CONNECT WITH US  

ಗಜಪಡೆಯ ಹಿಮ್ಮೆಟ್ಟಿಸಿದ ಘಾಟಿ ಕಾಟಿಗಳು!

ಮರಿಗಳಿದ್ದ ಕಾರಣವೋ ಏನೋ ಆನೆಗಳು ಕೆರೆಯ ಮೇಲಿನ ತಮ್ಮ ಅಧಿಪತ್ಯವನ್ನು ಸಡಿಲಿಸಲು ಪ್ರಾರಂಭಿಸಿದವು

ಬಾಯಾರಿದ್ದ ಕಾಟಿಗಳಿಗೆ ಕೆರೆಗೆ ಇಳಿಯುವ ಗುರಿ. ದೊಡ್ಡ ಆನೆಯೀಗ ಕೆರೆಗೆ ಸುಲಭವಾಗಿ ಇಳಿದು ನೀರು ಕುಡಿಯಲು ಇದ್ದ ತಗ್ಗಿನ ದಾರಿಯಲ್ಲಿ ಬಂದು ಅಡ್ಡ ನಿಂತಿತು. ಕಾಟಿಗಳು ಬರುತ್ತಿದ್ದ ಶಬ್ದ ಕೇಳಿ ಕೆರೆಯಲಿದ್ದ ಇನ್ನಿತರ ಆನೆಗಳು ಸಹ ದೊಡ್ಡ ಹೆಣ್ಣಾನೆ ಇದ್ದ ಜಾಗಕ್ಕೆ ನಿಧಾನವಾಗಿ ಬರಲಾರಂಭಿಸಿದವು. ಅವುಗಳು ಬಂದು ತಗ್ಗಿನ ದಾರಿ ತಲುಪಿದ್ದೆ ತಡ, ದೊಡ್ಡ ಆನೆಯು ಕಾಟಿಗಳತ್ತ ಘೀಳಿಡುತ್ತಾ ಓಡಿತು. 

ನಾಗರಹೊಳೆಯೊಂದು ವಿಶೇಷವಾದ ಕಾಡು, ಎಲ್ಲೆಂದರಲ್ಲಿ ವನ್ಯಜೀವಿಗಳು ಕಾಣುತ್ತವೆ. ಇದಕ್ಕೆ ಮುಖ್ಯ ಕಾರಣ ಹಲವು ದಶಕಗಳಿಂದ ಈ ಕಾಡುಗಳಿಗೆ ಸಿಕ್ಕಿರುವ ರಕ್ಷಣೆ ಮತ್ತು ಇಲ್ಲಿ ಕಂಡುಬರುವ "ಹಡ್ಲು' ಎಂದು ಕರೆಯಲ್ಪಡುವ ಜೌಗು ಪ್ರದೇಶಗಳು. ಹಡ್ಲುಗಳಲ್ಲಿ ವರ್ಷಪೂರ್ತಿ ನೀರಿನ ಸೆಲೆಯಿದ್ದು ಬೇಸಿಗೆಯಲ್ಲೂ ಹುಲ್ಲು ಯಥೇತ್ಛವಾಗಿ ಸಿಗುತ್ತದೆ. ಬೇಸಿಗೆಯ ಸಮಯದಲ್ಲಿ ಕಾಡೆಲ್ಲಾ ಒಣಗಿದ್ದರೂ, ಹಡ್ಲುಗಳು ಮಾತ್ರ ಮರಳುಗಾಡಿನಲ್ಲಿರುವ ಓಯಸಿಸ್‌ಗಳಂತೆ ಹಸಿರಾಗಿರುತ್ತವೆ. ಆದ್ದರಿಂದ ಸಸ್ಯಾಹಾರಿ ಪ್ರಾಣಿಗಳ ಸಂಖ್ಯೆ ಹೆಚ್ಚಲು ಕಾರಣವಾಗಿದೆ. ಸಸ್ಯಾಹಾರಿ ಪ್ರಾಣಿಗಳ ಸಾಂದ್ರತೆ ಹೆಚ್ಚಾದಂತೆ, ಅವುಗಳನ್ನು ಬೇಟೆಯಾಡಿ ಬದುಕುವ ಹುಲಿ, ಚಿರತೆ, ಸೀಳುನಾಯಿಯಂತಹ ಮಾಂಸಾಹಾರಿ ಪ್ರಾಣಿಗಳ ಸಂಖ್ಯೆಯೂ ಹೆಚ್ಚಿದೆ. 

