ಆದ್ರೂ ಶೂ ಕೊಂಡ್ಕೊಳ್ಳೋಕೆ ಶೋರೂಮಿಗೆ ಬರ್ತಾರೆ...''
ನಾನೇನಾದರೂ ಬೆಲೆ ಕಡಿಮೆ ಮಾಡುವಂತೆ ಹೇಳಿದರೆ, ಅಥವಾ ಕಡಿಮೆ ಬೆಲೆಯ ಬೇರೆ ಬೂಟು ತೋರಿಸುವಂತೆ ಕೇಳಿದರೆ ನನಗೂ ಇಂತಹದೇ ಮರ್ಯಾದೆಯಾದೀತು ಎಂದುಕೊಂಡ ಆತ ಸ್ವಲ್ಪ ಕಸಿವಿಸಿಗೊಳಗಾದ. ಇಂತಹ ಖ್ಯಾತಿವೆತ್ತ ಶೋರೂಮಿನಲ್ಲಿ ಬೂಟಿನಿಂದಾಗಿ ನಾಚಿಕೆಗೀಡಾಗುವ ಪ್ರಸಂಗವನ್ನೆದುರಿಸುವುದು ಆತನಿಗೆ ಒಪ್ಪಿತವಾಗುವ ಸಂಗತಿಯಲ್ಲ. 

ಅಷ್ಟರಲ್ಲಿ ""ಬನ್ನಿ ಸರ್‌'' ಎನ್ನುತ್ತ ಸೇಲ್ಸ್‌ಮನ್‌ ಆತನನ್ನು ಕ್ಯಾಷ್‌ ಕೌಂಟರ್‌ ಬಳಿ ಒಯ್ದ.
ಯಜಮಾನ ಕಂಪ್ಯೂಟರ್‌ ಬಿಲ್‌ ತಯಾರಿಸಿ ಆತನಿಗೆ ನೀಡುತ್ತ ಹೇಳಿದ, ""ಇಪ್ಪತ್ತು ಶೇ. ಡಿಸ್ಕೌಂಟ್‌ ಕಡಿಮೆ ಮಾಡಿದೆ. ಏಳು ಸಾವಿರ ಆಯಿತು. ಮತ್ತೇನಾದರೂ ಬೇಕೆ?''
""ಸದ್ಯ ಬೇರೇನೂ ಬೇಕಿಲ್ಲ...''
""ಸಾರ್‌ ! ಈ ಬೂಟಿಗೆ ಹೊಂದುವ ಪಾಲಿಷ್‌ ಕೂಡ ದೊರಕುತ್ತೆ. ಅದನ್ನೂ ಕೊಂಡುಕೊಳ್ಳಿ. ನೀವು ಬೇಕೆಂದುಕೊಂಡಾಗ ಮುಂದೆ ದೊರಕದೇ ಹೋದೀತು. ಬೆಲೆಬಾಳುವ ಬೂಟು ಧರಿಸೋರು ಆಗಾಗ ಪಾಲಿಷ್‌ ಮಾಡಲೇ ಬೇಕಾಗುತ್ತೆ ತಾನೆ?'' ಎನ್ನುತ್ತ ಅಂಗಡಿಯ ಯಜಮಾನ ಪಾಲಿಷ್‌ನ ಡಬ್ಬಿಯನ್ನು ಆತನ ಎದುರಿಗಿರಿಸಿದ.
ಶೋರೂಮಿನ ಬೆಡಗಿನ ಮುಂದೆ ಸೋತ ಆತ ಬೇಡವೆಂದು ಹೇಳದಾದ. ವಶೀಕರಣಕ್ಕೆ ಒಳಗಾದವನಂತೆ ಆತ ಪಾಲಿಷ್‌ನ ಬೆಲೆ ವಿಚಾರಿಸಿ ಅದರದ್ದೂ ಐದುನೂರು ಸೇರಿಸಿ ಏಳೂವರೆ ಸಾವಿರ ರೂಪಾಯಿಗಳನ್ನು ಅಂಗಡಿಯ ಯಜಮಾನನ ಮುಂದಿರಿಸಿದ. ಹಣವನ್ನು ಮುಗಮ್ಮಾಗಿ ಡ್ರಾಯರಿಗೆ ಸೇರಿಸಿ ಬಿಲ್ಲನ್ನು ಆತನ ಕೈಯಲ್ಲಿಡುತ್ತ ಅಂಗಡಿಯ ಮಾಲಿಕ ಬಾರದ ನಗೆ ತಂದುಕೊಂಡು ಹೇಳಿದ, ""ಮತ್ತೂಮ್ಮೆ ಭೇಟಿ ಕೊಡಿ ಸಾರ್‌''.
ಆತನೂ ಕೃತ್ರಿಮವಾಗಿ ಮುಗುಳುನಗುತ್ತ ಅಂಗಡಿಯಿಂದ ಹೊರಬಿದ್ದ. 

