ಇರಾನ್ನಿಂದ ತೈಲ ಖರೀದಿಗೆ ಎಂಆರ್ಪಿಎಲ್ ಸಿದ್ಧತೆ
Team Udayavani, Oct 6, 2018, 8:20 AM IST
ಹೊಸದಿಲ್ಲಿ: ಅಮೆರಿಕದ ದಿಗ್ಬಂಧನ ಬೆದರಿಕೆಯನ್ನು ಲೆಕ್ಕಿಸದೆ ರಷ್ಯಾ ಜತೆ 40 ಸಾವಿರ ಕೋಟಿ ರೂ. ಮೌಲ್ಯದ ಕ್ಷಿಪಣಿ ಡೀಲ್ಗೆ ಸಹಿ ಮಾಡಿದ ಬಳಿಕ ಪ್ರಧಾನಿ ಮೋದಿ ನೇತೃತ್ವದ ಸರಕಾರ ಮತ್ತೂಂದು ದಿಟ್ಟ ನಿರ್ಧಾರ ಕೈಗೊಂಡಿದೆ. ಮುಂದಿನ ತಿಂಗಳು ಕೂಡ ಇರಾನ್ನಿಂದ ಕಚ್ಚಾ ತೈಲ ಆಮದು ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ಮಂಗಳೂರು ರಿಫೈನರೀಸ್ ಮತ್ತು ಪೆಟ್ರೋಕೆಮಿಕಲ್ಸ್ ಮತ್ತು ಇಂಡಿಯನ್ ಆಯಿಲ್ ಕಾರ್ಪೊರೇಷನ್ 1.25 ದಶಲಕ್ಷ ಟನ್ಗಳಷ್ಟು ಕಚ್ಚಾ ತೈಲ ಆಮದು ಮಾಡಿಕೊಳ್ಳಲಿವೆ.
ಇದರ ಜತೆಗೆ ಅಮೆರಿಕದ ಡಾಲರ್ನಲ್ಲಿ ಪಾವತಿ ಮಾಡುವ ಬದಲು ರೂಪಾಯಿಯಲ್ಲಿ ಪಾವತಿ ಮಾಡುವ ಬಗ್ಗೆಯೂ ಇರಾನ್ ಸರಕಾರದ ಜತೆಗೆ ಮಾತುಕತೆ ನಡೆದಿದೆ. ಹಾಲಿ ವಿತ್ತೀಯ ವರ್ಷದಲ್ಲಿ ಇರಾನ್ನಿಂದ 25 ದಶಲಕ್ಷ ಟನ್ಗಳಷ್ಟು ಕಚ್ಚಾ ತೈಲ ಖರೀದಿಸಲು ಈಗಾಗಲೇ ನಿರ್ಧರಿಸಲಾಗಿದೆ. ಆದರೆ, ನಯರಾ ಎನರ್ಜಿ ಮುಂದಿನ ತಿಂಗಳಿಂದ ಕಚ್ಚಾ ತೈಲವನ್ನು ಇರಾನ್ನಿಂದ ಖರೀದಿಸದೇ ಇರಲು ಮುಂದಾಗಿದೆ. ಅಮೆರಿಕ ಸರಕಾರ ಹೊರಡಿಸಿದ ಫರ್ಮಾನಿನ ಪ್ರಕಾರ, ನ.4ರ ಬಳಿಕ ಇರಾನ್ನಿಂದ ಯಾವುದೇ ರೀತಿಯಲ್ಲಿ ವಹಿವಾಟು ನಡೆಸುವಂತಿಲ್ಲ.