ಈ ಅರಣ್ಯ, ಕುದುರೆಮುಖ ಅಥವಾ ಆಗುಂಬೆಯ ಎತ್ತರದ ಪಾಚಿ ಕಟ್ಟಿರುವ ಮರಗಳು, ಅವುಗಳ ಮೇಲೆ ವಿಧವಿಧವಾದ ಸೀತಾಳೆ ಹೂವುಗಳು, ಮಂಜುಕವಿದ ಕಾಡುಗಳ ಹಾಗೆ ನೋಡಲು ಮೋಹಕವಾಗಿಲ್ಲದಿದ್ದರೂ, ಇಲ್ಲಿರುವ ವನ್ಯಜೀವಿಗಳು ನೋಡುಗರನ್ನು ಸಮ್ಮೊಹನಗೊಳಿಸುತ್ತವೆ. 

ಒಂದು ಏಪ್ರಿಲ್‌ ತಿಂಗಳ ಬೇಸಿಗೆಯ ಮಧ್ಯಾಹ್ನ, ಮೇಟಿಕುಪ್ಪೆ ಪ್ರದೇಶದ ಹೊಲೇರ ಹುಂಡಿಕಟ್ಟೆ ಕೆರೆ ಏರಿಯ ಮೇಲೆ ಕುಳಿತಿದ್ದೆ. ಇದು ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಪೂರ್ವ ಭಾಗದಲ್ಲಿದ್ದು, ಕಾಡಿನ ಉತ್ತರ ಹಾಗೂ ದಕ್ಷಿಣ ಭಾಗಗಳಿಗಿಂತ ಒಣ ಪ್ರದೇಶವಾಗಿದೆ. ಆಗಲೇ ಒಂದು ಮಳೆಯಾಗಿತ್ತಾದರೂ ಕಾಡಿನ್ನೂಹಸಿರಾಗಿರಲಿಲ್ಲ. ಸುತ್ತಮುತ್ತ ಇನ್ಯಾವುದೇ ಕೆರೆಯಲ್ಲಿ ಇಲ್ಲಿದ್ದಷ್ಟು ನೀರಿರಲಿಲ್ಲ. ಹಾಗಾಗಿ ಆನೆಗಳನ್ನು ನೋಡಲು ಪ್ರಶಸ್ತವಾದ ಸ್ಥಳವೆಂದು ಯೋಚಿಸಿ ಏರಿಯ ಮೇಲಿದ್ದ ಪೊದೆಯ ಮರೆಯಲ್ಲಿ ಕುಳಿತೆ. ಕೆರೆ ಚಿಕ್ಕದಾದುದರಿಂದ ಗಿಡದ ಮರೆಯಲ್ಲಿ ಕುಳಿತುಕೊಳ್ಳಬೇಕಾಗಿತ್ತು. ಇಲ್ಲವಾದಲ್ಲಿ ಪ್ರಾಣಿಗಳಿಗೆ ನನ್ನ ಇರುವಿಕೆ ತಿಳಿದು ಕೆರೆಗೆ ಬಾರದೆ ಇರುವ ಸಾಧ್ಯತೆಗಳಿದ್ದವು. ಬಿಸಿಲಾಗಲೇ ಏರಿತ್ತು, ಗಾಳಿಯೂ ಆಡುತ್ತಿರಲಿಲ್ಲ. ಕೆರೆಯ ಆಚೆ ಬದಿಯಲ್ಲಿ ಕೆಲ ಗೊರವಂಕ ಪಕ್ಷಿಗಳು ಬಿಸಿಲಿನ ಧಗೆ ಆರಿಸಿ ಕೊಳ್ಳಲು ಆಳವಿಲ್ಲದ ಸ್ಥಳದಲ್ಲಿ ಕೆರೆಗಿಳಿದು ನೀರು ಕುಡಿದು ಸ್ನಾನ ಮಾಡುತ್ತಿದ್ದವು. ನೊಣ ಹಿಡುಕ ಪಕ್ಷಿಯೊಂದು ತನ್ನ ಬೀಸಣಿಗೆ ಯಂತಿದ್ದ ಬಾಲವನ್ನು ಅಗಲಿಸುವುದು, ಮುಚ್ಚುವುದು ಮಾಡುತ್ತಾ ನನ್ನ ಬಲಗಡೆಯಿದ್ದ ಮರದಲ್ಲಿ ಹುಳುಗಳ ಹುಡುಕಾಟದಲ್ಲಿ ತೊಡಗಿತ್ತು. ಕಾಡಿನಲ್ಲಿ ಹಕ್ಕಿಗಳೆಲ್ಲ ತಮ್ಮದೇ ಆದ ಆರ್ಕೆಸ್ಟ್ರಾ ನಡೆಸುತ್ತಿದ್ದವು. ಇದು ಬಿಟ್ಟರೆ ಕಾಡೆಲ್ಲಾ ನಿಶ್ಶಬ್ದ. 