ಈಗ ಆತನ ಕಿಸೆಯಲ್ಲಿ ಉಳಿದಿದ್ದುದು ಮುನ್ನೂರು ಮಾತ್ರ. ಅದರಲ್ಲಿ ಮನೆ ತಲುಪಲು ಆಟೋ ಚಾರ್ಜಿಗಾಗಿ ನೂರು ರೂಪಾಯಿ ಮೀಸಲಿಡಬೇಕಿತ್ತು. ಉಳಿದ ಇನ್ನೂರು ರೂಪಾಯಿಗಳಲ್ಲಿ ಪುಸ್ತಕ ಕೊಂಡುಕೊಳ್ಳಬೇಕು ಎಂದುಕೊಂಡ ಆತ.  
ಪಟ್ಟಿ ಮಾಡಿದ ಪುಸ್ತಕಗಳೆಲ್ಲ ಇನ್ನೂರು ರೂಪಾಯಿಯಲ್ಲಿ ದೊರೆಯುವುದು ಕಷ್ಟ ಎಂಬುದು ಆತನಿಗೆ ಗೊತ್ತು. ಆದರೂ ಆತ ಸರ್ಕಲ್‌ ಬಳಿಯಿರುವ ಅಂಗಡಿಯತ್ತ ಸಾಗಿದ.
ಅದನ್ನು ಅಂಗಡಿಯೆನ್ನುವುದು ತಪ್ಪಾದೀತೇನೋ. ಅಲ್ಲೊಬ್ಬ ದಾರಿಯ ಪಕ್ಕದಲ್ಲೇ ರಾಶಿ ರಾಶಿ ಪುಸ್ತಕಗಳನ್ನು ಪೇರಿಸಿಟ್ಟು ಅವುಗಳ ಮಧ್ಯದಲ್ಲೇ ತಾನೂ ಕೂತಿದ್ದ. ಯಾವುದೋ ಒಂದು ಪುಸ್ತಕವನ್ನೋದುವುದರಲ್ಲಿ ಮಗ್ನನಾಗಿದ್ದ. ರಸ್ತೆಯ ಪಕ್ಕದಲ್ಲೇ ಪುಸ್ತಕಗಳನ್ನು ಪೇರಿಸಿಟ್ಟಿದ್ದರಿಂದ ಎಲ್ಲ ಪುಸ್ತಕಗಳ ಮೇಲೂ ಧೂಳಿನ ಹೊದಿಕೆ ಎದ್ದು ಕಾಣುತ್ತಿತ್ತು. 
ಎದುರು ನಿಂತ ಆತನನ್ನು ನೋಡಿ ಅಂಗಡಿಯಾತ ಹೇಳಿದ, ""ಬನ್ನಿ ಸ್ವಾಮಿ! ಯಾವ ಪುಸ್ತಕ ಕೊಡಲಿ?''
ಆತ ಅಂಗಡಿಯವನತ್ತ ದೃಷ್ಟಿ ಹರಿಸಿದ. ಪುಸ್ತಕಗಳ ದುರ್ದಶೆಯಂತೆಯೇ ಇತ್ತು ಈತನದೂ ಸ್ಥಿತಿ. ವಯಸ್ಸು ಸಾಕಷ್ಟಾಗಿದೆ. ಹರಡಿದ ಕೂದಲು. ಬೆಳೆದ ಗಡ್ಡ. ಆದರೆ ಮುಖದಲ್ಲಿ ಮಾತ್ರ ಅದೆಂತಹದೋ ಮೋಡಿ.
""ಬೀದಿ ಬದಿಯ ಸರಕು. ಅಗ್ಗದ ಬೆಲೆ. ಜಾnನ, ಧ್ಯಾನ, ಭಕ್ತಿ, ವೈರಾಗ್ಯ, ಸಾಹಿತ್ಯ... ಯಾವುದು ಬೇಕೋ ಅದು. ಕನ್ನಡ, ಸಂಸ್ಕೃತ, ಇಂಗ್ಲಿಶ್‌ ಎಲ್ಲವೂ. ವರ್ಣಿಸಲಾರದಷ್ಟು ಅಗ್ಗ'' ಅಂಗಡಿಯವನು ಉರುಹೊಡೆದವನಂತೆ ಹೇಳುತ್ತಿದ್ದ.
ಆತ ಪುಸ್ತಕಗಳತ್ತ ದೃಷ್ಟಿ ಹಾಯಿಸಿದ. 

