ಅಸಾರಾಮ್‌ ಬಂಧಿಸಿದ್ದಕ್ಕೆ 2 ಸಾವಿರ ಬೆದರಿಕೆ 

Team Udayavani, Apr 26, 2018, 6:00 AM IST

ಜೋಧ್‌ಪುರ: ಅಸಾರಾಮ್‌ ಬಾಪು (77)ವಿನ ಬೆನ್ನು ಹತ್ತಿ ಚಾಣಾಕ್ಷತದಿಂದ ಆತನನ್ನು ಬಂಧಿಸಿ, ಕರ್ತವ್ಯ ಪ್ರಜ್ಞೆ ಮೆರೆದಿದ್ದ ಹಿರಿಯ ಐಪಿಎಸ್‌ ಅಧಿಕಾರಿ ಅಜಯ್‌ ಪಾಲ್‌ ಲಾಂಬಗೆ ಅಸಾರಾಮ್‌  ಭಕ್ತಾದಿಗಳಿಂದ ಬರೋಬ್ಬರಿ 1,600 ಬೆದರಿಕೆ ಪತ್ರಗಳು, ಸುಮಾರು 400 ಫೋನ್‌ ಬೆದರಿಕೆಗಳು  ಬಂದಿದ್ದವು ಎಂಬ ಕುತೂಹಲಕಾರಿ ಅಂಶವೊಂದು ಬೆಳಕಿಗೆ ಬಂದಿದೆ. ಖುದ್ದು ಲಾಂಬಾ ಅವರೇ ಈ ವಿಚಾರ ತಿಳಿಸಿದ್ದಾರೆ. 

ಅಸಾರಾಮ್‌ಗೆ ಶಿಕ್ಷೆ ಫೋಷಣೆಯಾದ ನಂತರ, ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ, ಅಸಾರಾಮ್‌  ಬಂಧನದ ನಂತರ ತಾವು ಎದುರಿಸಿದ ಮಾನಸಿಕ ಒತ್ತಡಗಳನ್ನು ವಿವರವಾಗಿ ಬಿಚ್ಚಿದ್ದಾರೆ. ಅಸಾರಾಮ್‌ ನನ್ನು ಬಂಧಿಸಿದ ನಂತರ, ಲಾಂಬಾ ಅವರಿಗೆ ಧರ್ಮ ಗುರುವಿನ ಬಿಡುಗಡೆಗೆ ಆಗ್ರಹಿಸಿ ಹೇರಳವಾದ ಹಣದ ಆಮಿಷ ಬಂದಿದೆ. ಆ ಆಮಿಷಗಳನ್ನು ತಳ್ಳಿಹಾಕಿದಾಗ, ಜೀವ ಬೆದರಿಕೆಯೂ ಬಂದಿದೆ. ಆದರೆ, ಅದೆಲ್ಲದರ ಹೊರತಾಗಿಯೂ, ಜನರ ಹಾರೈಕೆಗಳಿಂದಾಗಿ ನಮಗೆ ನಮ್ಮ ಕರ್ತವ್ಯ ಮಾಡುವಂತಾಯಿತು ಎನ್ನುತ್ತಾರೆ ಲಾಂಬಾ.  