ನನ್ನ ವಾಸನೆಯಿಂದ ನನ್ನ ಇರುವಿಕೆ ಪ್ರಾಣಿಗಳಿಗೆ ಗೊತ್ತಾಗಿ ಇತ್ತ ಬರುತ್ತಿರಲಿಲ್ಲವೇನೋ ಎಂದು ಯೋಚಿಸುತ್ತಿರುವಾಗ ಕೆರೆಯ ಕಡೆ ಹೆಣ್ಣಾನೆಯೊಂದು ಬಂದಿತು. ಎರಡೂ ಕಣ್ಣುಗಳ ಸುತ್ತ ಅದರ ಚರ್ಮ ಬಿಳಿಚಿಕೊಂಡು ಬೃಹದಾಕಾರದ ಕನ್ನಡಕ ಹಾಕಿಕೊಂಡ ಹಾಗೆ ತೋರುತಿತ್ತು. ಅದರ ತೊಡೆಯ ಬಳಿ ಸಹ ಚರ್ಮ ಬಿಳಿಚಿ ಕೊಂಡಿದ್ದು ಬಹುಶಃ ಆನೆಗೆ ವಯಸ್ಸಾಗಿತ್ತೆಂದು ಸೂಚಿಸುತ್ತಿತ್ತು. ಕೆರೆಯ ಬಳಿ ಬಂದೊಡನೆ ನೀರಿಗಿಳಿದ ಆನೆ ತನ್ನ ದಣಿವಾರಿಸಿಕೊಂಡಿತು. 

