ಕತ್ರಿನಾ, ದೀಪಿಕಾ, ಪ್ರಿಯಾಂಕಾ ಮದುವೆ ಆಯ್ತು!
Team Udayavani, Feb 26, 2017, 3:50 AM IST
ಡೆಹ್ರಾಡೂನ್: ಕತ್ರಿನಾ, ದೀಪಿಕಾ, ಪ್ರಿಯಾಂಕ ಮದುವೆ ಡೆಹರಾಡೂನ್ನಲ್ಲಿ ನೆರವೇರಿದೆ! ಇದೇನಿದು ಸದ್ದು ಗದ್ದಲವಿಲ್ಲದೇ ಮದುವೆ ಆಗಿಬಿಟ್ರಾ…? ಎಂದು ಗಾಬರಿಯಾಗಬೇಡಿ. ಅಷ್ಟಕ್ಕೂ ಇವರ್ಯಾರು ಬಾಲಿವುಡ್ ನಟಿಯರಾದ ಕತ್ರಿನಾ, ದೀಪಿಕಾ ಮತ್ತು ಪ್ರಿಯಾಂಕ ಅವರೇನಲ್ಲ. ಡೆಹ್ರಾಡೂನ್ನಿಂದ 100 ಕಿ.ಮೀ. ದೂರದಲ್ಲಿರುವ ತೆಹ್ರಿ ಗರ್ವಾಲ್ನ ಪಂತ್ವಾರಿ ಎಂಬಲ್ಲಿ ಶುಕ್ರವಾರ ನಡೆದ “ಬಕ್ರೀ ಕಾ ಸ್ವಯಂವರ’ ಆಚರಣೆಯಲ್ಲಿ ಬಾಲಿವುಡ್ ನಟಿಯರ ಹೆಸರಿನ ಮೇಕೆಗಳ ಮದುವೆ ಮಾಡಲಾಗಿದೆಯಷ್ಟೆ. ಅದಕ್ಕೆ ಸಾವಿರಾರು ಮಂದಿ ಸಾಕ್ಷಿಯಾಗಿದ್ದಾರೆ ಕೂಡ.
ಹಿಂದೂ ಮದುವೆ ಸಮಾರಂಭಗಳಲ್ಲಿ ನಡೆಯುವಂತೆ ಶ್ಲೋಕ, ಮಂತ್ರ ಹಾಗೂ ವಾದ್ಯಗಳೊಂದಿಗೆ ಅದ್ಧೂರಿಯಾಗಿಯೇ ಮೇಕೆಗಳ ಮದುವೆ ನಡೆದಿದೆ. ಸಂಪ್ರದಾಯದಂತೆ ಮಂಗಳ ಸ್ನಾನ ಮಾಡಿ ಮುಗಿಸಿದ ಬಳಿಕ ಕತ್ರಿನಾ ಹೆಸರಿನ ಮೇಕೆ ಚಂದುವಿನ ಜತೆ, ದೀಪಿಕಾ ಹೆಸರಿನ ಮೇಕೆ ತುಕುನ್ ಜತೆ, ಪ್ರಿಯಾಂಕ ಹೆಸರಿನ ಮೇಕೆ ಬೆಅಸಕು ಮೇಕೆ ಜತೆ ಮಾದುವೆ ನೆರವೇರಿದೆ. ಉತ್ತರಕಾಶಿ ಮತ್ತು ಮುಸೊರಿಯಲ್ಲಿನ ಬುಡಕಟ್ಟು ಜನಾಂಗ ಅನಾದಿಕಾಲದಿಂದ ನಡೆದುಬಂದ ಆಚರಣೆಯನ್ನು ಈಗಲೂ ಮುಂದುವರಿಸಿಕೊಂಡುಬತುತ್ತಿದೆ.