ಅಚ್ಚರಿಗೊಂಡಿದ್ದರು: ಮೊದಲ ಬಾರಿಗೆ ಅಸಾರಾಮ್‌  ವಿರುದ್ಧ ಇಂಥ ಆರೋಪ ಕೇಳಿದಾಗ ಲಾಂಬಾ ಅವರಿಗೆ ತುಂಬಾ ಅಚ್ಚರಿಯಾಗಿತ್ತಂತೆ. ಅವರೇ ಹೇಳಿದಂತೆ, ಹಿರಿಯ ಐಪಿಎಸ್‌ ಅಧಿಕಾರಿ ಅಜಯ್‌ ಪಾಲ್‌ ಲಾಂಬಾ ಬಳಿಗೆ ದೆಹಲಿಯ ಪೊಲೀಸ್‌ ತಂಡ ಮತ್ತು ಅಪ್ರಾಪ್ತ ಬಾಲಕಿ, ಆಕೆಯ ತಂದೆ 2013ರ ಆ.21ರಂದು ಬಂದಿದ್ದರು. ಸ್ವಯಂ ಘೋಷಿತ ದೇವ ಮಾನವನ ವಿರುದ್ಧ ಬಾಲಕಿ ಮತ್ತು ಆಕೆಯ ತಂದೆ   ಮಾಡಿದ ಆರೋಪಗಳ ಬಗ್ಗೆ ಆರಂಭದಲ್ಲಿ ಅವರಿಗೆ, “ಇದೊಂದು ಚಾರಿತ್ರ್ಯವಧೆಯ ಪ್ರಯತ್ನ’ ಎಂದು ಆಗ ಜೋಧ್‌ಪುರ ಪಶ್ಚಿಮ ವಿಭಾಗದ ಜಂಟಿ ಆಯುಕ್ತರಾಗಿದ್ದ ಅಜಯ್‌ ಪಾಲ್‌ ಲಾಂಬಾಗೆ ಅನಿಸಿತ್ತು. ಆದರೆ, ಸಂತ್ರಸ್ಥೆಯು ಜೋಧ್‌ಪುರ ನಗರದಿಂದ 38 ಕಿಮೀ ದೂರದಲ್ಲಿರುವ ಮನೈ ಎಂಬ ಗ್ರಾಮದಲ್ಲಿರುವ ಅಸಾರಾಮ್‌ ಆಶ್ರಮದ ಪ್ರತಿಯೊಂದು ವಿವರವನ್ನು ಚಾಚೂ ತಪ್ಪದೇ ನೀಡಿದಾಗ ಇದು ಮಾನಹಾನಿ ಮಾಡುವ ಪ್ರಯತ್ನವಲ್ಲವೆಂದು ಖಾತ್ರಿಯಾಗಿತ್ತು.

ಬಂಧನವೇ ಸವಾಲಾಗಿತ್ತು!: ಅನುಮಾನ ಬಗೆ ಹರಿದರೂ ಭಕ್ತರ ಕೋಟೆಯಲ್ಲಿರುತ್ತಿದ್ದ ಅಸಾರಾಮ್‌ ನನ್ನು ಹುಡುಕುವುದು ಹಾಗೂ ಬಂಧಿಸುವುದೇ ದೊಡ್ಡ ಸವಾಲಾಗಿತ್ತು ಎನ್ನುತ್ತಾರೆ ಲಾಂಬಾ. “”ಕೇಸು ದಾಖಲಾಗುತ್ತಿದ್ದಂತೆಯೇ ಅವರನ್ನು ಶೋಧಿಸಲು ತಂಡಗಳನ್ನು ರಚಿಸಲಾಗಿತ್ತು. ಆದರೆ ಅವರ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಸ್ವಯಂ ಘೋಷಿತ ದೇವಮಾನವನ ದಾರಿ ತಪ್ಪಿಸಬೇಕು ಎಂಬ ಕಾರಣದಿಂದಲೇ ಸುದ್ದಿಗೋಷ್ಠಿ ನಡೆಸಿ ನಮಗೆ ಅಸಾರಾಮ್‌ ಇರವು ಪತ್ತೆಯಾಗಿದೆ ಎಂದಿದ್ದೆವು. ಅದಕ್ಕೆ ಪೂರಕವಾಗಿ 2013ರ ಆ.31ರಂದು ಭೋಪಾಲ ವಿಮಾನ ನಿಲ್ದಾಣದಲ್ಲಿ ಅಸಾರಾಮ್‌  ಏಕಾಏಕಿ ಪ್ರತ್ಯಕ್ಷರಾದರು. ಅದನ್ನು ಮಾಧ್ಯಮದವರಿಗೆ ತಿಳಿಸಿದೆವು. ಭೋಪಾಲ್‌ನಿಂದ ಇಂದೋರ್‌ ಆಶ್ರಮದ ವರೆಗೆ ಪೊಲೀಸರು ಅಸಾರಾಮ್‌  ತಂಡಕ್ಕೆ ಅರಿವಾಗದಂತೆ ಹಿಂಬಾಲಿಸಿಕೊಂಡು ಬಂದಿದ್ದರು. ಅಂದೇ, ಆಶ್ರಮದಲ್ಲಿ ಬೆಂಬಲಿಗರ ಪ್ರತಿರೋಧ ಹೊರತಾಗಿಯೂ ಅಸಾರಾಮ್‌ರನ್ನು ವಶಕ್ಕೆ ಪಡೆಯಲಾಯಿತು” ಎಂದಿದ್ದಾರೆ ಅವರು.