ಬಿಸಿಲಿದ್ದ ದಿನಗಳಲ್ಲಿ ಆನೆಗಳು ಕೆರೆಗಳಿಗೆ ಬಂದರೆ ನೀರು ಕುಡಿದು, ಸ್ನಾನ ಮಾಡಿದ ನಂತರ ನಮ್ಮಲ್ಲಿ ಕೆಲವರು ಸ್ನಾನವಾದ ನಂತರ ಪೌಡರ್‌ ಹಾಕಿಕೊಳ್ಳುವ ಹಾಗೆ ಮಣ್ಣನ್ನು ತಲೆ, ಬೆನ್ನ ಮೇಲೆ ಹಾಕಿಕೊಂಡು ನಿಧಾನವಾಗಿ ಹೋಗುವುದು ಅವುಗಳ ನಡವಳಿಕೆ. ಆದರೆ ಅದ್ಯಾಕೋ ಹೆಣ್ಣಾನೆ ಇದ್ದಕ್ಕಿದ್ದ ಹಾಗೆ ಕೆರೆ ಬಿಟ್ಟು ತರಾತುರಿಯಲ್ಲಿ ಹೊರಟುಹೋಯಿತು. ಆನೆಯ ಈ ವರ್ತನೆ ನನಗೆ ಆಶ್ಚರ್ಯವೆನಿಸಿತು. ಅದು ಹೋದ ಎರಡೇ ನಿಮಿಷದಲ್ಲಿ ನನ್ನ ಬಲಗಡೆ ಮರಗಳ ಮಧ್ಯೆ ಆನೆಗಳ ಹಿಂಡೊಂದು ಕಾಣಿಸಿಕೊಂಡಿತು. ಬಹುಶಃ ಇವುಗಳ ಬರುವಿಕೆಯ ಸುಳಿವಿನಿಂದ ವಯಸ್ಸಾದ ಹೆಣ್ಣಾನೆ ನೀರು ಬಿಟ್ಟು ಹೋದದ್ದೆಂದು ಕಾಣುತ್ತದೆ. ಆದರೆ ಆನೆಗಳು ಸಂಘ ಜೀವಿಗಳು. ಕೆಲವೊಮ್ಮೆ ಗಂಡಾನೆಗಳು ಇತರ ಗಂಡಾನೆಗಳ ಜೊತೆ ಜಗಳ ಆಡುವುದು ಬಿಟ್ಟರೆ, ಹೀಗೆ ಹೆಣ್ಣಾನೆಗಳು ಇತರ ಆನೆಗಳ ಗುಂಪನ್ನು ತಪ್ಪಿಸಿ ಹೋಗುವುದು ಅಪರೂಪ. ಯಾಕೆ ಹಾಗೆ ಮಾಡಿತೆಂದು ಇಂದಿಗೂ ನನಗೆ ಅರ್ಥವಾಗಿಲ್ಲ. 

ಆನೆಗಳ ಗುಂಪು ನೀರಿಗೋಸ್ಕರ ಬಂದಿದ್ದರೂ ಯಾಕೋ ಕೆರೆಯಿಂದ ಸುಮಾರು ಇಪತ್ತು ಮೀಟರ್‌ ದೂರದಲ್ಲಿದ್ದ ಹುಣಸೆ ಮರದ ಕೆಳಗೆ ಅಲ್ಲಾಡದೆ ನಿಂತವು. ನನ್ನಿಂದ ಅವುಗಳಿಗೆ ಅಡ್ಡಿ ಯಾಗಬಾರದೆಂದು ಬಹು ಎಚ್ಚರಿಕೆ ವಹಿಸಿದ್ದೆ. ನನ್ನ ಬಟ್ಟೆಯೆಲ್ಲವೂ ಕಾಡಿಗೆ ಹೊಂದುವಂತೆ ಇತ್ತು. ಇದ್ದಕ್ಕಿದ್ದ ಹಾಗೆ ದೊರದ ಲ್ಲೆಲ್ಲೋ ಚುಕ್ಕೆ ಜಿಂಕೆಯ ಜೋಕೆಯಾಗಿರಿ ಎಂಬ ಎಚ್ಚರಿಕೆಯ ಕೂಗಿಗೆ ಆನೆಗಳೊಟ್ಟಿಗೆ ನಾನು ಕೂಡ ಉಸಿರು ಬಿಗಿ ಹಿಡಿದು ಕುಳಿತೆ. ಜಿಂಕೆಗಳ ಎಚ್ಚರಿಕೆಯ ಕೂಗು ಹುಲಿ, ಚಿರತೆ ಅಥವಾ ಸೀಳು ನಾಯಿಯ ಇರುವಿಕೆಯ ಸಂಕೇತ ಕೂಡ ಆಗಿರಬಹುದು. ಆದರೆ ಅಂದು ಯಾವ ದೊಡ್ಡ ಬೇಟೆ ಪ್ರಾಣಿಯೂ ನೀರಿಗೆ ಬರಲಿಲ್ಲ. ಆನೆಗಳು ಸಹ ಸ್ವಲ್ಪ ಸಮಾಧಾನವಾದಂತೆ ಕಂಡವು. ಸೊಂಡಿಲಿನಿಂದ ಹುಲ್ಲು ಕಿತ್ತು ಬಾಯಿಗೆ ತುರುಕಿಕೊಳ್ಳುವುದು, ದೊಡ್ಡ ಹೆಣ್ಣಾನೆಯೊಂದು ಬಿದಿರು ಮುರಿಯುವುದು, ಹೀಗೆ ತಮ್ಮ ಕಾರ್ಯಗಳನ್ನು ಮುಂದುವರಿಸಿದವು. 

