ಬಿಜೆಪಿ ಮಹಿಳಾ ವಿರೋಧಿ ಅಲ್ಲ: ಸುಷ್ಮಾ ತಿರುಗೇಟು
Team Udayavani, Oct 15, 2017, 6:05 AM IST
ಅಹಮದಾಬಾದ್: “ಬಿಜೆಪಿ ದೇಶಕ್ಕೆ ನಾಲ್ವರು ಮಹಿಳಾ ಮುಖ್ಯಮಂತ್ರಿಗಳು ಮತ್ತು ನಾಲ್ವರು ಮಹಿಳಾ ರಾಜ್ಯಪಾಲರನ್ನು ಕೊಟ್ಟಿದೆ ಎಂಬುದನ್ನು ಮರೆತು ಮಾತನಾಡುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದ’. ಇದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ಗಾಂಧಿ ಅವರಿಗೆ ನೀಡಿದ ತಿರುಗೇಟು.
ಮಹಿಳಾ ಕಾರ್ಯಕರ್ತರ ಸಮಾವೇಶದಲ್ಲಿ ಶನಿವಾರ ಮಾತನಾಡಿದ ಅವರು, “ಪ್ರಸ್ತುತ ಕೇಂದ್ರ ಸರಕಾರದಲ್ಲಿ 6 ಮಂದಿ ಸಚಿವೆಯರಿದ್ದಾರೆ. ಇದೇ ಮೊದಲ ಬಾರಿಗೆ ರಕ್ಷಣಾ ಸಚಿವರನ್ನಾಗಿಯೂ ಮಹಿಳೆಯನ್ನೇ ನೇಮಕ ಮಾಡಲಾಗಿದೆ. ಭದ್ರತೆ ಕುರಿತ ಸಂಪುಟ ಸಮಿತಿಯ 4 ಸದಸ್ಯರ ಪೈಕಿ ಇಬ್ಬರು ಮಹಿಳೆಯರಿದ್ದಾರೆ. ಇದುವರೆಗೆ ಈ ಸಮಿತಿಯಲ್ಲಿ ಮಹಿಳಾ ಸದಸ್ಯರಿಗೆ ಅವಕಾಶವೇ ಇರುತ್ತಿರಲಿಲ್ಲ. ನಮ್ಮ ಸರಕಾರ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ಕೊಟ್ಟಿದೆ. ಆರೆಸ್ಸೆಸ್ ಮತ್ತು ಮಹಿಳೆಯರ ಬಗ್ಗೆ ರಾಹುಲ್ ಬಹಳ ಹಗುರವಾಗಿ ಮಾತನಾಡಿರುವುದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ ಎಂದಿದ್ದಾರೆ.