ಚಪ್ಪಲಿಗಳು ಬೆಡಗಿನ ವಾತಾನುಕೂಲಿತ ಅಂಗಡಿಯಲ್ಲಿ ! ಪುಸ್ತಕಗಳು ಬೀದಿಬದಿಯಲ್ಲಿ. ಧೂಳಿನ ರಾಶಿಯಲ್ಲಿ !
""ಎಂತಹ ಪುಸ್ತಕ ನಿಮಗೆ ಬೇಕು ಸ್ವಾಮಿ?'' ಅಂಗಡಿಯಾತ ಕೇಳಿದಾಗ ಪಟ್ಟಿಯನ್ನು ಆತನ ಕೈಯಲ್ಲಿರಿಸಿದ ಆತ. ಪುಸ್ತಕಗಳ ಹೆಸರುಗಳ ಮೇಲೆ ಒಮ್ಮೆ ಕಣ್ಣು ಹಾಯಿಸಿದ ಅಂಗಡಿಯಾತ ಹೇಳಿದ, ""ನೀವು ಬಯಸಿದ ಈ ಎಲ್ಲ ಪುಸ್ತಕಗಳೂ ದೊರೆಯುತ್ತವೆ ನಮ್ಮಲ್ಲಿ...''
""ಎಷ್ಟಾಗಬಹುದು ಒಟ್ಟು ?''
ಅಂಗಡಿಯಾತ ಆತನನ್ನು ತಲೆಯಿಂದ ಕಾಲಿನವರೆಗೊಮ್ಮೆ ನೋಡಿ ಹೇಳಿದ, ""ನೀವು ತೊಟ್ಟ ಬೂಟಿನ ಬೆಲೆಗಿಂತ ಕಡಿಮೆಯಾಗಿರುತ್ತೆ ಬಿಡಿ''.
ಅಂಗಡಿಯವನ ಈ ಒರಟುತನ ಆತನಿಗೆ ಇನಿತೂ ಹಿಡಿಸಲಿಲ್ಲವಾದರೂ ಆತ ಏನನ್ನೂ ಮರು ನುಡಿಯಲಿಲ್ಲ.
ಅಂಗಡಿಯವ ಪುಸ್ತಕಗಳನ್ನು ಹೆಕ್ಕಿ ಬೆಲೆ ಲೆಕ್ಕ ಹಾಕಿ ಹೇಳಿದ, ""ಒಟ್ಟೂ ಹತ್ತು ಪುಸ್ತಕಗಳು. ಐದುನೂರು ಆಗುತ್ತೆ''.
ಆತನ ಬಳಿ ಅಷ್ಟು ಹಣ ಇರಲಿಲ್ಲವಷ್ಟೇ. ಆದ್ದರಿಂದ ಪುಸ್ತಕಗಳನ್ನೆತ್ತಿ ಆಚೀಚೆ ಪುಟ ತಿರುಗಿಸಿ ನೋಡುತ್ತ ಚೌಕಾಸಿಗಿಳಿದ ಆತ ಹೇಳಿದ, ""ಪುಸ್ತಕಗಳೆಲ್ಲ ಹಳೆಯದಲ್ಲಣ್ಣ. ಇವುಗಳ ಸ್ಥಿತಿಯೂ ಚೆನ್ನಾಗಿಲ್ಲ. ಎಷ್ಟು ಕೊಡಲಿ ಹೇಳು?''
ರಸ್ತೆ ಬದಿ ಕುಳಿತು ರದ್ದಿಗೆ ಸಿಕ್ಕಿದ್ದ ಪುಸ್ತಕಗಳನ್ನು ಈತ ಇಲ್ಲಿ ಮಾರಾಟ ಮಾಡುತ್ತಿದ್ದಾನೆ. ರದ್ದಿಯಾದರೋ ಕಿಲೋ ಲೆಕ್ಕದಲ್ಲಿ ಸಿಕ್ಕುತ್ತೆ. ಈ ಮುದುಕ ನಾನು ಹೇಳಿದ ಬೆಲೆಗೆ ಒಪ್ಪಿಯಾನು ಎಂದುಕೊಳ್ಳುತ್ತ ಆತ ನುಡಿದ, ""ಎರಡುನೂರಕ್ಕೆ ಕೊಡೋ ಹಾಗಿದ್ದರೆ ನೋಡು''.

