4 ಕೋಟಿ ಮೌಲ್ಯದ ಕೊಕೇನ್ ಜಪ್ತಿ
ಇಥಿಯೋಪಿಯಾದಿಂದ ಬಂದಿದ್ದ ಮಾದಕ ದ್ರವ್ಯ
Team Udayavani, Sep 20, 2020, 1:56 AM IST
ನವದೆಹಲಿ/ಮುಂಬೈ: ಬಾಲಿವುಡ್ ಡ್ರಗ್ ಜಾಲದ ಕುರಿತು ತನಿಖೆ ಮುಂದುವರಿದಿರುವಂತೆಯೇ, ಶನಿವಾರ ಮಾದಕದ್ರವ್ಯ ನಿಯಂತ್ರಣ ಬ್ಯೂರೋ(ಎನ್ಸಿಬಿ) ದೆಹಲಿಯಲ್ಲಿ ಬರೋಬ್ಬರಿ 4 ಕೋಟಿ ರೂ. ಮೌಲ್ಯದ ಕೊಕೇನ್ ಅನ್ನು ಜಪ್ತಿ ಮಾಡಿ, ಮುಂಬೈನ ವ್ಯಕ್ತಿಯೊಬ್ಬನನ್ನು ಬಂಧಿಸಿದೆ.
ಇಥಿಯೋಪಿಯಾ ರಾಜಧಾನಿ ಅದ್ದಿಸ್ ಅಬಾಬಾದಿಂದ ದೆಹಲಿಗೆ ಪಾರ್ಸೆಲ್ನಲ್ಲಿ 670 ಗ್ರಾಂ ಕೊಕೇನ್ ಬಂದಿತ್ತು. ಟೈಲರಿಂಗ್ ಪರಿಕರಗಳು ಎಂದು ಹೇಳಿ ಈ ಪಾರ್ಸೆಲ್ ಸಾಗಿಸಲಾಗುತ್ತಿತ್ತು. ಕಾರ್ಯಾಚರಣೆ ನಡೆಸಿದ ಎನ್ಸಿಬಿ, ಆ ಪಾರ್ಸೆಲ್ ಅನ್ನು ವಶಕ್ಕೆ ಪಡೆದು, ಅದರ ಜಾಗಕ್ಕೆ ಬೇರೊಂದು ಪಾರ್ಸೆಲ್ ಕಳುಹಿಸುವ ಮೂಲಕ ಅದು ಯಾರನ್ನು ತಲು ಪುತ್ತದೆ ಎಂಬುದರ ಮೇಲೆ ಕಣ್ಣಿಟ್ಟಿತ್ತು. ನಂತರ ಪಾರ್ಸೆಲ್ ಸ್ವೀಕರಿಸಿದ ವ್ಯಕ್ತಿಯನ್ನು ಬಂಧಿಸಲಾ ಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಶ್ಯಪ್ ವರ್ಸಸ್ ರವಿಕಿಶನ್: ಈ ನಡುವೆ, ಲೋಕಸಭೆಯಲ್ಲಿ ಬಾಲಿವುಡ್ ಡ್ರಗ್ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದ ಬಿಜೆಪಿ ಸಂಸದ ಹಾಗೂ ಭೋಜ್ಪುರಿ ನಟ ರವಿಕಿಶನ್ ವಿರುದ್ಧ ಹರಿಹಾಯ್ದಿರುವ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್, “ರವಿಕಿಶನ್ ಅವರೇ ಸ್ವತಃ ಗಾಂಜಾ ಸೇವಿಸುತ್ತಿದ್ದವರು. ಅದು ಎಲ್ಲರಿಗೂ ಗೊತ್ತಿರುವ ವಿಚಾರ. ಹಾಗಂತ, ಅದನ್ನು ನಾನು ಖಂಡಿಸುತ್ತಿಲ್ಲ. ಆದರೆ, ಅವರು ಸ್ವಯಂ ನೀತಿವಂತನಂತೆ ವರ್ತಿಸುತ್ತಿರುವುದು ಸರಿಯಲ್ಲ’ ಎಂದು ಹೇಳಿದ್ದಾರೆ.
ಕಶ್ಯಪ್ರ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ರವಿಕಿಶನ್, “ಅನುರಾಗ್ರಿಂದ ಇಂತಹ ಮಾತುಗಳನ್ನು ನಿರೀಕ್ಷಿಸಿರಲಿಲ್ಲ. ಡ್ರಗ್ ವಿರುದ್ಧದ ನಮ್ಮ ಸಮರದಲ್ಲಿ ಅವರು ನನ್ನನ್ನು ಬೆಂಬಲಿಸದೇ ಇರುವುದು ಬೇಸರ ಮೂಡಿಸಿದೆ’ ಎಂದಿದ್ದಾರೆ.