14 ವರ್ಷದ ಬಾಲಕಿಗೆ ಬಲವಂತದ ಮದುವೆ ; ತಂದೆ, ತಾಯಿ ಸೇರಿ ನಾಲ್ವರ ಬಂಧನ
Team Udayavani, Jun 25, 2022, 4:06 PM IST
ರಿಷಿಕೇಶ (ಉತ್ತರಾಖಂಡ): ಅಪ್ರಾಪ್ತ ಬಾಲಕಿಯನ್ನು ತನ್ನ ದುಪ್ಪಟ್ಟು ವಯಸ್ಸಿನ ಪುರುಷನಿಗೆ ಬಲವಂತವಾಗಿ ಮದುವೆ ಮಾಡಿಕೊಟ್ಟ ಆರೋಪದಲ್ಲಿ ಬಾಲಕಿಯ ತಾಯಿ ಮತ್ತು ತಂದೆ ಸೇರಿ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಮಾನಸಾ ದೇವಿ ದೇವಸ್ಥಾನದಲ್ಲಿ 14 ವರ್ಷದ ಬಾಲಕಿಯನ್ನು 28 ವರ್ಷದ ಯುವಕನೊಂದಿಗೆ ಬಲವಂತವಾಗಿ ಮದುವೆ ಮಾಡಲಾಗುತ್ತಿದೆ ಎಂದು ಶುಕ್ರವಾರ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಪೊಲೀಸ್ ತಂಡ ದೇವಸ್ಥಾನಕ್ಕೆ ತಲುಪಿದಾಗ ವಧು ಅಪ್ರಾಪ್ತ ವಯಸ್ಕಳಾಗಿರುವುದರಿಂದ ಮದುವೆ ಸಮಾರಂಭ ನಡೆಸಲು ಪುರೋಹಿತರು ನಿರಾಕರಿಸಿದ್ದಾರೆ. ಆದರೆ ವರನ ಕಡೆಯವರು ಬಲವಂತವಾಗಿ ಹುಡುಗಿಯ ಕೊರಳಿಗೆ ಹಾರ ಹಾಕಿ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾರೆ.
ಅವರನ್ನು ಬೆನ್ನಟ್ಟಿದ ಬಳಿಕ ಇಲ್ಲಿನ ಶ್ಯಾಮ್ಪುರ ಫಟಕ್ನಲ್ಲಿ ಪೊಲೀಸ್ ತಂಡ ಆ ವ್ಯಕ್ತಿಯನ್ನು ಹಿಡಿದು ಬಾಲಕಿಯನ್ನು ರಕ್ಷಿಸಿದೆ. ಘಟನೆಗೆ ಸಂಬಂಧಿಸಿದಂತೆ ಬಾಲಕಿಯ ತಾಯಿ, ಮೀರತ್ ಮೂಲದ ಆಕೆಯ ಪತಿ ಮತ್ತು ಇತರ ಇಬ್ಬರು ಸಹಚರರನ್ನು ಬಂಧಿಸಲಾಗಿದೆ ಎಂದು ಎಸ್ಎಚ್ಒ ತಿಳಿಸಿದ್ದಾರೆ.