ಸುಮಾರು ಹತ್ತು ನಿಮಿಷಗಳ ನಂತರ ಯಾವುದೇ ಅಪಾಯದ ಸುಳಿವಿಲ್ಲವೆಂದು ಸ್ಪಷ್ಟವಾದ ಮೇಲೆ ಆನೆಗಳು ಕೆರೆಗೆ 
ಬಂದು ಸಾವಕಾಶವಾಗಿ ನೀರಿಗಿಳಿದವು. ಅದು ಐದು ದೊಡ್ಡ ಹೆಣ್ಣಾನೆಗಳು ಮತ್ತು ಎರಡು ಮರಿಗಳಿದ್ದ ಹಿಂಡಾಗಿತ್ತು. 
ಆನೆಗಳು ದಣಿವಾರು ವವರೆಗೂ ನೀರು ಕುಡಿದು, ನಂತರ ಮೈಮೇಲೆ ಸೊಂಡಿಲಿನಿಂದ ನೀರು ಹಾಕಿಕೊಂಡು ಬೇಸಿಗೆಯ ಧಗೆಯನ್ನು ತಣಿಸಿಕೊಳ್ಳಲು ಪ್ರಾರಂಭಿಸಿದವು. ಪುಟ್ಟ ಕೊಂಬು ಗಳನ್ನು ಹೊಂದಿದ್ದ ಸುಮಾರು ಒಂದು ವರ್ಷದ ಮರಿಯಾನೆ ತನ್ನ ಪುಟ್ಟ ಸೊಂಡಿಲಿನಿಂದ ಮೈಮೇಲೆ ನೀರು ಹಾಕಿಕೊಳ್ಳುತ್ತಿದ್ದ ದೃಶ್ಯ ಬಹು ಸುಂದರವಾಗಿತ್ತು. 

ಏಳರಲ್ಲಿದ್ದ ಒಂದು ದೊಡ್ಡ ಹೆಣ್ಣಾನೆ ಮಾತ್ರ ಗುಂಪನ್ನು ಬಿಟ್ಟು ತನ್ನಷ್ಟಕ್ಕೆ ತಾನೇ ಕೆರೆಯ ಮೂಲೆಗೆ ಹೋಗಿ ತನ್ನ ಪಕ್ಕೆಯ ಮೇಲೆ ಮಲಗಿ ಸ್ನಾನ ಮಾಡುತಿತ್ತು. ನನ್ನಿಂದ ಕೇವಲ ಹತ್ತಿಪ್ಪತ್ತು ಮೀಟರ್‌ ದೂರದಲ್ಲಿದ್ದ ಅದು ಸೊಂಡಿಲಿನಿಂದ ಜೋರಾಗಿ ಉಸಿರುಬಿಡುವುದು ಕೂಡ ನನಗೆ ಸ್ಪಷ್ಟವಾಗಿ ಕೇಳುತಿತ್ತು. ಅದು ಎದ್ದು ಒಂದೆರೆಡು ಹೆಜ್ಜೆಯನ್ನು ಮುಂದಿಟ್ಟು ತನ್ನ ಸೊಂಡಿಲನ್ನು ಉದ್ದವಾಗಿ ಚಾಚಿದರೆ ನಾನು ಸಿಕ್ಕುತ್ತಿದ್ದೆನೇನೋ. ಸ್ವಲ್ಪ ಹೊತ್ತಿನಲ್ಲೇ ಕಾಡಿನಿಂದ ಹೊರಬಂದ ಇನ್ನೊಂದು ಹೆಣ್ಣಾನೆ ನೀರಿಗಿಳಿದು ಒಂಟಿಯಾಗಿ ಸ್ನಾನ ಮಾಡುತಿದ್ದ ಆನೆಗೆ ಸಾಥ್‌ ಕೊಟ್ಟಿತು. ಆನೆಗಳ ಗುಂಪುಗಳೇ ಹೀಗೆ. ಗುಂಪಿನ ಸದಸ್ಯರು ಎಲ್ಲೆಲ್ಲಿ ಚದುರಿ ಹೋಗಿರುತ್ತವೆಂದು ಅವುಗಳಿಗೆ ತಿಳಿದಿರುವುದು. 