ತೀರ್ಪು ಕೇಳಿ ಬಿಕ್ಕಿ ಬಿಕ್ಕಿ ಅತ್ತ ಅಸಾರಾಮ್‌
ವಿಶೇಷ ಕೋರ್ಟ್‌ನ ತೀರ್ಪು ಪ್ರಕಟವಾಗುತ್ತಿದ್ದಂತೆಯೇ ಅಸಾರಾಮ್‌  ಬಿಕ್ಕಿಬಿಕ್ಕಿ ಅತ್ತರು ಎಂದು ಕೆಲವು ಆಂಗ್ಲ ಸುದ್ದಿವಾಹಿನಿಗಳು ವರದಿ ಮಾಡಿವೆ. ಬುಧವಾರ ಬೆಳಗಿನ ವೇಳೆ ಅವರು ವಿಶೇಷ ಪೂಜೆ ಸಲ್ಲಿಸಿದರು.

ಏನಿದು ಪ್ರಕರಣ?: ಉತ್ತರ ಪ್ರದೇಶದ ಶಹಜಹಾನ್ಪುರದ ಬಾಲಕಿ ದೇವಮಾನವನ ಇಂದೋರ್‌ ಆಶ್ರಮಕ್ಕೆ ಸೇರ್ಪಡೆಯಾಗಿದ್ದಳು. 2013ರ ಆ.15 ಮತ್ತು 16ರಂದು ಆಸಾರಾಮ್‌ ಜೋಧ್‌ಪುರದ ಸಮೀಪದ ಮನೈ ಎಂಬಲ್ಲಿರುವ ಆಶ್ರಮಕ್ಕೆ ಬರುವಂತೆ ಸೂಚಿಸಿದ್ದರು. ಅಲ್ಲಿ ತನ್ನ ಮೇಲೆ ಅತ್ಯಾಚಾರ ಎಸಗಲಾಗಿತ್ತು ಎಂದು ಆರೋಪಿಸಿದ್ದಳು. 2013ರ ಆ.31ರಂದು ಪೊಲೀಸರು ಅವರನ್ನು ಬಂಧಿಸಿದ್ದರು.  ಏತನ್ಮಧ್ಯೆ, ತೀರ್ಪಿನ ಹಿನ್ನೆಲೆಯಲ್ಲಿ ಗುಜರಾತ್‌, ರಾಜಸ್ಥಾನ, ಹರ್ಯಾಣಗಳಲ್ಲಿನ ಭದ್ರತೆ ಮೇಲೆ ನಿಗಾ ಇರಿಸಲಾಗಿದೆ ಎಂದು ಕೇಂದ್ರ ಗೃಹ ಇಲಾಖೆ ಹೇಳಿದೆ. 

ಕಾಂಗ್ರೆಸ್‌-ಬಿಜೆಪಿ ಫೋಟೋ ಸಮರ
ಶಿಕ್ಷೆ ಪ್ರಕಟವಾದ ಬೆನ್ನಲ್ಲಿಯೇ ನರೇಂದ್ರ ಮೋದಿ  ಪ್ರಧಾನಿಯಾಗುವು ದಕ್ಕಿಂತಲೂ ಮೊದಲು ಅಸಾರಾಂ ಜತೆಗೆ  ಕಾಣಿಸಿಕೊಂಡಿದ್ದ ಫೋಟೋವನ್ನು ಕಾಂಗ್ರೆಸ್‌ ಸಾಮಾಜಿಕ ಜಾಲತಾಣಗಳಿಗೆ ಅಪ್‌ಲೋಡ್‌ ಮಾಡಿದ್ದು, ಆ ಬಗ್ಗೆ ಟ್ವಿಟರ್‌ನಲ್ಲಿ ವಾದ ವಿವಾದವೇ ನಡೆದಿದೆ. ಕಾಂಗ್ರೆಸ್‌ ಫೋಟೋಕ್ಕೆ ವಿರುದ್ಧವಾಗಿ ಮಧ್ಯಪ್ರದೇಶದ ಮಾಜಿ ಸಿಎಂ, ಕಾಂಗ್ರೆಸ್‌ ನಾಯಕ ದಿಗ್ವಿಜಯ ಸಿಂಗ್‌, ಅಸಾರಾಂ ಆಶೀರ್ವಾದ ಪಡೆಯುವ ಫೋಟೋವನ್ನೂ ಟ್ವೀಟ್‌ ಮಾಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಾಲಿವುಡ್‌ ನಟ ಫ‌ರ್ಹಾನ್‌ ಅಖ್ತರ್‌ ಆರೋಪಕ್ಕೊಳಗಾಗುವ ಮೊದಲು ಅವರೊಂದಿಗೆ ಕಾಣಿಸಿ ಕೊಂಡಿದ್ದರೆ ಈಗ ಆ ಬಗ್ಗೆ ಪ್ರಸ್ತಾಪ ಸರಿಯಲ್ಲ ಎಂದಿದ್ದಾರೆ.

