ಮೋದಿ-ಕ್ಸಿ ಸ್ವಾಗತಕ್ಕೆ ಮಹಾಬಲಿಪುರಂ ಸಜ್ಜು; ಎಲ್ಲೆಲ್ಲೂ ಸರ್ಪಗಾವಲು

Team Udayavani, Oct 11, 2019, 5:22 AM IST

ಮಹಾಬಲಿಪುರಂ: ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ನಡುವೆ ಶುಕ್ರವಾರ ಮತ್ತು ಶನಿವಾರ ನಡೆ ಯುವ ದ್ವಿಪಕ್ಷೀಯ “ಅನೌಪಚಾರಿಕ’ ಶೃಂಗಸಭೆಗೆ ಚೆನ್ನೈ ಬಳಿಯ ಐತಿಹಾಸಿಕ ಪ್ರವಾಸಿ ತಾಣ ಮಹಾಬಲಿಪುರಂ ಸಜ್ಜಾಗಿದೆ. ಸಾಗರ ತೀರದ ಈ ತಾಣದಲ್ಲಿ ಈಗ ಭದ್ರತಾ ಪಡೆಗಳ ಸಿಬಂದಿಯೇ ಕಾಣ ಸಿಗುತ್ತಾರೆ.

ಎಲ್ಲೆಲ್ಲೂ ಕಾವಲು ಪಡೆ: ಶೃಂಗಸಭೆ ನಡೆಯುವ ಬೃಹತ್‌ ವೇದಿಕೆ ಸುತ್ತಮುತ್ತಲೆಲ್ಲ 5,000 ಪೊಲೀಸರನ್ನು ನಿಯೋಜಿಸಲಾಗಿದೆ. ಕರಾ ವಳಿ ಭದ್ರತಾ ಪಡೆಯ ಬೋಟ್‌ಗಳಲ್ಲಿ ಶಸ್ತ್ರಸಜ್ಜಿತರಾದ ಸಿಬಂದಿ ಸಮುದ್ರದಲ್ಲಿ ಅತ್ತಿಂದಿತ್ತ, ಇತ್ತಿಂದ ಅತ್ತ ಸಂಚರಿಸುತ್ತಾ ಕಾವಲು ಕೆಲಸದಲ್ಲಿ ನಿರತರಾಗಿದ್ದಾರೆ.

ಹೆಜ್ಜೆ ಹೆಜ್ಜೆಗೂ ಪರಿಶೀಲನೆ: ಮಹಾಬಲಿಪುರಂನ ಒಳಗೆ ಹಾಗೂ ಅದರ ಸುತ್ತಮುತ್ತ ಸುಮಾರು 12ಕ್ಕೂ ಹೆಚ್ಚು ಚೆಕ್‌ಪೋಸ್ಟ್‌ಗಳನ್ನು ಆರಂಭಿಸಲಾಗಿದೆ. ರಾತ್ರಿಯನ್ನು ಹಗಲಾಗಿಸುವಂಥ ಲೈಟಿಂಗ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಊರಿಗೆ ಬರುವ ವಾಹನಗಳು, ಪ್ರತಿನಿಧಿ ಗಳು, ಅಧಿಕಾರಿಗಳನ್ನು ಹೆಜ್ಜೆ ಹೆಜ್ಜೆಗೂ ಪರಿಶೀಲನೆಗೊಳಪಡಿಸ ಲಾಗುತ್ತಿದೆ. ಸುಮಾರು 800 ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ.

ಅತ್ಯಾಧುನಿಕ ವ್ಯವಸ್ಥೆ ಶೃಂಗಸಭೆಯ ಸನಿಹದಲ್ಲೇ ಕಂಟ್ರೋಲ್‌ ರೂಂ ತೆರೆಯಲಾಗಿದ್ದು, ಊರಿನ ಎಲ್ಲಾ ರಸ್ತೆಗಳು, ಹಾದಿ ಬೀದಿ ಗಳು, ಸುತ್ತಲಿನ ಪರಿಸರ ಹಾಗೂ ಚೆಕ್‌ಪೋಸ್ಟ್‌ಗಳ ಮೂಲಕ ಓಡಾಡುವ ಜನರನ್ನು, ವಾಹನಗಳನ್ನು ದಿನದ 24 ಗಂಟೆಗಳ ಕಾಲ ಅವಗಾಹನೆ ಮಾಡಲು ಅತ್ಯಾಧುನಿಕ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ.

