CONNECT WITH US  

ಬಹುಮುಖಿ ಸಂಪರ್ಕಕ್ಕೆ ಒತ್ತು  ಎಂದ ಮೋದಿ

ನೇಪಾಳ ರಾಜಧಾನಿ ಕಠ್ಮಂಡುವಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಒಲಿ ಶುಕ್ರವಾರ ಆತ್ಮೀಯವಾಗಿ ಸ್ವಾಗತಿಸಿದರು.

ಕಠ್ಮಂಡು: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ "ಬಿಮ್‌ಸ್ಟೆಕ್‌' ಸದಸ್ಯ ದೇಶಗಳೊಂದಿಗೆ ಭಾರತವು ಬಹುಮುಖಿ ಸಂಪರ್ಕವನ್ನು ವೃದ್ಧಿಸಲು ಹೆಚ್ಚಿನ ಆದ್ಯತೆ ನೀಡುತ್ತದಲ್ಲದೆ, ಉಗ್ರವಾದ ಹಾಗೂ ಮಾದಕ ವಸ್ತುಗಳಂಥ ಅಪಾಯಕಾರಿ ಸಮಸ್ಯೆಗಳ ವಿರುದ್ಧ ಹೋರಾಡಲು ಬಿಮ್‌ಸ್ಟೆಕ್‌ ಸದಸ್ಯ ರಾಷ್ಟ್ರಗಳೊಂದಿಗೆ ಕೈಜೋಡಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. 

ಬಾಂಗ್ಲಾದೇಶ, ಭಾರತ, ಮ್ಯಾನ್ಮಾರ್‌, ಶ್ರೀಲಂಕಾ, ಥಾಯ್ಲೆಂಡ್‌, ಭೂತಾನ್‌ ಹಾಗೂ ನೇಪಾಳ ರಾಷ್ಟ್ರಗಳು, ತಾವಿರುವ ವಲಯ ಮಟ್ಟದಲ್ಲಿ ಪರಸ್ಪರ ಸಹಕಾರ ಹಾಗೂ ಅಭಿವೃದ್ಧಿಗಾಗಿ ಅಸ್ತಿತ್ವಕ್ಕೆ ತಂದಿರುವ "ಬಿಮ್‌ಸ್ಟೆಕ್‌' ಒಕ್ಕೂಟದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. 
ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, "ಪೂರ್ವಾತ್ಯ ರಾಷ್ಟ್ರಗಳ ನಿಯಮಗಳನ್ನು ಪರಸ್ಪರ ಅರ್ಥ ಮಾಡಿಕೊಂಡು ಮುನ್ನಡೆಯಲು ಈ ವೇದಿಕೆ ಸಹಕಾರಿಯಾಗಿದೆ. ಬಿಮ್‌ಸ್ಟೆಕ್‌ ಅಸ್ತಿತ್ವವು ಭಾರತ "ನೆರೆ ದೇಶಗಳಿಗೆ ಮೊದಲ ಆದ್ಯತೆ' ಎಂಬ ಧೋರಣೆಗೆ ಮತ್ತಷ್ಟು ಇಂಬು ನೀಡುತ್ತದೆ. ಬಿಮ್‌ ಸ್ಟೆಕ್‌ನ ಯಾವುದೇ ಸದಸ್ಯ ರಾಷ್ಟ್ರವು ಭಯೋತ್ಪಾದನೆ ಹಾಗೂ ಮಾದಕ ವಸ್ತುಗಳ ಜಾಲದಿಂದ ಮುಕ್ತವಾಗಿಲ್ಲ. ಇಂಥ ಅಪಾಯಕಾರಿ ಸಮಸ್ಯೆಗಳ ವಿರುದ್ಧ ವಲಯ ಮಟ್ಟದಲ್ಲಿ ಹೋರಾಡಲು ಭಾರತ ಎಲ್ಲಾ ಸದಸ್ಯ ರಾಷ್ಟ್ರಗಳಿಗೂ ಬೆಂಬಲ ನೀಡುತ್ತದೆ'' ಎಂದು ಆಶ್ವಾಸನೆ ನೀಡಿದರು. 
ಕಾರ್ಯಕ್ರಮಕ್ಕೂ ಮುನ್ನ ಶ್ರೀಲಂಕಾ, ಬಾಂಗ್ಲಾದೇಶ ಸೇರಿದಂತೆ ಪ್ರಮುಖ ರಾಷ್ಟ್ರಗಳ ನಾಯಕರ ಜತೆ ಅವರು ಸಮಾಲೋಚನೆ ನಡೆಸಿದರು.

Trending videos

Back to Top