ಗುಜರಾತ್‌ ಕೋರ್ಟಲ್ಲಿದೆ ಕೇಸು
ಅಸಾರಾಮ್‌  ವಿರುದ್ಧ ಜೋಧ್‌ಪುರ ಕೋರ್ಟ್‌ನಲ್ಲಿ ದಾಖಲಾಗಿದ್ದ ಕೇಸಿನ ಬಳಿಕ ಗುಜರಾತ್‌ನ ಸೂರತ್‌ನಲ್ಲಿಯೂ ದಾಖಲಾಗಿದ್ದ ಮತ್ತೂಂದು ಕೇಸಿನ ವಿಚಾರಣೆ ನಡೆಯುತ್ತಿದೆ. ಸೂರತ್‌ನಲ್ಲಿರುವ ಇಬ್ಬರು ಸಹೋದರಿಯರು ಅಸಾರಾಮ್‌ , ಪುತ್ರ ನಾರಾಯಣ ಸಾಯಿ ವಿರುದ್ಧ 2014ರಲ್ಲಿ ಅತ್ಯಾಚಾರ ದೂರು ದಾಖಲಿಸಿದ್ದರು. 

ಅತ್ಯಾಚಾರ ಎಸಗಿಲ್ಲ: ವಂಜಾರ
ಕೋರ್ಟ್‌ ಆವರಣಕ್ಕೆ ಆಗಮಿಸಿದ್ದ ನಿವೃತ್ತ ಐಪಿಎಸ್‌ ಅಧಿಕಾರಿ ಡಿ.ಜಿ.ವಂಜಾರಾ ಬಾಪೂ ಅತ್ಯಾಚಾರ ಎಸಗಿಲ್ಲ ಎಂದು ಹೇಳಿ ಅಚ್ಚರಿ ಸೃಷ್ಟಿಸಿದ್ದಾರೆ. ಅವರು ಸನಾತನ ಹಿಂದೂ ಧರ್ಮದ ರಕ್ಷಕ. ಹೈಕೋರ್ಟ್‌ನಲ್ಲಿ ಅವರಿಗೆ ನ್ಯಾಯಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಏನೇನು ಆರೋಪ?
ಅಕ್ರಮವಾಗಿ ಬಾಲಕಿಯ ಬಂಧನ  ಮತ್ತು ಅತ್ಯಾಚಾರ
ಕ್ರಿಮಿನಲ್‌ ಸಂಚು
ಬಾಲಕಿಯ ಗೌರವಕ್ಕೆ ಚ್ಯುತಿ ತರುವ ಚಿಹ್ನೆ, ಪದ ಬಳಕೆ
ಬಾಲಾಪರಾಧ ಕಾಯ್ದೆ ಪ್ರಕಾರ ಅಪ್ರಾಪೆ¤ ಅತ್ಯಾಚಾರ

ಪ್ರಕರಣದ ಅಂಕಿ-ಅಂಶ 
1,660 ಜೈಲಲ್ಲಿ ಕಳೆದ ದಿನಗಳು
1,470 ಇಷ್ಟು ದಿನಗಳ ವಿಚಾರಣೆ
04 ಅಪರಾಧಿಗಳು 
53 ಇಷ್ಟು ದಿನ ಅಂತಿಮ ವಿಚಾರಣೆ
58 ಪ್ರಾಸಿಕ್ಯೂಷನ್‌ ಪರ ಸಾಕ್ಷಿಗಳು
14 ಕೈಬಿಟ್ಟ ಸಾಕ್ಷ್ಯಗಳು

12 ಬಾರಿ ಜಾಮೀನು ಅರ್ಜಿ ತಿರಸ್ಕಾರ (6 ಬಾರಿ ಸ್ಥಳೀಯ ಕೋರ್ಟ ಲ್ಲಿ, 3 ಬಾರಿ ಹೈಕೋರ್ಟ್‌, 3 ಬಾರಿ ಸುಪ್ರೀಂಕೋರ್ಟ್‌)
03 ಇಷ್ಟು ಮಂದಿಗೆ ಜಾಮೀನು. ಈ ಪೈಕಿ ಒಬ್ಬ ಅರ್ಜಿ ಸಲ್ಲಿಕೆ ಮಾಡಿಲ್ಲ.