ಆನೆಗಳ ಜಲಕ್ರೀಡೆ ಸರಾಗವಾಗಿ ನಡೆಯುತ್ತಿದ್ದಾಗ, ಹಿಂಡಿನ ಲ್ಲಿದ್ದ ದೊಡ್ಡ ಹೆಣ್ಣಾನೆ ಹಿಂದಕ್ಕೆ ತಿರುಗಿ ಪೊದೆಗಳ ಕಡೆ ನೆಟ್ಟ ದೃಷ್ಟಿಯಿಂದ ನೋಡಲು ಪ್ರಾರಂಭಿಸಿತು. ಅದರ ಕಿವಿಯ ಮೇಲಿದ್ದ ಮಚ್ಚೆ ಗುರುತುಗಳು ನೋಡಿದರೆ ಇದೇ ಬಹುಶಃ ಗುಂಪಿನ ಹಿರಿಯ ಆನೆ ಹಾಗೂ ನಾಯಕಿಯಿರಬಹುದೆನಿಸಿತು. ಆನೆ ತಿರುಗಿ ನಿಂತ ಒಂದು ನಿಮಿಷದ ನಂತರ ಪೊದೆಗಳಿಂದ ಕಾಟಿಯೊಂದು ತನ್ನ ಮರಿಯ ಜೊತೆ ಕೆರೆಯ ದಿಕ್ಕಿನಲ್ಲಿ ನಡೆದು ಬಂದಿತು. ನನಗೆ ಕಾಟಿಗಳ ಶಬ್ದ ಕೇಳುವ ಒಂದು ನಿಮಿಷ ಮುಂಚೆಯೇ ಆನೆಗಳಿಗೆ ಕಾಟಿಗಳ ಆಗಮನದ ಶಬ್ದ ಕೇಳಿಸಿತ್ತು. ಅಯ್ಯೋ ನಮ್ಮ ಶ್ರವಣಶಕ್ತಿ ಎಷ್ಟು ಮಂದ ಅನಿಸಿತು! ತಾಯಿ ಮತ್ತು ಮರಿ ಕಾಟಿಗಳ ಹಿಂದೆ ಒಂದರ ಹಿಂದೆ ಒಂದಂತೆ ಇನ್ನೂ ಹೆಚ್ಚು ಕಾಟಿಗಳು ಬರಲಾರಂಭಿಸಿದವು.

ಬಾಯಾರಿದ್ದ ಕಾಟಿಗಳಿಗೆ ಕೆರೆಗೆ ಇಳಿಯುವ ಗುರಿ. ದೊಡ್ಡ ಆನೆಯೀಗ ಕೆರೆಗೆ ಸುಲಭವಾಗಿ ಇಳಿದು ನೀರು ಕುಡಿಯಲು ಇದ್ದ ತಗ್ಗಿನ ದಾರಿಯಲ್ಲಿ ಬಂದು ಅಡ್ಡ ನಿಂತಿತು. ಕಾಟಿಗಳು ಬರುತ್ತಿದ್ದ ಶಬ್ದ ಕೇಳಿ ಕೆರೆಯಲಿದ್ದ ಇನ್ನಿತರ ಆನೆಗಳು ಸಹ ದೊಡ್ಡ ಹೆಣ್ಣಾನೆ ಇದ್ದ ಜಾಗಕ್ಕೆ ನಿಧಾನವಾಗಿ ಬರಲಾರಂಭಿಸಿದವು. ಅವುಗಳು ಬಂದು ತಗ್ಗಿನ ದಾರಿ ತಲುಪಿದ್ದೆ ತಡ, ದೊಡ್ಡ ಆನೆಯು ಕಾಟಿಗಳತ್ತ ಘೀಳಿಡುತ್ತಾ ಓಡಿತು. ಕಾಟಿಗಳು ಒಂದೆರೆಡು ಹೆಜ್ಜೆ ಹಿಂದೆಯಿಟ್ಟವೇ ಹೊರತು ಗಾಬರಿಯಾಗಿ ಓಡಲಿಲ್ಲ. ಕಾಟಿಗಳ ಸಂಖ್ಯೆ ಹೆಚ್ಚಾಗತೊಡಗಿತು. ಅವುಗಳ ಗುಂಪಿನಲ್ಲೂ ಕೂಡ ಹಲವು ವಯಸ್ಸಿನ ಮರಿಗಳಿದ್ದವು.  

