RCEP ಒಪ್ಪಂದದಿಂದ ಹಿಂದೆ ಸರಿಯಲು ಭಾರತ ನಿರ್ಧಾರ, ಮೋದಿ ನಿರ್ಧಾರ ಅಚಲ; ವರದಿ
Team Udayavani, Nov 4, 2019, 6:33 PM IST
ಬ್ಯಾಂಕಾಕ್: ಹದಿನಾರು ರಾಷ್ಟ್ರಗಳ ಪ್ರಾದೇಶಿಕ ಸಮಗ್ರ ಪಾಲುದಾರಿಕೆ(ಆರ್ ಸಿಇಪಿ)ಗೆ ಸಹಿ ಹಾಕಬಾರದು ಎಂದು ಭಾರತದಲ್ಲಿ ವಿಪಕ್ಷಗಳು ಮತ್ತು ರೈತರು, ಇನ್ನಿತರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿರುವ ನಡುವೆಯೇ ಭಾರತ ಆರ್ ಸಿಇಪಿ ಒಪ್ಪಂದಕ್ಕೆ ಕೈಜೋಡಿಸದಿರಲು ನಿರ್ಧರಿಸಿರುವುದಾಗಿ ಎನ್ ಡಿಟಿವಿ, ಇಂಡಿಯಾ ಟುಡೇ ಸೇರಿದಂತೆ ಪ್ರಮುಖ ಮಾಧ್ಯಮಗಳು ವರದಿ ಮಾಡಿವೆ.
ಭಾರತದ ಕಾಳಜಿಗೆ ಈ ಒಪ್ಪಂದದಲ್ಲಿ ಅವಕಾಶ ಇಲ್ಲದಿರುವ ಹಿನ್ನೆಲೆಯಲ್ಲಿ ನಾವು ಆರ್ ಸಿಇಪಿ ಒಪ್ಪಂದದ ಭಾಗವಾಗಲು ಇಚ್ಚಿಸುವುದಿಲ್ಲ ಎಂದು ಸ್ಪಷ್ಟಪಡಿಸಿರುವುದಾಗಿ ಮೂಲಗಳು ತಿಳಿಸಿವೆ. ಅಷ್ಟೇ ಅಲ್ಲ ಆರ್ ಸಿಇಪಿ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಿಲುವು ಕೂಡಾ ಅಚಲವಾಗಿರುವುದಾಗಿ ವರದಿ ವಿವರಿಸಿದೆ.
ಬ್ಯಾಂಕಾಕ್ ನಲ್ಲಿ ನಡೆಯುತ್ತಿರುವ ಅಸಿಯಾನ್ ಶೃಂಗದಲ್ಲಿ ನಡೆದ ಆರ್ ಸಿಇಪಿ ಶೃಂಗಸಭೆಯಲ್ಲಿ ಭಾರತ ತನ್ನ ನಿಲುವನ್ನು ಸ್ಪಷ್ಟಪಡಿಸಿತ್ತು. ಈ ಒಪ್ಪಂದದಿಂದ ಕಡಿಮೆ ದರದ ಚೀನಾದ ಕೃಷಿ ಮತ್ತು ಕೈಗಾರಿಕಾ ಉತ್ಪನ್ನಗಳು ಭಾರತ ಪ್ರವೇಶಿಸಿದರೆ ಅದರಿಂದ ಹೆಚ್ಚಿನ ಅನನುಕೂಲವಾಗಲಿದೆ ಎಂದು ಹೇಳಿತ್ತು. ಹೀಗಾಗಿ ಈ ಒಪ್ಪಂದದಲ್ಲಿ ಕೆಲವು ಬದಲಾವಣೆಗೆ ಭಾರತ ಪಟ್ಟು ಹಿಡಿದಿತ್ತು.