ದೇಶದಲ್ಲೀಗ ಕೇಜ್ರಿವಾಲ್ ಮಾದರಿಗೆ ಮನ್ನಣೆ: ಮನೀಷ್ ಸಿಸೋಡಿಯಾ
Team Udayavani, Mar 10, 2022, 10:15 PM IST
ನವದೆಹಲಿ: ಪಂಜಾಬ್ ಚುನಾವಣೆಯ ಫಲಿತಾಂಶ, ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ನೀಡಿದ ಆಡಳಿತಕ್ಕೆ ಜನ ಸಮ್ಮತಿಯ ಮುದ್ರೆ ಒತ್ತಿದ್ದಾರೆ ಎನ್ನುವುದಕ್ಕೆ ಸಾಕ್ಷಿ… ಹೀಗೆಂದು ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಹೇಳಿದ್ದಾರೆ.
ಕೇಜ್ರಿವಾಲ್ ಮಾದರಿಯ ಸರ್ಕಾರ ದೆಹಲಿಯಲ್ಲಿ ಯಶಸ್ವಿಯಾಗಿದೆ, ಅದನ್ನು ಪಂಜಾಬ್‌ನಲ್ಲೂ ಜನ ಬೆಂಬಲಿಸಿದ್ದಾರೆ. ಇದು ಹೀಗೆಯೇ ಮುಂದುವರಿದು ರಾಷ್ಟ್ರದಲ್ಲಿ ಕೇಜ್ರಿವಾಲ್ ಮಾದರಿಯ ಸರ್ಕಾರ ದೊಡ್ಡ ಪಾತ್ರವಹಿಸುವ ಸಮಯ ಬರಲಿದೆ. ದೆಹಲಿಯಲ್ಲಿ ನಾವೇನು ಕೆಲಸ ಮಾಡಿದ್ದೇವೆಂದು ಒಮ್ಮೆ ನೋಡಿ. ಭಾರತದ ಜನತೆ ಈಗ ನಮ್ಮ ಪರವಾಗಿದ್ದಾರೆಂದು ಸಿಸೋಡಿಯಾ ಭರವಸೆ ವ್ಯಕ್ತಪಡಿಸಿದ್ದಾರೆ.
ಕೇಜ್ರಿವಾಲ್ ಮಾದರಿಯ ಆಡಳಿತವನ್ನು ನಾವು ವಿಷಯವನ್ನಾಗಿ ಮಾಡಿಕೊಂಡಿದ್ದೆವು. ಬಾಬಾಸಾಹೇಬ್ ಅಂಬೇಡ್ಕರ್, ಭಗತ್ ಸಿಂಗ್ ಆಶಯದಂತೆ ಜನರಿಗೆ ಉತ್ತಮ ಸೌಕರ್ಯಗಳನ್ನು ನೀಡುವ ಪ್ರಾಮಾಣಿಕ ಸರ್ಕಾರ ನಮ್ಮದು. ನಾವು ಮೂಲಸೌಕರ್ಯಗಳಾದ ಶಾಲೆ, ಆರೋಗ್ಯ, ಉದ್ಯೋಗಳಿಗೆ ಗಮನ ಹರಿಸಿದ್ದೆವು. ಅದನ್ನು ಜನ ಮಾನ್ಯ ಮಾಡಿದ್ದಾರೆ ಎನ್ನುವುದು ಸಿಸೋಡಿಯಾ ನುಡಿಗಳು.