ಆನೆಗಳು ಈಗ ಕೆರೆಯ ದಾರಿಗೆ ಅಡ್ಡಲಾಗಿ ಶಿಸ್ತಿನ ಸಿಪಾಯಿಗಳು ದೇಶದ ಗಡಿಯನ್ನು ಕಾಯುವಂತೆ ಒಂದಕ್ಕೆ ಒಂದು ಒತ್ತಾಗಿ ಅಡ್ಡಡ್ಡ ನಿಂತುಬಿಟ್ಟವು. ಒಂದೆರೆಡು ಬಾರಿ ಕಾಟಿಗಳನ್ನು ಬೆನ್ನಟ್ಟಿದ ನಾಯಕಿ ಆನೆ ಈಗ ವಾಪಸ್ಸು ಬಂದು ಗುಂಪನ್ನು ಸೇರಿತು. ಮರಿಗಳನ್ನು ಮಧ್ಯ ಹಾಕಿಕೊಂಡು ಭದ್ರವಾದ ಆನೆ ಗೋಡೆಯೊಂದನ್ನು ಕೆರೆಯ ಹಾದಿಯಲ್ಲಿ ಕಟ್ಟಿದವು. ಬಹುಶಃ ಮರಿಗಳಿದ್ದ ಕಾರಣ ಆನೆಗಳು ಕಾಟಿಗಳನ್ನು ತಮ್ಮ ಹತ್ತಿರ ಬರುವುದನ್ನು ತಪ್ಪಿಸಲು ಹೀಗೆ ಮಾಡುತ್ತಿರಬಹುದೆನಿಸಿತು. 

ಆನೆಗಳು ಎಷ್ಟೇ ಪ್ರಯತ್ನಿಸಿದರೂ ಕಾಟಿಗಳು ಹಿಂದೆ ಸರಿಯಲಿಲ್ಲ. ಗುಂಪಿನ ಮುಂದಿದ್ದ ಮರಿ ಮತ್ತು ತಾಯಿ ಕಾಟಿಯನ್ನು ಸೇರಿ ಎಲ್ಲವೂ ತಮ್ಮ ದಿಟ್ಟ ನಿರ್ಣಯಕ್ಕೆ ಬದ್ಧವಾಗಿ ನಿಂತವು.  ಅಷ್ಟರೊಳಗೆ ಅವುಗಳ ಸಂಖ್ಯೆ ಹದಿನೆಂಟಕ್ಕೇರಿತ್ತು. ಗುಂಪಿನ ನಾಯಕಿ ಆನೆ ಇನ್ನೊಮ್ಮೆ ಅವುಗಳನ್ನು ಓಡಿಸಲು ಪ್ರಯತ್ನಿಸಿತು. ಆದರೆ ಏನೂ ಫಲಕೊಡಲಿಲ್ಲ. ಈಗ ಅವುಗಳ ಗುಂಪಿನಲ್ಲಿ ಬಲವಿತ್ತು. 

