ಅತ್ಯಾಚಾರ ಪ್ರಕರಣ: ಬಿಷಪ್ ಮುಲಕ್ಕಲ್ ಬಂಧನ
Team Udayavani, Sep 22, 2018, 6:00 AM IST
ಕೊಚ್ಚಿ: ಕ್ರೈಸ್ತ ಸನ್ಯಾಸಿನಿ ಮೇಲೆ ಅತ್ಯಾಚಾರ ನಡೆಸಿದ ಆರೋಪದಲ್ಲಿ ಜಲಂಧರ್ನ ಬಿಷಪ್ ಫ್ರಾಂಕೋ ಮುಲಕ್ಕಲ್ ಅವರನ್ನು ಶುಕ್ರವಾರ ರಾತ್ರಿ ಬಂಧಿಸಲಾಗಿದೆ. ಸತತ 3 ದಿನ ವಿಶೇಷ ತನಿಖಾ ದಳ ತ್ರಿಪುಣಿತ್ತುರದಲ್ಲಿ ವಿಚಾರಣೆ ನಡೆಸಿತ್ತು. ಮುಲಕ್ಕಲ್ ಬಂಧನಕ್ಕೂ ಮುನ್ನ ತನಿಖಾ ದಳ ಕೊಟ್ಟಾಯಂನ ಕುರುವಿವಲಂಗಾಡ್ನಲ್ಲಿ ಇರುವ ಕ್ರೈಸ್ತ ಸನ್ಯಾಸಿನಿಯನ್ನು ಭೇಟಿಯಾಗಿ ಕೆಲವು ಮಾಹಿತಿ ಬಗ್ಗೆ ಸ್ಪಷ್ಟನೆ ಪಡೆದುಕೊಂಡಿತ್ತು. ಮುಲಕ್ಕಲ್ ಅವರನ್ನು ಶನಿವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತದೆ ಎಂದು ಐಜಿಪಿ ವಿಜಯ್ ಎಸ್. ತಿಳಿಸಿದ್ದಾರೆ.
ಇದೇ ವೇಳೆ ಕೊಟ್ಟಾಯಂನಲ್ಲಿ ಮಾತನಾಡಿದ ಶಾಸಕ ಪಿ.ಸಿ.ಜಾರ್ಜ್, “ಮುಲಕ್ಕಲ್ರನ್ನು ಸಿಕ್ಕಿಸಿಹಾಕಲಾಗುತ್ತಿದೆ. ಅತ್ಯಾಚಾರ ನಡೆದಿತ್ತು ಎಂದು ಹೇಳಲಾಗಿರುವ ದಿನ ಮುಲಕ್ಕಲ್ ಮತ್ತು ಕ್ರೈಸ್ತ ಸನ್ಯಾಸಿನಿ ಜತೆಗೆ ಇದ್ದ ಬಗ್ಗೆ ಫೋಟೋ ತೆಗೆಯಲಾಗಿತ್ತು. ಅದನ್ನು ಮುಂದಿಟ್ಟು ತನಿಖಾಧಿಕಾರಿಯೊಬ್ಬರು ಬಿಷಪ್ ಮೇಲೆ ಒತ್ತಡ ಹೇರಿದ್ದರು’ ಎಂದು ಆರೋಪಿಸಿದ್ದಾರೆ.