ಅಂಗಡಿಯಾತ ಆತನನ್ನು ಒಮ್ಮೆ ಕೆಕ್ಕರಿಸಿ ನೋಡಿ ಪುಸ್ತಕಗಳನ್ನೆತ್ತಿ ರಾಶಿಯ ಮೇಲಿಡುತ್ತ ಹೇಳಿದ, ""ತಮ್ಮಾ, ನಿನಗೆ ಜ್ಞಾನಕ್ಕಿಂತ ಬೂಟಿನ ಜರೂರತ್ತು ಹೆಚ್ಚಿದೆಯೆನಿಸುತ್ತೆ. ಅದಕ್ಕೇ ಅಲ್ಲಿ ಹೇಳಿದ ಬೆಲೆ ತೆತ್ತು ಬೂಟು ಖರೀದಿಸಿ ಬಂದೆ. ಈಗಿಲ್ಲಿ ಪುಸ್ತಕಕ್ಕೆ ಹಣ ಎಣಿಸಲು ಚೌಕಾಶಿ ಮಾಡಬಯಸುತ್ತೀಯಾ? ಬೇಡ ಬಿಡು. ನನ್ನ ಸಮಯ ಹಾಳು ಮಾಡಬೇಡ'' ಎನ್ನುತ್ತ ಆ ಮುದುಕ ಅಂಗಡಿಯವನು ಮತ್ತೆ ಪುಸ್ತಕ ತೆರೆದು ಓದುವುದರಲ್ಲಿ ಮಗ್ನನಾದ.
ಅಂಗಡಿಯವನ ಚುಚ್ಚು ಮಾತು ಆತನನ್ನು ಸಾಕಷ್ಟು ಘಾಸಿಗೊಳಿಸಿತು. ಆದರೂ ಆತ ಪ್ರತ್ಯುತ್ತರ ನೀಡಲಿಲ್ಲ. ಯಾಕೆಂದರೆ, ಅಂಗಡಿಯ ಮುದುಕ ಹೇಳಿದ್ದು ನೂರಕ್ಕೆ ನೂರರಷ್ಟು ಸತ್ಯದ ಮಾತಾಗಿತ್ತು.
ಹೋಗುತ್ತಿದ್ದ ಆಟೋವೊಂದನ್ನು ಹತ್ತಿ ಕುಳಿತ ಆತ ಮನೆಯ ಕಡೆಗೆ ಸಾಗಿದ. ಅವನ ಎದುರಿಗೆ ಎರಡು ದೃಶ್ಯ ಹೊಡೆದು ತೋರುತ್ತಿತ್ತು. ಗಾಜಿನ ಭವ್ಯ ಶೋರೂಮಿನ ಒಳಗಡೆ ಸಿಂಗರಿಸಿ ಇಡಲ್ಪಟ್ಟ ಚಪ್ಪಲಿ ಬೂಟುಗಳು ಒಂದೆಡೆ. ಬೀದಿ ಬದಿಯಲ್ಲಿ ಧೂಳು ತಿನ್ನುತ್ತಿರುವ ಪುಸ್ತಕಗಳು ಇನ್ನೊಂದೆಡೆ.
""ನಿನಗೆ ಜ್ಞಾನಕ್ಕಿಂತ ಬೂಟಿನ ಜರೂರತ್ತು ಹೆಚ್ಚಾಗಿದೆ'' ಎಂಬ ಅಂಗಡಿಯವನ ಆ ಚುಚ್ಚು ಮಾತು ಅವನ ತಲೆಯಲ್ಲಿ ಗಿರಿಗುಟ್ಟುತ್ತಿತ್ತು. ಆತ  ಅಂದುಕೊಂಡ- "ಹೌದು, ನಾವು ಬೂಟಿಗೆ ನೀಡುವಷ್ಟು ಮಹಣ್ತೀ ಪುಸ್ತಕಗಳಿಗೆ ನೀಡುತ್ತಿಲ್ಲ'.

ಹಿಂದಿ ಮೂಲ
ದೇವೇಂದ್ರ ಕುಮಾರ ಮಿಶ್ರ


Trending videos

Back to Top