ರಜನಿಯ ಪೆಟ್ಟಾ ರಿಲೀಸ್; ಚಿತ್ರಮಂದಿರದ ಎದುರೇ ಪ್ರೇಮಿಗಳ ಮದುವೆ!
Team Udayavani, Jan 10, 2019, 9:40 AM IST
ಚೆನ್ನೈ: 2.0 ಚಿತ್ರದ ಭಾರೀ ಯಶಸ್ಸಿನ ಬಳಿಕ ತಲೈವಾ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಪೆಟ್ಟಾ ಚಿತ್ರ ಗುರುವಾರ ವಿಶ್ವಾದ್ಯಂತ ಬಿಡುಗಡೆಯಾಗಿದ್ದು ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದೆಲ್ಲದಕಿಂತ ವಿಶೇಷವಾಗಿ ರಜನಿಕಾಂತ್ ಕಟ್ಟಾ ಅಭಿಮಾನಿಗಳಾಗಿರುವ ಪ್ರೇಮಿಗಳಿಬ್ಬರು ಚಿತ್ರ ಬಿಡುಗಡೆ ಸಂಭ್ರಮದಲ್ಲಿ ಚಿತ್ರಮಂದಿರದ ಎದುರೇ ಹೊಸ ಬಾಳಿಗೆ ಕಾಲಿರಿಸಿದ್ದಾರೆ.
ಚೆನ್ನೈನ ವುಡ್ಲ್ಯಾಂಡ್ಸ್ ಚಿತ್ರಮಂದಿರದ ಎದುರು ಹಾಕಲಾಗಿದ್ದ ವೇದಿಕೆಯಲ್ಲಿ ಅಂಬರಸು ಮತ್ತು ಕಾಮಾಚಿ ಅವರು ತಮಿಳು ಸಂಪ್ರದಾಯದಂತೆ ಹೊಸ ಬಾಳಿಗೆ ಕಾಲಿರಿಸಿದ್ದಾರೆ. ವಿವಾಹ ವಿಧಿಗಳ ಬಳಿಕ ನೆರೆದಿದ್ದ ಚಿತ್ರ ಪ್ರೇಮಿಗಳಿಗೆ ಔತಣವನ್ನು ಏರ್ಪಡಿಸಲಾಗಿತ್ತು.
ಕಾರ್ತಿಕ್ ಸುಬ್ಬರಾಜು ಅವರು ನಿರ್ದೇಶನದ ಪೆಟ್ಟಾ ಚಿತ್ರದ ಹಿಂದಿ ಡಬ್ಬಿಂಗ್ ನಾಳೆ ಬಿಡುಗಡೆಯಾಗಲಿದೆ.
ಪೆಟ್ಟಾ ಚಿತ್ರದ ಮೂಲಕ ಖ್ಯಾತ ಬಾಲಿವುಡ್ ನಟ ನವಾಜುದ್ದೀನ್ ಸಿದ್ಧಿಕಿ ಅವರು ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ವಿಜಯ್ ಸೇತುಪತಿ, ಶಶಿಕುಮಾರ್, ಸಿಮ್ರಾನ್, ತ್ರಿಶಾ, ಮಹೇಂದ್ರನ್,ಬಾಬಿ ಸಿಂಹ ಮತ್ತು ಗುರು ಸೋಮಸುಂದರಮ್ ಅವರು ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.