ವಿಶೇಷ ಪಡೆಗಳ ಆಗಮನ ಮಹಾಬಲಿಪುರಂ ಹಾಗೂ ಶೃಂಗಸಭೆ ನಡೆವ ಜಾಗದಲ್ಲಿ ಎಲ್ಲೆಡೆ ಬಾಂಬ್‌ ನಿಷ್ಕ್ರಿಯ ದಳ, ವಿಶೇಷ ಭದ್ರತಾ ಪಡೆಗಳನ್ನು ಕರೆಯಿಸಲಾಗಿದ್ದು, ಅವರೊಂದಿಗೆ ವಿಶೇಷವಾಗಿ ತರ ಬೇತಿ ಪಡೆದ ಶ್ವಾನಗಳನ್ನೂ ಕರೆತರಲಾಗಿದೆ. ಮಹಾಬಲಿಪುರಂನ ಎಲ್ಲಾ ಕಡೆ ಮಫ್ತಿಯಲ್ಲಿರುವ ಪೊಲೀಸರನ್ನೂ ನಿಯೋಜಿಸಲಾಗಿದೆ.

ಪರಸ್ಪರ ಅಪಾಯಕಾರಿಯಲ್ಲ: ಈ ಎಲ್ಲ ಬೆಳವಣಿಗೆಗಳ ನಡುವೆ, ಗುರುವಾರ ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಚೀನ ರಾಯಬಾರಿ ಸನ್‌ ವೆಡಾಂಗ್‌ ಮಾತನಾಡಿದ್ದು, “ಭಾರತ ಮತ್ತು ಚೀನವು ಪರಸ್ಪರರಿಗೆ ಅಪಾಯಕಾರಿಯಲ್ಲ. ಏಷ್ಯಾದ ಈ ಎರಡೂ ದಿಗ್ಗಜ ರಾಷ್ಟ್ರಗಳು ಪರಸ್ಪರ ಸಹಕಾರದಿಂದ ಕೆಲಸ ಮಾಡಿದರೆ, ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ಕಾಪಾಡುವಲ್ಲಿ ಸಕಾರಾತ್ಮಕ ಶಕ್ತಿ ತುಂಬಲಿವೆ’ ಎಂದಿದ್ದಾರೆ.

ದೇಗುಲಗಳಲ್ಲಿ ಭೇಟಿಗೆ ಸಿದ್ಧತೆ
ಶೃಂಗಸಭೆಯ ಸನಿಹದಲ್ಲಿರುವ ದೇಗುಲಗಳಿಗೆ ಮೋದಿ ಮತ್ತು ಜಿನ್‌ಪಿಂಗ್‌ ಭೇಟಿ ನೀಡಲಿದ್ದು, ಆ ದೇಗುಲಗಳಿಗೂ ಭದ್ರತೆ ಒದಗಿಸಲಾಗಿದೆ. ದೇಗುಲಗಳ ಬಾಹ್ಯ ಗೋಡೆಯ ಸುತ್ತ ಮತ್ತೂಂದು ತಾತ್ಕಾಲಿಕ ಗೋಡೆ ನಿರ್ಮಿಸಲಾಗಿದ್ದು, ಉಭಯ ನಾಯಕರು ದೇಗುಲಗಳಿಗೆ ಸಾಗಿ ಹೋಗುವ ಮಾರ್ಗದ ಎರಡೂ ಬದಿಯಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ಆ ಮಾರ್ಗದಲ್ಲಿ ರಂಗೋಲಿ ಹಾಕಲಾಗುತ್ತಿದೆ. ಜತೆಗೆ, ಜನಸಂದಣಿ ಇರುವ ಮಹಾಬಲಿಪುರಂ ಹಾಗೂ ಶೃಂಗಸಭೆ ನಡೆಯುವ ಸ್ಥಳಗಳಲ್ಲಿ ಪೊಲೀಸರು, ಭದ್ರತಾಪಡೆಗಳು ಹಾಗೂ ಇನ್ನಿತರ ಸಿಬಂದಿಗೆ ಆಹಾರ, ವಸತಿ ಹಾಗೂ ಶೌಚಾಲಯಗಳ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.

ರ್ಯಾಲಿಯ ಸ್ವಾಗತ
ಶೃಂಗಸಭೆಗೆ ಆಗಮಿಸುವ ನಾಯಕರು, ತಮ್ಮ ವಾಹನಗಳಿಂದ ಇಳಿಯುವ ಪ್ರದೇಶದಲ್ಲಿ ತಮಿಳು, ಹಿಂದಿ ಮತ್ತು ಚೀನೀ ಬಾಷೆಯಲ್ಲಿ ಸ್ವಾಗತ ಸಂದೇಶಗಳನ್ನು ಅಳವಡಿಸಲಾಗಿದೆ. ಸ್ವಾಗತ ಕಾರ್ಯಕ್ರಮದ ಅಂಗವಾಗಿ, ರಾಷ್ಟ್ರೀಯ ಐಕ್ಯತಾ ರ್ಯಾಲಿ ಏರ್ಪಡಿಸಲಾಗಿದೆ. ಅದರಲ್ಲಿ ನೂರಾರು ಮಕ್ಕಳು ಪಾಲ್ಗೊಳ್ಳಲಿದ್ದಾರೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