ವಿದೇಶಿ ಕಂಪನಿಗಳಿಂದ ಬಿಡ್‌

45 ಸಾವಿರ ಕೋಟಿ ರೂ. ಜಲಾಂತರ್ಗಾಮಿ ಯೋಜನೆ

Team Udayavani, Jul 12, 2019, 5:00 AM IST

ನವದೆಹಲಿ: ಭಾರತದ ಹಡಗು ನಿರ್ಮಾಣ ಉದ್ಯಮಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮತ್ತು ದೇಶದ ನೌಕಾಸೇನೆಯ ಸಾಮರ್ಥ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿದೇಶಿ ಜಲಾಂತರ್ಗಾಮಿ ನಿರ್ಮಾಣ ಕಂಪನಿಗಳಿಗೆ ಬಿಡ್‌ ಸಲ್ಲಿಸುವಂತೆ ಪ್ರಧಾನಿ ಕಾರ್ಯಾಲಯ ಕೋರಿಕೊಂಡಿದೆ.

ಫ್ರಾನ್ಸ್‌ನ ನೇವಲ್ ಗ್ರೂಪ್‌, ಜರ್ಮನಿಯ ಥೈಸೆನ್‌ಕರುಪ್‌ ಮರೈನ್‌ ಸಿಸ್ಟಂ, ಸ್ವೀಡನ್‌ನ ಸಾಬ್‌ ಕೊಕುಮಸ್‌, ಸ್ಪೇನ್‌ನ ನವಾಂಟಿನಾ ಹಾಗೂ ರಷ್ಯಾದ ರೋಸೋಬೋರೋನ್‌ ಎಕ್ಸ್‌ಪೋರ್ಟ್‌ ಕಂಪನಿಗಳಿಗೆ ಭಾರತ ಆಹ್ವಾನ ನೀಡಿದೆ. ಡೀಸೆಲ್ ಎಲೆಕ್ಟ್ರಿಕ್‌ ಸಬ್‌ಮರೀನ್‌ ಅನ್ನು ಭಾರತದಲ್ಲಿ ನಿರ್ಮಾಣ ಮಾಡುವುದಕ್ಕಾಗಿ ಈ ಕಂಪನಿಗಳು ತಂತ್ರಜ್ಞಾನ ವರ್ಗಾವಣೆ ಮಾಡಲು ಆಸಕ್ತಿ ಹೊಂದಿವೆಯೇ ಎಂಬುದನ್ನು ಕೇಳಲಾಗಿದೆ. ಆಸಕ್ತಿ ಇದ್ದಲ್ಲಿ, ಈ ಕಂಪನಿಗಳು ಬಿಡ್‌ ಸಲ್ಲಿಕೆ ಮಾಡಬಹುದಾಗಿದೆ.

3 ವರ್ಷ ಬೇಕು: 45 ಸಾವಿರ ಕೋಟಿ ರೂ. ವೆಚ್ಚದ ಈ ಯೋಜನೆಗೆ ಈಗ ಕೇವಲ ಆಸಕ್ತಿ ಪತ್ರವನ್ನು ಸಲ್ಲಿಸಲಷ್ಟೇ ಅವಕಾಶವಿದ್ದು, ಒಪ್ಪಂದ ಮಾಡಿಕೊಳ್ಳಲು ಕನಿಷ್ಠ ಮೂರು ವರ್ಷಗಳವರೆಗೆ ಕಾಲಾವಕಾಶ ತೆಗೆದುಕೊಳ್ಳಲಿದೆ. ಭಾರತದ ಎರಡು ಖಾಸಗಿ ಕಂಪನಿಗಳಾದ ಎಲ್ ಆ್ಯಂಡ್‌ ಟಿ ಮತ್ತು ರಿಲಯನ್ಸ್‌ ನೇವಲ್ ಆ್ಯಂಡ್‌ ಇಂಜಿನಿಯರಿಂಗ್‌ ಕಂಪನಿ ಸೇರಿದಂತೆ ಇತರ ದೇಶಿ ಶಿಪ್‌ಯಾರ್ಡ್‌ ಕಂಪನಿಗಳಿಗೂ ಈ ಯೋಜನೆಯಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಲಾಗಿದೆ. ಆಯ್ಕೆ ಮಾಡಲಾಗುವ ಭಾರತದ ಹಡಗು ನಿರ್ಮಾಣ ಕಂಪನಿಯು ವಿದೇಶದ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಳ್ಳಲಿದ್ದು, ವಿದೇಶಿ ಕಂಪನಿಯ ತಂತ್ರಜ್ಞಾನ ವರ್ಗಾವಣೆ ಮಾಡಿ, ಆ ತಂತ್ರಜ್ಞಾನದ ಅಡಿಯಲ್ಲಿ ಜಲಾಂತರ್ಗಾಮಿಯನ್ನು ನಿರ್ಮಾಣ ಮಾಡಲಾಗುತ್ತದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