ಒಂದೊಂದೇ ಕಾಟಿಗಳು ಆನೆಗಳನ್ನು ಬಳಸಿ ನೀರಿಗಿಳಿಯಲು ಪ್ರಾರಂಭಿಸಿದವು. ಮರಿಗಳಿದ್ದ ಕಾರಣವೋ ಏನೋ ಆನೆಗಳು ಕೆರೆಯ ಮೇಲಿನ ತಮ್ಮ ಅಧಿಪತ್ಯವನ್ನು ಸಡಿಲಿಸಲು ಪ್ರಾರಂಭಿಸಿ ದವು. ಕೆರೆಯ ಬದಿಯಿಂದ ಮೇಲೆ ಬಂದು ನಾಯಕಿ ಆನೆ ಬಲಕ್ಕೆ ತಿರುಗಿ ಕೆರೆಯತ್ತ ಒಮ್ಮೆ ನೋಡಿತು. ಆಗಲೇ ಎಂಟು ಕಾಟಿಗಳು ನೀರಿಗೆ ಇಳಿದೇ ಬಿಟ್ಟಿದ್ದವು. ಮತ್ತೂಮ್ಮೆ ಕಾಟಿಗಳನ್ನು ಓಡಿಸುವ ಹಾಗೆ ಮಾಡಿದ ನಾಯಕಿ ಆನೆ ಕೆರೆಯ ಎದುರಿಗಿದ್ದ ಶಿವನೇ ಮರದ ಕೆಳಗೆ ಹೋಯಿತು. ಅದರ ಹಿಂದೆ ಇತರ ಐದು ಆನೆಗಳೂ ಹಿಂಬಾಲಿಸಿದವು. ಎಲ್ಲವೂ ಕೆರೆಯಿಂದ ಸುಮಾರು ಮೂವತ್ತು ಮೀಟರ್‌ ದೂರದಲ್ಲಿದ್ದ ಶಿವನೆ ಮರದ ಕೆಳಗೆ ನಿಂತು ನೀರು ಕುಡಿಯುತ್ತಿದ್ದ ಕಾಟಿಗಳ ಗುಂಪಿನತ್ತ ಮುಖ ಮಾಡಿ ತಮ್ಮ ಸೋಲಿಗೆ ಕಾರಣ ಹುಡುಕುತ್ತಿರುವಂತೆ ಕಾಟಿಗಳನ್ನೇ ದೀನ ದೃಷ್ಟಿಯಿಂದ ನೋಡುತ್ತಾ ನಿಂತವು. 

ಕಾಟಿಗಳಿಗಿಂತ ಬಹು ಬಲಶಾಲಿಯಾಗಿದ್ದರೂ ಅವುಗಳ ಸಂಖ್ಯೆ ಹಾಗೂ ಮುಖ್ಯವಾಗಿ ತಮ್ಮ ಮರಿಗಳ ರಕ್ಷಣೆಯ ದೃಷ್ಟಿಯಿಂದ ಬೇಸಿಗೆಯಲ್ಲಿ ಬಹು ಅಮೂಲ್ಯವಾದ ನೀರಿನ ಪ್ರದೇಶವನ್ನು ಬಿಟ್ಟುಕೊಟ್ಟಿದ್ದವು. ಈ ಸನ್ನಿವೇಶದಲ್ಲಿ ಕಾಟಿಗಳು ಆನೆಗಳನ್ನು ಸೋಲಿಸಿದ್ದವು. ಕಾಲಚಕ್ರ ಪರಿಸ್ಥಿತಿಗೆ ತಕ್ಕಂತೆ ಬದಲಾಗಿತ್ತು.  ಹಿಂದೊಮ್ಮೆ ಬಿಳಿಗಿರಿರಂಗನ ಬೆಟ್ಟದಲ್ಲಿ ಕಾಟಿಯನ್ನು ಓಡಿಸಿ ನೀರಿನ ಮೇಲೆ ಅಧಿಪತ್ಯ ನಡೆಸಿದ ಆನೆಯ ಪ್ರಸಂಗ ನೆನಪಿಗೆ ಬಂದಿತು.

ಈ ಲೇಖನದ ಚಿತ್ರಸಂಪುಟ ಒಳಗೊಂಡ ವಿಡಿಯೋ ನೋಡಲು goo.gl/kuGQPc ಟೈಪ್‌ ಮಾಡಿ 

ಚಿತ್ರ: ಸಂಜಯ್‌ ಗುಬ್ಬಿ


Trending videos

Back to Top