ಸಿಬಿಎಸ್ಇ, ಐಸಿಎಸ್ಇ ಪಠ್ಯ ಶೇ. 50 ಇಳಿಕೆ?
Team Udayavani, Oct 11, 2020, 5:30 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಕೋವಿಡ್ ಸೋಂಕು ಹರಡುವ ಆತಂಕದಿಂದ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಶಾಲೆಗಳು ತೆರೆದೇ ಇಲ್ಲ. ಆನ್ಲೈನ್ ಮೂಲಕ ಪಾಠ ಪ್ರವಚನಗಳು ಎಂದಿನ ವೇಗದಲ್ಲಿ ನಡೆಯುತ್ತಿಲ್ಲ. ಹೀಗಾಗಿ ಸಿಬಿಎಸ್ಇ ಮತ್ತು ಐಸಿಎಸ್ಇ ಮಂಡಳಿಗಳು ಪ್ರಸಕ್ತ ಶೈಕ್ಷಣಿಕ ವರ್ಷದ 10 ಮತ್ತು 12ನೇ ತರಗತಿಯ ಪಠ್ಯಕ್ರಮವನ್ನು ಶೇ. 50ಕ್ಕೆ ಇಳಿಸಲು ಚಿಂತನೆ ನಡೆಸಿವೆ.
ಮಾಮೂಲಿ ತರಗತಿ ನಡೆಸಲು ಸಾಧ್ಯವಾಗದ ಕಾರಣ ಜುಲೈಯಲ್ಲಿ ಈಗಾ ಗಲೇ ಶೇ. 30ರಷ್ಟು ಪಠ್ಯ ಕಡಿತಗೊಳಿಸಿದ್ದೇವೆ. ಶೇ. 70 ಅಥವಾ ಶೇ. 50ರಷ್ಟು ಪಠ್ಯ ಆಧರಿಸಿ ಪರೀಕ್ಷೆಗಳನ್ನು ನಡೆಸಬೇಕೇ ಎಂಬ ಬಗ್ಗೆ ಮಂಡಳಿ ಶೀಘ್ರವೇ ನಿರ್ಧಾರ ಕೈಗೊಳ್ಳಲಿದೆ ಎಂದು ಸಿಬಿಎಸ್ಇ ಉನ್ನತ ಮೂಲಗಳು ತಿಳಿಸಿವೆ.
ಶೈಕ್ಷಣಿಕ ವರ್ಷ ಮುಂದಕ್ಕೆ?
ಕೊರೊನಾ ವ್ಯಾಪಿಸುವ ಆತಂಕ ಇನ್ನಷ್ಟು ತೀವ್ರಗೊಂ ಡರೆ ಹಾಲಿ ಶೈಕ್ಷಣಿಕ ವರ್ಷ ವಿಸ್ತರಿಸುವುದು ಅಥವಾ 2021ರ ಮಂಡಳಿ ಪರೀಕ್ಷೆಗಳನ್ನು 45-60 ದಿನ ಮುಂದೂಡುವ ಸಾಧ್ಯತೆಯೂ ಇದೆ. ಪರೀಕ್ಷೆಗೂ ಮುನ್ನ ಕೆಲವು ದೈಹಿಕ ತರಗತಿಗಳನ್ನು ನಡೆಸ ಬೇಕಾದ ಅನಿವಾರ್ಯತೆ ಇರುವುದರಿಂದ ಪರೀಕ್ಷೆಗಳು ತಡವಾಗಬಹುದು ಎನ್ನುತ್ತವೆ ಸಿಬಿಎಸ್ಇ ಮೂಲಗಳು.