ಡಿಎಂಕೆಗೆ ಈಗ ಸ್ಟಾಲಿನ್ ಬಾಸ್
Team Udayavani, Jan 5, 2017, 3:45 AM IST
ಚೆನ್ನೈ: ಡಿಎಂಕೆಯ ಮುಖ್ಯಸ್ಥ ಕರುಣಾನಿಧಿ ಅವರು ಅನಾರೋಗ್ಯ ಪೀಡಿತರಾಗಿರುವಾಗಲೇ, ಅವರ ಪುತ್ರ ಎಂ.ಕೆ. ಸ್ಟಾಲಿನ್ ಅವರನ್ನು ಪಕ್ಷದ ಕಾರ್ಯಾಧ್ಯಕ್ಷರನ್ನಾಗಿ ಬುಧವಾರ ನೇಮಕ ಮಾಡಲಾಗಿದೆ. ತಂದೆಯನ್ನು ನೆನೆದು ಕಣ್ಣೀರಿಡುತ್ತಾ, ಹೊಸ ಹುದ್ದೆಯನ್ನು ಸ್ಟಾಲಿನ್ ಅವರು ಸ್ವೀಕರಿಸಿದ್ದಾರೆ.
ಡಿಎಂಕೆಯ 60 ವರ್ಷಗಳ ಇತಿಹಾಸದಲ್ಲಿ ಕಾರ್ಯಾಧ್ಯಕ್ಷ ಹುದ್ದೆ ಸೃಷ್ಟಿಯಾಗುತ್ತಿರುವುದು ಇದೇ ಮೊದಲು. ಕರುಣಾನಿಧಿ ಅವರು ಈಗಲೂ ಅಧ್ಯಕ್ಷ ಹುದ್ದೆಯಲ್ಲೇ ಮುಂದುವರಿದಿದ್ದಾರಾದರೂ, ಅವರಿಗೆ ಆರೋಗ್ಯ ಸರಿ ಇಲ್ಲದ ಕಾರಣ ಎಂ.ಕೆ. ಸ್ಟಾಲಿನ್ ಅವರೇ ಎಲ್ಲ ಅಧಿಕಾರಗಳೊಂದಿಗೆ ಪಕ್ಷವನ್ನು ಮುನ್ನಡೆಸಲಿದ್ದಾರೆ.
ಹೀಗಾಗಿ ಅಸಲಿಗೆ ಸ್ಟಾಲಿನ್ ಅವರು ಡಿಎಂಕೆ ಬಾಸ್ ಹುದ್ದೆಗೆ ಏರಿದಂತಾಗಿದೆ. ಈಗಾಗಲೇ ಹೊಂದಿರುವ ಖಜಾಂಚಿ ಸ್ಥಾನದ ಜತೆಗೆ ಕಾರ್ಯಾಧ್ಯಕ್ಷ ಹುದ್ದೆಯನ್ನೂ ಸ್ಟಾಲಿನ್ ನಿರ್ವಹಿಸಲಿದ್ದಾರೆ.
ಜಯಲಲಿತಾ ನಿಧನದೊಂದಿಗೆ ಅಣ್ಣಾಡಿಎಂಕೆಯ ಸಾರಥಿಯಾಗಿ ಶಶಿಕಲಾ ನಟರಾಜನ್ ಆಯ್ಕೆ ಯಾಗಿದ್ದರು. ಈಗ ಕರುಣಾನಿಧಿ ಅನಾರೋಗ್ಯದಿಂದಾಗಿ ಸ್ಟಾಲಿನ್ ಪಟ್ಟಾಭಿಷೇಕ ನಡೆದಿದೆ. ಇದರೊಂದಿಗೆ ಎರಡು ಪ್ರಮುಖ ದ್ರಾವಿಡ ಪಕ್ಷಗಳ ನಾಯಕರು ಬದಲಾದಂತಾಗಿದೆ.
50 ವರ್ಷದ ಬಳಿಕ ಸಭೆಗೆ ಕರುಣಾ ಗೈರು: ಅನಾರೋಗ್ಯಪೀಡಿತರಾಗಿರುವ ಡಿಎಂಕೆ ಪರಮೋಚ್ಚ ನಾಯಕ ಎಂ. ಕರುಣಾನಿಧಿ ಅವರು ಬುಧವಾರ ನಡೆದ ಪಕ್ಷದ ಸಾಮಾನ್ಯ ಮಂಡಳಿ ಸಭೆಗೆ ಹಾಜರಾಗಲಿಲ್ಲ. ಕರುಣಾ ಅವರು ಈ ಸಭೆ ತಪ್ಪಿಸಿಕೊಳ್ಳುತ್ತಿರುವುದು 50 ವರ್ಷದಲ್ಲಿ ಇದೇ ಮೊದಲು.