ಪ್ರಕರಣದ ಹಿನ್ನೋಟ
ಆ. 15, 2013: ಅಸಾರಾಮ್‌  ಬಾಪು  ಮನೈ ಹಳ್ಳಿಯಲ್ಲಿರುವ ಆಶ್ರಮಕ್ಕೆ ಬಾಲಕಿ ಸೇರ್ಪಡೆ. 
ಆ. 20, 2013: ಅಸಾರಾಮ್‌  ವಿರುದ್ಧ ದೆಹಲಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು. 
ಆ. 31, 2013: ಇಂದೋರ್‌ನಲ್ಲಿ  ಬಂಧನ. 
ನ. 6, 2013: ಜೋಧಪುರ ಪೊಲೀಸರಿಂದ ಆರೋಪ ಪಟ್ಟಿ. 
ಮೇ 24, 2014: ಪ್ರಕರಣದ ಪ್ರಮುಖ ಸಾಕ್ಷಿ ಅಮೃತ್‌ ಪ್ರಜಾಪತಿ ಮೇಲೆ ಶೂಟೌಟ್‌
ಜೂ. 10, 2014: ಪ್ರಜಾಪತಿ ಕೊನೆಯುಸಿರು. 
ಫೆ. 13, 2015: ಮತ್ತೂಬ್ಬ ಸಾಕ್ಷಿ ರಾಹುಲ್‌ ಸಾಚನ್‌ಗೆ ಚೂರಿ ಇರಿತ. ಆನಂತರ, ನವೆಂಬರ್‌ನಲ್ಲಿ ಆತ ನಾಪತ್ತೆ. 
ಮೇ 14, 2015: ಪಾಣಿಪಟ್‌ನಲ್ಲಿ ಪ್ರಕರಣದ ಮತ್ತೂಬ್ಬ ಸಾಕ್ಷಿ ಮಹೇಂದ್ರ ಚಾವ್ಲಾ ಹತ್ಯೆ.
ಜೂ. 10, 2015: ಮತ್ತೂಬ್ಬ ಸಾಕ್ಷಿ ಕೃಪಾಲ್‌ ಸಿಂಗ್‌ ಹತ್ಯೆ. 
ಆ. 4, 2016: ಜೋಧಪುರದ ಜೈಲು ಆವರಣಕ್ಕೆ ವಿಚಾರಣೆ ಸ್ಥಳಾಂತರಿಸಲು ರಾಜಸ್ಥಾನ ಹೈಕೋರ್ಟ್‌ಗೆ ಪೊಲೀಸರ ಮನವಿ. 
ಏ. 17, 2018: ಜೋಧಪುರ ಕಾರಾಗೃಹದಲ್ಲೇ ವಿಚಾರಣೆ, ತೀರ್ಪಿಗೆ ಅಧೀನ ನ್ಯಾಯಾಲಯಕ್ಕೆ ರಾಜಸ್ಥಾನ ಹೈಕೋರ್ಟ್‌ ಆದೇಶ. 
ಏ. 25, 2018: ಅಸಾರಾಮ್‌  ಅಪರಾಧಿಯೆಂದು ಅಧೀನ ನ್ಯಾಯಾಲಯ ತೀರ್ಪು. 

ಈ ತೀರ್ಪು ದೇವ ಮಾನವರಿಂದ ದೌರ್ಜನ್ಯಕ್ಕೊಳಗಾದವರಿಗೆ ಸಂದ ಜಯ. ಕಾನೂನಿನ ಮುಂದೆ ಎಲ್ಲರೂ ಸಮಾನರೆಂಬುದು ಸಾಬೀತಾಗಿದೆ. 
ಉತ್ಸವ್‌ ಬೇನ್ಸ್‌, ಸಂತ್ರಸ್ತೆ ಪರ ವಕೀಲ

ಕಪಟ ಸ್ವಾಮೀಜಿಗಳ ಅಸಲೀತನ ಅರಿಯುವ ಕಾಲ ಬಂದಿದೆ. ಇಂಥ ಪ್ರಕರಣಗಳು ಭಾರತಕ್ಕೆ ಮಸಿ ಬಳಿದಿವೆ. 
ಅಶೋಕ್‌ ಗೆಹೊಟ್‌,  ಕಾಂಗ್ರೆಸ್‌ ನಾಯಕ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